ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ

ಶನಿವಾರ, ಮೇ 25, 2019
22 °C

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ

Published:
Updated:

ಉಡುಪಿ ಜಿಲ್ಲೆಯ ಬಾರ್ಕೂರಿನಿಂದ 8 ಕಿ.ಮೀ ದೂರದಲ್ಲಿರುವ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ  ಪೌರಾಣಿಕ ಹಿನ್ನೆಲೆ ಇದೆ. ಕ್ಷೇತ್ರ ದೇವತೆ ಶ್ರೀ ದುರ್ಗಾ ಪರಮೇಶ್ವರಿ ಮಹಿಮೆ ಅಪಾರ. ನೊಂದು ಬರುವ ಭಕ್ತರನ್ನು ಕೈಹಿಡಿದು ಉದ್ಧರಿಸುವ ಕರುಣಾಮಯಿ ಎಂದೇ ಪ್ರತೀತಿ.ಮಂದಾರ್ತಿ ಕ್ಷೇತ್ರ ಅಳುಪ, ಸೂರಾಲು, ವಿಜಯನಗರ, ಕೆಳದಿ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಮಂದಾರ್ತಿ ದೇವಳ ಹಲವಾರು ಏಳುಬೀಳುಗಳ ನಡುವೆ ಅಭಿವೃದ್ಧಿಹೊಂದಿದೆ. ದೇವಳದ ಹೊರ ಹಾಗೂ ಒಳ ಪ್ರಾಕಾರದ ವಾಸ್ತು ಶಿಲ್ಪಗಳ ಅಧ್ಯಯನದಿಂದ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಹೇಳಬಹುದಾಗಿದೆ. ಶಕ್ತಿ ಆರಾಧನೆಯ ವಿಶಿಷ್ಟ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದ ಈ ದೇವಳದ ಪ್ರಾಚೀನತೆಯ ಬಗ್ಗೆ ನಿಖರವಾಗಿ ಉಲ್ಲೇಖಿಸುವ ಶಿಲಾ ಶಾಸನಗಳಾಗಲಿ, ಸಾಹಿತ್ಯವಾಗಲಿ ಲಭ್ಯವಿಲ್ಲ. ಆದರೆ ಪ್ರಾಚೀನತೆ ಸಾರುವ ಹಲವಾರು ಕುರುಹುಗಳಿವೆ. ಈ ಕ್ಷೇತ್ರದಲ್ಲಿ ನಡೆಯುವ ಕೆಂಡ ಸೇವೆ ಮತ್ತು ರಥೋತ್ಸವ ಕಾರ್ಯಕ್ರಮಗಳು ಕರಾವಳಿ ಜಿಲ್ಲೆಗಳಲ್ಲಿ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದ್ಲ್ಲಲಿ ಪ್ರಸಿದ್ಧಿ ಪಡೆದಿವೆ. ಕೆಂಡ ಸೇವೆಯಲ್ಲಿ ಮುತ್ತೈದೆಯರು ಮಾತ್ರ ಕೆಂಡ ತುಳಿಯುವ ಸಂಪ್ರದಾಯವಿದೆ. ಗಂಡನಿಗೆ ಅಸೌಖ್ಯವಾದಾಗ ಮುತ್ತೈದೆ ಭಾಗ್ಯಕ್ಕೆ ಕುಂದು ಬರಬಾರದು ಮತ್ತು ಮಕ್ಕಳ ಶ್ರೇಯಸ್ಸಿಗಾಗಿ ಕೆಂಡ ತುಳಿಯುವ ಹರಕೆ ಹೊರುತ್ತಾರೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ನಿತ್ಯ ಬಲಿ ಸೇವೆ ಇದ್ದರೆ ಇಲ್ಲಿ ರಥೋತ್ಸವದ ಸಂದರ್ಭದಲ್ಲಿ ಮಾತ್ರ ಬಲಿ ಸೇವೆ ಇದೆ. ದುರ್ಗಾಪರಮೇಶ್ವರಿಗೆ ನಿತ್ಯ ವೈವಿಧ್ಯಮಯ ಸೇವೆಗಳು ನಡೆಯುತ್ತವೆ. ಹರಿವಾಣ ನೈವೇದ್ಯ, ಕುಂಕುಮಾರ್ಚನೆ, ಸಂತಾನ ಪ್ರಾಪ್ತಿಗಾಗಿ ಮದುವೆ, ತುಲಾಭಾರ, ಬೆಳಕಿನ ಸೇವೆ (ಬಯಲಾಟ), ರಂಗಪೂಜೆ, ಚಂಡಿಕಾ ಶಾಂತಿ, ದುರ್ಗಾಶಾಂತಿ, ಚಂಡಿಕಾ ಪಾರಾಯಣ ಮೊದಲಾದ ವಿಶೇಷ ಸೇವೆಗಳಲ್ಲದೆ ಸಂಕ್ರಾತಿ ಮತ್ತು ನವರಾತ್ರಿಯಂದು ವಿಶೇಷ ಪೂಜೆಗಳು ನಡೆಯುತ್ತವೆ.ದೇವಸ್ಥಾನ ಸಮಿತಿ ವತಿಯಿಂದ ಹತ್ತು ವರ್ಷಗಳಿಂದ ದೇವಳಕ್ಕೆ ಬರುವ ಭಕ್ತಾಧಿಗಳಿಗೆ ಮಧ್ಯಾಹ್ನ ಅನ್ನ ಸಂತರ್ಪಣೆ, ಸ್ಥಳೀಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್ನದಾಸೋಹ ಕಾರ್ಯಕ್ರಮಗಳು ನಡೆಯುತ್ತಿವೆ. ಪರಿಸರದ 13 ಶಾಲೆಗಳ ಮಕ್ಕಳಿಗೂ ಪ್ರಸಾದ ಸಂತರ್ಪಣೆ ನಡೆಯುತ್ತದೆ. ಹತ್ತು ವರ್ಷಗಳಿಂದ ಸಾಮೂಹಿಕ ವಿವಾಹಕ್ಕೂ ಉತ್ತೇಜನ ನೀಡುತ್ತಿದೆ. ಬಯಲಾಟ: ದುರ್ಗಾಪರಮೇಶ್ವರಿಯ ಮಹಿಮೆಯನ್ನು ಸಾರುವ ಮಂದಾರ್ತಿ ಯಕ್ಷಗಾನ ಮೇಳ ಅತ್ಯಂತ ಪ್ರಾಚೀನ ಮೇಳವಾಗಿದೆ. ಭಕ್ತರು ತಮ್ಮ ಅಭೀಷ್ಟ ಸಿದ್ಧಿಗಾಗಿ ಯಕ್ಷಗಾನ ಬಯಲಾಟ ನಡೆಸುವುದಾಗಿ ಹರಕೆ ಹೊರುತ್ತಾರೆ. ಅದರಿಂದ ದೇವಿ ಪ್ರಸನ್ನಳಾಗಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರವಾಗಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿದೆ.2027-28ನೇ ವರ್ಷದ ತನಕ ಭಕ್ತರು ಹರಕೆ ಮೇಳಗಳ ಆಟವನ್ನು ಮುಂಗಡವಾಗಿ ಕಾದಿರಿಸಿದ್ದಾರೆ. ವರ್ಷದಲ್ಲಿ 1,100 ಹರಕೆ ಆಟಗಳು ನಡೆಯುತ್ತವೆ. ಇದರಲ್ಲಿ 28 ಕಟ್ಟುಕಟ್ಟಳೆ ಆಟಗಳು ಹಾಗೂ 100 ಖಾಯಂ ಆಟಗಳಾಗಿವೆ. ಉಳಿದ 592 ಆಟಗಳು ಹರಕೆ ಸೇವೆ ಆಟಗಳು. ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಮೇಳದ ಆಟಗಳು ನಡೆಯುತ್ತವೆ. ಹೆಚ್ಚಿನ ಮಾಹಿತಿಗೆ ದೇವಸ್ಥಾನದ ಆಡಳಿತ ಮೊಕ್ತೇಸರ ಧನಂಜಯ ಶೆಟ್ಟಿ ಮತ್ತು ಕಾರ್ಯನಿರ್ವಹಣಾಧಿಕಾರಿ ಇ.ಜಿ.ನಾಯಕ್ ಅವರನ್ನು ಸಂಪರ್ಕಿಸಬಹುದು. ಅವರ ದೂರವಾಣಿ - 0820-2568533, 2568433.ಮಂದಾರ್ತಿಗೆ ಉಡುಪಿ ಮತ್ತು ಕುಂದಾಪುರದಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಬಸ್ಸಿನ ವ್ಯವಸ್ಥೆ ಇದೆ. ಹತ್ತಿರದ ರೈಲ್ವೆ ನಿಲ್ದಾಣ ಕೊಂಕಣ ರೈಲು ಮಾರ್ಗದ ಬಾರ್ಕೂರು.ಸೇವಾ ವಿವರ

* ಚಂಡಿಕಾ ಶಾಂತಿ 3000 ರೂ

* ಹಿರೇ ರಂಗಪೂಜೆ 3000 ರೂ

* ದುರ್ಗಾ ಶಾಂತಿ   2150 ರೂ

* ಕೆರೆ ರಂಗಪೂಜೆ 2000 ರೂ

* ಶುಕ್ರವಾರದ ಪೂಜೆ (1 ವರ್ಷಕ್ಕೆ) 400 ರೂ

* ಶಾಶ್ವತ ಸೇವೆ 1001 ರೂ

* ಯಕ್ಷಗಾನ ಸೇವೆ ಕಾಣಿಕೆ 105 ರೂ

* ಯಕ್ಷಗಾನ ನೋಂದಣಿ  105 ರೂ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry