ಶುಕ್ರವಾರ, ಮಾರ್ಚ್ 5, 2021
18 °C

ಮಂದಿರ – ಮಸೀದಿಗಳ ನಡುವೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂದಿರ – ಮಸೀದಿಗಳ ನಡುವೆ...

ಒಂದೆಡೆ ಮಂದಿರ, ಇನ್ನೊಂದೆಡೆ ಮಸೀದಿ. ಮುಖಪರದೆ ಹಾಕಿದ್ದ ನೈನಾ ಎದುರು ಶಾಲು ಹೊದ್ದುಕೊಂಡು ಬಂದೂಕು ಹಿಡಿದು ನಿಂತಿದ್ದ ಶ್ರೀನಗರ ಕಿಟ್ಟಿ.

ಸಿನಿಮಾದ ಕಥೆ ಅರ್ಥ ಮಾಡಿಕೊಳ್ಳಲು ಇಷ್ಟು ಸಾಕು! ‘ಅಲ್ಲ ಅಲ್ಲ... ಅದು ಹಾಗಲ್ಲ. ಪ್ರೀತಿಗೆ ಧರ್ಮ ಅಡ್ಡಿ ಬರುವುದಿಲ್ಲ ಎಂಬ ಸಂದೇಶವನ್ನು ಹೇಳಲು ಈ ಕಥೆಯನ್ನು ಆಯ್ದುಕೊಂಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು ನಿರ್ದೇಶಕ ಮಹೇಶ ಆರ್ಯ.ಕಂಠೀರವ ಸ್ಟುಡಿಯೊದಲ್ಲಿ ಹಾಕಲಾಗಿದ್ದ ಮಂದಿರ – ಮಸೀದಿ ಸೆಟ್‌ಗಳ ಮುಂದೆ ‘ಏ ರಾಮ್’ ಚಿತ್ರಕ್ಕೆ ಮುಹೂರ್ತ ನಡೆಯಿತು. ಈ ಕಾರ್ಯಕ್ರಮದ ತರುವಾಯ ಚಿತ್ರದ ಕುರಿತು ಸುದ್ದಿಗಾರರ ಜತೆ ಚಿತ್ರತಂಡ ಮಾತಿಗಿಳಿಯಿತು.ಈ ಮೊದಲು ‘ಕೋಲಾರ’ ಹಾಗೂ ‘ಸ್ಲಮ್’ ಎಂಬೆರಡು ಚಿತ್ರ ಗಳಿಗೆ ದುಡಿದಿದ್ದ ಮಹೇಶ ಆರ್ಯ, ಈ ಸಲ ತುಸು ಗಂಭೀರವಾದ ವಿಷಯವನ್ನೇ ತಮ್ಮ ಚಿತ್ರಕ್ಕಾಗಿ ಆರಿಸಿಕೊಂಡಿದ್ದಾರೆ. ಹಿಂದೂ– ಮುಸ್ಲಿಮ್ ಪಾತ್ರಗಳಿರುವ ಕಥೆಯ ಕುರಿತು ಹೆಚ್ಚು ಸುಳಿವು ಕೊಡುವುದಿಲ್ಲ. ‘ಯಾವುದೇ ಧರ್ಮ ಅಥವಾ ಜಾತಿಯನ್ನು ಹೀಗಳೆಯುವ ಕಥೆ ಇದಲ್ಲ. ರಾಮನ ಬಗ್ಗೆ ಜನರು ಎಷ್ಟೋ ಬಗೆಯಲ್ಲಿ ಮಾತಾಡುತ್ತಾರೆ. ಅದರಲ್ಲಿ ಒಳ್ಳೆಯದು ಇರಬಹುದು; ಕೆಟ್ಟದ್ದೂ ಇರಬಹುದು. ಆದರೆ ಯಾವುದೇ ಧರ್ಮ ಅಥವಾ ದೇವರ ಬಗ್ಗೆ ಕೀಳಾಗಿ ಮಾತಾಡಬಾರದು ಎಂಬ ಸಂದೇಶ ಇದರಲ್ಲಿದೆ’ ಎಂದಷ್ಟೇ ಕಥೆಯ ಸಾರವನ್ನು ಅವರು ತೆರೆದಿಟ್ಟರು. ಚಿತ್ರದಲ್ಲಿ ಲವ್ ಇದೆ; ಆದರೆ ಜಿಹಾದ್ ಇಲ್ಲ ಎಂದೂ ಸ್ಪಷ್ಟಪಡಿಸಿದ ಆರ್ಯ, ಕ್ರಿಶ್ಚಿಯನ್ ಹಾಗೂ ಸಿಖ್ ಧರ್ಮದ ಬಗ್ಗೆ ಕೂಡ ಅಲ್ಲಲ್ಲಿ ಪ್ರಸ್ತಾಪ ಬರಲಿದೆ ಎಂದರು.ಶ್ರೀನಗರ ಕಿಟ್ಟಿಯದು ಇದರಲ್ಲಿ ರಾಮ ಎಂಬ ಯುವಕನ ಪಾತ್ರ. ರಾಮನವಮಿಯಂದು ಜನಿಸಿರುವ ಕಾರಣಕ್ಕೆ ಪಾಲಕರು ರಾಮ ಎಂಬ ಹೆಸರು ಇಟ್ಟಿರುತ್ತಾರೆ. ಯಾವುದೋ ಘಟನೆಯಿಂದಾಗಿ, ರಾಮ ರಾಕ್ಷಸನಾಗುತ್ತಾನೆ. ‘ಧರ್ಮ, ಸಮುದಾಯ ಅಥವಾ ದೇವರನ್ನು ಗೇಲಿ ಮಾಡುವ ಉದ್ದೇಶ ಈ ಚಿತ್ರಕ್ಕಿಲ್ಲ. ಕಮರ್ಷಿಯಲ್ ಆಗಿ ಒಳ್ಳೆಯ ಕತೆಯೊಂದನ್ನು ಹೇಳುವ ಯತ್ನ ನಮ್ಮದು’ ಎಂದರು ಕಿಟ್ಟಿ. ‘ಬೆತ್ತನಗೆರೆ’ ಮೂಲಕ ಗಮನಸೆಳೆದಿರುವ ನೈನಾ, ಕಾಲೇಜಿಗೆ ಹೋಗುವ ಮುಸ್ಲಿಮ್ ವಿದ್ಯಾರ್ಥಿನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ನಾನು ರಾಮನ ಸೀತೆಯಾಗುತ್ತೇನೆ. ಪ್ರೀತಿಯ ವಿಷಯಕ್ಕೆ ಬಂದಾಗ, ಧರ್ಮದ ವಿಷಯ ಪ್ರಸ್ತುತವಾಗುವುದೇ ಇಲ್ಲ ಎಂಬುದು ಇದರಲ್ಲಿದೆ’ ಎಂದು ನೈನಾ ಹೇಳಿಕೊಂಡರು.ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸುತ್ತಿರುವ ಯತಿರಾಜ್, ಆ ಕುರಿತು ಅನಿಸಿಕೆ ಹಂಚಿಕೊಂಡರು. ಚಿತ್ರಕತೆ ಇಷ್ಟವಾಗಿದ್ದರಿಂದ ಏನೊಂದೂ ಯೋಚಿಸದೇ ಬಂಡವಾಳ ಹಾಕಲು ಮುಂದಾಗಿದ್ದಾಗಿ ನಿರ್ಮಾಪಕ ಎಂ. ರಾಹುಲ್ ಹೇಳಿದರು. ಐದು ಹಾಡುಗಳನ್ನೂ ಒಳಗೊಂಡಿರುವ ಚಿತ್ರಕ್ಕೆ ಬೆಂಗಳೂರು, ಮೈಸೂರು ಹಾಗೂ ಕೊಳ್ಳೇಗಾಲದಲ್ಲಿ ಚಿತ್ರೀಕರಣ ನಡೆಸುವ ಯೋಜನೆಯನ್ನು ನಿರ್ದೇಶಕರು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.