ಸೋಮವಾರ, ಏಪ್ರಿಲ್ 19, 2021
31 °C

ಮಂದೇವಾಲ ಬಳಿ ಭೀಕರ ರಸ್ತೆ ಅಪಘಾತ: 5 ಸಾವು, 8 ಜನರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ: ತಾಲ್ಲೂಕಿನ ನೆಲೋಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಂದೇವಾಲ ಬಳಿ ಮಂಗಳವಾರ ಬೆಳಿಗ್ಗೆ 6.45ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ನಾಲ್ಕು ಜನ ಮೃತಪಟ್ಟಿದ್ದು, ಇನ್ನೊಬ್ಬರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆದಲ್ಲಿ ಮೃತಪಟ್ಟಿದ್ದಾರೆ. ಉಳಿದ ಎಂಟು ಜನರಿಗೆ ತೀವೃ ಗಾಯಗಳಾದ ಬಗ್ಗೆ ವರದಿಯಾಗಿದೆ.

ಹುಮನಾಬಾದ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218(ಈ)ಯಲ್ಲಿ ಬರುವ ಹಿಪ್ಪರಗಿ-ಮಂದೇವಾಲ ಮಧ್ಯೆ ಟೈರ್ ಒಡೆದು ನಿಂತಿದ್ದ ಲಾರಿಗೆ ಟಾವೇರಾ ಜೀಪ್ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಸಂಗಣ್ಣ ಭೀಮಣ್ಣ ಮುಲಗಿ (65), ಸಂಗಪ್ಪ ಚಂದ್ರಶೆಟ್ಟಿ ನೆಲವಾಳ (36), ಶಿವಕುಮಾರ ಸಂಗಪ್ಪ ನೆಲವಾಳ (3), ಜಯಶ್ರೀ ಹಣಮಂತ ಬೆನಕಪಳ್ಳಿ (24) ಇವರೆಲ್ಲಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಗದೇವಿ ರಾಮಶೆಟ್ಟಿ ಮುಲಗಿ (32) ಎಂಬುವವರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆದಲ್ಲಿ ಮೃತಪಟ್ಟಿದ್ದಾರೆ. ಇವರೆಲ್ಲಾ ಸಂಬಂಧಿಕರಾಗಿದ್ದು, ಬೆಳಿಗ್ಗೆ ರಾಮಾಪುರದಿಂದ- ಕೂಡಲಸಂಗಮಕ್ಕೆ ಟಾವೇರಾ ಜೀಪ್‌ನಲ್ಲಿ ತೆರಳುತ್ತಿದ್ದರು. ಮೃತರು ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ರಾಮಾಪುರ ಗ್ರಾಮದವರು.

ಅಪಘಾತದಲ್ಲಿ ತೀವೃವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುಲ್ಬರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ಚಂದ್ರಕಾಂತ ರೇವಣಯ್ಯ (32), ಹಣಮಂತ ಬಸವರಾಜ (36), ಶಿಲ್ಪಾ ಚಂದ್ರಕಾಂತ (30), ಈರಮ್ಮ ಸಂಗಣ್ಣ (40), ವಿಜಯಕುಮಾರ ಮಡೆಪ್ಪ (40),

ಸರಸ್ವತಿ ಸಂಗಣ್ಣ (45), ಸೌರಭ ಚಂದ್ರಕಾಂತ (2), ಆದಿತ್ಯ ಹಣಮಂತ (2) ಎಂದು ಗುರುತಿಸಲಾಗಿದೆ.

ಟಾವೇರಾ ವಾಹನ ಚಾಲಕನನ್ನು ಹುಮನಾಬಾದ ತಾಲ್ಲೂಕಿನ ಚಿಟಗುಪ್ಪಾ ನಿವಾಸಿ ಸಂಗಮೇಶ ಗುಂಡಪ್ಪ ರಂಜೋಳ ಎಂದು ಗುರುತಿಸಲಾಗಿದೆ. ಅವರಿಗೆ ಗುಲ್ಬರ್ಗದ ಆಸ್ಪತ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ: ಹುಮನಾಬಾದ ತಾಲ್ಲೂಕಿನ ರಾಮಾಪುರದಿಂದ ಶ್ರಾವಣ ಮಾಸದ ನಿಮಿತ್ಯ ಕೂಡಲಸಂಗಮಕ್ಕೆ ಟಾವೇರಾ ಜೀಪ್‌ನಲ್ಲಿ ತೆರಳುತ್ತಿದ್ದ ಸೋದರ ಸಂಬಂಧಿಗಳು ಬೆಳಿಗ್ಗೆ 6.45ಗಂಟೆ ಸುಮಾರಿಗೆ ಮಂದೇವಾಲ ಸಮೀಪ ಹೋಗುತ್ತಿದ್ದಾಗ, ವಾಡಿಯಿಂದ-ಸಿಂದಗಿ ಕಡೆ ಫರಸಿ ತುಂಬಿಕೊಂಡು ಹೊರಟಿದ್ದ ಲಾರಿಯೊಂದು ಟೈರ್ ಒಡೆದು ರಸ್ತೆಯ ಮೇಲೆ ನಿಂತಿತ್ತು. ಹಿಂದಿನಿಂದ ವೇಗವಾಗಿ ಬಂದ ಟಾವೇರಾ ಜೀಪ್ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ ಮಧುಕರ ಪವಾರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಶಿನಾಥ ತಳಕೇರಿ, ಗುಲ್ಬರ್ಗ ಗ್ರಾಮೀಣ ಡಿವೈಎಸ್‌ಪಿ ಹೆಚ್.ತಿಮ್ಮಪ್ಪ, ಜೇವರ್ಗಿ ಸರ್ಕಲ್ ಇನ್ಸಪೆಕ್ಟರ್ ವಿಶ್ವನಾಥರಾವ್ ಕುಲಕರ್ಣಿ, ನೆಲೋಗಿ ಪೊಲೀಸ್ ಠಾಣೆಯ ಪ್ರಭಾರಿ

ಪೊಲೀಸ್ ಸಬ್ ಇನ್ಸಪೆಕ್ಟರ್ ಲಕ್ಷ್ಮಣ ಬಿರಾದಾರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ. ಘಟನೆಗೆ ಸಂಬಂಧಿಸಿದಂತೆ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.