ಮಂಪರು ಪರೀಕ್ಷೆ ಮಾಡುವುದು ಬೇಡ

7
ತುಂಡಾ ಮನವಿಗೆ ಕೋರ್ಟ್ ಒಪ್ಪಿಗೆ

ಮಂಪರು ಪರೀಕ್ಷೆ ಮಾಡುವುದು ಬೇಡ

Published:
Updated:

ನವದೆಹಲಿ (ಪಿಟಿಐ): ಲಷ್ಕರ್‌–ಎ–ತಯ್ಯಬಾ ಪ್ರಮುಖ ಉಗ್ರ ಅಬ್ದುಲ್‌ ಕರೀಮ್‌ ತುಂಡಾನನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದಕ್ಕೆ ಅನುಮತಿ ನೀಡಲು ದೆಹಲಿ ನ್ಯಾಯಾಲಯ ಗುರುವಾರ ನಿರಾಕರಿಸಿತು.ಭಾರತ ಮತ್ತು ಪಾಕಿಸ್ತಾನದಲ್ಲಿರುವ ಸಹಚರರ ಜೊತೆಗಿರುವ ಸಂಪರ್ಕದ ಕುರಿತು ತಿಳಿಯಲು ತುಂಡಾನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವಂತೆ ದೆಹಲಿ ಪೊಲೀಸ್‌ ವಿಶೇಷ ಘಟಕ ಬುಧವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದಕ್ಕೂ ಮುನ್ನ ಮುಖ್ಯ ಮೆಟ್ರೊ ಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅಮಿತ್‌ ಬನ್ಸಲ್‌ ಎದುರು ತುಂಡಾನನ್ನು ಹಾಜರುಪಡಿಸಲಾಯಿತು. ಈ ವೇಳೆ ಆತ, ‘ನಾನು ಸುಮಾರು 72 ವರ್ಷ ವಯಸ್ಸಿನವನಾಗಿದ್ದು, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಮಂಪರು ಪರೀಕ್ಷೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಆದ್ದರಿಂದ ಮಂಪರು ಪರೀಕ್ಷೆ ನಡೆಸುವುದಕ್ಕೆ ನಾನು ಒಪ್ಪುವುದಿಲ್ಲ’ ಎಂದು ಹೇಳಿದ.‘ಮಂಪರು ಪರೀಕ್ಷೆ ನಡೆಸುವುದಕ್ಕೆ ತಮ್ಮ ಕಕ್ಷೀದಾರ ನಿರಾಕರಿಸಿದ್ದಾರೆ’ ಎಂದು ತುಂಡಾ ಪರ ವಕೀಲ ಎಂ.ಎಸ್‌. ಖಾನ್‌ ನ್ಯಾಯಾಲಯಕ್ಕೆ ತಿಳಿಸಿದರು.ಆರೋಪಿ ಒಪ್ಪಿಗೆ ಇಲ್ಲದೇ ಮಂಪರು ಪರೀಕ್ಷೆಗೆ ಒಳಪಡಿಸು ವಂತಿಲ್ಲ ಎಂದು ಸುಪ್ರೀಂಕೋರ್ಟ್‌ನ ತ್ರಿಸದಸ್ಯ  ಪೀಠ 2010 ರಲ್ಲಿ ತೀರ್ಪು ನೀಡಿದೆ ಎಂದು  ಪೀಠದ ಗಮನಕ್ಕೆ ತಂದರು. ಈ ಕುರಿತು ಸುಪ್ರೀಂಕೋರ್ಟ್‌ನ ಇದೇ  ಪೀಠ ಕೆಲ ನಿಯಮಗಳನ್ನು ರೂಪಿಸಿತ್ತು ಎಂದು ಸರ್ಕಾರಿ ಅಭಿಯೋಜಕ ರಾಜೀವ್‌ ಮೋಹನ್‌ ತಿಳಿಸಿದರು.ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ, ಇಳಿ ವಯಸ್ಸು ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಗಳಿಂದಾಗಿ ತುಂಡಾನನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದು ಬೇಡ ಎಂದು ಹೇಳಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry