ಮಕರ ಜ್ಯೋತಿ ಮಾನವ ಸೃಷ್ಟಿ ಅಲ್ಲ

7

ಮಕರ ಜ್ಯೋತಿ ಮಾನವ ಸೃಷ್ಟಿ ಅಲ್ಲ

Published:
Updated:

ಕೊಚ್ಚಿ (ಪಿಟಿಐ): ಮಕರ ಸಂಕ್ರಮಣದಂದು ಶಬರಿಮಲೆ ಅಯ್ಯಪ್ಪನ ಸನ್ನಿಧಾನದಲ್ಲಿ ಕಂಡು ಬರುವ ‘ಮಕರ ಜ್ಯೋತಿ’ ಮಾನವ ಸೃಷ್ಟಿಯೇ ಅಥವಾ ಅಲ್ಲವೇ ಎಂಬ ಬಗ್ಗೆ ದೇಶದಾದ್ಯಂತ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಂತೆಯೇ, 102 ಭಕ್ತರನ್ನು ಬಲಿ ತೆಗೆದುಕೊಂಡ ಪುಲ್‌ಮೇಡು ಕಾಲ್ತುಳಿತ ದುರಂತದಿಂದ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಈ ವಿವಾದವನ್ನು ಸೃಷ್ಟಿಸಲಾಗಿದೆ ಎಂದು ಶಬರಿಮಲೆಯ ಪ್ರಧಾನ ಅರ್ಚಕ (ತಂತ್ರಿ) ಭಾನುವಾರ ಆರೋಪಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಕಂಟಿರಾರು ಮಹೇಶ್ವರಾರು, ‘ಮಕರ ಜ್ಯೋತಿಯು ಆಕಾಶದಲ್ಲಿ ಮಿನುಗುವ ನಕ್ಷತ್ರವಾಗಿದ್ದು, ಪೊನ್ನಂಬಲ ಮೇಡುವಿನಲ್ಲಿ ಸಾಂಕೇತಿಕವಾಗಿ ನಡೆಸುವ ದೀಪಾರಾಧನೆಯೇ (ಆರತಿ) ಮಕರವಿಳಕ್ಕು’ ಎಂದು ಸ್ಪಷ್ಟಪಡಿಸಿದರು.ಮಕರಜ್ಯೋತಿ ಮತ್ತು ಮಕರವಿಳಕ್ಕು ಕುರಿತಂತೆ ಈಗ ಉಂಟಾಗಿರುವ ವಿವಾದವು, ಪುಲ್‌ಮೇಡು ದುರಂತದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡಿರುವ ಉಪಾಯ ಎಂದು ಆರೋಪಿಸಿದ ಅವರು; ಎರಡು ತಿಂಗಳ ಶಬರಿಮಲೆ ಯಾತ್ರಾ ಋತುವನ್ನು ಹಾಳುಗೆಡವುವ ಯತ್ನವೂ ಈ  ವಿವಾದದ ಸೃಷ್ಟಿಯ ಹಿಂದಿದೆ ಎಂದರು.ಶಬರಿಮಲೆ ಯಾತ್ರೆಗಾಗಿ ಬರುವ ಭಕ್ತರಿಗೆ ಸೂಕ್ತ ಮತ್ತು ಉತ್ತಮ ಸೌಲಭ್ಯ ಹಾಗೂ ಭದ್ರತೆಗಳನ್ನು ಒದಗಿಸಲು ಹೆಚ್ಚು ಶ್ರಮವಹಿಸಬೇಕು ಎಂದೂ ಅವರು ಹೇಳಿದರು. ‘ಈ ಹಿಂದೆ ಬುಡಕಟ್ಟು ಜನಾಂಗದವರು ಮಕರವಿಳಕ್ಕು ಉರಿಸುತ್ತಿದ್ದರು. ಆದರೆ ಈಗ ಯಾರು ಆ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿದಿಲ್ಲ’ ಎಂದು ತಿಳಿಸಿದರು. ‘ಯಾರು ಮಕರವಿಳಕ್ಕು ಉರಿಸುತ್ತಾರೆ ಎಂಬ ಪ್ರಶ್ನೆ ಈಗ ಅಪ್ರಸ್ತುತ. ಮುಂದೆ ಏನು ಮಾಡಬೇಕು ಎನ್ನುವುದೇ ಮುಖ್ಯ’ ಎಂದು  ಪ್ರಧಾನ ಅರ್ಚಕರ ಮೊಮ್ಮಗ ಮತ್ತು ಕುಟುಂಬದ ವಕ್ತಾರ ರಾಹುಲ್ ಈಶ್ವರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪೊನ್ನಂಬಲಮೇಡುವಿನ ತುದಿಯಲ್ಲಿ ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿಯೇ (ಟಿಡಿಬಿ) ಜ್ಯೋತಿಯನ್ನು ಉರಿಸುತ್ತದೆ ಎಂದು ಹೇಳಿರುವ ಟಿಡಿಬಿಯ ಮಾಜಿ ಆಯುಕ್ತ ನಳಿನಾಕ್ಷನ್ ನಾಯರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರಾಹುಲ್, ಶಬರಿಮಲೆಯ ಹೆಸರನ್ನು ಕೆಡಿಸಲು ನಾಯರ್ ಈ ಅವಕಾಶವನ್ನು ಬಳಸಬಾರದು ಎಂದರು.ಮಕರಜ್ಯೋತಿ ಮಾನವ ಸೃಷ್ಟಿಯೇ ಅಥವಾ ಅಲ್ಲವೇ ಎಂದು ಕೇರಳ ಹೈಕೋರ್ಟ್ ಪ್ರಶ್ನಿಸಿರುವ ಹಿನ್ನೆಲೆಯಲ್ಲಿ ತಾವು ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸುವಿರಾ ಎಂದು ಕೇಳಿದ ಪ್ರಶ್ನೆಗೆ, ಒಂದು ವೇಳೆ ನ್ಯಾಯಾಲಯ ಕೇಳಿದರೆ ಸ್ಪಷ್ಟಪಡಿಸುವುದಾಗಿ ರಾಹುಲ್ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry