ಮಕರ ಜ್ಯೋತಿ: ಸ್ಪಷ್ಟನೆ ಕೇಳಿದ ಹೈಕೋರ್ಟ್

7

ಮಕರ ಜ್ಯೋತಿ: ಸ್ಪಷ್ಟನೆ ಕೇಳಿದ ಹೈಕೋರ್ಟ್

Published:
Updated:

ಕೊಚ್ಚಿ (ಪಿಟಿಐ): ಶಬರಿಮಲೆ ಕಾಲ್ತುಳಿತ ದುರಂತದ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ಕೈಗೊಂಡಿರುವ ಹೈ ಕೋರ್ಟ್‌ನ ವಿಭಾಗೀಯ ಪೀಠವು ‘ಮಕರ ಜ್ಯೋತಿ’ಯು ಕೃತಕವೇ ಅಥವಾ ಅಲ್ಲವೇ? ಎಂದು ರಾಜ್ಯ ಸರ್ಕಾರ ಮತ್ತು ತಿರುವಾಂಕೂರು ದೇವಸ್ಥಾನ ಮಂಡಳಿ (ಟಿಡಿಬಿ)ಯನ್ನು ಪ್ರಶ್ನಿಸಿದೆ.

ಕಾಲ್ತುಳಿತ ದುರಂತದ ಬಗ್ಗೆ ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರಿಗೆ ಸಂಬಂಧಿಸಿದ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳಾದ ತೋಟತ್ತಿಲ್ ರಾಧಾಕೃಷ್ಣನ್ ಮತ್ತು ಪಿ.ಎಸ್. ಗೋಪಿನಾಥನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠಕ್ಕೆ ಟಿಡಿಬಿ ಮತ್ತು ಪೊಲೀಸ್ ಇಲಾಖೆ ಗುರುವಾರ ವರದಿ ಸಲ್ಲಿಸಿದ ನಂತರ ನಡೆದ ವಿಚಾರಣೆ ವೇಳೆ ಪೀಠವು ಈ ಪ್ರಶ್ನೆ ಕೇಳಿದೆ.

ಟಿಡಿಬಿ ಪರ ವಕೀಲ ಟಿ.ಜಿ. ಪ್ರಾಣೇಶ್ವರ್ ನಾಯರ್, ‘ಮಕರ ಜ್ಯೋತಿ ಎಂಬುದು ದಿವ್ಯವಾದ ಮಿನುಗುವ ನಕ್ಷತ್ರ,  ಅದನ್ನೇ ದೇವರೆಂದು ನಂಬಲಾಗಿದೆ. ಆದರೆ ಟಿಡಿಬಿ ಈ ಜ್ಯೋತಿಯನ್ನು ದೇವರ ಪ್ರತಿರೂಪ ಎಂದು ಪ್ರಚಾರ ನೀಡಿಲ್ಲ’ ಎಂದು ಪೀಠಕ್ಕೆ ತಿಳಿಸಿದ್ದಾರೆ.ತನಿಖೆ ಇಲ್ಲ:  ಈ ಮಧ್ಯೆ, ‘ರಾಜ್ಯ ಸರ್ಕಾರ ‘ಮಕರ ಜ್ಯೋತಿ’ಯ ಸತ್ಯಾಸತ್ಯತೆ ತಿಳಿಯಲು ಯಾವುದೇ ತನಿಖೆ ನಡೆಸುವುದಿಲ್ಲ. ಅದು ಲಕ್ಷಾಂತರ ಭಕ್ತರ ನಂಬಿಕೆ ವಿಚಾರ’ ಎಂದು ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಹೇಳಿದ್ದಾರೆ.ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಮಕರ ಜ್ಯೋತಿಯ ಬಗ್ಗೆ  ತಿಳಿಯಲು ಜ್ಯೋತಿಷಿಗಳನ್ನಾಗಲಿ ಇಲ್ಲವೆ ವಿಜ್ಞಾನಿಗಳನ್ನಾಗಲಿ ಸರ್ಕಾರ ಸಂಪರ್ಕಿಸುವುದಿಲ್ಲ’ ಎಂದಿದ್ದಾರೆ.

ಜ್ಯೋತಿ ಕುರಿತ ವಿವಾದ: ಶಬರಿಮಲೆಯ ಪೂರ್ವಕ್ಕಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಸಂಕ್ರಮಣದ ದಿವಸ ಕಾಣಿಸುವ ‘ಮಕರ ಜ್ಯೋತಿ’ಯನ್ನು ಕಾಣಲು ಅಯ್ಯಪ್ಪಸ್ವಾಮಿಯ ಲಕ್ಷಾಂತರ ಭಕ್ತರು 40 ದಿನಗಳಿಗೂ ಮೊದಲೇ ಮಾಲೆ ಧರಿಸಿ ಇರುಮುಡಿ ತೆಗೆದುಕೊಂಡು ಶಬರಿಮಲೆಗೆ ಯಾತ್ರೆ ಬರುತ್ತಾರೆ.  ಈ ಯಾತ್ರೆಗೆ ‘ಮಕರ ವಿಳಕ್ಕು’ ಎನ್ನುತ್ತಾರೆ.ಭಕ್ತರು ಅಯ್ಯಪ್ಪಸ್ವಾಮಿಯೇ ‘ಜ್ಯೋತಿ’ ರೂಪದಲ್ಲಿ ದರ್ಶನ ನೀಡುತ್ತಾನೆ ಎಂದು ನಂಬಿದ್ದರೆ, ವಿಚಾರವಾದಿಗಳು ದೇವಾಲಯದ ಆಡಳಿತ ಮತ್ತು ಸರ್ಕಾರ ಸೇರಿಕೊಂಡು ಇಂತಹ ‘ಜ್ಯೋತಿ’ಯನ್ನು ಕೃತಕವಾಗಿ ಸೃಷ್ಟಿಸುತ್ತವೆ ಎಂದು ವಾದಿಸುತ್ತಿದ್ದಾರೆ. ಈ ವಿವಾದ ಅನೇಕ ವರ್ಷಗಳಿಂದ ಕೇಳಿಬರುತ್ತಲೇ ಇದೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಳದ ಮುಖ್ಯ ಅರ್ಚಕರ ಕುಟುಂಬದರಾದ ರಾಹುಲ್ ಈಶ್ವರ್, ‘ಮಕರ ಸಂಕ್ರಾಂತಿ ದಿನ ಕಾಣುವ ಬೆಳಕು (ಜ್ಯೋತಿ) ಕೃತಕವಾಗಿದ್ದು  ಸೂರ್ಯ ಧನುಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಂದಿಕಾಲದಲ್ಲಿ ಆಕಾಶದಲ್ಲಿ ಹೊಳೆಯುವ ನಕ್ಷತ್ರವೇ ನಿಜವಾದ ‘ಮಕರ ಜ್ಯೋತಿ’ ಎಂದಿದ್ದಾರೆ.ಜನವರಿ 14ರಂದು ‘ಮಕರ ಜ್ಯೋತಿ’ಯನ್ನು ವೀಕ್ಷಿಸಿ ತಮ್ಮ  ಊರುಗಳಿಗೆ ಭಕ್ತರು ವಾಪಸಾಗುತ್ತಿದ್ದಾಗ ಪುಲ್‌ಮೇಡು ಪ್ರದೇಶದಲ್ಲಿ ಕಾಲ್ತುಳಿತ ಉಂಟಾಗಿ 102 ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ‘ಮಕರ ಜ್ಯೋತಿ’ಯ ಸತ್ಯಾಸತ್ಯತೆ ಕುರಿತ  ವಿವಾದ ತೀವ್ರಗೊಂಡಿದೆ.

         

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry