ಮಂಗಳವಾರ, ಅಕ್ಟೋಬರ್ 15, 2019
26 °C

ಮಕರ ಸಂಕ್ರಾಂತಿಗಿಲ್ಲ ತುಂಗಭದ್ರೆಯಲ್ಲಿ ನೀರು

Published:
Updated:

ಹರಿಹರ: ನಗರದಲ್ಲಿ ಜ. 14ರಂದು ಸಾವಿರಾರು ಆಸ್ತಿಕರು ಮಕರ ಸಂಕ್ರಮಣದ ಪುಣ್ಯಸ್ನಾನ ಮಾಡಲು ತುಂಗಭದ್ರಾ ನದಿಯಲ್ಲಿ ನೀರು ದೊರೆಯುವುದು ಕಷ್ಟವಾಗಿದೆ.ಪ್ರತಿವರ್ಷ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಹುಬ್ಬಳ್ಳಿ, ಬಳ್ಳಾರಿ ಮೊದಲಾದ ಜಿಲ್ಲಾ ಪ್ರದೇಶಗಳ ಸಹಸ್ರಾರು ಆಸ್ತಿಕರು ತುಂಗಭದ್ರಾ ನದಿಯಲ್ಲಿ `ಮಕರ ಸಂಕ್ರಮಣ~ ಅಂಗವಾಗಿ ಪುಣ್ಯಸ್ನಾನ ಮಾಡಲು ಆಗಮಿಸುತ್ತಾರೆ. ಈ ಬಾರಿ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವುದು ದೂರದ ಮಾತು. ಬಂದ ಆಸ್ತಿಕರಿಗೆ ಸರಿಯಾಗಿ ಕೈತೊಳೆಯಲು ನೀರು ಸಿಕ್ಕರೆ ಸಾಕು ಎಂಬಂಥ ಸ್ಥಿತಿ ಉದ್ಭವವಾಗಿದೆ!. ನದಿಯ ಬಹುತೇಕ ಭಾಗ ನೀರಲ್ಲದೇ ಬತ್ತಿ ಹೋಗಿದೆ. ಮಡು(ಗುಂಡಿ)ಗಳಿರುವ ಕೆಲವು ಭಾಗಗಳಲ್ಲಿ ನಿಂತ ನೀರು ಹಸಿರು ಬಣ್ಣಕ್ಕೆ ತಿರುಗಿ ದುರ್ವಾಸನೆ ಹರಡಿದೆ. ಎಲ್ಲಿ ನೋಡಿದರೂ ಗಲೀಜು ಹಾಗೂ ಮಲಿನ ನೀರು ಕಾಣುತ್ತದೆ.ಪ್ರತಿವರ್ಷವೂ ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ತುಂಗಾ ಮತ್ತು ಭದ್ರಾ ಅಣೆಕಟ್ಟುಗಳಿಂದ ನದಿಗೆ ನೀರು ಬಿಡುತ್ತಿದ್ದರು.ಈ ಬಾರಿ ನೀರು ಬಿಟ್ಟಿಲ್ಲ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನದಿ ಸಂಪೂರ್ಣ ಬತ್ತಿ ಹೋಗಬಹುದು. ಪ್ರಸ್ತುತ ವರ್ಷದ ಮಕರ ಸಂಕ್ರಾಂತಿಯ ಪುಣ್ಯಸ್ನಾನ ಮಾಡುವುದು ಹೇಗೆ? ಎಂಬುದು ಆಸ್ತಿಕರ ಪ್ರಶ್ನೆಯಾಗಿದೆ.

Post Comments (+)