ಶುಕ್ರವಾರ, ಡಿಸೆಂಬರ್ 6, 2019
17 °C

ಮಕ್ಕಳಲ್ಲಿ ಅಪೌಷ್ಟಿಕತೆ: ನ್ಯೂನತೆ ನಿವಾರಣೆಗೆ ಒಂದಷ್ಟು ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳಲ್ಲಿ ಅಪೌಷ್ಟಿಕತೆ: ನ್ಯೂನತೆ ನಿವಾರಣೆಗೆ ಒಂದಷ್ಟು ಬೆಳಕು

ಬೆಂಗಳೂರು: ಐದು ವರ್ಷದೊಳಗಿನ ಮಕ್ಕಳ ಸಾವಿಗೆ ಕಾರಣವಾಗುವ ಅಂಶಗಳಲ್ಲಿ ಅಪೌಷ್ಟಿಕತೆಯ ಪಾಲು ದೊಡ್ಡದು ಎಂದು ವೈದ್ಯಕೀಯ ಕ್ಷೇತ್ರದ ತಜ್ಞರು ಗುರುತಿಸಿದ್ದಾರೆ. ಈ ನ್ಯೂನತೆ ನಿವಾರಣೆಗೆ ಅನೇಕ ಯೋಜನೆಗಳು ರೂಪುಗೊಂಡಿವೆ. ಕೋಟಿಗಟ್ಟಲೆ ಹಣ ಖರ್ಚಾಗಿದೆ. ಆದರೆ, ಫಲ ನಿರೀಕ್ಷಿತ ಮಟ್ಟದಲ್ಲಿ ದೊರೆತಿಲ್ಲ ಎಂಬ ಕೊರಗು ಮಕ್ಕಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅನೇಕರನ್ನು ಕಾಡುತ್ತಿದೆ!ರಾಜ್ಯದಲ್ಲಿ 63,375 ಅಂಗನವಾಡಿ ಕೇಂದ್ರಗಳಿವೆ. ಅವುಗಳ ಮೂಲಕ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಪೂರಕ ಆಹಾರ ಪೂರೈಸಲಾಗುತ್ತಿದೆ. ಈ ಉದ್ದೇಶಕ್ಕೆ ಪ್ರಸಕ್ತ ಸಾಲಿಗೆ ರಾಜ್ಯ ಸರ್ಕಾರ ರೂ 619 ಕೋಟಿ ಅನುದಾನ ಒದಗಿಸಿದೆ. ಅಕ್ಟೋಬರ್ ಅಂತ್ಯಕ್ಕೆ ರೂ 405.19 ಕೋಟಿ ವೆಚ್ಚವಾಗಿದೆ. ಹಾಗಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿ.ಸಿ. ಪಾಟೀಲ ಇತ್ತೀಚೆಗೆ ವಿಧಾನಸಭೆಗೆ ತಿಳಿಸಿದರು.ಇಷ್ಟಾಗಿಯೂ ಮಕ್ಕಳ ಸಾವು-ನೋವು ನಿಂತಿಲ್ಲ. ಮಕ್ಕಳ ಸಾವಿನ ಸುದ್ದಿ ನಾಗರಿಕ ಸಮಾಜವನ್ನು ತಲ್ಲಣಗೊಳಿಸಿದೆ. ಹೈಕೋರ್ಟ್ ಗಮನವನ್ನೂ ಸೆಳೆದಿದೆ. ನ್ಯಾಯಾಲಯ ಚಾಟಿ ಬೀಸಿದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ, ಶಿಶು ಮರಣ ತಡೆ ಹಾಗೂ ಅಪೌಷ್ಟಿಕತೆ ನಿವಾರಣೆಗೆ ಮಾರ್ಗೋಪಾಯ ಶೋಧಿಸಲು ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದೆ.ಈ ಸಮಿತಿಯ ಸಭೆ ಇತ್ತೀಚೆಗೆ ಜರುಗಿದೆ. ಸಭೆಯಲ್ಲಿ ಮಕ್ಕಳ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ನ್ಯೂಟ್ರಿಷನ್ ಪರಿಣತರು, ಅಧಿಕಾರಿಗಳು ಭಾಗವಹಿಸಿದ್ದರು. ಅಲ್ಲಿ ಯೋಜನೆಗಳ ಅನುಷ್ಠಾನದಲ್ಲಿ ಆಗಿರುವ ಲೋಪದೋಷಗಳು ಪ್ರಸ್ತಾಪವಾಗಿವೆ. ಉಪಯುಕ್ತ ಸಲಹೆ-ಸೂಚನೆಗಳೂ ಹರಿದುಬಂದಿವೆ. ಆಹಾರದ ಹಕ್ಕಿನ ಪ್ರಕರಣಗಳಿಗೆ ಸಂಬಂಧಿಸಿದ ಸುಪ್ರೀಂಕೋರ್ಟ್ ಕಮಿಷನರ್‌ರವರ ರಾಜ್ಯ ಸಲಹೆಗಾರ ಕ್ಲಿಫ್ಟನ್ ರೊಜಾರಿಯೊ ಈ ಸಂಬಂಧ ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಎಲ್ಲರ ಅನಿಸಿಕೆಗಳನ್ನು ವಿವರವಾಗಿ ದಾಖಲಿಸಿದ್ದಾರೆ.ಎಲ್ಲ ಬಗೆಯ ಅಪೌಷ್ಟಿಕತೆಗೆ ರಕ್ತಹೀನತೆ ಪ್ರಮುಖ ಕಾರಣ. ಮೊದಲು ಅದನ್ನು ನಿವಾರಿಸಬೇಕಿದೆ. ಇದಕ್ಕಾಗಿ ಹರೆಯದ ಹೆಣ್ಣುಮಕ್ಕಳಿಗೆ, ಗರ್ಭಿಣಿಯರಿಗೆ ಐಎಫ್‌ಎ (ಕಬ್ಬಿಣಾಂಶ ಹಾಗೂ ಫೋಲಿಕ್ ಆಮ್ಲ) ಮಾತ್ರೆಗಳನ್ನು ಒದಗಿಸಬೇಕು. ಆರು ವರ್ಷದೊಳಗಿನ ಮಕ್ಕಳಿಗೂ ಈ ಮಾತ್ರೆ ನೀಡಬಹುದು. ಎರಡು ವರ್ಷದೊಳಗಿನ ಮಕ್ಕಳ ಆರೈಕೆಗೆ ವಿಶೇಷ ಗಮನ ನೀಡಬೇಕು ಎಂದು `ಯುನಿಸೆಫ್~ನ ನ್ಯೂಟ್ರಿಷನ್ ತಜ್ಞೆ ಡಾ.ಲಕ್ಷ್ಮಿ ಭವಾನಿ ಸಲಹೆ ನೀಡಿದ್ದಾರೆ.ಈ ನ್ಯೂನತೆ ನಿವಾರಣೆಗೆ ರಾಜ್ಯದಲ್ಲಿ ನ್ಯೂಟ್ರಿಷನ್ ನೀತಿ ಒಳಗೊಂಡಂತೆ ಪ್ರತ್ಯೇಕ ಮಾರ್ಗಸೂಚಿ ರೂಪಿಸಬೇಕು. ಮಕ್ಕಳಿಗೆ ಇಷ್ಟದ ಆಹಾರ ಪೂರೈಸಬೇಕು; ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕುಟುಂಬ, ಸಮುದಾಯವನ್ನು ತೊಡಗಿಸಿಕೊಳ್ಳಬೇಕು ಎಂದು `ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಕೊ-ಆಪರೇಷನ್ ಅಂಡ್ ಚೈಲ್ಡ್ ಡೆವೆಲಪ್‌ಮೆಂಟ್~ ಸಂಸ್ಥೆ ಪ್ರಾದೇಶಿಕ ನಿರ್ದೇಶಕಿ ಡಾ.ಎಂ.ಎಸ್.ತಾರಾ ಸೂಚಿಸಿದ್ದಾರೆ.ನಿವಾರಣೆಗೆ ಸರ್ಕಾರ ರೂಪಿಸಿರುವ ಯೋಜನೆಗಳ ಉದ್ದೇಶ ಒಳ್ಳೆಯದೇ. ಆದರೆ ಅವುಗಳು ಫಲಾನುಭವಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ತಲುಪುತ್ತಿಲ್ಲ. ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ಷೇತ್ರ ಅಧಿಕಾರಿಗಳಿಗೆ ತರಬೇತಿ ನೀಡಬೇಕು ಎಂಬುದು ಅಥಣಿ ಮೂಲದ ವಿಮೋಚನಾ ಸಂಸ್ಥೆಯ ಬಿ.ಎಲ್. ಪಾಟೀಲ ಅವರ ಅಭಿಪ್ರಾಯ. ಅಪೌಷ್ಟಿಕತೆ ಮತ್ತು ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಇವರು ಬರೆದ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಹೈಕೋರ್ಟ್ ಪರಿಗಣಿಸಿದೆ.ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ನಿರ್ವಹಣಾ ಕೌಶಲ್ಯಗಳನ್ನು ಹೆಚ್ಚಿಸಬೇಕು. ಮಕ್ಕಳ ದೈಹಿಕ ನ್ಯೂನತೆಗಳನ್ನು ಆರಂಭದಲ್ಲಿಯೇ ಗುರುತಿಸಲು ಅನುವಾಗುವಂತೆ ಇವರಿಗೆ ವಿಶೇಷ ತರಬೇತಿ ನೀಡಬೇಕು ಎಂದು `ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟಿ~ ಸಂಸ್ಥೆಯ ಪ್ರತಿನಿಧಿ ಎ.ಎಲ್.ಜನಾರ್ದನ್ ಸೂಚಿಸಿದ್ದಾರೆ.ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಆಯ್ದ ಮಕ್ಕಳಿಗೆ ಸರ್ಕಾರ ಪ್ರಯೋಗಿಕವಾಗಿ ಹಾಲು ಮತ್ತು ಮೊಟ್ಟೆ ಒದಗಿಸುತ್ತಿದೆ. ಇದನ್ನು ರಾಜ್ಯದ ಉದ್ದಗಲಕ್ಕೂ ವಿಸ್ತರಿಸಬೇಕು ಎಂಬುದು ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಸ್ಥೆಯ ವೈ. ಮರಿಸ್ವಾಮಿ ಅವರ ಸಲಹೆ.ಸಮಗ್ರ ಬಾಲವಿಕಾಸ ಯೋಜನೆ ಒಳಗೊಂಡಂತೆ ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆಗಳ (ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ) ನಡುವೆ ಸಮನ್ವಯ ಇರಬೇಕು. ಆದರೆ, ಈ ವಿಷಯದಲ್ಲಿ ಕೆಲವೊಂದು ತೊಡಕುಗಳಿವೆ. ಸಮನ್ವಯದ ಕೊರತೆ ಇದೆ ಎಂದು ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷೆ ನೀನಾ ನಾಯಕ್ ಗುರುತಿಸಿದ್ದಾರೆ.ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ವೈದ್ಯೋಪಚಾರಕ್ಕೆ ಸರ್ಕಾರ ವರ್ಷಕ್ಕೆ ತಲಾ 750 ರೂಪಾಯಿ ಒದಗಿಸುತ್ತಿದೆ. ಇದರ ಪ್ರಯೋಜನ ಎಷ್ಟರಮಟ್ಟಿಗೆ ಆಗುತ್ತಿದೆ ಎಂಬುದರ ಕುರಿತು ವಿವರವಾದ ಮಾಹಿತಿ ಪಡೆಯವುದು ಅಗತ್ಯ. ಆರೋಗ್ಯ ಇಲಾಖೆಯಡಿ ಬರುವ ಆಶಾ ಕಾರ್ಯಕರ್ತೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನಕ್ಕೆ ಒಳಪಡುವ ಅಂಗನವಾಡಿ ಕಾರ್ಯಕರ್ತೆಯರನ್ನು ಇದಕ್ಕೆ ಹೊಣೆಗಾರರನ್ನಾ ಗಿಸಬೇಕು ಎಂದು ಅವರು ಸೂಚಿಸಿದ್ದಾರೆ.ಆಸೆ ಕಮರಿಸಿದ `ಚೀಟಿ~! 

ರಾಯಚೂರು: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಆರು ವರ್ಷದೊಳಗಿನ ಮಕ್ಕಳಿಗೆ ಬಾಲಸಂಜೀವಿನಿ ಯೋಜನೆಯಡಿ ಆಯ್ದ ಹಲವು ಆಸ್ಪತ್ರೆಗಳಲ್ಲಿ 18 ಬಗೆಯ ರೋಗಗಳಿಗೆ ಚಿಕಿತ್ಸೆ ಒದಗಿಸಲಾಗುವುದು. ಇದಕ್ಕಾಗಿ ಸರ್ಕಾರ ಈ ವರ್ಷ ರೂ 10 ಕೋಟಿ ತೆಗೆದಿರಿಸಿದೆ.ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಮಗುವಿಗೆ ಗರಿಷ್ಠ ರೂ 35,000 ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ನವಜಾತ ಶಿಶು ಚಿಕಿತ್ಸೆಗೆ ಗರಿಷ್ಠ ಮಿತಿ ರೂ 50,000. ಬೆಂಗಳೂರು, ಬೆಳಗಾವಿ, ಬಾಗಲಕೋಟೆ, ದಾವಣಗೆರೆ, ಮಂಗಳೂರು, ಗುಲ್ಬರ್ಗ, ರಾಯಚೂರಿನಲ್ಲಿ ಚಿಕಿತ್ಸೆಗೆ ಅವಕಾಶ ಇದೆ.ಈ ಚಿಕಿತ್ಸೆಗೆ ಬಿಪಿಎಲ್ ಪಡಿತರ ಚೀಟಿ ಕಡ್ಡಾಯ. ರಾಯಚೂರು ತಾಲ್ಲೂಕಿನ ಚಿಕ್ಕಸೂಗೂರಿನ ಮಹಾದೇವಿ ಅವರಿಗೆ ಈ ಕಾರ್ಡ್ ಇಲ್ಲದಿರುವುದೇ ತೊಡಕಾಗಿದೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳು. ಮೂರು ವರ್ಷದ ದಿವ್ಯಶ್ರೀ ತೀರಾ ಸೊರಗಿದ್ದಾರೆ. ಮಕ್ಕಳಿಬ್ಬರೂ ಹೆಣ್ಣು ಅಂತ ಪತಿ ಅವರನ್ನು ತೊರೆದಿದ್ದಾರೆ. ಬಾಲಸಂಜೀವಿನಿ ಯೋಜನೆಯಡಿ ಮಗುವಿಗೆ ಚಿಕಿತ್ಸೆ ಕೊಡಿಸಲು ಅಂಗನವಾಡಿ ಕಾರ್ಯಕರ್ತೆ ಸೂಚಿಸಿದ್ದಾರೆ. ಆದರೆ ಪಡಿತರ ಚೀಟಿ ಇಲ್ಲ; ಕೊಡಿಸುವ ಭರವಸೆಯೂ ದೊರೆತಿಲ್ಲ. ಚೀಟಿ ಇಲ್ಲದೆ ಚಿಕಿತ್ಸೆ ದೂರದ ಮಾತು ಎಂದು ಅವರೇ ಆಸೆ ಬಿಟ್ಟಿದ್ದಾರೆ!

 (ಮುಗಿಯಿತು)

ಪ್ರತಿಕ್ರಿಯಿಸಿ (+)