ಮಂಗಳವಾರ, ನವೆಂಬರ್ 12, 2019
20 °C
ಶಿಕ್ಷೆ ಬೇಕೇ? ಚರ್ಚಾ ಸರಣಿ ಭಾಗ 15

ಮಕ್ಕಳಲ್ಲಿ ಇರಲಿ ಒಳ್ಳೆಯ ಶಿಸ್ತು

Published:
Updated:

ಶಿಕ್ಷೆಯಿಲ್ಲದೆ ಸಂತಸ ಹಾಗೂ ಆನಂದದಾಯಕವಾಗಿ ಕಲಿಸಲು ಸಾಧ್ಯವಿದೆ ಎಂಬ ಮಾತಿಗೆ ಅನೇಕ ಶಿಕ್ಷಕರು `ಹೌದು, ಆದರೆ...' ಎಂದು ಕೆಲವು ಸಂಶಯಗಳನ್ನು ವ್ಯಕ್ತಪಡಿಸುತ್ತಾರೆ.ತರಗತಿಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಶಿಕ್ಷೆ ಅನಿವಾರ್ಯ, ಇಲ್ಲದಿದ್ದರೆ ಅಸಾಧ್ಯವಾದ ಅಶಿಸ್ತು ಉಂಟಾಗುತ್ತದೆ, ನನ್ನ ಗುರುಗಳು ನನಗೆ ಚೆನ್ನಾಗಿ ಹೊಡೆದಿರುವುದರಿಂದಲೇ ನಾನು ನಾಲ್ಕಕ್ಷರ ಕಲಿತು, ಈಗ ಶಿಕ್ಷಕನಾಗಲು ಸಾಧ್ಯವಾಗಿರುವುದು, ನೀವು ಹೊಡೆಯದೇ ಇರುವುದರಿಂದ ಅವನು ಕಲಿಯುತ್ತಿಲ್ಲ. ದಯಮಾಡಿ ಅವನಿಗೆ ಒದ್ದು ಬುದ್ಧಿ ಕಲಿಸಿ ಎಂಬ ಕೆಲವು ಪೋಷಕರ ಒತ್ತಾಯದಿಂದ ಮಕ್ಕಳಿಗೆ ಹೊಡೆಯುತ್ತೇವೆ ಎಂಬಂತಹ ಸ್ಪಷ್ಟನೆಗಳನ್ನು ನೀಡುತ್ತಾರೆ.ಆದರೆ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದನ್ನು ಜಾಗತಿಕವಾಗಿ ಅನೇಕ ರಾಷ್ಟ್ರಗಳು ನಿಷೇಧಿಸಿವೆ. ಶಿಕ್ಷೆ ನೀಡುವುದು ಅಥವಾ ಶಿಕ್ಷೆಯ ಭಯ ಹುಟ್ಟಿಸುವುದು ಎರಡೂ ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ದೈಹಿಕವಾಗಿ ದುರ್ಬಲರಾಗಿರುವ ಹಾಗೂ ಸರಿ- ತಪ್ಪುಗಳ ವಿಮರ್ಶೆ/ ವಿವೇಚನೆ ಮಾಡುವ ಸಾಮರ್ಥ್ಯವಿಲ್ಲದ ಮಕ್ಕಳ ಮೇಲೆ ದೊಡ್ಡವರು ಎಷ್ಟೇ ಉತ್ತಮ ಉದ್ದೇಶದಿಂದ ನೀಡುವ ಶಿಕ್ಷೆಯೂ ಆಕ್ರಮಣ ಎಂದೇ ಎನಿಸಿಕೊಳ್ಳುತ್ತದೆ. ಶಿಕ್ಷಕರ ಸಮರ್ಥನೆಗಳು ಮೇಲ್ನೋಟಕ್ಕೆ ಸಮಂಜಸ ಎನಿಸಿದರೂ ತಾತ್ವಿಕ, ಮನೋವೈಜ್ಞಾನಿಕ ಹಾಗೂ ಕಾನೂನಿನ ಹಿನ್ನೆಲೆಯಿಂದ ಸರಿ ಎನಿಸುವುದಿಲ್ಲ.ಚಿಕ್ಕವಯಸ್ಸಿನ ಮಕ್ಕಳ ಸುಕೋಮಲವಾದ ಕೆನ್ನೆ, ತಲೆ ಅಥವಾ ಎದೆಯ ಭಾಗಕ್ಕೆ ಕೆಲವೊಮ್ಮೆ ಚಿಕ್ಕದಾಗಿ ಹೊಡೆದರೂ ಮಾರಣಾಂತಿಕ ಆಗಬಹುದು. ತಂದೆ, ತಾಯಿ ಅಥವಾ ಶಿಕ್ಷಕರಿಂದ ಏಟು ತಿಂದು ಮಕ್ಕಳು ಮರಣ ಹೊಂದಿದ ಅಥವಾ ಶಾಶ್ವತ ನ್ಯೂನತೆಗೊಳಗಾದ ಅನೇಕ ಉದಾಹರಣೆಗಳಿವೆ. ತಜ್ಞರ ಪ್ರಕಾರ ಕೋಪ, ಹತಾಶೆ, ಇತ್ಯಾದಿಗಳನ್ನು ವ್ಯಕ್ತಿ ಇತರರನ್ನು ನೋಡಿ, ನಕಲು ಮಾಡುವ ಮೂಲಕ ತನ್ನ ನಡವಳಿಕೆಯಲ್ಲಿ ಸ್ಥಾಪಿಸಿಕೊಳ್ಳುತ್ತಾನೆ. ಈ ಕಾರಣಗಳಿಂದಲೇ ಶಿಕ್ಷಿಸುವ ತಂದೆ ತಾಯಿಯರನ್ನು ಗಮನಿಸುವ ಹಾಗೂ ಶಿಕ್ಷೆಗೆ ಒಳಗಾಗುವ ಮಗು ವಯಸ್ಕನಾದ ಮೇಲೆ ಅದನ್ನು ತನ್ನ ಮಕ್ಕಳ ಮೇಲೆ ಅಥವಾ ತನ್ನ ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸುತ್ತದೆ ಮತ್ತು ಶಿಕ್ಷೆಯಿಂದ ಅತ್ಯುತ್ತಮ ಪರಿಣಾಮವಿದೆ ಎಂಬ ನಂಬಿಕೆ ಬೆಳೆಸಿಕೊಳ್ಳುತ್ತದೆ.ಚಿಕ್ಕಂದಿನಲ್ಲಿ ಹೆಚ್ಚು ಶಿಕ್ಷೆಗೆ ಗುರಿಯಾದ ಮಕ್ಕಳು ದೊಡ್ಡವರಾದ ಮೇಲೆ ಅದಕ್ಕಿಂತಲೂ ಹೆಚ್ಚು ಶಿಕ್ಷೆ ನೀಡುವುದನ್ನು ಹಾಗೂ ಆಕ್ರಮಣಕಾರಿಯಾಗಿ ವರ್ತಿಸುವುದನ್ನು ರೂಢಿಸಿಕೊಳ್ಳುವ ಅಪಾಯವಿದೆ. ನಾವು ಗಮನಿಸಿ ನೋಡಿದರೆ, ತಂದೆ- ತಾಯಿ ಅಥವಾ ಶಿಕ್ಷಕರಿಂದ ತೀವ್ರ ದೈಹಿಕ ಶಿಕ್ಷೆ ಪಡೆದ ಮಕ್ಕಳಲ್ಲಿ ತನ್ನ ತಮ್ಮ/ ತಂಗಿ ಅಥವಾ ಸ್ನೇಹಿತರನ್ನು ಹೊಡೆಯುವ ಅಥವಾ ಹಿಂಸೆಗೊಳಪಡಿಸುವ ಪ್ರವೃತ್ತಿಯನ್ನು ಕಾಣಬಹುದು. ಹೀಗೆ ಅವರ ಮನದಾಳದಲ್ಲಿ ಶಿಕ್ಷಿಸುವ ಬಯಕೆ ಮೊಳೆಯುವ ಸಾಧ್ಯತೆ ಇರುತ್ತದೆ.ವಿಶ್ವದ ಅರ್ಧದಷ್ಟು ರಾಷ್ಟ್ರಗಳು ದೈಹಿಕ ಶಿಕ್ಷೆಯನ್ನು ನಿಷೇಧಿಸಿವೆ. 18ಕ್ಕೂ ಅಧಿಕ ರಾಷ್ಟ್ರಗಳು ಶಾಲೆ, ಕುಟುಂಬ ಸೇರಿದಂತೆ ಎಲ್ಲ ಸನ್ನಿವೇಶಗಳಲ್ಲೂ ದೈಹಿಕ ಶಿಕ್ಷೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಸ್ವೀಡನ್, ಬ್ರಿಟನ್, ನ್ಯೂಜಿಲೆಂಡ್, ಅಮೆರಿಕದಂತಹ ರಾಷ್ಟ್ರಗಳಲ್ಲಿ ಶಿಕ್ಷೆ ನೀಡುವುದಿರಲಿ ಶಿಕ್ಷೆಯ ಭಯ ಮೂಡಿಸುವ ಮಾತುಗಳನ್ನಾಡುವುದೂ ಅಪರಾಧ. ಆದರೂ ಅಲ್ಲಿನ ಶಿಕ್ಷಕರು- ಮಕ್ಕಳ ನಡುವೆ ಉತ್ತಮ ಬಾಂಧವ್ಯವಿದ್ದು, ಮಕ್ಕಳು ಶಿಕ್ಷಕರನ್ನು ಭಯ ಅಳುಕು ಇಲ್ಲದೇ ಹೆಸರಿಡಿದು ಗೌರವದಿಂದ ಮಾತನಾಡಿಸುತ್ತಾರೆ ಹಾಗೂ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಾರೆ.ಅಲ್ಲಿಯ ಪರಿಸ್ಥಿತಿಗೂ ಇಲ್ಲಿಯ ಪರಿಸ್ಥಿತಿಗೂ ಹೋಲಿಸಲಾಗದು ಎಂದರೂ, ನಮ್ಮ ಶಾಲಾ ಶೈಕ್ಷಣಿಕ ವ್ಯವಸ್ಥೆ ಈ ದೃಷ್ಟಿಯಲ್ಲಿ ಆಮೂಲಾಗ್ರವಾಗಿ ಬದಲಾಗಬೇಕಿರುವುದು ಸುಳ್ಳಲ್ಲ. ದೇಶದ ಶಾಲೆಗಳಲ್ಲಿ ದೈಹಿಕ ಶಿಕ್ಷೆ ನೀಡುವುದು ಅವ್ಯಾಹತವಾಗಿ ನಡೆಯುತ್ತಿದೆ. ಕೇಂದ್ರ ಸರ್ಕಾರ ಕೈಗೊಂಡ ಅಧಿಕೃತ ಸಮೀಕ್ಷೆಯಿಂದ ಶೇ 69ಕ್ಕೂ ಅಧಿಕ ಮಕ್ಕಳು ದೈಹಿಕ ಶಿಕ್ಷೆಗೆ ಒಳಗಾಗಿರುವುದು ತಿಳಿದುಬಂದಿದೆ. ಇವರಲ್ಲಿ ಶೇ 73ರಷ್ಟು ಬಾಲಕರು ಹಾಗೂ ಶೇ 65ರಷ್ಟು ಬಾಲಕಿಯರು.ತರಗತಿಯ ಅಶಿಸ್ತಿಗೆ ಏನೇ ಕಾರಣಗಳಿದ್ದರೂ ಮಕ್ಕಳನ್ನು ದೈಹಿಕವಾಗಿ ಶಿಕ್ಷೆಗೊಳಪಡಿಸದೆ, ಸಕಾರಾತ್ಮಕ ವಿಧಾನಗಳಿಂದ ಶಿಸ್ತು ಮೂಡಿಸಲು ಸಾಧ್ಯವಿದೆ. ಸಕಾರಾತ್ಮಕ ಶಿಸ್ತು ನೂತನ ಪರಿಕಲ್ಪನೆಯಾಗಿದ್ದು, ಮಕ್ಕಳ ಆತ್ಮಗೌರವವನ್ನು ಕಾಪಾಡುವ ಮೂಲಕ ಅಹಿಂಸಾತ್ಮಕ ರೀತಿಯಲ್ಲಿ ಮನೋವೈಜ್ಞಾನಿಕ ತಳಹದಿಯ ಮೇಲೆ ಕಾರ್ಯ ನಿರ್ವಹಿಸುತ್ತದೆ. ಅಂತಹ ಅಂಶಗಳಲ್ಲಿ ಕೆಲವು ಹೀಗಿವೆ:

1. ಶಾಲಾ ಪರಿಸರದಲ್ಲಿ ಯಾವ ರೀತಿ ವರ್ತಿಸಬೇಕು ಎಂಬುದನ್ನು ಮಕ್ಕಳೊಂದಿಗೆ ಚರ್ಚಿಸಿ, ಶಿಸ್ತಿನ ನಿಯಮಗಳನ್ನು ರೂಪಿಸಬೇಕು. ಮಕ್ಕಳೇ ನಿಯಮಗಳ ರಚನೆಯಲ್ಲಿ ಭಾಗಿಯಾದರೆ ಅವುಗಳನ್ನು ಮುರಿಯುವ ಸಾಧ್ಯತೆ ಕಡಿಮೆ ಎಂದು ಭಾವಿಸಲಾಗಿದೆ.2. ತರಗತಿಯಲ್ಲಿ ಉದ್ಭವಿಸಬಹುದಾದ ಜಗಳ, ತಂಟೆಗಳನ್ನು ಪರಿಹರಿಸಲು ಮಕ್ಕಳನ್ನೊಳಗೊಂಡ ಬಾಲ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಇದರಿಂದ ಅವರಿಗೆ ಸರಿ ತಪ್ಪುಗಳ ಬಗ್ಗೆ ಚರ್ಚಿಸಲು ಹಾಗೂ ಆರೋಗ್ಯಕರ ರೀತಿಯಲ್ಲಿ ವಿವಾದಪರಿಹರಿಸಿಕೊಳ್ಳುವ ವಿಧಾನ ತಿಳಿದು, ಉತ್ತಮ ನಡವಳಿಕೆ ರೂಢಿಸಿಕೊಳ್ಳಲು ಸಹಾಯವಾಗುತ್ತದೆ.3. ಪ್ರತಿ ಮಗುವಿನ ಉತ್ತಮ ಅಂಶಗಳನ್ನು ಗಮನಿಸಿ, ಧನಾತ್ಮಕ ಅಂಶಗಳನ್ನು ಉತ್ತಮ ನುಡಿಗಳಿಂದ ಪ್ರೋತ್ಸಾಹಿಸುವುದು ಪರಿಣಾಮಕಾರಿ ಆಗುತ್ತದೆ. ಎಂತಹ ಸಮಸ್ಯಾತ್ಮಕ ಮಗುವೇ ಆದರೂ ಅದರಲ್ಲಿ ಉತ್ತಮ ಗುಣಗಳು ಇದ್ದೇ ಇರುತ್ತವೆ. ಅವುಗಳನ್ನು ಗಮನಿಸಿ, ಪ್ರೋತ್ಸಾಹಿಸಬೇಕು.4. ಮಕ್ಕಳ ಚಿಕ್ಕಪುಟ್ಟ ತಪ್ಪುಗಳನ್ನು ಉದಾರವಾಗಿ ಕ್ಷಮಿಸಿ. ಚಿಕ್ಕ ತಪ್ಪನ್ನೇ ಅತಿ ಗಂಭೀರವಾಗಿ ಪರಿಗಣಿಸಿ, ರಾದ್ಧಾಂತ ಸೃಷ್ಟಿಸುವುದು ಸಮಸ್ಯೆಗೆ ಎಡೆಮಾಡುತ್ತದೆ.

5. ಪ್ರತಿ ಮಗುವೂ ವಿಭಿನ್ನ ಹಾಗೂ ವಿಶಿಷ್ಟ. ಒಂದು ಮಗುವನ್ನು ಇನ್ನೊಂದು ಮಗುವಿನೊಂದಿಗೆ ಹೋಲಿಕೆ ಮಾಡುವುದು ಸಲ್ಲದು.6. ತಪ್ಪೆಸಗಿದೆ ಎನಿಸಿದ ಮಗುವಿಗೆ ತನ್ನ ವಿವರಣೆ ನೀಡಲು ಅವಕಾಶ ನೀಡಿ, ಅದನ್ನು ಕೇಳಿಸಿಕೊಳ್ಳುವುದು ಮುಖ್ಯ. ಇದರಿಂದ ಕೆಲವೊಮ್ಮೆ ಮಕ್ಕಳ ದೃಷ್ಟಿಯಲ್ಲಿ ಪ್ರಮುಖ ಎನಿಸುವ ಕಾರಣಗಳಿಂದ ಆ ರೀತಿ ವರ್ತಿಸಿರುವ ಸಾಧ್ಯತೆ ಇರುತ್ತದೆ.7. ಮಕ್ಕಳ ತಪ್ಪುಗಳನ್ನು ಮಕ್ಕಳ ಮಟ್ಟದಲ್ಲೇ ಯೋಚಿಸುವುದು ಉತ್ತಮ; ಇದರಿಂದ ಚಿಕ್ಕ ತಪ್ಪಿಗೆ ಅವರು ವ್ಯಗ್ರರಾಗುವುದು ತಪ್ಪುತ್ತದೆ.8. ತರಗತಿಯಲ್ಲಿ ಮಕ್ಕಳಿಗೆ ಇದು ಮಾಡಬೇಡಿ, ಅದು ಮಾಡಬೇಡಿ ಎಂದು ಬೇಡಗಳ ಪಟ್ಟಿ ಮಾಡದೆ, ಏನನ್ನು ಮಾಡಬೇಕು ಎಂದು ತಿಳಿಸಿ.9. ಯಾವ ಕಾರಣದಿಂದಲೂ ತಾಳ್ಮೆ ಕಳೆದುಕೊಳ್ಳದೆ ಶಾಂತಚಿತ್ತರಾಗಿರಿ ಹಾಗೂ ಮಕ್ಕಳ ಸುರಕ್ಷತೆಯೇ ಪ್ರಮುಖ ಆದ್ಯತೆ ಎಂಬುದನ್ನು ಮರೆಯಬೇಡಿ.10. ಸಮಸ್ಯಾತ್ಮಕ ವರ್ತನೆ ತೋರುವ ಮಕ್ಕಳ ಬಗ್ಗೆ ಪೋಷಕರೊಂದಿಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ. ಸಾಧ್ಯವಾಗದಿದ್ದರೆ, ತಜ್ಞ ಸಲಹಾಕಾರರ ನೆರವು ಪಡೆಯಿರಿ.11. ಪ್ರತಿ ಶಾಲೆಯೂ ಸಲಹಾಕಾರರ ಸೇವೆ ಹೊಂದುವುದು ಅವಶ್ಯ.12. ಮಕ್ಕಳ ತಪ್ಪು ವರ್ತನೆಗೆ ಮೌಖಿಕ ಎಚ್ಚರಿಕೆ ನೀಡಿ. ಕೆಲವೊಮ್ಮೆ ನಿಮ್ಮ ಮೌನ, ಗಾಂಭೀರ್ಯವೂ ಪರಿಣಾಮಕಾರಿ ಆಗುತ್ತದೆ.13. ಶೈಕ್ಷಣಿಕ ವರ್ಷದ ಆರಂಭದಲ್ಲಿ ಪೋಷಕರು ಹಾಗೂ ಶಿಕ್ಷಕರಿಗೆ ಶಿಕ್ಷೆಯ ಅನಾಹುತಗಳು ಹಾಗೂ ಧನಾತ್ಮಕ ಶಿಸ್ತಿನ ಕುರಿತು ತಜ್ಞರಿಂದ ಮಾಹಿತಿ ನೀಡಬೇಕು. ನಿಯಮಿತವಾಗಿ ಶಿಕ್ಷಕರು- ಪೋಷಕರ ಸಭೆ ನಡೆಯಬೇಕು.14. ಮಕ್ಕಳಿಗೆ ಜೀವನ ಕೌಶಲ ಶಿಕ್ಷಣ ನೀಡುವ ಮೂಲಕ ಅವರಲ್ಲಿ ಸಂವಹನ, ನಿರ್ಧಾರ ಸಾಮರ್ಥ್ಯ, ಒತ್ತಡ ನಿವಾರಣೆ ಸಾಮರ್ಥ್ಯ ಇತ್ಯಾದಿಗಳನ್ನು ಬೆಳೆಸಬೇಕು.15. ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಪ್ರೋತ್ಸಾಹಿಸಬೇಕು. ಶಾಲೆಯಲ್ಲಿ ಸಲಹಾ ಪೆಟ್ಟಿಗೆ ಸ್ಥಾಪಿಸಿ, ದೂರುಗಳನ್ನು ಆಹ್ವಾನಿಸಿ, ಪರಿಹರಿಸಬೇಕು. ಮಕ್ಕಳ ದೂರುಗಳನ್ನು ಹೇಳಿಕೊಳ್ಳಲು ಸಹಾಯವಾಣಿಯ ಸೇವೆ ಸ್ಥಾಪಿಸಬೇಕು.ಅಖಿಲ ಭಾರತೀಯ ಶಿಕ್ಷಕರ ಮಕ್ಕಳ ಹಕ್ಕುಗಳ ವೇದಿಕೆ ಎಂಬ ಸರ್ಕಾರೇತರ ಸಂಸ್ಥೆಯು ಆಂಧ್ರ ಪ್ರದೇಶದಲ್ಲಿ ಶಿಕ್ಷೆಯ ಅನಾಹುತ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕೈಗೊಂಡ ಜಾಗೃತಿ ಕಾರ್ಯಕ್ರಮದಿಂದ ಪ್ರಭಾವಿತರಾದ ಶಾಲೆಯೊಂದರ ಶಿಕ್ಷಕರು, ಮಕ್ಕಳನ್ನು ಶಿಕ್ಷಿಸಲು ಬಳಸುತ್ತಿದ್ದ ಕೋಲುಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದು, ಅಂತ್ಯಸಂಸ್ಕಾರ ಮಾಡಿ ಬಂದರು. ನಂತರ, ಇನ್ನು ಮುಂದೆ ಶಿಕ್ಷೆಯಿಲ್ಲದೆ ಶಿಕ್ಷಣ ನೀಡುವುದಾಗಿ ಘೋಷಿಸಿದರು. ಇದರ ಪರಿಣಾಮವಾಗಿ ಶಾಲೆ ಬಿಟ್ಟ ಕೆಲವು ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ. ಇದೇ ರೀತಿ ನಮ್ಮ ರಾಜ್ಯದ ಶಾಲೆಗಳೂ ಪ್ರಯತ್ನಿಸಬಹುದಲ್ಲವೇ?

(ಚರ್ಚಾ ಸರಣಿ ಕೊನೆಗೊಂಡಿದೆ)

ಪ್ರತಿಕ್ರಿಯಿಸಿ (+)