ಶನಿವಾರ, ಮೇ 21, 2022
27 °C

ಮಕ್ಕಳಲ್ಲಿ ಜ್ಞಾನದ ಹಸಿವಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಪ್ರತಿಯೊಬ್ಬ ವಿದ್ಯಾರ್ಥಿಗೂ ಜ್ಞಾನದ ಹಸಿವು ಇದ್ದಲ್ಲಿ ಮಾತ್ರ ಆತ ಒಬ್ಬ ಉತ್ತಮ ಮೌಲ್ಯಯುಳ್ಳ ತತ್ವಜ್ಞಾನಿಯಾಗಲು ಸಾಧ್ಯ ಎಂದು ಕೇಂದ್ರ ಕಂಪನಿಗಳ ವ್ಯವಹಾರ ಸಚಿವ ಡಾ.ವೀರಪ್ಪ ಮೊಯ್ಲಿ ತಿಳಿಸಿದರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿ ಚಿಕ್ಕಬಳ್ಳಾಪುರ ಲೋಕ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಿಸಾನ್ ಸಭಾ ಟ್ರಸ್ಟ್‌ವತಿಯಿಂದ ನಡೆಸಲಾಗುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳ ವಿಶೇಷ ತರಭೇತಿ ಶಿಬಿರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದಿನ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಸಮಯದ ಜೊತೆಗೆ ಸ್ಪರ್ಧೆ ಅನಿವಾರ್ಯವಾಗಿದೆ. ಉತ್ತಮ ಫಲಿತಾಂಶ ಪಡೆಯುವುದರ ಜೊತೆಗೆ ಬದುಕಿಗೆ ಅಗತ್ಯ ಅಡಿಪಾಯ ಹಾಕಬೇಕು. ದೇಶದ ಅಭಿವೃದ್ಧಿಗೆ ಗುಣಮಟ್ಟದ ಶಿಕ್ಷಣ ಅತ್ಯಮೂಲ್ಯ. ಪ್ರತಿಯೊಂದು ವಿಷಯದಲ್ಲೂ ಶಿಕ್ಷಕರೊಂದಿಗೆ ಚರ್ಚಿಸಿ ಸೂಕ್ತ ಸಲಹೆ ಪಡೆದು ಪರಿಹಾರ ಕಂಡುಕೊಳ್ಳಬೇಕು ಎಂದು ಮೊಯಿಲಿ ಸಲಹೆ ನೀಡಿದರು.ಯಾರೂ ಹುಟ್ಟತ್ತಲೇ ದಡ್ಡರಾಗಿ ಹುಟ್ಟುವುದಿಲ್ಲ. ಜ್ಞಾನವಂತರಾಗಲು ಸೂಕ್ತ ಮಾರ್ಗದರ್ಶನ, ಸಲಹೆಯ ಅಗತ್ಯವಿದೆ. ಇವುಗಳ ಜೊತೆಗೆ ಪರಿಶ್ರಮಪಟ್ಟಾಗ ಅದೃಷ್ಟಗಳು ತಾನಾಗಿಯೇ ಬೆನ್ನಹಿಂದೆ ಬೀಳುತ್ತವೆ.ಸಾಮಾಜಿಕ ಒತ್ತಡದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ ನೀಡುವ ಉದ್ದೇಶದಿಂದ 800ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಶಬಿರಕ್ಕೆ ಆಯ್ಕೆ ಮಾಡಲಾಯಿತು. ಮುಂದಿನ ಶೈಕ್ಷಣಿಕ ಸಾಲಿನಲ್ಲಿ  ಇನ್ನಷ್ಟು ವಿದ್ಯಾರ್ಥಿಗಳೊಂದಿಗೆ ಶಿಬಿರ ನಡೆಸಲು ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ವಿ.ವೆಂಕಟೇಶಯ್ಯ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ 10ನೇ ತರಗತಿಯ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಬರಲು ಶಿಕ್ಷಕರ ಪರಿಶ್ರಮದ ಜೊತೆಗೆ ಕಿಸಾನ್ ಸಭಾ ಟ್ರಸ್ಟ್ ಸಹ ಸಹಕಾರಿಯಾಗಿದೆ.ಹಿಂದುಳಿದ ಇನ್ನೂರು ವಿದ್ಯಾರ್ಥಿಗಳಿಗೆ ಶಿಬಿರದಿಂದ ಸಾಕಷ್ಟು ಅನುಕೂಲವಾಗಿದೆ. ಇದಲ್ಲದೆ ಶಾಲೆಗಳಲ್ಲಿ ಇನ್ನಷ್ಟು ವಿಶೇಷ ತರಗತಿಗೆ ಒತ್ತು ನೀಡಿ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಲಾಗುವುದೆಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಹಾಗೂ ತರಭೇತಿ ನೀಡಿದ ಶಿಕ್ಷಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.