ಗುರುವಾರ , ಜೂನ್ 17, 2021
21 °C

ಮಕ್ಕಳಿಂದ ಹುಕ್ಕಾ ಸೇವನೆ: ಪೋಷಕರಿಗೆ ಎಚ್ಚರಿಕೆ ಗಂಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ರೆಸಿಡೆನ್ಸಿ ರಸ್ತೆಯಲ್ಲಿರುವ ಸೆವೆನ್‌ಹಿಲ್ಸ್ ಸ್ನೂಕರ್ ಕ್ಲಬ್ ಮೇಲೆ ದಾಳಿ ನಡೆಸಿದಾಗ ವಿದ್ಯಾರ್ಥಿಗಳು ಹುಕ್ಕಾ ಸೇವಿಸುತ್ತಿದ್ದ ಸಂಗತಿ ಪೋಷಕರಿಗೆ ಎಚ್ಚರಿಕೆ ಗಂಟೆಯಾಗಿದೆ.  ದಾಳಿ ವೇಳೆ ಶಾಲೆಯ ಕೆಲ ವಿದ್ಯಾರ್ಥಿಗಳು ಅಲ್ಲಿದ್ದರು ಎಂಬ ಸಂಗತಿಯನ್ನು ಬಿಷಪ್ ಕಾಟನ್ ಬಾಲಕರ ಶಾಲೆ ಖಚಿತಪಡಿಸಿದೆ. ಆದರೆ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಶಾಲೆಯ ಪ್ರತಿನಿಧಿಗಳು ನಿರಾಕರಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಲು ಶಾಲೆ ನಿರ್ಧರಿಸಿದೆ.`ಹುಕ್ಕಾ ಸೇವನೆ ಮಾಡುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅವರ ಪೋಷಕರಿಗೂ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಬಿಬಿಎಂಪಿ ಅಧಿಕಾರಿಗಳಿಗೆ ಪತ್ರ ಬರೆದು ಇಂತಹ ಕೇಂದ್ರಗಳನ್ನು ಮುಚ್ಚುವಂತೆ ಮನವಿ ಮಾಡುತ್ತೇವೆ~ ಎಂದು ಬಿಷಪ್ ಕಾಟನ್ ಬಾಲಕರ ಶಾಲೆಯ ಪ್ರಾಚಾರ್ಯರಾದ ಲಿಡಿಯಾ ಜೋಶುವಾ ತಿಳಿಸಿದ್ದಾರೆ.  ಹುಕ್ಕಾದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಕಾರ್ಯಾಗಾರ ಏರ್ಪಡಿಸಲಾಗುತ್ತದೆ ಎಂದು ಅವರು ಹೇಳಿದರು.ಇಂತಹ ಘಟನೆಗಳು ಆಗದಂತೆ ತಡೆಯಲು ಕೆಥೆಡ್ರಲ್ ಶಾಲೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಶಾಲೆ ಮುಗಿದ ನಂತರ ಮಕ್ಕಳು ಇಚ್ಛೆ ಬಂದ ಕಡೆ ಹೋಗದಂತೆ ತಡೆಯಲು ಶಾಲೆ ನಿರ್ಧರಿಸಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ನಿರ್ಗಮನ ಪಾಸ್‌ಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಶಾಲೆಯ ಪ್ರಾಚಾರ್ಯರಾದ ಇಸಬೆಲ್ಲ ಸಿಮನ್ ತಿಳಿಸಿದರು.ಶಾಲೆಗಳು ಕಠಿಣ ಕ್ರಮಕ್ಕೆ ಮುಂದಾಗಿವೆ. ಆದರೆ ಇದೊಂದು ಗಂಭೀರ ಸಮಸ್ಯೆ ಎಂದು ಮಕ್ಕಳ ಹಕ್ಕುಗಳ ಹೋರಾಟ ಸಂಘಟನೆಗಳ ಸದಸ್ಯರು ಮತ್ತು ಮನಶಾಸ್ತ್ರಜ್ಞರು ಹೇಳುತ್ತಾರೆ.ತರಗತಿಗಳ ಒತ್ತಡ ಅಥವಾ ದೂರದರ್ಶನದ ಪರಿಣಾಮದಿಂದ ಮಕ್ಕಳು ಹುಕ್ಕಾ ಸೇವನೆ ಚಟಕ್ಕೆ ಬಿದ್ದಿರಬಹುದು. ಕುಟುಂಬದ ಬೆಂಬಲ ಇಲ್ಲದಿದ್ದರೆ ಈ ಸಮಸ್ಯೆ ಇನ್ನೂ ಹೆಚ್ಚಾಗಬಹುದು. ಆದ್ದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಯತ್ನಿಸಬೇಕು. ಮಕ್ಕಳು ಒಂದೆಡೆ ಸೇರಲು ಅನುಕೂಲ ಮಾಡಿಕೊಡಬೇಕು ಎಂದು ಮಕ್ಕಳ ಸಂಘಟನೆಯ ನಂದನ್ ರೆಡ್ಡಿ ಅಭಿಪ್ರಾಯಪಡುತ್ತಾರೆ.`ಕೆಲವು ಮಕ್ಕಳು ಮಾತ್ರ ದುಶ್ಚಟ ಸಮಸ್ಯೆಯಿಂದ ಇಲ್ಲಿಗೆ ಬರುತ್ತಾರೆ. ಕುತೂಹಲ ಅಥವಾ ಒತ್ತಡದ ಪರಿಣಾಮ ಅವರು ದುಶ್ಟಟ ಕಲಿತಿರುತ್ತಾರೆ~ ಎಂದು ಕ್ಯಾಡಬಾಮ್ಸ ಮೈಂಡ್ ಟಾಕ್ ಕೇಂದ್ರದ ಮನಶಾಸ್ತ್ರಜ್ಞರಾದ ಡಾ. ಬಿ.ಆರ್. ಮಧುಕರ್ ಮತ್ತು ಡಾ. ಶ್ರೀನಿವಾಸ ರೆಡ್ಡಿ ಅಭಿಪ್ರಾಯಪಡುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.