ಭಾನುವಾರ, ಮಾರ್ಚ್ 7, 2021
27 °C

ಮಕ್ಕಳಿಂದ ‘ಮದುಮಗಳು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳಿಂದ ‘ಮದುಮಗಳು’

ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯು ಮಲೆನಾಡಿನ ನೈಜ ಚಿತ್ರಣ, ಸ್ವಾಭಾವಿಕ ವರ್ಣನೆಗಳ ಮೂಲಕ ಓದುಗರನ್ನು ಸೆರೆಹಿಡಿಯುತ್ತದೆ. ಮಲೆನಾಡಿನ ಆಗುಹೋಗುಗಳನ್ನು ಆಪ್ತವಾಗಿ ವಿವರಿಸುವ ಕಾದಂಬರಿ ಇದು.  ನೂರಾರು ಪಾತ್ರಗಳ ಮೂಲಕ ಕುವೆಂಪು ಅವರು ಕಥೆಯನ್ನು ಬಣ್ಣಿಸುವ ರೀತಿಯೇ ವಿಭಿನ್ನ.ಈ ಕಾದಂಬರಿಯ ಬೃಹತ್‌ ರಂಗ ರೂಪಾಂತರದ  ಮೊದಲ ಪ್ರಯೋಗ ಮೈಸೂರಿನ ‘ರಂಗಾಯಣ’ದಲ್ಲಿ ನಡೆದಿತ್ತು. ಅದಾದ ನಂತರ ಬೆಂಗಳೂರಿನ ಕಲಾ ಗ್ರಾಮದಲ್ಲಿ ‘ಮದುಮಗಳು’ ಪ್ರದರ್ಶನ ಗೊಂಡಿತ್ತು. 2015ರಲ್ಲಿಯೂ ಮದುಮಗಳ ಪ್ರದರ್ಶನ ಕಲಾಗ್ರಾಮದ ನಾಲ್ಕು ವೇದಿಕೆಗಳಲ್ಲಿ ನಡೆದಿತ್ತು.ಇದೀಗ ಈ ಪ್ರದರ್ಶನದ ‘ಮಿನಿಯೇಚರ್‌’ ಎಂಬಂತೆ, ನಗರದ ದೊಡ್ಡ ಬಿದರಲ್ಲಿನ ಗುರುಶ್ರೀ ವಿದ್ಯಾಕೇಂದ್ರದಲ್ಲಿ  ವಿದ್ಯಾರ್ಥಿಗಳೇ ಅಭಿನಯಿಸಿದ ‘ಮಲೆಗಳಲ್ಲಿ ಮದುಮಗಳು’ ರಂಗದ ಮೇಲೆ ಬರುತ್ತಿದ್ದಾಳೆ.‘ಕುವೆಂಪು ಅವರ ಮಲೆಗಳಲ್ಲಿ  ಮದುಮಗಳು ಕಾದಂಬರಿಯಲ್ಲಿ ಮಲೆನಾಡು ಕಣ್ಣಮುಂದೆ ಬರುವಂತೆ ಚಿತ್ರಿಸಿದ್ದಾರೆ. ಮಲೆನಾಡು ನಗರದ ಮಕ್ಕಳಿಗೂ ಪರಿಚಿತವಾಗಬೇಕು ಎಂಬ ಉದ್ದೇಶದಿಂದಲೇ ಇಂತಹ ನಾಟಕ ಮಾಡಬೇಕು ಎಂದು ಆಯ್ಕೆ ಮಾಡಿಕೊಂಡಿದ್ದೇವೆ. ಮಕ್ಕಳಲ್ಲಿ ಕಾದಂಬರಿ ಓದುವ ಹವ್ಯಾಸ ಹೆಚ್ಚಿಸಲು ಇದು ಸಹಕಾರಿ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಶ್ರೀನಾಥ್‌.‘ರಾಷ್ಟ್ರಕವಿ ಕುವೆಂಪು ಅವರ ಜನ್ಮ ಶತಮಾನೋತ್ಸವವನ್ನು ಈಗ ಆಚರಿಸಲಾಗುತ್ತಿದೆ. ಈ ಕಾರಣದಿಂದ ಮದುಮಗಳು ಕಾದಂಬರಿಯ 100 ಪ್ರತಿಗಳನ್ನು ಶಾಲೆ ವತಿಯಿಂದ ಖರೀದಿ ಮಾಡಿ ಓದಲು ನೀಡಲಾಯಿತು. ಆನಂತರ ಪೋಷಕರ ಜತೆ ಚರ್ಚಿಸಿ ಪ್ರಯೋಗಕ್ಕೆ ಮುಂದಾದೆವು’ ಎನ್ನುತ್ತಾರೆ ಅವರು. ಇದೆಲ್ಲಕ್ಕಿಂತ ಕಲಾಗ್ರಾಮದಲ್ಲಿ ಎರಡು ವರ್ಷ ನಡೆದ ಮದುಮಗಳ ರಂಗಪ್ರಯೋಗ ಇವರನ್ನು ಹೆಚ್ಚು ಆಕರ್ಷಿಸಿದೆ.128 ಮಕ್ಕಳ ತಂಡ

ಮಲೆಗಳಲ್ಲಿ ನಾಟಕಕ್ಕೆ 128 ಮಕ್ಕಳ ಕಲಾತಂಡ ಸಿದ್ಧವಾಗಿದೆ. ಶಾಲೆಯ ಆವರಣದಲ್ಲಿ 110x52 ಅಳತೆಯ,  ಮಲೆನಾಡನ್ನು ಹೋಲುವ ರಂಗಸಜ್ಜಿಗೆ ಸಿದ್ಧವಾಗಿದೆ. ನಾಟಕ ಪ್ರಯೋಗದ ಯಶಸ್ಸಿಗೆ 40 ಶಿಕ್ಷಕರ ತಂಡ ಹಗಲಿರುಳು ಶ್ರಮಿಸುತ್ತಿದೆ. ಪ್ರತಿದಿನ ಕಲಾವಿದರು ಮೂರು ಗಂಟೆ ತಾಲೀಮು ಮಾಡುತ್ತಿದ್ದಾರೆ.ಕಲಾಗ್ರಾಮ ಮತ್ತು ಮೈಸೂರಿನ ರಂಗಾಯಣದಲ್ಲಿ  ‘ಮಲೆಗಳಲ್ಲಿ ಮದುಮಗಳು’ ನಾಟಕ 9 ಗಂಟೆ ಪ್ರದರ್ಶನವಾಗಿತ್ತು. ಆದರೆ ಮಕ್ಕಳು ಮಾಡುತ್ತಿರುವ ಈ ನಾಟಕ 3 ಗಂಟೆ 8 ನಿಮಿಷ ಪ್ರದರ್ಶನವಾಗುತ್ತಿದೆ. ಮೂಲ ಕಾದಂಬರಿಯಲ್ಲಿ 114 ಅಧ್ಯಾಯಗಳಿದ್ದರೆ, ಮಕ್ಕಳ ಪ್ರದರ್ಶನಕ್ಕೆ ಕೇವಲ ಮೊದಲಿನ 25 ಅಧ್ಯಾಯಗಳನ್ನು  ಆಯ್ದುಕೊಳ್ಳಲಾಗಿದೆ. ಗುತ್ತಿ ತಿಮ್ಮಿಯನ್ನು ಕರೆದುಕೊಂಡು ಹೋಗುವ ದೃಶ್ಯದೊಂದಿಗೆ ಮುಕ್ತಾಯವಾಗುವ ನಾಟಕ, ‘ಮುಂದಿನ ಕಥೆಯನ್ನು ಕಾದಂಬರಿ ಓದಿ ತಿಳಿಯಿರಿ’ ಎಂದು ಪ್ರೇಕ್ಷಕರನ್ನು ಕೋರುತ್ತದೆ.ಇಡೀ ನಾಟಕ ಪ್ರದರ್ಶನಕ್ಕೆ ₹5–5.50 ಲಕ್ಷ ವೆಚ್ಚ ಮಾಡಲಾಗಿದೆ. ಬೆಳಕು ಮತ್ತು ಧ್ವನಿಗೆ ₹2.86 ಲಕ್ಷ, ರಂಗಕ್ಕೆ ₹2 ಲಕ್ಷ ಮತ್ತು ವೇಷಭೂಷಣಕ್ಕೆ ಸುಮಾರು ₹50 ಸಾವಿರ ವ್ಯಯಿಸಲಾಗಿದೆ. ಇಷ್ಟಾದರೂ ಮಕ್ಕಳಿಂದ ನಯಾಪೈಸೆಯನ್ನೂ ಪಡೆದಿಲ್ಲ.ಹಾಡುಗಳು ಇವೆ

ಕಲಾಗ್ರಾಮದಲ್ಲಿ ಪ್ರದರ್ಶನವಾದ ಮದುಮಗಳ ನಾಟಕಕ್ಕೆ ಕೆ.ವೈ.ನಾರಾಯಣ ಸ್ವಾಮಿ ಅವರು ಗೀತೆಗಳನ್ನು ಬರೆದಿದ್ದರು. ಹಂಸಲೇಖ ಸಂಗೀತ ನೀಡಿದ್ದರು. ಈಗ ಮಕ್ಕಳ ಪ್ರದರ್ಶನದಲ್ಲಿ ನಾರಾಯಣ ಸ್ವಾಮಿ ಅವರ ಹಾಡುಗಳನ್ನೇ ಬಳಸಿಕೊಳ್ಳಲಾಗಿದೆ. ಅವನ್ನು ಮಕ್ಕಳೇ  ಹಾಡಿದ್ದಾರೆ. ಕಲಾಗ್ರಾಮದಲ್ಲಿ ನಾಲ್ಕು ವೇದಿಕೆಗಳಲ್ಲಿ ಪ್ರದರ್ಶನ ನಡೆದಿತ್ತು. ಆದರೆ ಈಗ ಒಂದೇ ದೊಡ್ಡ ವೇದಿಕೆಯಲ್ಲಿ ಸಣ್ಣ ಸಣ್ಣ ಮನೆಗಳನ್ನು ನಿರ್ಮಿಸಲಾಗಿದೆ. ನೈಜತೆಗಾಗಿ ಅಡಿಕೆ ಮರಗಳನ್ನು ನೆಡಲಾಗಿದೆ.ಇಡೀ ನಾಟಕ ಪ್ರದರ್ಶನವನ್ನು ಎಚ್‌ಡಿ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಆನಂತರ ಅದನ್ನು ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಇಡೀ ನಾಟಕದ ಪರಿಕಲ್ಪನೆ, ರಂಗಪರಿಕರ, ಸಂಭಾಷಣೆ ಎಲ್ಲವನ್ನೂ ಶಿಕ್ಷಕರೇ ನಿರ್ವಹಿಸಿದ್ದಾರೆ. ಯಾವುದೇ ತಜ್ಞರ ಸಹಕಾರ ಪಡೆದಿಲ್ಲ. 

*

ನಾಟಕ ಪ್ರೀತಿ ಬೆಳೆಸುವ ದಾರಿ

ನಾಟಕದ ಮೇಲೆ ಮಕ್ಕಳ ಕುತೂಹಲ ಹೆಚ್ಚಿಸಲು ಇದೊಂದು ಪ್ರಯತ್ನ. ಸಾಮಾನ್ಯ ಶಾಲಾ ವಾರ್ಷಿಕೋತ್ಸವಕ್ಕಿಂತ ವಿಭಿನ್ನವಾಗಿ ಮಾಡುತ್ತಿದ್ದೇವೆ. ಮೊಬೈಲ್‌,  ಚಲನಚಿತ್ರಗಳಲ್ಲಿ ಮುಳುಗಿ ಹೋಗುವ ವಿದ್ಯಾರ್ಥಿಗಳ ಗಮನ ಈಗ ನಾಟಕದ ಮೇಲೆ ಹರಿದಿದೆ. ಶ್ರೀನಾಥ್‌, ಮುಖ್ಯಶಿಕ್ಷಕ ಗುರುಶ್ರೀ ವಿದ್ಯಾಕೇಂದ್ರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.