ಮಕ್ಕಳಿಗಾಗಿ ಅಣ್ಣತಮ್ಮಂದಿರ ಕಥೆ (ಪಂಪನ ಆದಿಪುರಾಣದಿಂದ)

7

ಮಕ್ಕಳಿಗಾಗಿ ಅಣ್ಣತಮ್ಮಂದಿರ ಕಥೆ (ಪಂಪನ ಆದಿಪುರಾಣದಿಂದ)

Published:
Updated:ವೃಷಭಾಚಲ ಪರ್ವತದ ಭಾರೀ ಗಾತ್ರದ ಕಲ್ಲಹಲಗೆ ಮೇಲೆ

ತೀರಿಹೋದರಸರ ಲೆಕ್ಕಕ್ಕೆ ಸಿಗದಷ್ಟು ವಿಜಯ ಪ್ರಶಸ್ತಿ ಮಾಲೆ

ಚಕ್ರವರ್ತಿ ಭರತನಿಗೆ ಒಂದಕ್ಷರ ಕೆತ್ತಿಸಲಿಕ್ಕಿಲ್ಲ -ಪಾಪ ಜಾಗ!

ಮಡುಗಟ್ಟಿದ್ದ ಭರತನಹಂಕಾರ ಥಟ್ಟನೆ ಸೋರಿಹೋಯ್ತಾಗ ।।

ಅಯೋಧ್ಯೆಯ ಒಳಗೆ ಹೋಗದೆ ಭರತನ ಚಕ್ರ ಮೊಂಡು ಬೀಳೆ

ಭರತಚಕ್ರಿ ಗೆಲ್ಲಬೇಕಾದವನಿನ್ನೂ ಇದ್ದಾನೇನು ಭೂಮಿ ಮೇಲೆ?

ಎಂಬ ಬೆರಗಲ್ಲಿ ಚಕ್ರದ ಕಾವಲಿಗಿದ್ದ ಅಸಂಖ್ಯ ಯಕ್ಷಗಣಬದ್ಧರು

ನಾವೇ ಆತನ ಗೆಲ್ಲೋಣೆಂದು ಕಾಲಮೇಘದಂತೊಟ್ಟಾಗುತ್ತಿದ್ದರು ।।

ಭರತ ವಿಚಾರಿಸಿದ ಪುರೋಹಿತರ: ಹದಿನಾಲಕ್ಕು ರತ್ನಗಳಲ್ಲಿ

ಮೊದಲನೇದು ನನಗೀ ಚಕ್ರ ರತ್ನ. ನಗರದ ದ್ವಾರಬಾಗಿಲಲ್ಲಿ

ಒಳಹೋಗದೆ ನಿಂತದ್ದೇಕಿದು? ಎಂದಿಷ್ಟು ಹೇಳಿ ಸುಮ್ಮನೆ ನಿಲ್ಲೆ

ಅವರೆಂದರು: ಹಗೆಗಳಿದ್ದಾರಿನ್ನು; ಅದಕ್ಕೇ ಚಕ್ರ ನಿಂತಿದೆ ಬಾಗಿಲಲ್ಲೇ ।।

ನಿಮ್ಮ ತಮ್ಮಂದಿರು ಅತ್ಯಭಿಮಾನಿಗಳು; ಅದರಲ್ಲೂ ಆ ಬಾಹುಬಲಿ

ಕಾದದೆಂದೂ ನಿನಗೆ ಶರಣಾಗನು. ಅವರು ಶರಣಾಗದೆ ಮುನ್ನಡಿ

ಇಡದು ಚಕ್ರರತ್ನ- ಎನ್ನಲು ಪುರೋಹಿತವರ್ಗ, ಕಣ್ಣಂಚು ಕೆಂಪಾಗಿ,

ಮೂಗ ತುದಿಯರಳಿ, ಹುಬ್ಬು ಗಂಟಾಗಿ, ಕ್ರುದ್ಧನಾದ ಭರತ ಚಕ್ರಿ ।।

ಏನೇನು? ನನ್ನ ಅನುಜರೇ ನನಗೆ ಶರಣಾಗದಿರುವರೆ? ಅವರಿಗೀ ಮದ

ಎಲ್ಲಿಂದೇತರಿಂದಾಯ್ತು? ಅದನ್ನಿಳಿಸದೆ ಬಿಡುವೆನೆ ರಣದಲ್ಲಿ? ನನಗೆರಗದ

ಸೊಕ್ಕೆ? ಎನಲು ನಿಮ್ಮೊಂದೋಲೆ ಸಾಕು. ಶರಣಾಗುವರು ತಮ್ಮಂದಿರೆಂದು

ಅಂದು ನುಡಿದರು ಚಕ್ರವರ್ತಿಯ ಸಮಾಧಾನಪಡಿಸುತ್ತ ಪುರೋಹಿತರು ।।ಓಲೆ ಬರೆಸಿದ ಭರತ: ನನ್ನೊಬ್ಬನದೇ ಅಲ್ಲಣ್ಣ ಈ ಸಾಮ್ರಾಜ್ಯ.

ನಮ್ಮೆಲ್ಲರದ್ದು. ಹಿರಿಯಣ್ಣ ಯಾರು? ಹೆತ್ತ ತಂದೆ ಯಾರು?

ವಿನಯದಿಂದ ಬಂದು ಶರಣಾಗಿ ಪಿತೃಸಮಾನನಾದ ನಿಮ್ಮಣ್ಣಗೆ

ನಾವೂ ನೀವೂ ಒಟ್ಟಾಗಿರುವ; ಈ ಆಜ್ಞೆ ಹೊತ್ತು ಬನ್ನಿ ನಮ್ಮಲ್ಲಿಗೆ ।।

ಹಿರಿಯಣ್ಣ ಗುರು ತಂದೆ ಎಂದೆರಗಿದೆವು ಹಿಂದೆಲ್ಲ. ಈಗ ಆಳು ಅರಸ ಎಂಬ

ಭೇದ ಉಂಟಾಗಿರುವಾಗ ಎರಗುವುದು ಕಷ್ಟ ಅಣ್ಣನಿಗೆ. ನಮ್ಮ ತಂದೆ ಕೊಟ್ಟ

ಭೂಮಿ ಪಡೆದುದಕ್ಕೆ ನಮಗೆ ಈಗ ಈ ಕಿಂಕರಭಾವ ಬಂದೊದಗಿತಲ್ಲ!

ಅಕ್ಕಿ ಕೊಟ್ಟು ಅನ್ನವುಣ್ಣುವರ ಪಾಡಾಯ್ತಲ್ಲ ನಮ್ಮದು! ಇದು ಸರಿಯಲ್ಲ ।।

ಭರತ ಕಳಿಸಿದ ದೂತ ಬಾಹುಬಲಿಯ ಬಳಿಗೆ ಬಂದು ಪರಿಪರಿಯಲಿ

ಭರತನ ವಿಜಯ ಯಾತ್ರೆಯ ವರ್ಣಿಸಲು, ನಗೆಯಲ್ಲದುಮಿಟ್ಟು ಕ್ರೋಧ

ನುಡಿದ ತಮ್ಮ: ಹಳಬರ ಹೆಸರಳಿಸಿ ಬರೆಸಿದನಲ್ಲವೇ ನಿಮ್ಮರಸ

ತನ್ನ ಹೆಸರ? ಅರಿತವರು ಮುಸಿಮುಸಿ ನಗದಿರುವರೆ ಕೇಳಿ ಇದ? ।।

ಯಶೋಧನವೇ ಧನ. ಆ ಯಶೋಧನವ ಕಳಕೊಂಡು ಗಳಿಸಿದ ಧನ

ವದೆಂಥಾ ಧನ?! ಅಂಥ ಧನವ ಬರಿದೇ ಗಳಿಸಿ ಆದರು ನಿಧನ

ಹಲವರು ಹಿಂದೆ. ತಪ್ಪಲ್ಲವಯ್ಯ ಹಿರಿಯಣ್ಣಂಗೆರಗುವುದು. ಸೋಲೂ ಅಲ್ಲ

ಆದರೆ ಕತ್ತಿ ಹಿರಿದು ನೆತ್ತಿಯಲ್ಲೂರಿಯೊತ್ತಿ ಶರಣಾಗೆನ್ನುವುದು ಸರಿಯಲ್ಲ. ।।೧೦

ಕತ್ತಿಗೆ ಹೆದರಿ ಬಾಗಿಸಿದರೆ ಕತ್ತ, ನಗದೆ ಈ ಲೋಕ? ಒಡಹುಟ್ಟಿದವರು

ಅನುಬಂಧದಲ್ಲಿರುವಾಗ ವಿನಯ ನಮಸ್ಕಾರ ಎಲ್ಲ ಸರಿ. ಹೆಸರು ಪಡೆದ

ಕೂಡಲೆ ತಮ್ಮಂದಿರನ್ನೂ ಸೈರಿಸನು ಎನ್ನುವಾಗ ಭರತನಿಗೆರಗಿದೆನಾದರೆ

ಸಹಜ ವಿನಯವಲ್ಲ; ಭಕ್ತಿಯಲ್ಲ; ಕೇವಲ ಪ್ರಾಣದಂಜಿಕೆ ಮಾತ್ರ! ।।

೧೧

ಪುಕ್ಕನೆದುರು ನುಡಿಯುವುದೀ ಸೊಕ್ಕಿನ ನುಡಿಯ. ಆಡುವಿರಾ ನನ್ನೆದುರು?

ಜಿಂಕೆಗೆ ಹಾಡುವ ವಶೀಕರಣ ಗೀತೆಯ ಹೆಗ್ಗಾಡಲ್ಲಿ ಮೆರೆಯುವ ಹೆಬ್ಬುಲಿ

ಯೆದುರು ಹಾಡುವಿರಾ? ತಿಳಿಯಿರಿ ನಮ್ಮಿಬ್ಬರಿಗೊಬ್ಬನೇ ತಂದೆ. ತುಲನೆಗೆ

ಬಂದರೆ ತೂಗಲಿ. ನನ್ನ ಭುಜದಂಡವೇ ತಕ್ಕಡಿಯ ದಂಡವಲ್ಲವೆ ಧರೆಗೆ? ।।೧೨

ಕಿರುಗೆಂಪಿನ ಸಂಜೆ ಮೇಲೆ ಇರುಳು ಕವಿದಂತೆ

ಹರಡಿತು ದಟ್ಟ ಕಗ್ಗತ್ತಲು

ಬಾಹುಬಲಿಯ ಕಣ್ಗೆಂಪಿನ ಮೇಲೆ ಹುಬ್ಬಿನ ಕಪ್ಪು

ಮುಸ್ಸಂಜೆಯ ಸಭೆಯಲ್ಲೆಲ್ಲೆಲ್ಲು ।।೧೩

ಯುದ್ಧವೇ ನಿಶ್ಚಿತವಾದಾಗ ಉಭಯ ಪಕ್ಷದ

ಮಂತ್ರಿಜನ ಚಿಂತಿಸಿದರು. ಯುದ್ಧವೆಂಬುದತಿ ಕ್ರೂರ

ಗ್ರಹಯುದ್ಧದಂತೆ ಸಕಲ ಪ್ರಜಾ ವಿನಾಶಕರ

ಹಾಗಾಗಿ ಮಾಡಲಿ ಅಣ್ಣ-ತಮ್ಮ ದ್ವಂದ್ವಯುದ್ಧ ।।೧೪

ಒಪ್ಪಿದರದಕ್ಕಿಬ್ಬರೂ. ದೃಷ್ಟಿ ಯುದ್ಧದಲ್ಲಿ ದುರುಗುಟ್ಟಿ

ನೋಡಿದರು ಒಬ್ಬರನ್ನೊಬ್ಬರು. ಜಲಯುದ್ಧದಲ್ಲಿ ನೀರೆರಚಿ

ಹೋರಾಡಿದರು. ಮಲ್ಲಯುದ್ಧದಲ್ಲಿ ಒಬ್ಬರನ್ನೊಬ್ಬರು ಗುದ್ದಿ

ಗುದ್ದಿ ದಣಿದರು. ಮೂರರಲ್ಲೂ ಅಣ್ಣನಿಗಿಂತ ತಮ್ಮನೇ ಗಟ್ಟಿ ।।೧೫

ಜಟ್ಟಿಕಾಳಗದ ಕೊನೆ ಹಂತ. ಮೇಲೆತ್ತಿ ಹಿಡಿದಿದ್ದಾನೆ

ಭರತನ ಬಾಹುಬಲಿ. ಕನಕಗಿರಿಯ ಹೊತ್ತಂತಿತ್ತು

ಎತ್ತರದ ಮರಕತ ಗಿರಿ! ಆಗ ಮಿಂಚಿನಂತೆ ಸುಳಿಯಿತು

ಬಾಹುಬಲಿಯ ಮನದಲ್ಲೊಂದು ಭಾವ; ಭರತ ಹಿರಿಯನು ।।೧೬

ಗುರು ಹಿರಿಯಣ್ಣ ಚಕ್ರವರ್ತಿ, ಮಹಿಮಾಶಾಲಿ, ಅಂಥ

ಮಹಾನುಭಾವನ ನೆಲಕ್ಕಿಕ್ಕಿ ಭಂಗಿಸುವುದು ಸರಿಯಲ್ಲ

ಸರಿಯಲ್ಲ ಎನುತ ಮೆಲ್ಲಗವನನ್ನಿಳಿಸಿದ ಭೂಮಿಯ ಮೇಲೆ.

ಮೊಳಗಿತು ದುಂದುಭಿ ರವ. ಹೊಮ್ಮಿತು ವಿಜಯಘೋಷ. ।।೧೭

ಎರಡೂ ಪಕ್ಷದ ಮಂದಿ ಸುತ್ತಲೂ ಇರಲು, ತನಗಾಗಿರಲು

ಹೀನಾಯವಾದ ಸೋಲು, ಕ್ರೋಧದಿಂದ ದಳ್ಳುರಿ ಹೊರ ಬರಲು,

ಆಜ್ಞಾಪಿಸಿದ ತನ್ನ ಮಹಾಚಕ್ರಕ್ಕಾಗ ಕೊಲ್ಲುಕೊಲ್ಲು

ಬಾಹುಬಲಿಯನೆಂದು. ಹೇಳಿದ್ದ ಕೇಳಿತೇನು ಆ ಅದ್ಭುತ ಚಕ್ರ? ।।೧೮

ಉರಿಯುರಿಯ ಮಾರಕ ಚಕ್ರ ಹೊಳಪುಗುಂದಿ ಬಾಹುಬಲಿಯ

ಬಲಪಕ್ಕದಲ್ಲಿ ನಿಲ್ಲಲು ತೆಪ್ಪಗೆ, ಅಬ್ಬರಿಸಿದರೆಲ್ಲ

ಜಯ ಜಯ ಬಾಹುಬಲಿ! ಮೊಳಗಿಸಿದರು ದೇವಲೋಕದ ಜನ

ದುಂದುಭಿ ಸ್ವನ, ಹಾಡಿದರು ಅಮರಲೋಕದ ಗಾಯಕಿಜನ ।।೧೯

ಸೋದರರೊಂದಿಗೆ ಸೋದರರ ಕಾದಿಸುವುದು, ತಂದೆಯೊಂದಿಗೆ

ಸುತರ ಕಾದಿಸುವುದು. ರಾಜ್ಯಾಧಿಕಾರದ ಪರಿಯೇ ಹೀಗೆ.

ಇಂಥ ರಾಜ್ಯಶ್ರೀಯೊಂದಿಗೆ ಹೇಗೆ ನಾನು ಕೂಡಿ ಬಾಳಲಿ?

ಎಂದು ತನ್ನಲ್ಲಿ ತಾನೇ ಚಿಂತಿಸಿ ನೊಂದನಾ ಬಾಹುಬಲಿ ।।೨೦

ಮೊದಲಲ್ಲಿ ಮೃದು; ಬರುಬರುತ ನಂಜಿನ ವಿಷದಂತೆ

ಕೊಂದಿಕ್ಕುವವು ಮಂದಿಯ. ಹೀಗಿದ್ದೂ ಇದ್ದು ವಿಷಯವೆಂಬ

ವಿಷಾಸ್ವಾದನೆಗೆ ಹೇಗೆ ಒಲಿಯುವರೋ ಈ ಮನುಷ್ಯರೆಂದು

ನೊಂದು, ರೋಸಿ ಪ್ರಪಂಚಕ್ಕೆ, ವೈರಾಗ್ಯ ಮತಿಯಾದನು ।।೨೧

ನೆಲಸಲಣ್ಣಾ ನಿನ್ನ ವಕ್ಷದಲ್ಲೆ ನಿಶ್ಚಲ ಈ ಭಟಖಡ್ಗ ಮಂಡಲ

ವೆಂಬ ಉತ್ಪಲವನ ವಿಭ್ರಮ ಭ್ರಮರಿಯಾದ ರಾಜ್ಯಲಕ್ಷ್ಮಿಯು

ನಮ್ಮಯ್ಯ ಕೊಟ್ಟ ಭೂವನಿತೆಯ ನಾನೀಗ ನಿನಗೆ ಕೊಟ್ಟೆ! ಸ್ವೀಕರಿಸು!

ನೀನೊಲಿದ ಹೆಣ್ಣ ನಾನೂ ಬಯಸಿದರೆ ಮಾಸದಿರುವುದೆ ಯಶಸ್ಸು? ।।೨೨

ತಮ್ಮ ಬಾಹುಬಲಿಯ ಈ ಉದಾತ್ತ ನಿಲುವಿನಿಂದ ನಾಚಿದನು ಭರತ.

ತನ್ನ ಕಣ್ಣೀರಿಂದ ತಮ್ಮನ ಪಾದಕಮಲಕ್ಕೆರೆದನು ಕಂಬನಿಯ.

ಇತ್ತ ಬಾಹುಬಲಿಯೋ ಅಣ್ಣ ಭರತನ ಮುಡಿಗೆ ಧಾರಾಕಾರ ಸುರಿಸುತ್ತ

ಕಂಬನಿ ಧಾರೆ, ನಡೆಸಿದನು ಆತನಿಗಾಗಲೇ ರಾಜ್ಯಾಭಿಷೇಚನ. ।।

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry