ಮಕ್ಕಳಿಗೆ ಓದಿನ ರುಚಿ ಹತ್ತಿಸಬೇಕೇ?

7

ಮಕ್ಕಳಿಗೆ ಓದಿನ ರುಚಿ ಹತ್ತಿಸಬೇಕೇ?

Published:
Updated:

ನಿಮ್ಮ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಇಚ್ಛೆ ನಿಮಗಿದೆಯೇ? ಹಾಗಿದ್ದರೆ ಮೊದಲು ಅವರಲ್ಲಿ ಓದುವ ಬಗ್ಗೆ ಆಸಕ್ತಿ ಕೆರಳುವಂತೆ ಮಾಡಿ. ಮಕ್ಕಳ ಬುದ್ಧಿವಂತಿಕೆ, ಪೋಷಕರ ಆರ್ಥಿಕ ಸ್ಥಿತಿ, ಸಾಮಾಜಿಕ ಘನತೆಯಂತಹ ವಿಷಯಗಳನ್ನು ಬದಲಾವಣೆ ಮಾಡುವುದು ದುಸ್ತರ.ಆದರೆ ಮಕ್ಕಳ ಓದುವ ಆಸಕ್ತಿಗೆ ಕಂಟಕವಾಗುವ ಇತರ ಹಲವಾರು ಅಂಶಗಳನ್ನು ಬಗೆಹರಿಸಲು ಸಾಧ್ಯವಿದೆ. ಮನೆಯಲ್ಲಿ ಪೋಷಕರು ಮತ್ತು ಶಾಲೆಯಲ್ಲಿ ಉಪಾಧ್ಯಾಯರು ಇಂತಹ ಅಡೆತಡೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಿವಾರಿಸಿದರೆ ಮಕ್ಕಳಲ್ಲಿ ಓದುವ ಆಸಕ್ತಿ ತಾನೇತಾನಾಗಿ ಬೆಳೆಯುತ್ತದೆ.ಹಾಗಿದ್ದರೆ ಓದುವ ಆಸಕ್ತಿ ಬೆಳೆಸುವ ಬಗೆ ಹೇಗೆ? ಯಾವ ಅಂಶಗಳು ಅವರಲ್ಲಿ ಜ್ಞಾನ ಭಂಡಾರದ ಬಾಗಿಲತ್ತ ಮುಖ ಮಾಡಲು ಪ್ರೇರಣೆ ನೀಡುತ್ತವೆ?-ಇಲ್ಲಿವೆ ಕೆಲವು ಮಾಹಿತಿ:

*ವಯಸ್ಕರಿಗೆ ಬಳಸುವ ತಾರ್ಕಿಕ ಪ್ರಚೋದನೆ ಮತ್ತು ಪ್ರೇರಣೆಗಳು ಮಕ್ಕಳಿಗೆ ಅನ್ವಯಿಸುವುದಿಲ್ಲ.ಉದಾಹರಣೆಗೆ ಓದುವ ಕೌಶಲ ರೂಢಿಸಲು ಮತ್ತೆ ಮತ್ತೆ ಅವರನ್ನು ಓದಲು ಹಚ್ಚುವುದು ಸರಿಯಲ್ಲ. ಇದರಿಂದ ಅವರಿಗೆ ಓದಿನ ಬಗ್ಗೆ ಅನಾಸಕ್ತಿ, ಅಸಹ್ಯ ಮತ್ತು ಜಿಗುಪ್ಸೆ ಮೂಡುವ ಸಾಧ್ಯತೆ ಇರುತ್ತದೆ. ಮಕ್ಕಳಿಗೆ ವಿಭಿನ್ನ, ವೈವಿಧ್ಯ ಮತ್ತು ಆಕರ್ಷಕ ಮಾರ್ಗಗಳನ್ನೇ ಬಳಸಬೇಕು.* ಓದುವ ತಂತ್ರವನ್ನು ಮಕ್ಕಳು ಸ್ವಾಭಾವಿಕವಾಗಿ ಹಾಗೂ ನಿರಾಯಾಸವಾಗಿ ಮೈಗೂಡಿಸಿಕೊಳ್ಳುತ್ತಿರುತ್ತವೆ. ಆದ್ದರಿಂದ ಮರು ಓದು/ ಬಾಯಿಪಾಠ ಅವರ ಓದಿನ ಆಸಕ್ತಿಗೆ ತಡೆಯೊಡ್ಡುತ್ತದೆ. ಓದುವ ತಂತ್ರಗಾರಿಕೆಯ ವಿವಿಧ ವಿಭಾಗ ಅಥವಾ ಮಜಲುಗಳನ್ನು ವಿಶಿಷ್ಟ ಹಂತಕ್ಕೆ ಕೊಂಡೊಯ್ಯುವ ಪ್ರಯತ್ನಗಳು ಮಕ್ಕಳಲ್ಲಿ ಓದಿನ ಬಗ್ಗೆ ನಿರಾಸಕ್ತಿ ಮೂಡಿಸುವ ಅಪಾಯವೂ ಇರುತ್ತದೆ. ಈ ಬಗ್ಗೆ ಎಚ್ಚರ ವಹಿಸಿ.*ಈಗಿನ ಪಾರಂಪರಿಕ ಶಿಕ್ಷಣ ಮತ್ತು ಓದುವ ಕ್ರಮಗಳು ನೀರಸವಾಗಿವೆ. ಪಠ್ಯದ ಕೆಲವು ವಾಕ್ಯಗಳನ್ನು ಮಕ್ಕಳು ತರಗತಿಯಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಗಟ್ಟಿಯಾಗಿ ಓದುವ ಕ್ರಮ ಪುಸ್ತಕ ಪರಿಸರ ಮತ್ತು ಲಯಬದ್ಧ ಓದಿನಿಂದ ವಂಚಿಸುತ್ತದೆ.

 

ಓದಿನ ಮಹತ್ವದ ಅರಿವು ಉಂಟಾಗದಂತೆ ಮಾಡುತ್ತದೆ. ಮಕ್ಕಳು ತರಗತಿಯಲ್ಲಿ ಒಂದೇ ಪಠ್ಯವನ್ನು ಹಲವು ಬಾರಿ ಓದಬೇಕಾದ ಸಂದರ್ಭ ಇರುತ್ತದೆ. ಇದು ಓದಿನಲ್ಲಿ ರುಚಿಯಿಲ್ಲದಂತೆ ಮಾಡಿ ಮಗುವಿನಲ್ಲಿ ಓದಿನ ಬಗ್ಗೆ ಹಗೆ ಅಥವಾ ತಿರಸ್ಕಾರ ಮೂಡಿಸುವ ಸಾಧ್ಯತೆ ಇದೆ. ಬದಲಾಗಿ ಪ್ರತಿ ಬಾರಿಯೂ ಹೊಸ ಪಠ್ಯವನ್ನು ಓದುವುದರಿಂದ ಅದನ್ನು ಓದುವ ಮಗು ಮತ್ತು ಆಲಿಸುವ ಇತರ ಮಕ್ಕಳ ನಡುವೆ ಒಂದು ಮಧುರ ಬಾಂಧವ್ಯ ಬೆಳೆಯುವುದಲ್ಲದೆ, ಪಠ್ಯದ ವಿಷಯದಲ್ಲಿ ಆಸಕ್ತಿ ಉಂಟಾಗುತ್ತದೆ.*ಶೈಕ್ಷಣಿಕ ಓದು ಮತ್ತು ಪಠ್ಯೇತರ ಪುಸ್ತಕಗಳ ಓದಿನ ನಡುವೆ ನಮ್ಮಲ್ಲಿ ವಿಭಜನೆಯ ಪರದೆ ಇರುತ್ತದೆ. ಪಠ್ಯೇತರ ಪುಸ್ತಕಗಳಿಗಿಂತ ಪಠ್ಯಪುಸ್ತಕಗಳ ಓದಿಗೆ ಅತಿಯಾದ ಪ್ರಾಶಸ್ತ್ಯ ದೊರೆಯುತ್ತಿರುವುದರಿಂದ ಮಕ್ಕಳು ಶಾಲೆಯಲ್ಲಿ ಅಂಕ ಗಳಿಸಲು ಅಥವಾ ಉತ್ತೀರ್ಣರಾಗಲು ಮಾತ್ರ ಅದನ್ನು ಓದುತ್ತಿದ್ದೇವೆ ಎಂದು ನಂಬುವಂತಾಗಿದೆ.ಈ ನಂಬಿಕೆಯಿಂದ ಶಾಲೆಯ ಓದಿನಲ್ಲಿ ಅವರು ಆಸಕ್ತಿ ಕಳೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಉಪಾಧ್ಯಾಯರು ಮಕ್ಕಳ ಖಾಸಗಿ ವಿರಾಮದ ಓದಿನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಲಾರರು. ಇದರಿಂದ ಮಕ್ಕಳಿಗೆ ಹೆಚ್ಚಿನ ವಾಚನ ಸಾಮಗ್ರಿಗಳ ಪರಿಚಯ ಮಾಡಿಸಲು ಆಗುವುದಿಲ್ಲ.ವಿಚಿತ್ರವೆಂದರೆ ತರಗತಿಯಲ್ಲಿ ಉಪಾಧ್ಯಾಯರು ಹೆಚ್ಚಿನ ವಿವರಣೆ ನೀಡಿ ವಿಷಯವನ್ನು ಮನದಟ್ಟು ಮಾಡುವ ದೃಷ್ಟಿಯಿಂದ ಎಷ್ಟು ಮೊಟಕಾದ (ಸೀಮಿತ) ಪಠ್ಯ ಬಳಸುತ್ತಾರೋ ಅಷ್ಟರ ಮಟ್ಟಿಗೆ ಮಕ್ಕಳು ಸ್ವಯಂ ಕಲಿಕೆಯಿಂದ ವಂಚಿತರಾಗುತ್ತಿರುತ್ತಾರೆ.*ವಯೋಮಾನಕ್ಕೆ ಅನುಗುಣವಾದ ವಾಚನ ಸಾಮಗ್ರಿ ಮತ್ತು ಪಠ್ಯದ ಆಯ್ಕೆ ಬಹಳ ಮುಖ್ಯ. ಉಲ್ಲಾಸಯುಕ್ತ ಸಜೀವ ಕಥೆಗಳನ್ನು ಅಪೇಕ್ಷಿಸುವ ಎಳೆಯ ವಯಸ್ಸಿನಲ್ಲಿ ಉಪದೇಶಾತ್ಮಕ ಪಠ್ಯಗಳನ್ನು ಅಳವಡಿಸುವುದು ಸೂಕ್ತವಲ್ಲ.ವಿನೋದ ಮತ್ತು ನಲಿವನ್ನು ಬಯಸುವ ಆ ಚೇತನಗಳಿಗೆ ಹೊರಗಿನಿಂದ ಒತ್ತಾಯಪೂರ್ವಕವಾಗಿ ಅಜೀರ್ಣವಾಗುವಂತಹ ಅಧಿಕಾರಶಾಹಿ ನೈತಿಕ ಜ್ಞಾನವನ್ನು ಹೇರುವುದು ಸರಿಯಲ್ಲ.ನೋಡಬೇಕಾದಂತಹ ಸಾಮಾನ್ಯ ಭೂಗೋಳ ಸಹ ದಿನನಿತ್ಯದ ಅನುಭವದೊಂದಿಗೆ ಮೇಳೈಸಿ ತಿಳಿಯುವಂತಿರಬೇಕು. ಸಾಹಸಪೂರ್ಣ ವಯಸ್ಸಿನ ಮಕ್ಕಳಿಗೆ ಕ್ಲಾಸಿಕ್ ಸಾಹಿತ್ಯ ಓದಲು ಬಲಾತ್ಕರಿಸಿದರೆ ಅಷ್ಟೇನೂ ಪಕ್ವವಾಗಿರದ ಅಭಿರುಚಿ ಮತ್ತು ವಿಸ್ತಾರವಾಗಿರದ ಜ್ಞಾನ ಅವರಲ್ಲಿ ನಿರಾಸಕ್ತಿ ಮೂಡಿಸುತ್ತದೆ.ಓದುವ ವಿಧಾನದ ಅಳವಡಿಕೆಗಿಂತಲೂ ವಯೋಮಾನಕ್ಕೆ ಮತ್ತು ಅವರ ಬೆಳವಣಿಗೆಗೆ ತಕ್ಕಂತಹ ವಾಚನ ಸಾಮಗ್ರಿ ಮತ್ತು ಪಠ್ಯ ಅಳವಡಿಸುವುದು ಬಹಳ ಮುಖ್ಯ. ಇದರಲ್ಲಿ ಏರುಪೇರಾದರೆ ಓದಿನಲ್ಲಿ ಮಕ್ಕಳಿಗೆ ಇರುವ ನಿರಾಸಕ್ತಿ ಮತ್ತಷ್ಟು ಹೆಚ್ಚುತ್ತದೆ.*ಕಡಿಮೆ ಸಾಮರ್ಥ್ಯವುಳ್ಳ ಮಕ್ಕಳ ಕಡೆ ಹೆಚ್ಚಿನ ಗಮನ ಮತ್ತು ಸಮಯ ನೀಡಬೇಕು, ಅತ್ಯಂತ ಸರಳ ಪಠ್ಯಗಳನ್ನು ಓದಲು ಕೊಡಬೇಕು. ಎಲ್ಲರಿಗೂ ಸಮಾನ ಪಠ್ಯ ನೀಡುವ ವ್ಯವಸ್ಥೆ ಪ್ರತಿಭಾವಂತ, ಬುದ್ಧಿವಂತ ಮಕ್ಕಳ ಸಾಮರ್ಥ್ಯಕ್ಕೆ ಸವಾಲಾಗುವುದಿಲ್ಲ. ಹೀಗಾಗಿ ಅವರು ಮತ್ತಷ್ಟು ಮುನ್ನಡೆ ಸಾಧಿಸುವಲ್ಲಿ ನಿರಾಸಕ್ತರಾಗುತ್ತಾರೆ. ಮತ್ತೊಂದೆಡೆ, ಕಡಿಮೆ ಸಾಮರ್ಥ್ಯವುಳ್ಳ ಮಕ್ಕಳು ಜೀರ್ಣಿಸಿಕೊಳ್ಳಲಾರದೆ ಹತಾಶರಾಗುತ್ತಾರೆ.* ವೈವಿಧ್ಯ ಮತ್ತು ತಾರತಮ್ಯಗಳನ್ನು ನಿರ್ಲಕ್ಷಿಸುವ ಶಿಕ್ಷಣ ಅಪಾಯಕರ. ಮಕ್ಕಳಲ್ಲಿ ಇರಬಹುದಾದ ಆಸಕ್ತಿ, ಸಾಧನೆ ಮತ್ತು ಬುದ್ಧಿಶಕ್ತಿಯ ವೈವಿಧ್ಯ, ತಾರತಮ್ಯಗಳನ್ನು ಮಾನ್ಯ ಮಾಡದ ಸಮಾನ ಶಿಕ್ಷಣದಿಂದ ಅನಾಹುತವೇ ಜಾಸ್ತಿ.

 

ಕಡಿಮೆ ಬುದ್ಧಿಶಕ್ತಿಯ ಮಕ್ಕಳು ಪ್ರತಿಭಾವಂತರೊಂದಿಗೆ ಸೆಣಸಿ ಯಾವಾಗಲೂ ಸ್ಪರ್ಧೆಯಲ್ಲಿ ಸೋಲನ್ನು ಅನುಭವಿಸುತ್ತಾರೆ. ಕೊನೆಗೆ ಓದಿನಲ್ಲಿರುವ ಗೆಲುವಿನ ರುಚಿಯ ಅನುಭವದಿಂದ ಸತತ ವಂಚಿತರಾಗಿ ಓದಿನ ಸಂತೋಷವನ್ನೇ ಕಳೆದುಕೊಳ್ಳುತ್ತಾರೆ.*ಮಕ್ಕಳಲ್ಲಿ ಒಮ್ಮೆ ಗುರುತಿಸಿದ ಓದಿನ ಆಸಕ್ತಿಗೆ ಅತಿಯಾದ ಪ್ರಾಮುಖ್ಯತೆ ನೀಡುವುದೂ ಅಪಾಯಕಾರಿ. ತತ್ಕಾಲದ ಆಸಕ್ತಿಗಳನ್ನು ಪರಿಗಣಿಸಿ ಆರಂಭಿಸಿದ ಓದು ಮುಂದುವರಿದಂತೆ ಸತತ ಬದಲಾವಣೆಗಳನ್ನು ಗುರುತಿಸಿ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಬೇಕು.ಆಸಕ್ತಿ ಬದಲಾದಂತೆ ಹಿಂದಿನ ರೀತಿಯ ವಾಚನ ಸಾಮಗ್ರಿ ಓದುವುದನ್ನು ನಿಲ್ಲಿಸಬೇಕಾಗಬಹುದು. ಒಂದೇ ಆಸಕ್ತಿಯ ಅತಿಯಾದ ಓದಿನಿಂದ ಒಳಿತಿಗಿಂತ ಅನಾನುಕೂಲಗಳೇ ಹೆಚ್ಚು. ಸ್ವಯಂ ನಿರ್ಧಾರಕ್ಕೆ ಸಿಲುಕಿದ ಇಂತಹ ವೈಯಕ್ತಿಕ ಆಸಕ್ತಿಯು ದುರಭಿಮಾನ, ದುರಹಂಕಾರಗಳಿಗೂ ಎಡೆ ನೀಡಬಹುದು.ಅಲ್ಲದೇ, ಮಕ್ಕಳು ತಮಗೆ ಅತಿ ಪ್ರಿಯವಾದ ವಾಚನ ವಿಷಯಕ್ಕಷ್ಟೇ ಮೋಹಿತರಾದಾರು. ಇದರಿಂದ ಸ್ವಯಂ ಚಿಂತನೆಗೆ ತೊಡಗದೆ ತಮ್ಮ ನೆಚ್ಚಿನ ಪುಸ್ತಕದಲ್ಲಿ ಇರುವುದನ್ನೇ ಶ್ರೇಷ್ಠ ಮತ್ತು ಅಂತ್ಯವೆಂದು ಭಾವಿಸಿಯಾರು. ಅನ್ವೇಷಣೆ ಮತ್ತು ವಿಚಾರ ವಿನಿಮಯದಂತಹ ಕಾರ್ಯವನ್ನೇ ಮರೆಯಬಹುದು. ಇಂತಹ ಒಮ್ಮುಖ ಒಲವು ಜೀವನ ಪರ್ಯಂತ ಒಂದು ಚಟವಾಗಬಹುದು.ಒಂದೇ ರೀತಿಯ ಪುಸ್ತಕಗಳನ್ನು ಓದುವವರಲ್ಲಿ ಬೌದ್ಧಿಕ ದಾರಿದ್ರ್ಯ, ಜೀವನದ ಬಗೆಗಿನ ಪಾರ್ಶ್ವ ನಿಲುವುಗಳೇ ವಿಜೃಂಭಿಸಬಹುದು. ಅಲ್ಲದೆ ಕಾಮಿಕ್‌ಗಳಂತಹ ಅತ್ಯಂತ ಸರಳ ದುರ್ಬಲ ವಿಷಯವನ್ನೇ ನಿರಂತರವಾಗಿ ಓದಿ ಭ್ರಮಾಲೋಕದಲ್ಲಿ ಸಿಲುಕಿ ಮುಂದಿನ ಬೆಳವಣಿಗೆ ಕುಂಠಿತವಾಗಬಹುದು. ಇದು ಮುಂದುವರಿದು ಪ್ರಾಪಂಚಿಕ ಜ್ಞಾನ ವಂಚಿತರಾಗಿ ಆಳವಿಲ್ಲದ ತೋರಿಕೆಯ ಚಿಂತನರಹಿತ ಸ್ಥಿತಿ ತಲುಪುವ ಅಪಾಯವೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry