ಗುರುವಾರ , ಫೆಬ್ರವರಿ 25, 2021
20 °C

ಮಕ್ಕಳಿಗೆ ಕಥೆ ಹೇಳುವ ಕೌಶಲ ಬೇಕು: ಕಂಬಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳಿಗೆ ಕಥೆ ಹೇಳುವ ಕೌಶಲ ಬೇಕು: ಕಂಬಾರ

ಬೆಂಗಳೂರು: `ಈಗ ಶಿಕ್ಷಣ ಕ್ಷೇತ್ರ ಲಾಭದಾಯಕ ಉದ್ಯಮ ಆಗಿದೆ. ಮಕ್ಕಳಿಗೆ ಕಥೆ ಹೇಳಲು ಬರುವುದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಸೃಜನಶೀಲತೆ ಸೃಷ್ಟಿಸುವ ಕೆಲಸ ಆಗಬೇಕಿದೆ' ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.ರೌಂಡ್ ಟೇಬಲ್ ಇಂಡಿಯಾ ಹಾಗೂ ಲೇಡೀಸ್ ಸರ್ಕಲ್ ಇಂಡಿಯಾ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ `ಪ್ರೈಡ್ ಆಫ್ ಕರ್ನಾಟಕ' ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.`ಶಿಕ್ಷಣದಲ್ಲಿ ಇಂಗ್ಲಿಷ್ ಶಿಕ್ಷಣ ಒಪ್ಪಿದ ಮೇಲೆ ಮಕ್ಕಳಲ್ಲಿ ಸೃಜನಶೀಲತೆ ಕಡಿಮೆ ಆಗಿದೆ. ಭಾರತೀಯ ಭಾಷೆಗಳು ಈಗ ಅಪಾಯದಲ್ಲಿವೆ. ಆಂಗ್ಲ ಶಿಕ್ಷಣದಿಂದ ಶ್ರೇಣೀಕೃತ ಸಮಾಜ ನಿರ್ಮಾಣವಾಗುತ್ತಿದೆ. ಆಂಗ್ಲ ಸಾಹಿತ್ಯ ಕೃತಿಗಳು ಕನ್ನಡಕ್ಕೆ ಅನುವಾದ ಆದವು. ಆದರೆ, ರಸಾಯನವಿಜ್ಞಾನ, ಭೌತವಿಜ್ಞಾನದ ಪಠ್ಯಗಳಿಗಾಗಿ ಈಗಲೂ ಆಂಗ್ಲ ಭಾಷೆಯನ್ನೇ ಅವಲಂಬಿಸಬೇಕಾದ ಅಗತ್ಯ ಇದೆ. ಕನ್ನಡದಲ್ಲೇ ವಿಜ್ಞಾನ ವಿಷಯದ ಶಾಸ್ತ್ರೀಯ ಗ್ರಂಥಗಳು ಬಂದಿಲ್ಲ' ಎಂದು ಅವರು ಕಳವಳ ವ್ಯಕ್ತಪಡಿಸಿದರು.`ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ ಎಂದು ಹೈಕೋರ್ಟ್ ಎರಡು ಬಾರಿ ಎಚ್ಚರಿಸಿದರೂ ಸರ್ಕಾರ ಎಚ್ಚರ ಆಗಲಿಲ್ಲ. ಶಾಲೆಗಳಲ್ಲಿ ಪೊರ ಸಮಸ್ಯೆ ಇದೆ ಎಂದು ಸರ್ಕಾರ ಭಾವಿಸಿತು. ಶೌಚಾಲಯ ಮತ್ತಿತರ ಮೂಲಸೌಕರ್ಯದ ಕೊರತೆ ಇದೆ ಎಂದು ನಾವೆಲ್ಲ ಹೇಳಿದಾಗ ಸರ್ಕಾರಕ್ಕೆ ಅರಿವಾಯಿತು' ಎಂದು ಅವರು ಬೇಸರ ವ್ಯಕ್ತಪಡಿಸಿದರು.ಪ್ರಶಸ್ತಿ ಪುರಸ್ಕೃತ ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸಂಸ್ಥೆಯ ಮುಖ್ಯಸ್ಥ ಟಿ.ವಿ.ಮೋಹನದಾಸ ಪೈ, `ದೇಶದ ಶೇ 55 ಮಂದಿ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದಾರೆ. ಶಾಲೆಗಳಲ್ಲೂ ಶೌಚಾಲಯದ ಕೊರತೆ ಇದೆ. ಈ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಹಾಗೂ ಸ್ವಯಂಸೇವಾ ಸಂಘಟನೆಗಳು ಆದ್ಯತೆ ನೀಡಬೇಕು' ಎಂದು ಆಗ್ರಹಿಸಿದರು.`ದೇಶದಲ್ಲಿ 30 ಕೊಟಿ ಜನರಿಗೆ ಎಲ್ಲ ಸವಲತ್ತು ದೊರಕುತ್ತಿದೆ. ಉಳಿದ 90 ಕೋಟಿ ಮಂದಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಎಲ್ಲ ಜನರಿಗೂ ಸಮಾನ ಅವಕಾಶ ದೊರಕಬೇಕು.  ಬಿಬಿಎಂಪಿಯ 198 ಸದಸ್ಯರ ಪೈಕಿ 105 ಮಂದಿ ರಿಯಲ್ ಎಸ್ಟೇಟ್ ಹಿನ್ನೆಲೆ ಇರುವವರು. ಉತ್ತಮ ಆಡಳಿತ ವ್ಯವಸ್ಥೆ ರೂಪುಗೊಳ್ಳಬೇಕು. ಆಡಳಿತ ವ್ಯವಸ್ಥೆಯಲ್ಲಿ ಜನರು ಪಾಲುದಾರರಾದರೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು' ಎಂದು ಅವರು ಸಲಹೆ ನೀಡಿದರು.ಪ್ರಶಸ್ತಿ ಪುರಸ್ಕೃತ ಲೇಖಕಿ ರೋಹಿಣಿ ನೀಲೆಕಣಿ, `ಕಳೆದ ವರ್ಷ ದೇಶದಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ತಾಳಿತ್ತು. ನಗರದ ಕುಡಿಯುವ ನೀರಿಗಾಗಿ ಈಗಾಗಲೇ ನಾವು ಎರಡು ನದಿಗಳನ್ನು ನಾಶ ಮಾಡಿದ್ದು, ಮೂರನೇ ನದಿ ನಾಶ ಮಾಡುವ ಹಾದಿಯಲ್ಲಿದ್ದೇವೆ. ನೀರಿನ ಮೌಲ್ಯ ಅರಿತುಕೊಂಡು ಬಳಕೆ ಮಾಡಬೇಕಿದೆ' ಎಂದರು.ಹಿರಿಯ ವೈದ್ಯ ಡಾ.ಕೆ.ಎಸ್.ಗೋಪಿನಾಥ್, ಕ್ರೀಡಾ ಕ್ಷೇತ್ರದ ಸಾಧಕಿ ಶರ್ಮಿಳಾ ನಿಕೋಲೆಟ್ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.`ಸೋಮಾರಿತನ ಹೆಚ್ಚುತ್ತದೆ'

`ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ ಒಂದು ರೂಪಾಯಿಗೆ ಅಕ್ಕಿ ಪೂರೈಕೆ ಮಾಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಅಲ್ಲ. ಇದರಿಂದ ಜನರಲ್ಲಿ ಸೋಮಾರಿತನ ಹೆಚ್ಚುತ್ತದೆ' ಎಂದು ನಿವೃತ್ತ ನ್ಯಾಯಮೂರ್ತಿ ವಿ.ಎಸ್.ಮಳೀಮಠ್ ಕಿಡಿಕಾರಿದರು.ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, `ಸರ್ಕಾರ ಜನರನ್ನು ಕಠಿಣ ಪರಿಶ್ರಮಿಗಳನ್ನಾಗಿ ಮಾಡಬೇಕು. ಬಳಿಕ ಅವರಿಗೆ ಉತ್ತಮ ವೇತನ ನೀಡಬೇಕು. ಈ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿ ಮಾಡಬೇಕು' ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.