ಶನಿವಾರ, ಏಪ್ರಿಲ್ 17, 2021
23 °C

ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆ ಸಂಸ್ಕಾರವನ್ನೂ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಮಕ್ಕಳಿಗೆ ಒಳ್ಳೆಯ ಶಿಕ್ಷಣ ಹಾಗೂ ಶಿಸ್ತಿನ ಜೊತೆಗೆ ಉತ್ತಮ ಸಂಸ್ಕಾರವನ್ನೂ ನೀಡುವ ಜವಾಬ್ದಾರಿ ಇಂದಿನ ಶಿಕ್ಷಕರ ಮೇಲಿದೆ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಹೇಳಿದರು.ನಗರದ ಸಮೀಪದ ಐನಾಪೂರದ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಗುರುವಾರ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಣ್ಣ ಪುಟ್ಟ, ಭಿನ್ನಾಭಿಪ್ರಾಯ ದೂರಮಾಡಿ, ಶಾಲೆಯ ಅಭಿವೃದ್ಧಿ, ಮಕ್ಕಳ ಏಳಿಗೆಗಾಗಿ ದುಡಿಯುವ ಉದಾತ್ತ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳ ಭವಿಷ್ಯ ರೂಪಿಸಲು ಗ್ರಾಮಸ್ಥರ, ಸಮುದಾಯದ ಹಾಗೂ ಪಾಲಕರ ಪಾತ್ರ ಏನು, ನಮ್ಮ ಕೊಡುಗೆ ಏನು ಎಂಬುದನ್ನು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು.ಮಕ್ಕಳ ಭವಿಷ್ಯಕ್ಕಾಗಿ ಗ್ರಾಮೀಣ ಭಾಗದ ಸರ್ಕಾರಿ  ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ರೂಪಿಸುವ ಕೆಲಸ ಮಾಡಲು ಶಿಕ್ಷಕ ಸಮುದಾಯ ಮುಂದಾಗಬೇಕೆಂದು ಮನವಿ ಮಾಡಿಕೊಂಡರು.ಬೋರವೆಲ್ ದುರಸ್ತಿ, ಶಾಲಾ ಕೊಠಡಿಗಳ ಸಮರ್ಪಕ ನಿರ್ವಹಣೆ, ಕಂಪೌಂಡ್ ನಿರ್ಮಾಣ  ಕುರಿತಂತೆ ಶಾಲಾ ಹಾಗೂ ಗ್ರಾಮ ಪಂಚಾಯಿತಿ ಅನುದಾನ ಹಾಗೂ ದಾನಿಗಳ ನೆರವಿನಿಂದ ತುರ್ತು ಕ್ರಮ ವಹಿಸುವಂತೆ ಶಾಲಾ ಮುಖ್ಯಸ್ಥರಿಗೆ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಇದೇ ಸಂದರ್ಭದಲ್ಲಿ ಶಾಲೆಯ ಮೂಲಭೂತ ಸೌಕರ್ಯ, ಬಿಸಿಯೂಟ, ಶಾಲಾ ಕೊಠಡಿಗಳ ನಿರ್ವಹಣೆ, ಕಡತಗಳ ನಿರ್ವಹಣೆ, ಶೈಕ್ಷಣಿಕ ಪರಿಕರಗಳ ಪರಿಶೀಲನೆ, ವಿದ್ಯಾರ್ಥಿಗಳ ಹಾಜರಾತಿ, ಕಲಿಕಾ ಗುಣಮಟ್ಟ ಕುರಿತಂತೆ ಪರಿಶೀಲನೆ ನಡೆಸಲಾಯಿತು. ಶಿಕ್ಷಕರು, ಪೋಷಕರು, ಹಾಗೂ ಗ್ರಾಮಸ್ಥರು ಚರ್ಚೆ ನಡೆಸಿದರು.

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹೊನ್ನಕಸ್ತೂರಿ, ಇಂಚಗೇರಿ ಗ್ರಾ.ಪಂ. ಸದಸ್ಯ ಗಚ್ಚಿನಮಹಲ್, ಗೋಪಿ ಜಾಧವ, ಶಾಲಾ ಸುಧಾರಣಾ ಸಮಿತಿ ಮಾಜಿ ಅಧ್ಯಕ್ಷ ಸೋಮಯ್ಯ ಮಠಪತಿ,  ಶಾಲಾ ಮುಖ್ಯೋಪಾಧ್ಯಾಯ ಸಿ.ಎಸ್.ತಳಕೇರಿ, ಶಿಕ್ಷಕ ಝಡ್. ವೈ.ಇಂಡಿಕರ ಹಾಜರಿದ್ದರು.ಘೋಷಣೆಗಳ ಮಹಾಪೂರ

ತಾಳಿಕೋಟೆ:  `ಶಿಕ್ಷಣವೇ ಶಕ್ತಿ~, `ನಿಮ್ಮ ಹೆಣ್ಣು ಮಗುವನ್ನು ಶಾಲೆಗೆ ಕಳಿಸಿ~, `ಕೂಲಿ ಬೇಡ, ಶಾಲೆ ಬೇಕು. ಶಿಕ್ಷಣ ನಮ್ಮ ಹಕ್ಕು~  ಮಕ್ಕಳ ಶಿಕ್ಷಣ ಹಕ್ಕು ಕಸಿದುಕೊಳ್ಳಬೇಡಿ~ ಎಂಬ ಘೋಷಣೆಗಳನ್ನು ಕೂಗುತ್ತ ಮೈಲೇಶ್ವರ ಗ್ರಾಮದ ಮಕ್ಕಳು ಶಿಕ್ಷಣ ಕುರಿತು ಜನ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು. ಅವರು ಗುರುವಾರ ಬೆಳಿಗ್ಗೆ “ಶಾಲೆಗಾಗಿ ನಾವು-ನೀವು” ಕಾರ್ಯಕ್ರದಂಗವಾಗಿ ಆಯೋಜಿಸಲಾಗಿದ್ದ ಜಾಥಾದಲ್ಲಿ ಭಾಗವಹಿಸಿ ಜನರ ಗಮನ ಸೆಳೆದರು.ಡ್ರಮ್‌ಸೆಟ್ ಸಪ್ಪಳಕ್ಕೆ ಹೊರ ಬಂದ ಮಕ್ಕಳು, ಪಾಲಕರನ್ನು ಶಾಲೆಗೆ ಮಕ್ಕಳನ್ನು ಕಳಿಸುವಂತೆ ಎಸ್‌ಡಿಎಂಸಿಯವರು, ಅಧಿಕಾರಿಗಳು, ಶಿಕ್ಷಕರು, ಶಿಕ್ಷಣ ಪ್ರೇಮಿಗಳು, ಚುನಾಯಿತ ಪ್ರತಿನಿಧಿಗಳು ಮನವಿ ಮಾಡಿದರು.ನಂತರ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಶಿಕ್ಷಣ ಸಂಯೋಜಕ ಎಸ್.ಎಸ್. ಗಡೇದ, ಪ್ರಸಕ್ತ ವರ್ಷದಿಂದ ಕರ್ನಾಟಕ ಸರ್ಕಾರ  ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿದೆ. 6-14 ವಯೋಮಾನ ಎಲ್ಲ ಮಕ್ಕಳು ಯಾವ ಬೇಧಕ್ಕೂ ಅವಕಾಶವಿಲ್ಲದಂತೆ ಶಾಲೆಗೆ ದಾಖಲಾಗಬೇಕು. ಶೇ. ನೂರರ ಹಾಜರಾತಿಯೊಂದಿಗೆ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಇದಕ್ಕೆ  ಸಮುದಾಯ ಸಹಭಾಗಿತ್ವ ಅವಶ್ಯವಾಗಿದೆ ಎಂದರು.ಮುಖ್ಯ ಶಿಕ್ಷಕ ಕೆ.ಡಿ.ಮಹೀಂದ್ರಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಣ್ಣ ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಸದಸ್ಯ ಆರ್.ಎಸ್.ಕುಳಗೇರಿ ಎಸ್‌ಡಿಎಂಸಿ ಸದಸ್ಯರಾದ ಶಿವಶಂಕರ ಕಟ್ಟಿಮನಿ, ಸುಭಾಷ ಮುಗಳಿ, ಈರಣ್ಣ ಬೂದಿಹಾಳ, ಸಾರಾಬಿ ನದಾಫ್, ಗಣ್ಯರಾದ ಸಿದ್ರಾಮಪ್ಪ ಚೌದ್ರಿ, ಶಿಕ್ಷಣ ಪ್ರೇಮಿಗಳಾದ ಮಲಕಪ್ಪ ದೊಡಮನಿ, ಎ.ಬಿ.ಕಿರೆದಳ್ಳಿ, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.ಶಿಕ್ಷಣ ಹಕ್ಕು ಕಾಯ್ದೆ ಜಾರಿ ಕುರಿತ ಹಾಗೂ  ಬಾಲ್ಯಾವಸ್ಥೆಯ ವ್ಯಕ್ತಿಯ ಜೀವನದಲ್ಲಿ ಸಂಸ್ಕಾರದಿಂದ ವ್ಯಕ್ತಿತ್ವ ರೂಪಿಗೊಳ್ಳುತ್ತಿದ್ದು ಅದಕ್ಕೆ ಪೂರಕವಾಗಿ ಶಿಶು ಸ್ನೇಹಿ ವಿಧಾನ ಬಳಕೆ ಹಾಗೂ ಮಗುವನ್ನು ಸಮಾಜಮುಖಿಯನ್ನಾಗಿಸುವಲ್ಲಿ ಬೇಕಾದ ವಾತಾವರಣ ರೂಪಿಸುವ ಕುರಿತ ಪ್ರಮಾಣ ವಚನವನ್ನು ಹಾಜರಿದ್ದವರಿಂದ ಪಡೆಯಲಾಯಿತು.ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆ ತರುವ, ಗುಣಾತ್ಮಕ ಶಿಕ್ಷಣ, ಸಮವಸ್ತ್ರಗಳ ಪೂರೈಕೆ, ಶಿಕ್ಷಕರ ಬೇಡಿಕೆ, ಗಣಕಯಂತ್ರ ಶಿಕ್ಷಕರ ಅವಶ್ಯಕತೆ ಕುರಿತು ಚರ್ಚಿಲಾಯಿತು. ಟಿಜಿಟಿ ಶಿಕ್ಷಕ ಎ.ಎಸ್.ಇಟ್ಟಗಿ ಸ್ವಾಗತಿಸಿದರು. ರೋಷನ್ ಡೋಣಿ ನಿರ್ವಹಿಸಿದರು.ಮಕ್ಕಳಿಗೆ ಖುಷಿಯೋ..ಖುಷಿ.

ಸಿಂದಗಿ: ಮಕ್ಕಳ ಶಿಕ್ಷಣದ ಹಕ್ಕು ಅಭಿಯಾನ `ಶಾಲೆಗಾಗಿ ನಾವು-ನೀವು~ ಸರ್ಕಾರದ ವಿನೂತನ ಕಾರ್ಯಕ್ರಮ ಪಟ್ಟಣದ ಹರಿಜನಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಆವರಣ ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಪಾಲಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಂದ ತುಂಬಿಕೊಂಡಿತ್ತು.ಇಡೀ ಸಮುದಾಯ ಶಾಲಾ ಆವರಣದಲ್ಲಿ ಸಮಾವೇಶಗೊಂಡಿರುವುದು ಶಾಲಾ ಮಕ್ಕಳಲ್ಲಿ ಉತ್ಸಾಹ ಮೂಡಿಸಿತು.ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ವೈ.ಎಸ್.ಚೌರ, ನಿವೃತ್ತ ಮುಖ್ಯಗುರು ಎಂ.ಎಸ್.ಚೌರ, ಎಸ್.ಡಿ.ಎಂ.ಸಿ ಮಾಜಿ ಸದಸ್ಯ ಸಂಗಪ್ಪ ಕೂಚಬಾಳ, ಸಿದ್ದಪ್ಪಣ್ಣ ಕಾಂಬಳೆ, ಶಾಂತಾಬಾಯಿ ಹೊಸಮನಿ ಶಾಲಾ ಆವರಣದಲ್ಲಿ ಹಾಜರಿದ್ದು, ಶಾಲಾ ಚಟುವಟಿಕೆ, ಬೋಧನೆ, ಕೊಠಡಿಗಳು, ಶಿಕ್ಷಕರ ಕೊರತೆ. ಬಿಸಿ ಊಟ ಎಲ್ಲವನ್ನು ಒಳಗೊಂಡಂತೆ ಸಮಗ್ರ ಪರಿಶೀಲನೆ, ವೀಕ್ಷಣೆ ಮಾಡಿದರು.ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಈ ಸಂದರ್ಭದಲ್ಲಿ ಮಾತನಾಡಿ, ಹರಿಜನಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಬೋಧನಾ ಗುಣಮಟ್ಟ, ವಿದ್ಯಾರ್ಥಿಗಳ ಹಾಜರಾತಿ ತೃಪ್ತಿಕರವಾಗಿದೆ. ಆದರೆ ಶಾಲಾ ಆವರಣದಲ್ಲಿನ ಮುಖ್ಯಗುರುಗಳ ಕೊಠಡಿ, ಇನ್ನೊಂದು ಬೋಧನಾ ಕೊಠಡಿ ಬೀಳುವ ಸ್ಥಿತಿಯಲ್ಲಿವೆ. ಹೀಗಾಗಿ ಅವುಗಳನ್ನು ಕೆಡವಿ ಮೇಲ್ಛಾವಣಿ ಹಾಕಲು ಅಗತ್ಯ ಅನುದಾನವನ್ನು ಪುರಸಭೆ ಎಸ್.ಜಿ.ಎಸ್.ಆರ್.ವೈ ಯೋಜನೆಯಡಿ ಮಂಜೂರು ಮಾಡಿಸುವ ಬಗ್ಗೆ ಭರವಸೆ ನೀಡಿದರು.

 

ಅಲ್ಲದೇ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟಕ್ಕಾಗಿ ಕೊರತೆ ಇರುವ 150 ಊಟದ ತಟ್ಟೆಗಳನ್ನು ಕೂಡ ಪುರಸಭೆಯಿಂದ ನೀಡುವುದಾಗಿ ತಿಳಿಸಿದರು.ವಿದ್ಯಾರ್ಥಿಗಳ ಹಾಜರಾತಿ 297 ಇದೆ. ಆದರೆ ಎಂಟು ಜನ ಶಿಕ್ಷಕರಿದ್ದಾರೆ, ಇಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತದೆ ಎಂದರು.ಮುಖ್ಯಗುರು ಎಂ.ಎಸ್.ರುದ್ರಗೌಡರ ಶಾಲಾ ಮಕ್ಕಳು ಹಾಗೂ ಶಿಕ್ಷಕರನ್ನೊಳಗೊಂಡು ಪಟ್ಟಣದಲ್ಲಿ ಪ್ರಭಾತಪೇರಿ ನಡೆಸಿದರು.`ಶಾಲೆಯ ಕಾಳಜಿ ಇರಲಿ~

ಆಲಮೇಲ: ಸಮುದಾಯದ ಪ್ರತಿಯೊಬ್ಬರಿಗೂ ಸರಕಾರಿ ಶಾಲೆಯ ಕಾಳಜಿ ಇರಬೇಕು ಅಂದಾಗ ಶಾಲೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಗುರುತಿಸಲ್ಪಡುತ್ತದೆ ಎಂದು ದೇವಣಗಾಂವ ಗ್ರಾ.ಪಂ ಸದಸ್ಯ ಶಿವಲಿಂಗಪ್ಪ ಚಾಂದಕವಟೆ ಹೇಳಿದರು.ಇಲ್ಲಿಗೆ ಸಮೀಪದ ಶಂಬೇವಾಡ ಗ್ರಾಮದಲ್ಲಿ ನಡೆದ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಅವರು ಮಾತನಾಡಿದರು.ಪ್ರತಿಯೊಂದು ಮಗು ಶಾಲೆಗೆ ಬರಬೇಕು ಕಲಿತ ಶಾಲೆಯ ವಸ್ತುಸ್ಥಿತಿಯ ಅರಿತು ಕಲಿತ ಶಾಲೆಗೆ ತಮ್ಮ ಕೊಡುಗೆ ನೀಡಿ ಶಾಲಾ ಸುಧಾರಣೆಗೆ ಗಮನ ಹರಿಸಬೇಕು ಎಂದು ತಿಳಿಸಿದರು.

ಅದ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ಭೀಮರಾಯಗೌಡ ಅವರಾದಿ ವಹಿಸಿದ್ದರು. ಅತಿಥಿಗಳಾಗಿ ಬಸವರಾಜ ಅವರಾದಿ, ಬಸವರಾಜ ತಳವಾರ, ರಾವುತಪ್ಪಗೌಡ, ಸುಭಾಷಗೌಡ, ಖಾಜಪ್ಪ ತೆಲಗಬಾಳ, ಕೆ. ಪರಮಣ್ಣ ಮದಾರಬೇಗ್ ಹವಾಲ್ದಾರ ಉಪಸ್ಥಿತರರಿದ್ದರು.ದೇವಣಗಾಂವ:  ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ಶಾಂತಾಬಾಯಿ ಹರಗೋಲ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ವಿನಾಯಕ ಬಿಂಗೆ ವಹಿಸಿದ್ದರು. ಅತಿಥಿಗಳಾಗಿ ಪಾರ್ವತಿ ಹರಗೋಲ, ಎಸ್.ಆರ್.ಕುಲಕರ್ಣಿ ಉಪಸ್ಥಿತರರಿದ್ದರು.ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ : ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯ ಕಾಶೀನಾಥ ಗಂಗನಳ್ಳಿ ಆಗಮಿಸಿದ್ದರು.ಎಸ್‌ಡಿಎಂಸಿ ಅದ್ಯಕ್ಷ ಶಂಕರಗೌಡ ಹಂಗರಗಿ,ಆರ್.ಜೆ.ಆಲಗೂರ ಎಸ್.ಬಿ.ಲಿಂಬಿಕಾಯಿ,ಎಂ.ಎಸ್.ಮುಧೋಳ ಉಪಸ್ಥಿತರರಿದ್ದರು.ಕಡ್ಲೇವಾಡಪಿಎ ವಸತಿ ಶಾಲೆಯಲ್ಲಿ : ಮುಖ್ಯ ಅತಿಥಿಗಳಾಗಿ ಗ್ರಾಪಂ ಸದಸ್ಯ ಪಂಚಾಕ್ಷರಿ ಖೇಳಗಿ ಹಾಗೂ ಬಸವರಾಜ ಪೂಜಾರಿ ಆಗಮಿಸಿದ್ದರು.ಎಸ್.ಡಿ.ಎಂ.ಸಿ ಅದ್ಯಕ್ಷ ಶರಣಪ್ಪ ವಾಲೀಕಾರ ,ಭೀಮಣ್ಣ ಸಮಗಾರ ,ಗುರುಲಿಂಗಪ್ಪ ಸಿಂಪಿ ,ಶಬಾನಾ ಕಡು ಹಾಗೂ ಎಸ್‌ಡಿಎಂಸಿ ಸದಸ್ಯರು ಉಪಸ್ಥತರರಿದ್ದರುಗುರುಮೂರ್ತಯ್ಯ ವಸತಿ ಶಾಲೆ: ಗುರುಮೂರ್ತಯ್ಯ ವಸತಿ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಅದ್ಯಕ್ಷ ಸಿದ್ರಾಮಯ್ಯ ಮಠಪತಿ, ಚನ್ನಪ್ಪ ಕಟ್ಟಿ, ಶಂಕ್ರೇಪ್ಪ ರೋಡಗಿ,ಶಿವರಾಯಗೌಡ ಬಮ್ಮನಳ್ಳಿ, ಸಿದ್ದಪ್ಪ ಸಮಗಾರ,ಜಿ.ಎಸ್.ತಾವರಖೇಡ ,ಎಲ್.ಎಸ್.ಅತಾಪಿ ಉಪಸ್ಥಿತರರಿದ್ದರು.   ಅತಿಥಿಗಳಾಗಿ ಗ್ರಾ.ಪಂ. ಸದಸ್ಯ ಲಕ್ಷ್ಮಣ ಬತಗುಣಕಿ ಆಗಮಿಸಿದ್ದರು.ಎಸ್‌ಡಿಎಂಸಿ ಅದ್ಯಕ್ಷ ಸಾತಲಿಂಗಪ್ಪಗೌಡ ಬಿರಾದಾರ, ಡಾ.ಮಲ್ಲಣ್ಣಗೌಡ ಪಾಟೀಲ, ಸಿದ್ದಣಗೌಡ ಬಿರಾದಾರ, ಎಸ್.ಬಿ. ಪಾತಾಳಿ, ಆರ್.ಜಿ. ಭೂಸನೂರ,  ಎಸ್.ಸಿ.ಮೇತ್ರಿ ಉಪಸ್ಥಿತರರಿದ್ದರು.`ಒಳ್ಳೆಯ ವಾತಾವರಣ ಸೃಷ್ಟಿಸಿ~

ಬಸವನಬಾಗೇವಾಡಿ: ಸರಕಾರದ ಯೋಜನೆಗಳು ವಿದ್ಯಾರ್ಥಿಗಳಿಗೆ ಸರಿಯಾಗಿ ತಲುಪಬೇಕು. ಮಕ್ಕಳು ಶಾಲೆಗೆ ಆಸಕ್ತಿಯಿಂದ ಬರುವಂತೆ ವಾತಾವರಣ ಸೃಷ್ಟಿ ಮಾಡಬೇಕು ಎಂದು ಜಯವಾಡಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಶೋಕ ಬಿರಾದಾರ ಹೇಳಿದರು.ತಾಲ್ಲೂಕಿನ ಹೂವಿನಹಿಪ್ಪರಿಗಿ ಗ್ರಾಮದ ಸರಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ  ಹಮ್ಮಿಕೊಂಡಿದ್ದ ಶಾಲೆಗಾಗಿ ನಾವು-ನೀವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೋಡಲ್ ಅಧಿಕಾರಿ ಎಂ.ಎಸ್.ಹಿರೇಮಠ ಮಾತನಾಡಿ,  ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಬೇಕು.

 

ಅವರ ಪ್ರತಿಭೆಗೆ ಅನುಗುಣವಾಗಿ ಬೋಧನೆ ಮಾಡಬೇಕು ಎಂದು ಹೇಳಿದರು.ಶಿಕ್ಷಕರು ಮತ್ತು ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಖ್ಯಗುರು ಬಿ.ವ್ಹಿ.ಮ್ಯೋಗೇರಿ ಸ್ವಾಗತಿಸಿದರು, ಶಿಕ್ಷಕರಾದ ಎ.ಜೆ.ಪಾಟೀಲ ವಂದಿಸಿದರು, ಜಿ.ಬಿ.ಅಂಗಡಿ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.