ಮಕ್ಕಳಿಗೆ ಪೂರಕ ವಾತಾವರಣ ಕಲ್ಪಿಸಲು ಕರೆ

ಶುಕ್ರವಾರ, ಜೂಲೈ 19, 2019
26 °C

ಮಕ್ಕಳಿಗೆ ಪೂರಕ ವಾತಾವರಣ ಕಲ್ಪಿಸಲು ಕರೆ

Published:
Updated:

ಸೊರಬ: ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಬಳಸಿಕೊಂಡು ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಲು ಹಾಗೂ ಮನೆಯಲ್ಲಿ ಅಭ್ಯಾಸ ಮಾಡಲು ಪ್ರಶಾಂತ ವಾತಾವರಣ ಕಲ್ಪಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಗ್ರಾ.ಪಂ. ಅಧ್ಯಕ್ಷ ಹೊಳೆಲಿಂಗಪ್ಪ ಕರೆ ನೀಡಿದರು.

ಗುರುವಾರ ತಾಲ್ಲೂಕಿನ ಹಳೇಸೊರಬದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ಸರ್ಕಾರ ಅನೇಕ ಸೌಲಭ್ಯಗಳ ಜತೆಗೆ ಈಗ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿರುವುದು ಶ್ಲಾಘನೀಯ ಎಂದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಾನಾಯ್ಕ ಮಾತನಾಡಿ, ಶಿಕ್ಷಣ ನೀಡುವುದು ಶಿಕ್ಷಣ ಇಲಾಖೆಯ ಜವಾಬ್ದಾರಿ ಆದರೂ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣವನ್ನೊದಗಿಸುವಲ್ಲಿ ಜನಪ್ರತಿನಿಧಿ ಹಾಗೂ ಪೋಷಕರ ಪಾತ್ರ ಬಹುಮುಖ್ಯ.  ಮಕ್ಕಳು ತಾವು ಬಯಸುವ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಬಹುದಾಗಿದ್ದು, ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ನಮ್ಮ ಶಿಕ್ಷಣ ಪರಂಪರೆಯನ್ನು ಮುಂದುವರಿಸಲು ರಾಜ್ಯದ ಮೂಲೆಗಳ ಎಲ್ಲಾ ಸ್ತರದ ಶಕ್ತಿಕೇಂದ್ರಗಳು ಹಾಗೂ ಹಿತಾಸಕ್ತರ ಸಹಕಾರ, ಸಹಯೋಗ ಅಗತ್ಯ ಎಂದರು.

ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಪುಷ್ಪಾ ಕಮ್ಮಾರ್ ಮಾತನಾಡಿ, ಮಕ್ಕಳು ತಂದೆ-ತಾಯಿಗೆ ಗೌರವ ನೀಡುವ ಜತೆಗೆ ಚಿಕ್ಕ ವಯಸ್ಸಿನಲ್ಲಿಯೇ ಶಿಸ್ತು, ಸಂಯಮ ರೂಢಿಸಿಕೊಂಡಾಗ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದು ಹೇಳಿದರು.

ಶಿಕ್ಷಣ ಹಕ್ಕು ಮಾಹಿತಿ ಗೋಡೆ ಫಲಕವನ್ನು ಬಿಡುಗಡೆಗೊಳಿಸಿದ ತಹಶೀಲ್ದಾರ್ ಶ್ರೀಧರಮೂರ್ತಿ ಪಂಡಿತ ಮಾತನಾಡಿ, ಮಕ್ಕಳ ಹಕ್ಕು, ಪೋಷಕರು ಮತ್ತು ಸಮುದಾಯ ಶಾಲೆಯ ಪಾತ್ರ, ಗ್ರಾ.ಪಂ., ತಾ.ಪಂ. ಹಾಗೂ ಜಿ.ಪಂ. ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷೆ ಉಷಾ ಸಾಠೆ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಸದಸ್ಯ ವೀರಭದ್ರಗೌಡ, ಗ್ರಾ.ಪಂ. ಸದಸ್ಯರಾದ ಮಾಲಾ, ಆನಂದಪ್ಪ, ಸಮನ್ವಯಾಧಿಕಾರಿ ಪರಶುರಾಮಪ್ಪ, ದೈಹಿಕ ಪರಿವೀಕ್ಷಕ ಎಸ್.ಎಸ್. ಬಣಕಾರ್, ಸಂಪನ್ಮೂಲ ವ್ಯಕ್ತಿ ಸಿ.ಪಿ. ಸದಾನಂದ, ಶಿಕ್ಷಣ ಸಂಯೋಜಕ ವಿ.ಬಿ. ಜಾವೂರ್, ಮುಖ್ಯಶಿಕ್ಷಕ ಬಿ.ಎನ್. ವಿಜಯಕುಮಾರ್, ಅಕ್ಕನಾಗು ಪಾಟೀಲ್, ಎಂ.ಸಿ. ವೀರಪ್ಪ, ಶಾಂತಾಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry