ಬುಧವಾರ, ಆಗಸ್ಟ್ 5, 2020
26 °C

ಮಕ್ಕಳಿಗೆ ಪೊಲೀಸರೆಂದರೆ ಭಯವಿಲ್ಲ...!

ನಾಗೇಂದ್ರ ಖಾರ್ವಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳಿಗೆ ಪೊಲೀಸರೆಂದರೆ ಭಯವಿಲ್ಲ...!

ಕಾರವಾರ: ಇಷ್ಟುದಿನ ತರಗತಿಯಲ್ಲಿ ನಾಲ್ಕು ಕೋಣೆಗಳ ಮಧ್ಯೆ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳಿಗೆ ನಗರದಲ್ಲಿ ಈಚೆಗೆ ವಿಶೇಷ ಅನುಭವವಾಯಿತು. ಪೊಲೀಸರೆಂದರೆ ಭಯ ಪಡುತ್ತಿದ್ದ ವಿದ್ಯಾರ್ಥಿಗಳು ಠಾಣೆಗೆ ಬಂದು ಪೊಲೀಸ್ ಪಾಠ ಆಲಿಸಿ ಪೊಲೀಸರ ಬಗ್ಗೆ ಇದ್ದ ಭಯ ನಿವಾರಿಸಿಕೊಂಡರು.ಸದಾ ಆರೋಪಿಗಳು, ದೂರು ಕೊಡಲು ಬಂದವರಿಂದ ತುಂಬಿರುತ್ತಿದ್ದ ಇಲ್ಲಿಯ ನಗರ ಠಾಣೆಯಲ್ಲಿ ಶಾಸಕರ ಮಾದರಿ ಶಾಲೆಯ ವಿದ್ಯಾರ್ಥಿಗಳು ಓಡಾಡಿ ಅದೇನು, ಇದೇನು ಎಂದೆಲ್ಲ ಪ್ರಶ್ನೆ ಮಾಡುತ್ತಿದ್ದರು.ಪೆನ್ನು, ನೋಟ್‌ಗಳ ಬದಲಾಗಿ ಕೈಯಲ್ಲಿ ರೈಫಲ್, ವಾಕಿಟಾಕಿ ಹಿಡಿದು ಪೊಲೀಸ್ ಮಾಮಾನೊಂದಿಗೆ ಸ್ನೇಹ ಬೆಳೆಸಿದರು. ಠಾಣೆಯಲ್ಲಿರುವ ಕೈದಿಗಳ ಸೆಲ್‌ಗಳಿಗೆ ಹೋಗಿ ಹೊಸ ಅನುಭವ ಪಡೆದ ವಿದ್ಯಾರ್ಥಿಗಳು, ಅಲ್ಲಿಯೇ ಕೆಲಕಾಲ ಕಳೆದರು.ತಪ್ಪು ಮಾಡಿದ ಮೇಲೆ ಅಪರಾಧ ಎನ್ನುವುದು ಯಾವಾಗ ಸಾಬೀತಾಗುತ್ತದೆ. ಅಪರಾಧ ಎಂದರೆ ಏನು, ಅಪರಾಧಿಗಳನ್ನು ಮೊದಲು ಎಲ್ಲಿ ಕರೆದುಕೊಂಡು ಹೋಗುತ್ತಾರೆ. ಅವರಿಗಾಗುವ ಶಿಕ್ಷೆಯ ಪ್ರಮಾಣ ಏನು ಎನ್ನುವುದರ ಬಗ್ಗೆ ಠಾಣೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದರು.ಮೊದಲು ರೈಫಲ್ ನೋಡಿ ಹೆದರಿದ ವಿದ್ಯಾರ್ಥಿಗಳು ಅದರಲ್ಲಿ ಗುಂಡು ಹಾಕುವ, ಲಾಕ್ ಮಾಡುವ, ಗುರಿಯಿಡುವ ಬಗ್ಗೆ ತಿಳಿದುಕೊಂಡ ನಂತರ ರೈಫಲ್ ಮುಟ್ಟಲು ಮುಗಿಬಿದ್ದರು. ಕೆಲವರಂತೂ ಕೈಯಲ್ಲಿ ರೈಫಲ್ ಹಿಡಿದು ಗುರಿಯಿಡುವುದನ್ನೂ ಕಲಿತರು.ಠಾಣೆಯಲ್ಲಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ರಮೇಶ ಅವರು ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ಪೊಲೀಸ್ ಕಂಟೋಲ್ ರೂಮ್ 100, ಅಂಬುಲೆನ್ಸ್ 108, ಅಗ್ನಿಶಾಮಕ ದಳ 101. ಅಗತ್ಯಬಿದ್ದಾಗ ಈ ಸಂಖ್ಯೆಗೆ ಕರೆಮಾಡಬೇಕು. ವ್ಯಕ್ತಿಗಳ ಬಗ್ಗೆ ಸಂಶಯ ಬಂದರೆ ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರು ಎಂದರೆ ಹೆದರಬಾರದು ಎಂದು ಕಿವಿಮಾತು ಹೇಳಿದರು.ಪೊಲೀಸ್ ಠಾಣೆ ಬಗ್ಗೆ ವಿದ್ಯಾರ್ಥಿಗಳು ಠಾಣೆಯ ಕಾರ್ಯವೈಖರಿಗೆ ಬಗ್ಗೆ ತಿಳಿದುಕೊಂಡು ಸಂತಸಪಟ್ಟರು. `ಪೊಲೀಸರು ಎಂದರೆ ಭಯವಿತ್ತು. ಇಲ್ಲಿಗೆ ಬಂದ ನಂತರ ನನ್ನಲ್ಲಿದ್ದ ಭಯವೆಲ್ಲ ದೂರವಾಗಿದೆ. ಎಲ್ಲ ವಿಷಯಗಳನ್ನು ನಮಗೆ ಹೇಳಿಕೊಟ್ಟಿದ್ದಾರೆ. ಮನೆಯಲ್ಲಿ ಕಳ್ಳರು ಬಂದಾಗ, ಸಂಶಯಾಸ್ಪದ ವ್ಯಕ್ತಿಗಳು ನೋಡಿದರೆ ದೂರು ಕೊಡಬೇಕು ಎಂದು ತಿಳಿಸಿಕೊಟ್ಟಿದ್ದಾರೆ~ ಎಂದು ವಿದ್ಯಾರ್ಥಿ ಸಂಧ್ಯಾ ಬಡಿಗೇರ `ಪ್ರಜಾವಾಣಿ~ಗೆ ತಿಳಿಸಿದರು.ಪೊಲೀಸರ ಬಗ್ಗೆ ಮಕ್ಕಳಲ್ಲಿರುವ ಭಯ ದೂರ ಮಾಡುವ ಹಾಗೂ ಪೊಲೀಸ್ ಇಲಾಖೆ ಹಾಗೂ ಸಮಾಜದ ನಡುವೆ ಇರುವ ಕಂದಕ ಕಡಿಮೆ ಮಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡ ಈ ಕಾರ್ಯಕ್ರಮ ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.