ಮಕ್ಕಳಿಗೆ ವೈವಾಹಿಕ ಶಿಕ್ಷಣ ; ಥೂ ಅಸಹ್ಯ ಮುಟ್ಟಬೇಡ!

7

ಮಕ್ಕಳಿಗೆ ವೈವಾಹಿಕ ಶಿಕ್ಷಣ ; ಥೂ ಅಸಹ್ಯ ಮುಟ್ಟಬೇಡ!

Published:
Updated:

ಒಂದೆರಡು ವರ್ಷದ ಮಗು, ತನ್ನ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಇದೆ. ತಕ್ಷಣ ಪೋಷಕರು ಮುಜುಗರಕ್ಕೆ ಒಳಗಾಗುತ್ತಾರೆ. ಸಣ್ಣ ಮಗುವಾದರೆ ಬಲವಂತವಾಗಿ ಅದರ ಕೈ ಎಳೆದು ದೂರ ಸರಿಸುತ್ತಾರೆ. ಸ್ವಲ್ಪ ದೊಡ್ಡ ಮಗುವಾದರೆ,  ಥೂ ಅಸಹ್ಯ ಅದನ್ನೆಲ್ಲಾ ಮುಟ್ಟುಕೋಬೇಡ ಅಂತ ಬಯ್ಯುತ್ತಾರೆ, ಕೆಲವೊಮ್ಮೆ ಕೈ ಮೇಲೆ ಹೊಡೆಯವುದು ಅಥವಾ ಇತರ ರೀತಿಯ ಶಿಕ್ಷೆಯನ್ನು ನೀಡುತ್ತಾರೆ.

 

ಇನ್ನೂ ಸ್ವಲ್ಪ ದೊಡ್ಡದಾದ, ಅಂದರೆ ನಾಲ್ಕೈದು ವರ್ಷದ ಮಗುವಾದರೆ ಅದು, `ಯಾಕೆ
ಮುಟ್ಟಬಾರದು?~ ಅಂತ ಪ್ರಶ್ನಿಸಬಹುದು. ಆಗ ನಮ್ಮ ಉತ್ತರ ಏನಿರುತ್ತೆ ಗೊತ್ತಲ್ವಾ. ಅದು ಅಸಹ್ಯ; ಅದು ಕೊಳಕು; ನೀನು ಹಾಗೆ ಮಾಡಿದ್ರೆ ಜನ ಎಲ್ಲಾ ನಗ್ತಾರೆ; ಹಾಗೆ ಮಾಡಿದ್ರೆ ದೇವರು ಪಾಪ ಕೊಡುತ್ತೆ... ಮುಂತಾಗಿ.ಇಲ್ಲಿಂದಲೇ ಪ್ರಾರಂಭವಾಗಿರುತ್ತೆ ನಮ್ಮ ತಪ್ಪುಗಳ ಸರಮಾಲೆ ಎಂದರೆ ನೀವು ಮೂಗು ಮುರಿಯಬಹುದು. ಹಾಗಿದ್ದರೆ ನಾವು ಏನು ಮಾಡಬೇಕು?

ಮೊದಲನೆಯದಾಗಿ ಜನನಾಂಗಗಳು ಅಸಹ್ಯ ಎಂಬ ಭಾವನೆಯನ್ನು ಮಗುವಿನಲ್ಲಿ ಬಿತ್ತಬಾರದು. ದೇಹದ ಇತರ ಅಂಗಗಳಂತೆ ಅದು ಕೂಡ ಎನ್ನುವಂತೆ ವರ್ತಿಸಬೇಕು.ಇದು ನಿನ್ನ ಕೈ, ಕಾಲು, ಕಣ್ಣು ಎಂದು ಹೇಳಿಕೊಡುವಂತೆ, ಇದು ನಿನ್ನ ಶಿಶ್ನ, ಯೋನಿ ಎಂದು ನಿಸ್ಸಂಕೋಚವಾಗಿ ಹೇಳಿ. ಹಾಗೆಯೇ ಅದರ ಬಗೆಗೆ ಏನೇ ಕೇಳುವುದಿದ್ದರೂ ನಾನೊಬ್ಬಳೇ/ನೇ ಇರುವಾಗ ಕೇಳಬೇಕು ಎಂದು ತಿಳಿಸಿ. ಎರಡನೆಯದು ಜನನಾಂಗಗಳನ್ನು ಯಾವ್ಯಾವುದೋ ಅಡ್ಡ ಹೆಸರುಗಳಿಂದ ಕರೆಯಬೇಡಿ.

 

ಸಾಧ್ಯವಾದಷ್ಟೂ ದಿನಬಳಕೆಯ ಶಬ್ದಗಳನ್ನೇ ಉಪಯೋಗಿಸಿ. ಇಂತಹ ಗ್ರಾಮ್ಯ ಅಥವಾ ಕನ್ನಡ ಶಬ್ದಗಳು ಸ್ವಲ್ಪ ಮುಜುಗರ ಉಂಟುಮಾಡುವುದಾದರೆ, ಸಂಸ್ಕೃತ ಲೇಪಿತ ಪದಗಳನ್ನು ಬಳಸಿ. ನಾನು ಹೇಳುತ್ತಿರುವುದು, ಮೂಲ ಸಂಸ್ಕೃತವೇ ಹೊರತು, ಬೀದಿ ಜಗಳದಲ್ಲಿ ಉಪಯೋಗಿಸುವ `ಸಂಸ್ಕೃತ~ವಲ್ಲ ನೆನಪಿರಲಿ! ಮಗು ತನ್ನ ಸಹಪಾಠಿಗಳಿಂದ ಕಲಿತ ಇತರ ಶಬ್ದಗಳನ್ನು ಬಳಸಿದಾಗ ಶಿಕ್ಷಿಸದೆ, ಅದಕ್ಕೆ ತಿಳಿಯುವಂತೆ ವಿವರಿಸಿ.ಮಗು ತನ್ನ ಜನನಾಂಗಗಳೊಡನೆ ಆಟವಾಡುವುದು ಸಹಜ ಕುತೂಹಲದಿಂದ ಮಾತ್ರ. ಜೊತೆಗೆ ಅದು ಆ ವಯಸ್ಸಿನ ಆರೋಗ್ಯಕರ ಲೈಂಗಿಕ ಅಭಿವ್ಯಕ್ತಿ ಕೂಡ. ನಾವು ಬಲವಂತವಾಗಿ ಅದನ್ನು ಹತ್ತಿಕ್ಕಿದಷ್ಟೂ ಮಗುವಿನ ಕುತೂಹಲ ಹೆಚ್ಚುತ್ತದೆ. ಆದ್ದರಿಂದ ಇಂತಹ ವರ್ತನೆಗಳು ಖಾಸಗಿಯಾಗಿ ತೀರಾ ಮಿತಿಮೀರದ ಮಟ್ಟದಲ್ಲಿ ಇಲ್ಲ ಎಂದಾದರೆ, ಅದರ ಆನಂದಕ್ಕೆ ಅಡ್ಡ ಬರಬೇಡಿ! ಸಾರ್ವಜನಿಕವಾಗಿ ಮಗು ಹಾಗೆ ಮಾಡಿದಾಗ, ಅದು ನಿಮಗಾದ ಅವಮಾನ ಎಂದುಕೊಂಡು ಮಗುವನ್ನು ಗದರಿಸದೆ, ಅದರ ಗಮನವನ್ನು ಸಹಜವಾಗಿ ಬೇರೆ ಕಡೆ ತಿರುಗಿಸಿ.

 

ಹೀಗೆ ಮಾಡುತ್ತಾ ಹೋದಂತೆ ಮಗು ತಾನಾಗಿಯೇ ಅದರ ಬಗೆಗೆ ಹೆಚ್ಚಿನ ಆಸಕ್ತಿ ತೋರಿಸುವುದನ್ನು ಕಡಿಮೆ ಮಾಡುತ್ತದೆ. ಜನನಾಂಗ ಮತ್ತು ಮಲದ್ವಾರಗಳನ್ನು ಪದೇ ಪದೇ ಮುಟ್ಟಿಕೊಳ್ಳುವುದರಿಂದ ಆರೋಗ್ಯದ ದೃಷ್ಟಿಯಿಂದ ಹೇಗೆ ತೊಂದರೆಗಳಾಗಬಹುದು ಎಂದು ವಿವರಿಸಿ.ನಗ್ನತೆಯ ಬಗೆಗೆ ತೀರಾ ಪ್ರಾಮುಖ್ಯತೆ ಕೊಡದಿದ್ದರೆ ಉತ್ತಮ. ದೇಹವನ್ನು, ಅದರಲ್ಲೂ ಪ್ರಮುಖವಾಗಿ ಜನನಾಂಗಗಳನ್ನು ಬಟ್ಟೆಯಿಂದ ಮುಚ್ಚುವುದು ಶುಚಿಯಾಗಿರುವ ಮತ್ತು ಕಾಯಿಲೆಗಳಿಂದ ದೂರವಿರುವ ದೃಷ್ಟಿಯಿಂದ ಅಗತ್ಯ ಎಂದು ಪದೇ ಪದೇ ತಿಳಿಸಿ ಹೇಳಿ. ಮಕ್ಕಳು ಬೆತ್ತಲಾಗಿ ಬಂದಾಗ `ಶೇಮ್ ಶೇಮ್~ ಎಂದು ಛೇಡಿಸುವ ಆಟವನ್ನು ಆಡಬೇಡಿ. ಇದರಿಂದ ಮಕ್ಕಳು ತಾತ್ಕಾಲಿಕವಾಗಿ ಖುಷಿಯಾದಂತೆ ಕಂಡುಬಂದರೂ, ನಗ್ನತೆ ಬಗೆಗೆ ಅವರು ಸರಿಯಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದಿಲ್ಲ.

 

ಬರಿಯ ಗಮನ ಸೆಳೆಯುವ ಉದ್ದೇಶಕ್ಕಾಗಿ ಎಲ್ಲರೆದುರು ಬೆತ್ತಲಾಗಿ ಓಡಿಬಂದು ಮಾಯವಾಗುವುದು, ಬೆತ್ತಲಾಗಿ ರಸ್ತೆಗೆ ಓಡುವುದು, ಅತಿಥಿಗಳೆದುರೇ ಬಟ್ಟೆ ಕಳಚುವುದು- ಮುಂತಾದ ಆಟವನ್ನು ಅವರು ಶುರು ಮಾಡಬಹುದು. ಇಂತಹ ವರ್ತನೆಗಳ ಬಗೆಗೆ ನಾವು ನೀಡುವ ಹೆಚ್ಚಿನ ಗಮನವನ್ನು ನಿಲ್ಲಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮಗು ತನ್ನ ತಂತ್ರ ಫಲಿಸುತ್ತಿಲ್ಲ ಎಂದುಕೊಂಡು ಸುಮ್ಮನಾಗುತ್ತದೆ. ಮಗುವಿಗೆ ನಾಲ್ಕು ವರ್ಷಗಳಾಗುವ ಹೊತ್ತಿಗೆ ಯಾವ ವಿಚಾರಗಳನ್ನು ಖಾಸಗಿಯಾಗಿ ಮಾತನಾಡಬೇಕು ಎಂದು ವಿವರಿಸಿ. ಮಗುವೇ ಪ್ರಶ್ನೆ ಕೇಳುವವರೆಗೆ ಕಾಯದೇ ನೀವೇ ಅವಕಾಶಗಳನ್ನು ಸೃಷ್ಟಿಸಿಕೊಂಡು ವಿಚಾರಗಳನ್ನು ತಿಳಿಸಿ. `ಅಯ್ಯೋ ಪಾಪ ಇನ್ನೂ ಚಿಕ್ಕದು ನಿಧಾನವಾಗಿ ಕಲಿಯುತ್ತೆ~ ಎಂದು ಮುಂದೂಡಿದರೆ, ಬೇರೆ ಯಾರಾದರೂ ತಮಗೆ ಬಂದಂತೆ ಕಲಿಸಲು ಪ್ರಾರಂಭಿಸಬಹುದು.ತಜ್ಞರು ಹೇಳುವ ಪ್ರಕಾರ, ತಡ ಮಾಡಿದಷ್ಟೂ ಅಪಾಯಗಳು ಜಾಸ್ತಿ. ಹಾಗಾಗಿ ಯಾವಾಗ ಎಂದು ನಿರ್ಧರಿಸುವುದು ಕಷ್ಟವಾದಾಗ ಸ್ವಲ್ಪ ಬೇಗನೇ ಶಿಕ್ಷಣ ನೀಡುವುದೇ ಉತ್ತಮ. ಹಾಗೆಂದು ಮಗುವಿನ ವಯಸ್ಸಿಗೆ ಮೀರಿದ ವಿಚಾರಗಳನ್ನು ತುಂಬಬಾರದು.ಹೇಳುವುದನ್ನು ಚಿಕ್ಕ, ಚೊಕ್ಕ ವಾಕ್ಯಗಳಲ್ಲಿ ವಿವರಿಸಿ. ಹೇಳುತ್ತಿರುವುದು ಮಗುವಿಗೆ ಅರ್ಥವಾಗಿದೆಯೇ ಎಂದು ಕೇಳಿ ಖಾತ್ರಿ ಮಾಡಿಕೊಳ್ಳಿ. ದಂಪತಿ ಈ ಎಲ್ಲವನ್ನೂ ತಮ್ಮಲ್ಲೇ ಚರ್ಚೆ ಮಾಡಿ ಒಮ್ಮತದ ತೀರ್ಮಾನಕ್ಕೆ ಬಂದರೆ ಮಕ್ಕಳೆದುರು ಮಾತನಾಡುವುದು ಸುಲಭ. ಮಕ್ಕಳೆದುರು ಅಪ್ಪುಗೆ ಅಥವಾ ಚುಂಬನದ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಅವರು ಹಿಂಜರಿಯಬೇಕಿಲ್ಲ.

 

ಇದು ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಎಂದು ಮಕ್ಕಳಿಗೆ ತಿಳಿಸಬಹುದು. ಟಿ.ವಿ.ಗಳಲ್ಲಿ ಇಂತಹ ದೃಶ್ಯಗಳನ್ನು ನೋಡುವ ಮಕ್ಕಳು ತಮ್ಮ ಅಪ್ಪ ಅಮ್ಮ ಹೀಗೆ ಮಾಡುತ್ತಿಲ್ಲ ಎಂದರೆ ಅವರಲ್ಲಿ ಪ್ರೀತಿಯೇ ಇಲ್ಲ ಎಂದುಕೊಳ್ಳಬಹುದು. ಹಾಗೆಂದು ಇದನ್ನು ಒತ್ತಾಯಪೂರ್ವಕವಾಗಿ ಮಾಡಬೇಕಿಲ್ಲ.ಈ ವಯಸ್ಸಿನ ಮಕ್ಕಳು ಕೇಳಬಹುದಾದ ಕೆಲವು ಪ್ರಶ್ನೆಗಳಿಗೆ ಹೇಗೆ ಉತ್ತರಿಸಬಹುದು ಎಂದು ನೋಡೋಣ;

*ನನಗೆ ಹೀಗಿದ್ದರೆ (ಜನನಾಂಗಗಳನ್ನು ಉದ್ದೇಶಿಸಿ) ಅವಳಿಗೆ ಯಾಕೆ ಹಾಗಿದೆ?

ಮಗೂ ಮನುಷ್ಯ, ಪ್ರಾಣಿ ಮತ್ತು ಸಸ್ಯಗಳಲ್ಲಿ ಗಂಡು ಮತ್ತು ಹೆಣ್ಣು ಎಂದು ಎರಡು ರೀತಿ ಇರುತ್ತದೆ. ಇಬ್ಬರೂ ನೋಡೋದಕ್ಕೆ ಬೇರೆ ಬೇರೆ ರೀತಿ ಇರುತ್ತಾರೆ. ಇದರಿಂದ ನಮಗೆ ಇವರು ಅಂಕಲ್ಲೋ, ಆಂಟೀನೋ, ತಾತನೋ, ಅಜ್ಜಿನೋ, ಅಪ್ಪನೋ, ಅಮ್ಮನೋ ಎಂದು ಗುರುತಿಸೋದು ಸಾಧ್ಯವಾಗುತ್ತದೆ.ನಿನಗೆ ಉಚ್ಚೆ ಮಾಡೋದಕ್ಕೆ ಒಂದು ಸಣ್ಣ ಕೊಳವೆಯ ತರಹ ಇರುತ್ತದೆ. ಹೆಣ್ಣು ಮಕ್ಕಳಿಗೆ ಹಾಗೆ ಇರುವುದಿಲ್ಲ. ದೊಡ್ಡ ಆದ ಮೇಲೆ ನಿನಗೆ ಗಡ್ಡ ಮೀಸೆ ಬರುತ್ತದೆ. ಆದರೆ ಅವಳಿಗೆ ಬರುವುದಿಲ್ಲ.

*ನಾನು ಯಾಕೆ ಹುಡುಗರಂತೆ ನಿಂತುಕೊಂಡು ಉಚ್ಚೆ ಮಾಡಬಾರದು?

ನಿನಗೆ ಉಚ್ಚೆ ಮಾಡಲು ಹುಡುಗರಂತೆ ಕೊಳವೆಯಂತಹದ್ದನ್ನು ದೇವರು ಕೊಟ್ಟಿಲ್ಲ. (ಅಂಗಾಂಗಗಳ ಹೆಸರನ್ನು ಶಿಶ್ನ, ಮತ್ತು ಯೋನಿ ಎಂದು ಸರಳವಾಗಿ ಹೇಳಿ) ಹಾಗಾಗಿ ನೀನು ನಿಂತುಕೊಂಡು ಉಚ್ಚೆ ಮಾಡಿದರೆ ಕಾಲೆಲ್ಲಾ ಕೊಳೆಯಾಗುತ್ತದೆ. ಇದರಿಂದ ನಿನಗೆ ಜ್ವರ ಬರಬಹುದು.

*ಅಮ್ಮ ಪಾಪುಗೆ ಹಾಲನ್ನು ಹೇಗೆ ಕುಡಿಸುತ್ತಾಳೆ? ಅಪ್ಪ ಯಾಕೆ ಕುಡಿಸಬಾರದು?

ಹಾಲು ಕುಡಿಸಲಿಕ್ಕೆ ಅಂತ ಅಮ್ಮನಿಗೆ ದೇವರು ಎದೆಯನ್ನು ಉಬ್ಬಿಸಿದ್ದಾನೆ. ಅಮ್ಮ ಊಟ ಮಾಡಿದ್ದು ಅಮ್ಮನ ಹೊಟ್ಟೆಯೊಳಗೆ ಹೋಗಿ ಹಾಲಾಗುತ್ತದೆ. ಪಾಪು ಸಣ್ಣದಲ್ವಾ, ಅದಕ್ಕೆ ನಮ್ಮ ಹಾಗೆ ಹಲ್ಲಿಲ್ಲ ನೋಡು, ಹಾಗಾಗಿ ಅಮ್ಮ ತನ್ನ ಎದೆಯಿಂದ ಹಾಲು ಕುಡಿಸುತ್ತಾಳೆ. ಅಪ್ಪನಿಗೆ ಈ ತರಹ ಹಾಲು ಎದೆಯಿಂದ ಬರಲ್ಲ. ಹಾಗಾಗಿ ಅಮ್ಮನೇ ಪಾಪುಗೆ ಹಾಲು ಕುಡಿಸಬೇಕು. ಪಾಪುಗೆ ಹಲ್ಲು ಹುಟ್ಟಿದ ಮೇಲೆ ನಿನ್ನ ಹಾಗೆ ಊಟ ಮಾಡುತ್ತೆ.

*ನಾನು ದೊಡ್ಡವನಾ/ಳಾದ ಮೇಲೆ ನಿನ್ನ ಹಾಗೆ ಆಗ್ತೀನಾ?

ಹೌದು. (ಹುಡುಗರಿಗೆ) ನನ್ನ ಹಾಗೆ ದೇಹದ ಮೇಲೆಲ್ಲಾ ಕೂದಲು ಬರುತ್ತದೆ. ಉದ್ದಕ್ಕೆ ದಪ್ಪಕ್ಕೆ ಆಗಿ ಅಪ್ಪ ಆಗ್ತೀಯಾ. (ಹುಡುಗಿಯರಿಗೆ) ನನ್ನ ಹಾಗೇ ಎತ್ತರಕ್ಕೆ ಆಗ್ತೀಯಾ, ನಿನ್ನ ಎದೆನೂ ದೊಡ್ಡದಾಗಿ ಬೆಳೆಯುತ್ತೆ, ನಿನಗೂ ಮದುವೆ ಆಗುತ್ತೆ, ಪಾಪು ಬರುತ್ತೆ. ಹ್ಯಾಗೆ ಬರುತ್ತೆ ಅಂತ ನೀನು ಸ್ವಲ್ಪ ದೊಡ್ಡವಳಾದ ಮೇಲೆ ನಾನೇ ಹೇಳ್ತೀನಿ.

 

ನೀನು ಮನೆಯಲ್ಲಿ ನಾನೊಬ್ಬಳೇ ಇದ್ದಾಗ ಏನು ಬೇಕಾದರೂ ಕೇಳು. ಎಲ್ಲರೂ ಇದ್ದಾಗ ಕೇಳಿದ್ರೆ ನನಗೆ ಇಷ್ಟ ಆಗಲ್ಲ. ಈಗ ನಾವೆಲ್ಲಾ ಹೊರಗೆ ಹೋಗ್ಬೇಕಾದ್ರೆ ಪೂರ್ಣ ಬಟ್ಟೆ ಹಾಕ್ಕೊಂಡು ಹೋಗಲ್ವಾ ಹಾಗೆ, ನಾವು ಬಟ್ಟೆಯಿಂದ ಮುಚ್ಚಿಕೊಳ್ಳೋ ದೇಹದ ಬಗೆಗೆ ಮನೆಯಲ್ಲೇ ಕೇಳು.ಕೆಲವು ಮಕ್ಕಳು ಪೋಷಕರಲ್ಲಿ ಒಬ್ಬರ ಬಗೆಗೆ ಮಾತ್ರ ವಿಶೇಷ ಆತ್ಮೀಯತೆ ಬೆಳೆಸಿಕೊಂಡಿರುವುದರಿಂದ ಅವರ ಹತ್ತಿರ ಮಾತ್ರ ಪ್ರಶ್ನೆ ಕೇಳುತ್ತಾರೆ. ಆಗ ತಂದೆ ಮಗಳ ಹತ್ತಿರ ಅಥವಾ ತಾಯಿ ಮಗನೊಡನೆ ಮಾತನಾಡಲು ಮುಜುಗರ ಪಟ್ಟುಕೊಳ್ಳಬಾರದು. ಅಗತ್ಯ ಎನಿಸಿದರೆ ಇಬ್ಬರೂ ಒಟ್ಟಾಗಿ ಕುಳಿತು ಮಗುವಿನೊಡನೆ ಮಾತನಾಡಬೇಕು.ಮಕ್ಕಳ ಪ್ರಶ್ನೆಯೆಂಬ ಬಾಣಗಳು ತೀರಾ ಅನೀರೀಕ್ಷಿತ ದಿಕ್ಕಿನಿಂದ ಊಹಿಸದೇ ಇರುವ ಸಮಯದಲ್ಲಿ ಬರಬಹುದು. ಶಾಲಾ ಪರೀಕ್ಷೆಗಳಿಗಾಗಿ ಗೈಡ್‌ಗಳಲ್ಲಿ ಕೊಡುವಂತೆ `ಮೋಸ್ಟ್ ಲೈಕ್‌ಲೀ~ ಪ್ರಶ್ನೆಗಳನ್ನು ಪಟ್ಟಿ ಮಾಡುವುದು ಅಸಾಧ್ಯ. ಅವರಿನ್ನೂ ವಯಸ್ಕರ ಪ್ರಾಪಂಚಿಕ ಜ್ಞಾನವನ್ನು ಹೊಂದಿರುವುದಿಲ್ಲ ಎಂಬುದನ್ನು ಮರೆಯದೆ ನಾವು ಸಹನೆ ಕಳೆದುಕೊಳ್ಳಬಾರದು.ಮಗು ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ನಾವಾಡುವ ಮಾತುಗಳಿಗಿಂತ ಹೆಚ್ಚಾಗಿ ನಮ್ಮ ಸ್ವಭಾವ, ವರ್ತನೆಗಳನ್ನು ಅದು ಅನುಕರಿಸುವ ಮತ್ತು ಅನುಸರಿಸುವ ಸಾಧ್ಯತೆ ಹೆಚ್ಚು. ಹಾಗಾಗಿ ಲೈಂಗಿಕ ವಿಚಾರಗಳನ್ನು ಮಾತನಾಡಲು ನಾವು ಮುಜುಗರ ಪಟ್ಟುಕೊಂಡರೆ ಅದು ಮಗುವಿನ ಗಮನಕ್ಕೆ ಬಂದೇ ಬರುತ್ತದೆ.ಯಾವುದೇ ಕಾರಣಕ್ಕೂ ಸುಳ್ಳು ಅಥವಾ ತಪ್ಪು ಮಾಹಿತಿ ನೀಡಬೇಡಿ. ನಿಮಗೆ ತಿಳಿಯದ ವಿಷಯವಾಗಿದ್ದರೆ ಗೊತ್ತಿಲ್ಲ ಎಂದು ಒಪ್ಪಿಕೊಂಡು, ವೈದ್ಯರಿಂದ ತಿಳಿದು ಹೇಳುತ್ತೇನೆ ಎಂದು ಸಮಜಾಯಿಶಿ ನೀಡಿ. ಮಗು ಅದನ್ನು ಮರೆತುಬಿಟ್ಟರೂ ಪೋಷಕರು ತಮ್ಮ ಕರ್ತವ್ಯ ಮಾಡಲೇಬೇಕು. ಇಲ್ಲದಿದ್ದರೆ ಇತರ ಮೂಲಗಳಿಂದ ಬರಬಹುದಾದ ತಪ್ಪು ಮಾಹಿತಿಗಳಿಗೆ ಮಗು ಕಿವಿಗೊಡುತ್ತದೆ. ಇದಕ್ಕೆಲ್ಲಾ ನಮ್ಮ ಬಾಲ್ಯದ ಅನುಭವಗಳೇ ಸಾಕ್ಷಿ.

(ಮುಂದುವರಿಯುವುದು...)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry