ಮಕ್ಕಳಿಗೆ ಶಿಕ್ಷಣ ನೀಡಲು ಸಲಹೆ

7

ಮಕ್ಕಳಿಗೆ ಶಿಕ್ಷಣ ನೀಡಲು ಸಲಹೆ

Published:
Updated:

ಚಾಮರಾಜನಗರ: `ಉಪ್ಪಾರ ಸಮುದಾಯ ಅಭಿವೃದ್ಧಿ ಹೊಂದಲು ಶಿಕ್ಷಣ ಅಗತ್ಯ. ಈ ಹಿನ್ನೆಲೆಯಲ್ಲಿ ಸಮಾಜ ಬಾಂಧವರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು' ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಸಲಹೆ ನೀಡಿದರು. ತಾಲ್ಲೂಕಿನ ಕಾಗಲವಾಡಿ ಗ್ರಾಮದ ಹಿಂದುಳಿದ ವರ್ಗದ ಸಮುದಾಯ ಭವನದ ಆವರಣದಲ್ಲಿ ಈಚೆಗೆ ನಡೆದ ಜೈಭಗೀರಥ ಉಪ್ಪಾರ ಯುವಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಭಗೀರಥ ಮಹರ್ಷಿ ಹೆಸರಿನಲ್ಲಿ ಸ್ಥಾಪನೆಯಾಗಿರುವ ಸಂಘದ ಸದಸ್ಯರು ಗ್ರಾಮದ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಹಿರಿಯರ ಮಾರ್ಗ ದರ್ಶನ ಪಡೆದು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು. ಕಡುಬಡವರಿಗೆ ಸರ್ಕಾರದಿಂದ ದೊರೆಯುವ ಸವಲತ್ತು ಕಲ್ಪಿಸಲು ಮುಂದಾಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಜಿ.ಎಸ್. ನಿತ್ಯಾ ಮಾತನಾಡಿ, ಗ್ರಾಮದ ಪ್ರತಿ ಕುಟುಂಬವೂ ಶೌಚಾಲಯ ನಿರ್ಮಿಸಿಕೊಂಡು ನೈರ್ಮಲ್ಯ ಕಾಪಾಡಬೇಕು ಎಂದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಂಗಲ ಶಿವಕುಮಾರ್ ಮಾತನಾಡಿ, ಉಪ್ಪಾರ ಸಮುದಾಯದಲ್ಲಿ ಗಡಿಮನೆ, ಕಟ್ಟೆಮನೆಗಳಿದ್ದು, ಇಂದಿಗೂ ಕಟ್ಟುಪಾಡನ್ನು ಪಾಲಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.ಸಮಾಜದ ಹಲವು ಮಂದಿಗೆ ಮನೆ ಕಟ್ಟಿಕೊಳ್ಳಲು ನಿವೇಶನದ ಕೊರತೆಯಿದೆ. ಸೂಕ್ತ ನಿವೇಶನ ಕೊಡಿಸಲು ಜನಪ್ರತಿನಿಧಿಗಳು ಗಮನಹರಿಸಬೇಕಿದೆ ಎಂದು ಒತ್ತಾಯಿಸಿದರು. ಉಪನ್ಯಾಸಕ ಪಿ. ಗೋವಿಂದರಾಜು ಮಾತನಾಡಿ, `ಉಪ್ಪಾರ ಸಮುದಾಯದವರು ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯನ್ನು ತ್ಯಜಿಸಬೇಕು. ಹೆಣ್ಣುಮಕ್ಕಳನ್ನು ಕನಿಷ್ಠ ಪಿಯುಸಿವರೆಗೆ ಓದಿಸಲು ಪೋಷಕರು ಮುಂದಾಗಬೇಕು' ಎಂದರು.ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ ಸಂಘದ ನಾಮಫಲಕ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಮೈಸೂರು- ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷ ಹನುಮಂತಶೆಟ್ಟಿ, ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷ ಸಣ್ಣಮಾದಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಆರ್. ಕಾವೇರಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಿಕ್ಕಮಹದೇವು,  ಕಾಂತಾಮಣಿ, ಶಶಿಕಲಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷೆ ಕೆ.ಎಂ. ಶಾಂತಿ, ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಮಹದೇವಸ್ವಾಮಿ, ಜಿಲ್ಲಾ ಉಪ್ಪಾರ ಪ್ರಚಾರ ಸಮಿತಿ ಅಧ್ಯಕ್ಷ ಕಾಳಶೆಟ್ಟಿ, ಸದಸ್ಯರಾದ ಜಯಕುಮಾರ್, ನಾರಾಯಣ್, ನಾಗರಾಜು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry