ಮಕ್ಕಳಿಲ್ಲದೇ ಸರ್ಕಾರಿ ಶಾಲೆ ಬಂದ್

ಬುಧವಾರ, ಜೂಲೈ 17, 2019
24 °C
ಫಲ ನೀಡದ ಶಿಕ್ಷಣ ಉತ್ತೇಜನ ಕಾರ್ಯಕ್ರಮ

ಮಕ್ಕಳಿಲ್ಲದೇ ಸರ್ಕಾರಿ ಶಾಲೆ ಬಂದ್

Published:
Updated:

ಚಿಕ್ಕಮಗಳೂರು: ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಸರ್ಕಾರ `ಬಾ ಬಾಲೆ ಶಾಲೆಗೆ, ಬಾ ಮರಳಿಶಾಲೆಗೆ, ಕೂಲಿಯಿಂದ ಶಾಲೆಗೆ' ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಮಾತ್ರ  ಇತ್ತೀಚಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದ್ದರಿಂದ ಮಕ್ಕಳಿಲ್ಲದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 87 ಶಾಲೆಗಳು ಬಾಗಿಲು ಮುಚ್ಚಿವೆ.ಜಿಲ್ಲೆಯಲ್ಲಿ ಒಟ್ಟು 823 ಕಿರಿಯ ಪ್ರಾಥಮಿಕ ಶಾಲೆ, 694 ಹಿರಿಯ ಪ್ರಾಥಮಿಕ ಶಾಲೆ ಹಾಗೂ 116 ಪ್ರೌಢಶಾಲೆಗಳಿವೆ. ಅದರಲ್ಲಿ  74 ಸರ್ಕಾರಿ ಕಿರಿಯ ಪ್ರಾಥ ಮಿಕ ಶಾಲೆಗಳು 12 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಅನುದಾನಿತ 1ಶಾಲೆ  ಮಕ್ಕಳಿಲ್ಲದೆ ಬಾಗಿಲು ಮುಚ್ಚಿವೆ. ಇದರಲ್ಲಿ 5 ಶಾಲೆಗಳು ಅನುದಾನ ರಹಿತ ಶಾಲೆಗಳು.ಕಡೂರು ತಾಲ್ಲೂಕಿನ ಬೀರೂರು ಶೈಕ್ಷಣಿಕ ವಲಯದಲ್ಲಿ 12, ಚಿಕ್ಕಮಗಳೂರು ತಾಲ್ಲೂನಲ್ಲಿ 21, ಕಡೂರು 10, ಕೊಪ್ಪ 8, ಮೂಡಿಗೆರೆ 12, ನರಸಿಂಹರಾಜಪುರ 7 ಹಾಗೂ ತರೀಕೆರೆ ತಾಲ್ಲೂಕಿನಲ್ಲಿ  8ಶಾಲೆಗಳು ಬಾಗಿಲು ಮುಚ್ಚಿದ ಶಾಲೆಗಳ ಪಟ್ಟಿಗೆ ಸೇರಿವೆ.  ಸರ್ಕಾರ ಮಧ್ಯಾಹ್ನದ ಬಿಸಿಯೂಟವನ್ನು ಜಾರಿಗೆ ತಂದಾಗ ಮಕ್ಕಳ ಹಾಜರಾತಿ ಸಂಖ್ಯೆಯಲ್ಲಿ ಹೆಚ್ಚಳಗೊಂಡಿತ್ತು. ಆದರೆ ನಂತರ ದಿನಗಳಲ್ಲಿ ಈ ಸಂಖ್ಯೆ ಕ್ಷೀಣಿಸತೊಡಗಿತು. ಗ್ರಾಮೀಣ ಪ್ರದೇಶಗಳ ಶಾಲೆಯಲ್ಲಿ  ಮಕ್ಕಳೇ ಇಲ್ಲದ್ದರಿಂದ  ಅನಿವಾರ್ಯವಾಗಿ ಬಾಗಿಲು ಹಾಕಬೇಕಾಯಿತು.ಶಿಕ್ಷಕರ ಕೊರತೆ: ಮಲೆನಾಡಿನ ನಕ್ಸಲ್ ಪ್ರಭಾವ ಇರುವ ಮೂಡಿಗೆರೆ, ಕೊಪ್ಪ ಮತ್ತು ಶೃಂಗೇರಿ ತಾಲ್ಲೂಕುಗಳಲ್ಲಿ ಒಟ್ಟು 115 ಶಿಕ್ಷಕರ ಕೊರತೆ ಉಂಟಾಗಿದೆ. ಮೂಡಿಗೆರೆ ತಾಲ್ಲೂಕಿನಲ್ಲಿ 74 ಶಿಕ್ಷಕರ ಹುದ್ದೆ ಖಾಲಿ ಇದ್ದರೆ, ಕೊಪ್ಪ ತಾಲ್ಲೂಕಿನಲ್ಲಿ 21 ಹಾ ಗೂ ಶೃಂಗೇರಿ ತಾಲ್ಲೂಕಿನಲ್ಲಿ 20 ಶಿಕ್ಷಕರ ಹುದ್ದೆಗಳು ಖಾಲಿ ಇವೆ.ಈ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಶಿಕ್ಷಕರು ಮುಂದೆ ಬಾರದಿರುವುದರಿಂದಲೋ ಏನೋ 115 ಹುದ್ದೆಗಳು ಖಾಲಿ ಇವೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಸ್ಥಳೀಯರು ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಿದ ಶಿಕ್ಷಣ ಇಲಾಖೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿತ್ತು.ನಕ್ಸಲ್ ಪ್ರಭಾವ ಇರುವ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಸ್ಥಳೀಯವಾಗಿ 92 ಅರ್ಜಿಗಳು ಬೇರೆ ಪ್ರದೇಶಗಳಿಂದ 48 ಅರ್ಜಿಗಳು ಸೇರಿದಂತೆ ಒಟ್ಟು 140 ಅರ್ಜಿ ಗಳು ಶಿಕ್ಷಣ ಇಲಾಖೆಗೆ ಸಲ್ಲಿಕೆಯಾಗಿದ್ದವು.ಕೌನ್ಸಿಲಿಂಗ್ ಮೂಲಕ 87 ಜನರು ಆಯ್ಕೆಯಾಗಿದ್ದು, ಮತ್ತೆ 28 ಹುದ್ದೆಗಳು ಖಾಲಿ ಉಳಿದಿವೆ. ಮೂಡಿಗೆರೆ ತಾಲ್ಲೂಕಿನಲ್ಲಿ 24, ಕೊಪ್ಪ 3 ಹಾಗೂ ಶೃಂಗೇರಿ ತಾಲ್ಲೂಕಿ ನಲ್ಲಿ 1 ಹುದ್ದೆಗಳು ಖಾಲಿ ಇದೆ.6 ರಿಂದ 14 ವರ್ಷದೊಳಗಿನ ಮಕ್ಕಳು ಶಾಲೆ ಬಿಟ್ಟಿದ್ದರೆ ಅವರನ್ನು ಶಾಲೆಗೆ ಕರೆತರುವ `ಬಾ ಮರಳಿ ಶಾಲೆಗೆ, ಬಾ ಬಾಲೆ ಶಾಲೆಗೆ, ಕೂಲಿಯಿಂದ ಶಾಲೆಗೆ' ಇವುಗಳಲ್ಲದೆ ಟೆಂಟ್‌ಶಾಲೆ, ಸಂಚಾರಿ ಶಾಲೆ, ಚಿಣ್ಣರ ಅಂಗಳ, ಆರುತಿಂಗಳ ವಸತಿ ಶಾಲೆ ಸೇತುಬಂಧ ಕೋರ್ಸ್‌ಗಳಂತಹ ಕಾರ್ಯಕ್ರಮಗಳನ್ನು ಸರ್ಕಾರ ಆರಂಭಿಸಿದ್ದರೂ ಮಕ್ಕಳಿಲ್ಲದೆ ಶಾಲೆ ಮುಚ್ಚುವುದು ಮಾತ್ರ ತಪ್ಪುತ್ತಿಲ್ಲ.ಆಂಗ್ಲ ಭಾಷಾ ವ್ಯಾಮೋಹದಿಂದ ಪೋಷಕರು ಮಕ್ಕಳನ್ನು ನಗರ ಪ್ರದೇಶಕ್ಕೆ ಕಳುಹಿಸುತ್ತಿರುವುದರಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಮಕ್ಕಳ ಸಂಖ್ಯೆ ಕ್ಷೀಣಿಸದಂತೆ ನೋಡಿಕೊಳ್ಳುವತ್ತ ಸರ್ಕಾರ ಗಮನ ಹರಿಸಬೇಕಾಗಿದೆ ಎಂಬುದು ನಾಗರಿಕರ ಒತ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry