ಮಕ್ಕಳು ಶಾಲೆಯಿಂದ ಹೊರಗೆ: ಆತಂಕ
ಶಿವಮೊಗ್ಗ: ತಂದೆ-ತಾಯಿ ಅಪಾರ ನಿರೀಕ್ಷೆಗಳನ್ನು ಇಟ್ಟು, ಹೊಟ್ಟೆ-ಬಟ್ಟೆ ಕಟ್ಟಿ ಓದಿಸುತ್ತಿದ್ದಾರೆ. ಮಕ್ಕಳು ತಮ್ಮ ಮೇಲಿರುವ ಜವಾಬ್ದಾರಿ ಅರಿತುಕೊಳ್ಳಬೇಕಾಗಿದೆ ಎಂದು ಎಂದು ಶಾಸಕ ಕೆ.ಬಿ.ಪ್ರಸನ್ನಕುಮಾರ್ ಕಿವಿಮಾತು ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಸ್ಟುಡೆಂಟ್ ಇಸ್ಲಾಮಿಕ್ ಆರ್ಗನೇಷನ್ ಆಫ್ ಇಂಡಿಯಾ ಜಿಲ್ಲಾ ಶಾಖೆ ಶನಿವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮ್ಮೇಳನ ಮತ್ತು ಪ್ರತಿಭಾವಂತಹ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಮ್ಮ ಮಕ್ಕಳ ಬದುಕು ಹಸನನಾಗಬೇಕು ಎಂದು ತಂದೆ-ತಾಯಿಗಳು ಕಷ್ಟದಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಇದರ ಅರಿವು ಮಕ್ಕಳಿಗೆ ಇರಬೇಕು. ಕಠಿಣ ಅಭ್ಯಾಸ ಮಾಡಿ, ಸಾಧನೆ ಮಾಡುವ ಮೂಲಕ ಪೋಷಕರ ನಂಬಿಕೆ ಉಳಿಸಬೇಕು ಎಂದರು.
ಅತಿಥಿಗಳಾಗಿದ್ದ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ನಜೀಬುಲ್ಲಾ ಖಾನ್ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿರುವುದು ಸಂತೋಷದ ಸಂಗತಿ. ಆದರೆ, ಇದೇ ಸಮುದಾಯದ ಬಾಲಕರು ಶಾಲೆಯಿಂದ ಹೊರಗೆ ಉಳಿಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ರೀತಿಯ ಪ್ರೋತ್ಸಾಹಧನಗಳನ್ನು ನೀಡುತ್ತದೆ. ಅದನ್ನು ಸಮುದಾಯದ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.
ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೇಷನ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಜಮೀನುಲ್ಲಾ ಹಸನ್ ಮಾತನಾಡಿ, ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರಿಂಗ್ ಆಗಬೇಕೆಂದು ತಂದೆ-ತಾಯಿ ಬಯಸುತ್ತಾರೆ. ಆದರೆ, ಇವರೆಡನ್ನೂ ಬಿಟ್ಟು ಸಾಧನೆ ಮಾಡಲು ಉಳಿದ ಕ್ಷೇತ್ರಗಳಿವೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಹೇಳಿದರು.
ಜಮಾತೆ ಪ್ರಾದೇಶಿಕ ಸಂಘಟಕ ಎ.ಜಿ.ಹಮೀದ್ ಉಬ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.