ಮಂಗಳವಾರ, ಮೇ 11, 2021
20 °C

ಮಕ್ಕಳು ಹೇಳಿದ ಪರಿಸರ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕಲ್ಪನೆಗಳಿಗೆ ಬಣ್ಣ ಹಚ್ಚಿ ತಮ್ಮದೇ ವಿವರಣೆ ನೀಡಿದರು. ಬಾಲ್ಯಕ್ಕೂ ಮಿಗಿಲಾದ ತಾತ್ವಿಕತೆಯನ್ನು ಚಿತ್ರಗಳ ಮೂಲಕ ತೆರೆದಿಟ್ಟರು. ಒಬ್ಬಬ್ಬರದೂ ಒಂದೊಂದು ನಿರೂಪಣೆ, ಪರಿಸರ ಹಾನಿಯಿಂದ ಏನೆಲ್ಲಾ ಅಪಾಯ, ಅದರ ಉಳಿವಿಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಅವರ ಬಿಡಿಸಿದ್ದ ಚಿತ್ರಗಳೇ ಸಾರಿ ಹೇಳಿದವು.- ಇದು, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತುಮಕೂರು ವಿಜ್ಞಾನ ಕೇಂದ್ರ, ವಿಜ್ಞಾನ  ಬಿಂದು ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಶುಕ್ರವಾರ ವಿಶ್ವ ಓಜೋನ್ ದಿನಾಚರಣೆ ಅಂಗವಾಗಿ ಪೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ನಡೆದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯ.ವಿಶ್ವ ಓಜೋನ್ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ `ಓಜೋನ್ ಪದರ ಸಂರಕ್ಷಣೆಯಲ್ಲಿ ನಾವೂ ನೀವೂ~ ಎಂಬ ವಿಷಯದ ಮೇಲೆ ಚಿತ್ರ ಬಿಡಿಸಲು ತಿಳಿಸಲಾಗಿತ್ತು. ವಿಷಯ ಒಂದೇ ಆದರೂ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಲ್ಪನೆಗಳು ವೈವಿಧ್ಯಮಯವಾಗಿದ್ದವು.ಅಷ್ಟು ಹುಡುಗರಲ್ಲಿ ಗಮನಸೆಳೆದಿದ್ದರೆಂದರೆ, ವಿದ್ಯಾರ್ಥಿಯೊಬ್ಬ ತಾಜ್ ಮಹಲ್ ಮೇಲೆ ಹಾದು ಹೋಗುವ ವಿಮಾನ ಚಿತ್ರಿಸಿ ವಿಮಾನಗಳಿಂದ ತಾಜ್ ಮಹಲ್ ಕಟ್ಟಡದ ಮೇಲೆ ಮತ್ತು ಅದರ ವಿನ್ಯಾಸದ ಮೇಲಾಗುವು ದುಷ್ಪರಿಣಾಮ ಚಿತ್ರಿಸಿದ್ದು. ಇನ್ನು, ಗುಂಡನೆ ಭೂಮಿಗೆ ಗೊಂಬೆ ರೂಪ ನೀಡಿ ಅದರ ಎರಡು ಕಣ್ಣುಗಳಿಂದ ಜಾರುತ್ತಿದ್ದ ಕಣ್ಣೀರ ಹನಿಗಳ ಚಿತ್ರ ಮಾನವ ತನ್ನ ದುರಾಸೆಯಿಂದ ಭೂಮಿಯ ಮೇಲೆ ಮಾಡುತ್ತಿರುವ ದಾಳಿ ಅರ್ಥೈಸುವಂತಿತ್ತು.ಮರ ಕಡಿಯುತ್ತಿರುವುದು, ಕಾರ್ಖಾನೆಗಳ ಸಾಲು ಆಕಾಶಕ್ಕೆ ಹೊಗೆ ಉಗುಳುತ್ತಿರುವುದು, ಆಧನಿಕ ಜೀವನದ ಭಾಗವಾಗಿರುವ ರೆಫ್ರಿಜರೇಟರ್ ಇನ್ನಿತರ ಉಪಕರಣಗಳು ಹೊರಸೂಸುವ ಅನಿಲಗಳಿಂದ ಓಜೋನ್ ಪದರಕ್ಕೆ ಆಗುತ್ತಿರುವ ಹಾನಿಯನ್ನು ಮಕ್ಕಳು ಚಿತ್ರಿಸಿದ್ದರು.ಒಟ್ಟಾರೆ, ನಗರೀಕರಣ, ಯಾಂತ್ರೀಕರಣದಿಂದ ಪರಿಸರಕ್ಕೆ ಮಾರಕವಾಗುವಂತಹ ಬೆಳವಣಿಗೆಗಳನ್ನು ಬಣ್ಣಗಳು ಹಾಗೂ ರೇಖೆಗಳಲ್ಲಿ ಹಿಡಿದಿಡುವ ಮೂಲಕ ಜನತೆಗೆ ಸೈಕಲ್ ಬಳಕೆ, ಸೋಲಾರ್ ಅಳವಡಿಕೆ, ಹೆಚ್ಚು ಗಿಡ ಬೆಳೆಸುವ ಮೂಲಕ ಓಜೋನ್ ಪದರ ರಕ್ಷಣೆ ಸಾಧ್ಯ ಎಂಬ ಸಂದೇಶವನ್ನು ಮಕ್ಕಳು ತಮ್ಮ ಕಲಾಕೃತಿಗಳ ಮೂಲಕ ನೀಡಿದರು.ಒಂದಷ್ಟು ವಿದ್ಯಾರ್ಥಿಗಳು ಪಠ್ಯ ಪುಸ್ತಕ ಆಧರಿಸಿ ಓಜೋನ್ ಪದರಕ್ಕೆ ಆಗುತ್ತಿರುವ ಹಾನಿಯನ್ನು ವೈಜ್ಞಾನಿಕವಾಗಿ ಚಿತ್ರಿಸಿದ್ದರೆ, ಕೆಲವು ವಿದ್ಯಾರ್ಥಿಗಳು ದಿನನಿತ್ಯ ತಮ್ಮ ಅನುಭವಕ್ಕೆ ನಿಲುಕುವ ಘಟನೆಗಳನ್ನು ತಮ್ಮದೇ ಕಲ್ಪನೆಗಳಲ್ಲಿ ಹಿಡಿದಿಟ್ಟಿದ್ದರು. ಆದರೆ, ಕೆಲವು ವಿದ್ಯಾರ್ಥಿಗಳಿಗೆ ಯಾವ ವಿಷಯದ ಮೇಲೆ ಚಿತ್ರ ಬಿಡಿಸಬೇಕು ಎಂಬುದು ತಿಳಿಯದೇ ಗಿಡ, ಮರ, ರಸ್ತೆ ಹೀಗೆ ಮನಸ್ಸಿಗೆ ತೋಚಿದ ಚಿತ್ರಗಳನ್ನು ರಚಿಸಿದ್ದರು. ಕೇಳಿದರೆ, ನಮಗೆ ಯಾರು ಯಾವ ವಿಷಯ ಅಂತ ಹೇಳಿಲ್ಲ ಎಂದು ಮಗ್ಧತೆಯಿಂದ ನುಡಿದರು.ಹೆಚ್ಚಾಗಿ ಮಕ್ಕಳ ಎಲ್ಲ ಮಕ್ಕಳ ಚಿತ್ರಕಲೆ ಆರಂಭವಾಗುವುದೇ ಒಂದು ಮನೆ, ಬೆಟ್ಟಸಾಲುಗಳು ನಡುವೆ ಉದಯಿಸುತ್ತಿರುವ ಸೂರ್ಯ, ರೈತ, ನೇಗಿಲು. ಗ್ರಾಮ್ಯ ಪರಿಸರ. ಬಣ್ಣದೊಂದಿಗಿನ ಆಟ, ಪಾಠ ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವಲ್ಲಿ ಇಂತಹ ಕಾರ್ಯಕ್ರಮ ಅನುಕೂಲ ಎಂದು ಶಿಕ್ಷಕ ಮೋಹನ್ ತಿಳಿಸಿದರು.ಕಲ್ಪನೆಗಳನ್ನು ಬಣ್ಣದಲ್ಲಿ, ರೇಖೆಗಳಲ್ಲಿ ಹಿಡಿದಿಡು ವುದು ಭಾಷೆಗೂ ಮೊದಲಿನಿಂದ ಮಾನವನ ಅಭಿವ್ಯಕ್ತಿಗೆ ಇರುವ ಸಾಧನ. ಇದು ಪರಿಣಾಮಕಾರಿಯೂ ಹೌದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.