ಭಾನುವಾರ, ಮೇ 16, 2021
27 °C

ಮಕ್ಕಳೊಂದಿಗೆ ಮಕ್ಕಳಾಗಿ

-ಮಹಾವೀರ ಹಾಲೆಮನೆ Updated:

ಅಕ್ಷರ ಗಾತ್ರ : | |

ಮಕ್ಕಳೊಂದಿಗೆ ಮಕ್ಕಳಾಗಿ

ಮಕ್ಕಳನ್ನು ದೇವರು ಎನ್ನುತ್ತೇವೆ. ನಾವು ಏನಾದರೊಂದು ಕೆಲಸ ಮಾಡುತ್ತಲೋ ಅಥವಾ ಏನನ್ನೂ ಮಾಡದೆಯೋ ಕಾಲ ಕಳೆದುಬಿಡಬಹುದು. ಆದರೆ ಮಕ್ಕಳು ಮಾತ್ರ ಸದಾ ಯಾವುದಾದರೊಂದು ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಅದರಲ್ಲೂ ಆರು ವರ್ಷಕ್ಕಿಂತ ಚಿಕ್ಕವರಿಗೆ ಇಂಥದ್ದೇ ಕೆಲಸ ಮಾಡಬೇಕೆಂದೇನೂ ಇರುವುದಿಲ್ಲ. ಒಟ್ಟಿನಲ್ಲಿ ಯಾವುದಾದರೊಂದು ಕಾರ್ಯದಲ್ಲಿ ಅವರು ತಲ್ಲೆನರಾಗಿರುತ್ತಾರೆ.ಮಕ್ಕಳು ಹಾಗೇ ಇರಬೇಕು ಕೂಡ. ಆದರೆ ತಂದೆ-ತಾಯಿ ಕ್ಷಣಕ್ಷಣಕ್ಕೂ `ಸುಮ್ಮನಿರು, ಸುಮ್ಮನಿರು' ಎನ್ನುತ್ತಿದ್ದರೆ ಅವರೇನು ಮಾಡಬೇಕು? ಸುಮ್ಮನೆ ಬೀಗ ಹಾಕಿಡಲು ಮಕ್ಕಳೇನು ಯಾವುದೋ ಜಡ ವಸ್ತುವಲ್ಲ.ತಮ್ಮ ಸುತ್ತಮುತ್ತಲಿನ ಲೋಕವನ್ನು ಪರಿಚಯಿಸಿಕೊಳ್ಳುತ್ತಿರುವ ಲವಲವಿಕೆಯ ಜೀವಂತ ಮಕ್ಕಳು ಅವರು. ಮಕ್ಕಳಿಗೆ ಸ್ವಲ್ಪ ಮಟ್ಟಿನ ಭಯ ಇರಬೇಕು.ಹಾಗಾಗಿ ಸಮಯ ಸಂದರ್ಭ ನೋಡಿಕೊಂಡು ಗದರಿಸಿದರೆ ಪರವಾಗಿಲ್ಲ. ಆದರೆ ಕೆಲವು ತಂದೆ ತಾಯಿಯಂತೂ ಶನಿ, ನಾಯಿ, ಗೂಬೆ, ಕತ್ತೆ, ಮಂಗ, ದರಿದ್ರ ಎಂದೆಲ್ಲ ಬೈಯುವುದು ಎಷ್ಟು ಸರಿ? ನಮ್ಮ ಉದರದಿಂದಲೇ ಬಂದ ಜೀವ ಇಂತಹ ಪ್ರಾಣಿಯಾಗಲು ಹೇಗೆ ಸಾಧ್ಯ?ಉಜ್ವಲ ಭವಿಷ್ಯ ಹೊತ್ತ ಆ ಮಗು ಶನಿ, ದರಿದ್ರವಾದೀತೇ? ಇನ್ನು ಕೆಲವರು `ಬೇಗ ಬೊಗಳು' ಎನ್ನುತ್ತಾರೆ. `ಹೋಗಿ ಸಾಯಿ' `ತಿಂದು ಸಾಯಿ' ಎನ್ನುವವರೂ ಇದ್ದಾರೆ.ನಮ್ಮ ಕೋಪ ಅಥವಾ ಒತ್ತಡವನ್ನು ಮಕ್ಕಳ ಮೇಲೆ ಹರಿಯಬಿಡುವುದು ತಪ್ಪಲ್ಲವೇ? ಒಂದು ನೆನಪಿರಲಿ. ನಾವು ಮಾಡಿದ್ದನ್ನು ಮಕ್ಕಳು ಮಾಡುತ್ತಾರೆ ವಿನಃ ನಾವು ಹೇಳಿದ್ದನ್ನು ಮಾಡುವುದಿಲ್ಲ.ಮುಂದೊಂದು ದಿನ ಅದೇ ನಮ್ಮ ಮಕ್ಕಳು ನಾವೇ ಬೈದು ಕಲಿಸಿಕೊಟ್ಟ ಶಬ್ದಗಳನ್ನು ನಮ್ಮ ಮೇಲೇ ಪ್ರಯೋಗಿಸಿದರೆ, ಅದರಿಂದ ನಮ್ಮ ಮೇಲಾಗುವ ಪರಿಣಾಮವನ್ನೂ ನಾವು ಯೋಚಿಸಬೇಕಲ್ಲವೇ? ನಾವು ಮಾಡುತ್ತಿರುವ ಕೆಲಸಕ್ಕೆ, ನಿದ್ರೆಗೆ, ಮೋಜಿಗೆ, ಊಟಕ್ಕೆ, ಪ್ರವಾಸಕ್ಕೆ, ಟಿ.ವಿ. ನೋಡುವುದಕ್ಕೆ ಮಕ್ಕಳಿಂದ ತೊಂದರೆ ಸಹಜ. ಇದನ್ನು ತ್ಯಾಗ ಮಾಡಲು ಸಿದ್ಧರಿರುವವರು, ಸಹನೆಯಿಂದ ಸಹಿಸಿಕೊಳ್ಳುವವರು ಮಾತ್ರ ತಂದೆ-ತಾಯಿಯಾಗಲು ಯೋಗ್ಯರು.ಮಕ್ಕಳು ತಪ್ಪು ಮಾಡುತ್ತಾರೆ. ಆ ತಪ್ಪಿನಿಂದ ಕಲಿಯುತ್ತಾರೆ ಕೂಡ. ಆದರೆ ನಾವೇ ತಪ್ಪು ದಾರಿ ಕಲಿಸಿಕೊಟ್ಟರೆ ಗತಿಯೇನು? ಮಕ್ಕಳಿಗೆ ಧೈರ್ಯ ತುಂಬುವ ಮಾತನಾಡಬೇಕು. ನಮ್ಮ ಸಮಯವನ್ನು ಅವರೊಟ್ಟಿಗೆ ಆಟವಾಡಿ, ಅವರಂತೆ ನಟಿಸಿ, ಆ ಮಗುವಿನೊಟ್ಟಿಗೆ ತೊಡಗಿಸಿಕೊಂಡು ಪ್ರೀತಿ ತೋರಿಸಬೇಕು.ಈಗಿನ ಮಕ್ಕಳು ಬಲು ಬುದ್ಧಿವಂತರು. ಅವರನ್ನು ಸ್ವಲ್ಪ ನಿರ್ಲಕ್ಷಿಸಿದರೂ ಅವರಿಗೆ ಗೊತ್ತಾಗಿಬಿಡುತ್ತದೆ. `ಮಮ್ಮೀನ ನಿಧಾನವಾಗಿ ಕರೀತೀಯ. ನನ್ಯಾಕೆ ಜೋರಾಗಿ ಗಟ್ಟಿ ಧ್ವನಿಯಿಂದ ಕರೀತೀಯ' ಎನ್ನುತ್ತಾಳೆ ನನ್ನ ನಾಲ್ಕು ವರ್ಷದ ಮಗಳು.ಪ್ರೀತಿಯಿಂದ ಶಿಸ್ತು ಕಲಿಸಿ. ಮನೆಯಲ್ಲಿನ ಶಿಸ್ತು, ದೊಡ್ಡವರ ಶೈಲಿ, ವಾಡಿಕೆ, ಮಾತು, ತಂದೆ-ತಾಯಿ ನಡುವಿನ ಉತ್ತಮ ಸಂಬಂಧ, ನಂಬಿಕೆಗಳು ಇಂದಿನ ಮಕ್ಕಳನ್ನು ನಾಳೆಯ ಪ್ರಜ್ಞಾವಂತ ಪ್ರಜೆಗಳನ್ನಾಗಿಸುತ್ತವೆ. ಆ ನಿಟ್ಟಿನಲ್ಲಿ ನಮ್ಮೆಲ್ಲರ ತಾಳ್ಮೆ ಮತ್ತು ಪ್ರಯತ್ನವಷ್ಟೇ ಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.