ಬುಧವಾರ, ಜೂನ್ 16, 2021
22 °C

ಮಕ್ಕಳ ಅಜ್ಜಿ ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುದೂರು: ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಹೆತ್ತವರನ್ನೇ ಮಕ್ಕಳು ದೂರ ತಳ್ಳುತ್ತಿದ್ದಾರೆ. ವೃದ್ಧರು ಎಂದರೆ ಅಸಡ್ಡೆಯ ಭಾವ ಬಲಿಯುತ್ತಿದೆ. ಆದರೆ ಇದಕ್ಕೆಲ್ಲ ಅಪವಾದ ಎಂಬಂತೆ ಪ್ರಾಥಮಿಕ ಶಾಲಾ ಮಕ್ಕಳು ಅನಾಥ ಅಜ್ಜಿಗೆ ಪುಟ್ಟ ಮನೆಯನ್ನು ಕಟ್ಟಿಕೊಟ್ಟು ಮಾನವೀಯತೆ ಮೆರದ ಅಪರೂಪದ ಘಟನೆ ಮಾಗಡಿ ತಾಲ್ಲೂಕಿನ ಹೊಸಪಾಳ್ಯ ಸಮೀಪದ ಜನತಾ ಕಾಲೊನಿಯಲ್ಲಿ ನಡೆದಿದೆ.88 ವರ್ಷದ ದೇವಿರಮ್ಮ ಅವರನ್ನು ಮಕ್ಕಳು ದೂರ ತಳ್ಳಿದರು. ಈಕೆಯ ಗಂಡನ ಹೆಸರಿನಲ್ಲಿದ್ದ 2 ಎಕರೆ ಜಮೀನನ್ನು ಸಂಬಂಧಿಗಳು ಕಿತ್ತುಕೊಂಡು ಅಜ್ಜಿಯನ್ನು ನಿರ್ಗತಿಕಳನ್ನಾಗಿ ಮಾಡಿದರು. ದುಡಿದು ತಿನ್ನಲು ಶಕ್ತಿ ಇಲ್ಲದ  ದೇವಿರಮ್ಮ ಊರೂರು ಅಲೆದು ಭಿಕ್ಷೆ ಬೇಡಿ ಜೀವನ ನಡೆಸಿದರು. ಈಗೆ ಭಿಕ್ಷೆ ಬೇಡುತ್ತಾ ಹೊಸಪಾಳ್ಯ ಸಮೀಪದ ಜನತಾ ಕಾಲೊನಿ ಬಳಿ ಗುಡಿಸಲು ಹಾಕಿಕೊಂಡು ವಾಸಿಸತೊಡಗಿದರು. ಅಜ್ಜಿ ವಾಸಿಸುತ್ತಿದ್ದ ಗುಡಿಸಲಿನಿಂದ ಸ್ವಲ್ಪದೂರದಲ್ಲಿಯೇ ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಶಾಲೆಯಲ್ಲಿ ತಯಾರಾದ ಮಧ್ಯಾಹ್ನದ ಬಿಸಿಯೂಟವನ್ನು ಶಿಕ್ಷಕರಿಂದ ಪಡೆದು ನೀಡುತ್ತಿದ್ದರು. ಅಲ್ಲದೆ ಅಜ್ಜಿಯ ಯೋಗಕ್ಷೇಮ ವಿಚಾರಿಸುತ್ತಾ ಈಕೆಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿದರು.ಒಂದು ದಿನ ಜೋರಾಗಿ ಸುರಿದ ಮಳೆಯಲ್ಲಿ ಅಜ್ಜಿ ನೆನೆಯುತ್ತಿದ್ದನ್ನು ನೋಡಿ ಮಕ್ಕಳು ಕಣ್ಣೀರಿಟ್ಟರು. ಮರುದಿನ ಶಿಕ್ಷಕಿ ವಿಜಯ ಕುಮಾರಿ ಅವರ ಬಳಿ ಅಜ್ಜಿಯ ಸ್ಥಿತಿಯನ್ನು ಹೇಳಿದರು. ತಕ್ಷಣ ಶಾಲೆಯ ಶಿಕ್ಷಕರು, ಊರಿನ ಪ್ರಮುಖರು ಒಂದೆಡೆ ಸೇರಿ ಅಜ್ಜಿಗೆ ಮನೆ ಕಟ್ಟಿಕೊಡುವ ಬಗ್ಗೆ ತೀರ್ಮಾನಿಸಿದರು. ಶಿಕ್ಷಕಿ ವಿಜಯ ಕುಮಾರಿ ಅವರು ತನ್ನ ತಿಂಗಳ ಸಂಬಳದ ಅರ್ಧ ಭಾಗವನ್ನು `ಅಜ್ಜಿ ಮನೆ~ಗೆ ಮೀಸಲಿಟ್ಟರು. ಮಣ್ಣು, ಇಟ್ಟಿಗೆ, ಕಲ್ಲು, ನೀರು ಹೀಗೆ ಮನೆ ನಿರ್ಮಾಣಕ್ಕೆ ಅಗತ್ಯ ವಸ್ತುಗಳನ್ನು ಮಕ್ಕಳು ಸಂಗ್ರಹಿಸಿದರು.ಶಾಲಾ ಮಕ್ಕಳು ಮತ್ತು ಶಿಕ್ಷಕರ ಶ್ರಮದ ಫಲದಿಂದ ಚಿಕ್ಕ, ಚೊಕ್ಕವಾದ ಮನೆಯನ್ನು ಅಜ್ಜಿಗೆ ನಿರ್ಮಿಸಲಾಯಿತು. ಅಜ್ಜಿಗೆ ಶಾಲೆಯ ಮಕ್ಕಳ ಬಗ್ಗೆ ಭಾರಿ ಪ್ರೀತಿ. ತಮ್ಮ ಜೀವನವನ್ನು ಮಕ್ಕಳೊಂದಿಗೆ ಕಳೆಯಲು ಈಕೆ ನಿರ್ಧರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.