ಮಕ್ಕಳ ಕಂಬನಿಗಿಲ್ಲಿ ಬೆಲೆಯೇ ಇಲ್ಲ...

7
`ನಾನು ಹೋಗಲ್ಲ... ಪ್ಲೀಸ್ ಬಿಟ್ಟು ಬಿಡಿ'

ಮಕ್ಕಳ ಕಂಬನಿಗಿಲ್ಲಿ ಬೆಲೆಯೇ ಇಲ್ಲ...

Published:
Updated:

ತುಮಕೂರು: ಪಾವಗಡದಲ್ಲಿ ಸೋಮವಾರ ಬೆಳಕಿಗೆ ಬಂದ ಮಾನವ ಸಾಗಣೆ ಬರದ ನಾಡಿನ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಕಾರ್ಯಾಚರಣೆಯ ಹಿನ್ನೆಲೆಯನ್ನು ಬೆಂಗಳೂರು ಓಯಸಿಸ್ ಸ್ವಯಂಸೇವಾ ಸಂಸ್ಥೆಯ ಅನಿತಾ ಕೈಸರ್ `ಪ್ರಜಾವಾಣಿ'ಗೆ ಹೀಗೆ ವಿವರಿಸಿದರು.

`ಇವ್ನ ನನ್ನ ಅಪ್ಪ ಅಲ್ಲ. ನಂಗೆ ಅಮ್ಮ ಬೇಕು- ಅಪ್ಪ ಬೇಕು. ನನ್ನ ನಮ್ಮೂರಿಗೆ ಕಳಿಸಿ, ಪ್ಲೀಸ್...'ಎರಡು ವರ್ಷದ ಹಿಂದೆ ಬೆಂಗಳೂರಿನಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಪಾವಗಡ ಮೂಲದ 25 ಹೆಣ್ಣುಮಕ್ಕಳನ್ನು ರಕ್ಷಿಸಲಾಯಿತು. ಅವರಲ್ಲಿ ಹಿರಿಯಳಾದ 9 ವರ್ಷದ ಹುಡುಗಿಯೊಬ್ಬಳು ಮಕ್ಕಳ ಕಲ್ಯಾಣ ಸಮಿತಿ ಎದುರು ಅಲವತ್ತುಕೊಂಡಿದ್ದ ರೀತಿ ಇದು.ಆಕೆಯ ತಂದೆಯಂತೆ ನಟನೆ ಮಾಡುತ್ತಿದ್ದ ಏಜೆಂಟನನ್ನು `ವಿಚಾರಣೆ'ಗೆ ಒಳಪಡಿಸಿದಾಗ ಮಕ್ಕಳ ಸಾಗಣೆಯ ವಿಶ್ವರೂಪ ದರ್ಶನವೇ ಆಗಿತ್ತು. ಎಲ್ಲ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಅವರ ಊರುಗಳಿಗೆ ಕಳಿಸಿಕೊಟ್ಟರು. ಈ ಘಟನೆ ನಡೆದ 6 ತಿಂಗಳ ನಂತರ ಮಕ್ಕಳು ಏನಾಗಿದ್ದಾರೆ ಎಂಬ ಫಾಲೋಅಪ್‌ಗೆ ಸಂಸ್ಥೆ ಯತ್ನಿಸಿತು. ಆಗ ಈ ಯಾವ ಮಕ್ಕಳೂ ಶಾಲೆಯಲ್ಲಿಯೂ ಇಲ್ಲ- ಹೆತ್ತವರ ಬಳಿಯೂ ಇಲ್ಲ ಎಂಬ ಸಂಗತಿ ಬೆಳಕಿಗೆ ಬಂತು.`ಹಾಗಿದ್ದರೆ ಬರದ ನಾಡಿನ ಮಕ್ಕಳು ಎಲ್ಲಿಗೆ ಹೋದರು?' ಈ ಪ್ರಶ್ನೆಯ ಬೆನ್ನು ಹತ್ತಿದಾಗ ಕಾಣಿಸಿದ್ದು ತಿರುಪ್ಪೂರು ಹಾದಿ.

ಕಳೆದ ಡಿಸೆಂಬರ್ 2012ರಲ್ಲಿ 14ರಿಂದ 18 ವರ್ಷ ವಯಸ್ಸಿನ 12 ಹುಡುಗಿಯರನ್ನು ತಿರುಪ್ಪೂರಿಗೆ ಸಾಗಿಸುತ್ತಿರುವ ಮಾಹಿತಿ ಆಧರಿಸಿ ರಕ್ಷಣಾ ಕಾರ್ಯಾಚರಣೆ ನಡೆಯಿತು. ಪಾವಗಡದಿಂದ ಹಿಂದೂಪುರಕ್ಕೆ ಮಕ್ಕಳನ್ನು ಕರೆದೊಯ್ದ ಏಜೆಂಟರು ಅಲ್ಲಿಂದ ರೈಲು ಮೂಲಕ ತಿರುಪ್ಪೂರು ಹಾದಿ ಹಿಡಿದರು.ಹುಡುಗಿಯರನ್ನು ಕರೆದೊಯ್ಯುತ್ತಿದ್ದ ಐವರು ಏಟೆಂಟರು ರೈಲಿನಲ್ಲಿಯೇ ಹೆಣ್ಣು ಮಕ್ಕಳೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದರು. ಹೆಣ್ಣು ಮಕ್ಕಳನ್ನು ಗೋಳು ಹೋಯ್ದುಕೊಳ್ಳದಂತೆ ತಾಕೀತು ಮಾಡಿದ ಸಹ ಪ್ರಯಾಣಿಕರು ಒಂದು ಹಂತದಲ್ಲಿ ಧರ್ಮದೇಟು ನೀಡಲು ಮುಂದಾಗಿದ್ದರು.ತಿರುಪ್ಪೂರು ತಲುಪಿದ ತಕ್ಷಣ ಪೊಲೀಸರ ನೆರವಿನೊಂದಿಗೆ ಎಲ್ಲ ಹೆಣ್ಣು ಮಕ್ಕಳನ್ನು ರಕ್ಷಿಸಿ ಏಜೆಂಟರನ್ನು ಬಂಧಿಸಲಾಯಿತು. ಆದರೆ ಮಿಲ್ ಮಾಲೀಕರ ಪ್ರಬಲ ಲಾಬಿಯಿಂದ ಕೇಸ್ ದಾಖಲಾಗಲೇ ಇಲ್ಲ. ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿಯು ಹೆಣ್ಣು ಮಕ್ಕಳನ್ನು `ಪೋಷಕರು' ಎಂದು ಸ್ಥಳಕ್ಕೆ ಬಂದವರ ಕೈಗೆ ಒಪ್ಪಿಸಿ ಕೈ ತೊಳೆದುಕೊಂಡಿತು.ಆದರೆ ಫಾಲೋಅಪ್ ಸಂದರ್ಭ ಈ ಹೆಣ್ಣು ಮಕ್ಕಳ ಇತ್ಯೋಪರಿಯೂ ಪತ್ತೆಯಾಗಲಿಲ್ಲ. ಈ ಪ್ರದೇಶದಲ್ಲಿ ಸುತ್ತಾಡಿದಾಗ ಮಕ್ಕಳನ್ನು ಕಾರ್ಖಾನೆ ಕೆಲಸಕ್ಕೆ ದೂಡುವ ಜಾಲ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿರುವ ಸಂಗತಿ ಬೆಳಕಿಗೆ ಬಂತು.ಮತ್ತೊಂದು ಮಾನವ ಸಾಗಣೆ ಏ.22ರಂದು ನಡೆಯಲಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರ ನೆರವಿನೊಂದಿಗೆ ಸರ್ಕಾರೇತರ ಸಂಸ್ಥೆಯ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಿದರು.ಊರು ಬಿಟ್ಟು ಹೋಗಲು ಇಷ್ಟವಿಲ್ಲದ ಹೆಣ್ಣುಮಕ್ಕಳ ಅಳುತ್ತಲೇ `ನಾನು ಹೋಗಲ್ಲ... ನನ್ನನ್ನು ಬಿಟ್ಟು ಬಿಡಿ ಪ್ಲೀಸ್' ಎಂದು ಗೋಗರೆದ ಮಾತು ಈ ಕ್ಷಣಕ್ಕೂ ಕಿವಿಯಲ್ಲಿ ಅನುರಣಿಸುತ್ತಿದೆ.ಇದು ಇಲ್ಲಿಗೆ ನಿಲ್ಲದು...

ಪಾವಗಡದ ಸ್ಥಿತಿ ಸುಧಾರಿಸುವವರೆಗೆ ಇಂಥ ಪ್ರಕರಣಗಳು ನಿಲ್ಲುವುದಿಲ್ಲ. ಸತತ 8ನೇ ವರ್ಷದ ಬರಗಾಲದಿಂದ ನಲುಗಿ ಹೋಗಿರುವ ಪಾವಗಡ ತಾಲ್ಲೂಕಿನಲ್ಲಿ ಜನರಿಗೆ ಉದ್ಯೋಗ ನೀಡುವ ಕಾರ್ಖಾನೆಗಳನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಪಾವಗಡದ ಜನರಿಗೆ ಹಲವು ಕೌಶಲ ಅಭಿವೃದ್ಧಿ ತರಬೇತಿ ನೀಡಿ ಬದುಕಿಗೆ ದಾರಿ ಮಾಡಿಕೊಡಬೇಕು. ಪೋಷಕರ ಆರ್ಥಿಕ ಸ್ಥಿತಿ ಸುಧಾರಿಸದೆ ಮಕ್ಕಳ ಭವಿಷ್ಯ ಬೆಳಗುವುದ್ಲ್ಲಿಲ ಎನ್ನುತ್ತಾರೆ ಅನಿತಾ ಕನ್ನಯ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry