ಭಾನುವಾರ, ಏಪ್ರಿಲ್ 11, 2021
23 °C

ಮಕ್ಕಳ ಕಲ್ಯಾಣ ಸಮಿತಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ಮಕ್ಕಳ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಕಾರ್ಯನಿರ್ವಹಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 35 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಎ.ಜಿ.ಸುಧಾಕರ್ ತಿಳಿಸಿದರು.ಪಟ್ಟಣದಲ್ಲಿ ಶನಿವಾರ ನಡೆದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬಾಲ್ಯವಿವಾಹ, ಮಕ್ಕಳ ಮೇಲೆ ದೌರ್ಜನ್ಯ, ಭಿಕ್ಷಾಟನೆ, ಲೈಂಗಿಕ ಕಿರುಕುಳ, ನವಜಾತ ಶಿಶುಪತ್ತೆ, ಅನಾಥ ಮಕ್ಕಳ ಪತ್ತೆ ಸೇರಿದಂತೆ ಒಟ್ಟು 35 ಪ್ರಕರಣಗಳು ಸಮಿತಿಯಲ್ಲಿ ದಾಖಲಾಗಿದ್ದವು. ಅದರಲ್ಲಿ 33 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದರು.ನವಜಾತ ಶಿಶುಗಳು ಪತ್ತೆಯಾದಾಗ ಅವುಗಳ ಆರೋಗ್ಯ ಆರೈಕೆ ಮಾಡಿ ಬೆಂಗಳೂರಿನ ಶಿಶುಮಂದಿರಕ್ಕೆ ಸಾಗಿಸುವ ಪ್ರಕ್ರಿಯೆಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಈ ಕುರಿತು  ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿಯೇ ಶಿಶು ಆರೈಕೆ ಕೇಂದ್ರ ಸ್ಥಾಪಿಸಲು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು.ಬಾಲ್ಯ ವಿವಾಹ ತಡೆಗಟ್ಟಲು ಬಿಗಿ ಕಾನೂನುಗಳಿವೆ. ಆದರೆ ಅವುಗಳ ಬಗ್ಗೆ ಹೆಚ್ಚಿನ ಅರಿವಿಲ್ಲ. ಶಾಲೆಗಳಲ್ಲಿ ಈ ಕುರಿತು ಅರಿವು ಮೂಡಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಪುರೋಹಿತರು, ಕಲ್ಯಾಣ ಮಂಟಪ ಮಾಲೀಕರು, ದೇಗುಲ ಸಮಿತಿಯವರಿಗೂ ಈ ಕುರಿತು ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.ತುರ್ತು ಸಂದರ್ಭದಲ್ಲಿ ಬಾಲ ಮಂದಿರದ ಅಧಿಕಾರಿಗಳನ್ನು 94482 09168 ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದೆ. ದೂರು ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ವಿವರಿಸಿದರು.ಕಲ್ಯಾಣ ಸಮಿತಿ ಅಧೀಕ್ಷಕಿ ತಾಜುನ್ನೀಸ್ಸಾ, ಸದಸ್ಯರಾದ ವಕೀಲೆ ಲಕ್ಷ್ಮಿ, ವೇದವ್ಯಾಸಮೂರ್ತಿ, ಮಕ್ಕಳ ರಕ್ಷಣಾ ಸಮಿತಿಯ ಮಂಜುನಾಥ್, ಮಮ್ತಾಜ್, ಸಿಡಿಪಿಒ ಪ್ರಕಾಶ್‌ಕುಮಾರ್, ಮೇಲ್ವಿಚಾರಕರಾದ ಲಕ್ಷ್ಮಿದೇವಮ್ಮ, ವಿಜಯ ನಿರ್ಮಲ ಮತ್ತು ಚಂದ್ರಿಕಾ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.