ಮಂಗಳವಾರ, ಅಕ್ಟೋಬರ್ 15, 2019
26 °C

ಮಕ್ಕಳ ಕಳ್ಳರೆಂಬ ಶಂಕೆ: ಪೊಲೀಸರಿಗೆ ಒದೆ

Published:
Updated:

ಹೊಳೆನರಸೀಪುರ/ಹಾಸನ: ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಹಿಡಿಯಲು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಹೊಳೆನರಸೀಪುರಕ್ಕೆ ಬಂದಿದ್ದ ಪೊಲೀಸರನ್ನು ಮಕ್ಕಳ ಕಳ್ಳರು ಎಂದು ಭಾವಿಸಿ ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಹೊಳೆನರಸೀಪುರದಲ್ಲಿ ಬುಧವಾರ ರಾತ್ರಿ ನಡೆದಿದೆ.`ಸಕ್ಕರೆ ತುಂಬಿಕೊಂಡು ಹೋದ ಚಾಲಕ ಸಕ್ಕರೆ ಸಹಿತ ಲಾರಿಯನ್ನೂ ಮಾರಿ ತಲೆಮರೆಸಿಕೊಂಡಿದ್ದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಈಚೆಗೆ ನಡೆದಿತ್ತು. ಆ ಚಾಲಕ ಹೊಳೆನರಸೀಪುರದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ವಿಚಾರ ಪೊಲೀಸರಿಗೆ ತಿಳಿದು ಆತನನ್ನು ಬಂಧಿಸಲು ಮುಫ್ತಿಯಲ್ಲಿ ಆರು ಮಂದಿ ಪೊಲೀಸರ ತಂಡ ಹೊಳೆನರಸೀಪುರಕ್ಕೆ ಬಂದಿತ್ತು. ಸ್ಥಳೀಯ ಪೊಲೀಸರಿಗೂ ಅವರು ಈ ಬಗ್ಗೆ ಮಾಹಿತಿ ನೀಡದೆ ಹುಡುಕಾಟದಲ್ಲಿ ತೊಡಗಿದ್ದರು. ಮೂರು ದಿನಗಳಿಂದ ಅವರು ಹೊಳೆನರಸೀಪುರದಲ್ಲೇ ಇದ್ದರು.ತಾಲ್ಲೂಕಿನ ಹತ್ತಿ ಚೌಡೇನಹಳ್ಳಿಯಲ್ಲಿ ಆರೋಪಿ ಇದ್ದಾನೆ ಎಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಅಲ್ಲಿಗೆ ಹೋಗಿದ್ದರು. ಆದರೆ ಈ ಅಪರಿಚಿತರನ್ನು ಕಂಡ ಸ್ಥಳೀಯರು ಇವರು ಮಕ್ಕಳ ಕಳ್ಳರೇ ಇರಬಹುದೆಂದು ಭಾವಿಸಿ ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದರು. ಪೊಲೀಸ್ ಇಲಾಖೆಯ ಗುರುತಿನ ಪತ್ರ ತೋರಿಸಿದರೆ ನಕಲಿ ಪತ್ರ ಎಂದು ಅದನ್ನೂ ಕಿತ್ತುಕೊಂಡು ಹಲ್ಲೆ ನಡೆಸಿದರು.ವಿಷಯ ತಿಳಿದ ನಗರಠಾಣೆ ಪೊಲೀಸರು ಗ್ರಾಮಕ್ಕೆ ತೆರಳುವಷ್ಟರಲ್ಲಿ ಅಲ್ಲಿ ನೂರಾರು ಜನ ಸೇರಿದ್ದರು.ರಾಣೆಬೆನ್ನೂರು ಪೊಲೀಸರನ್ನು ಬಿಡಿಸಲು ಮುಂದಾದರೆ ಗ್ರಾಮಸ್ಥರು ಮಾತಿನ ಚಕಮಕಿಗೆ ಇಳಿದರು. ಕೊನೆಗೆ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಸಿಟ್ಟಿಗೆದ್ದ ಜನರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಾಲ್ ನಾಯಕ್ ಅವರಿಗೆ ಗಾಯಗಳಾಗಿವೆ.ಪೊಲೀಸರ ಮೇಲೆ ಕಲ್ಲು ತೂರಾಟ ಹಾಗೂ ಪೊಲೀಸರ ಗುರುತಿನ ಪತ್ರ ಕಿತ್ತುಕೊಂಡ ಆರೋಪದ ಮೇಲೆ ಗುರುವಾರ ಒಂಬತ್ತು ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ವಿಡಿಯೋ ಚಿತ್ರೀಕರಣವನ್ನು ಗಮನಿಸಿದ ಬಳಿಕ ಇನ್ನಷ್ಟು ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಠಾಣೆಯಲ್ಲಿ ಎರಡು ದೂರು ದಾಖಲಿಸಲಾಗಿದೆ.ಕಳ್ಳತನ ನಡೆದಿಲ್ಲ: ಹಾಸನ ಜಿಲ್ಲೆಯಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿ ಅಮಾಯಕರ ಮೇಲೆ ಹಲ್ಲೆ ನಡೆಸಿರುವ ಎರಡನೇ ಘಟನೆ ಇದಾಗಿದೆ. ಕೆಲವು ತಿಂಗಳ ಹಿಂದೆ ಅರಕಲಗೂಡು ತಾಲ್ಲೂಕಿನಲ್ಲೂ ಇಂಥ ಘಟನೆ ನಡೆದು ಇಬ್ಬರು ಗಾಯಗೊಂಡಿದ್ದರು.`ಜಿಲ್ಲೆಯಲ್ಲಿ ಈವರೆಗೆ ಮಕ್ಕಳ ಕಳ್ಳತನದ ಒಂದೇ ಒಂದು ಪ್ರಕರಣ ನಡೆದಿಲ್ಲ. ಹೀಗಿದ್ದರೂ ಇಂಥ ಸುದ್ದಿ ಹರಡಲು ಕಾರಣವೇನು ಎಂಬುದು ತಿಳಿಯುತ್ತಿಲ್ಲ~ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ತಿಳಿಸಿದ್ದಾರೆ.

Post Comments (+)