ಮಕ್ಕಳ ಗಾಳಿಪಟದ ಸಂಭ್ರಮ...

7

ಮಕ್ಕಳ ಗಾಳಿಪಟದ ಸಂಭ್ರಮ...

Published:
Updated:

ಬೆಳಗಾವಿ: `ಇದು ಹಕ್ಕಿ ಅಲ್ಲ, ಆದರೆ, ಹಾರತೈತಲ್ಲ. ಪಟ.. ಪಟ.. ಗಾಳಿಪಟ....~

ಬಾನಲ್ಲಿ ಹಾರಾಡುತ್ತಿರುವ ಗಾಳಿಪಟಗಳನ್ನು ಕಂಡ ನಗರದ ಜನರಲ್ಲೆಗ `ಆಪ್ತಮಿತ್ರ

~ಸಿನಿಮಾದ ಈ ಹಾಡು ಮನದ ಮೂಲೆಯಿಂದ ತೇಲಿ ಬರುತ್ತಿದೆ. ತಮ್ಮ ಬಾಲ್ಯದ ಆ ದಿನಗಳ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತಿವೆ. ಹೌದು, ನಗರದಲ್ಲೆಗ ಬಾನತ್ತ ಕಣ್ಣು ಹೊರಳಿಸಿದರೆ, ಬಣ್ಣ ಬಣ್ಣದ `ಕಾಗದ ಹಕ್ಕಿ~ಗಳು ವಿಹರಿಸುವುದನ್ನು ಕಾಣಬಹುದು. ಪುಟ್ಟ-ಪುಟ್ಟ ಗಾಳಿಪಟಗಳ ಚಿನ್ನಾಟವನ್ನು ಕಣ್ತುಂಬಿಕೊಳ್ಳಬಹುದು.ಇದೀಗ ಶಾಲೆಗಳಿಗೆ ದಸರಾ ರಜಾ. ಹೀಗಾಗಿ ರಜೆಯಲ್ಲಿ ಮಜಾ ಅನುಭವಿಸಲು ಮಕ್ಕಳು ಸಜ್ಜಾಗಿದ್ದಾರೆ. ಬಾನೆತ್ತರಕ್ಕೆ ಗಾಳಿಪಟ ಹಾರಿಸುವ ಮೂಲಕ ಬೇಸರ ಕಳೆಯಲು ಹಲವು ಮಕ್ಕಳು ಮುಂದಾಗಿದ್ದಾರೆ.ದಸರಾ ರಜೆ ಶುರು ಆಗುತ್ತಿದ್ದಂತೆ ಹಲವು ಮಕ್ಕಳು ವೈವಿಧ್ಯಮಯ ಗಾಳಿಪಟ ನಿರ್ಮಿಸಲು ಪೈಪೋಟಿಗೆ ಇಳಿದಿದ್ದಾರೆ. ಮನೆಗೆ ಬರುವ ನ್ಯೂಸ್ ಪೇಪರ್ ಇಲ್ಲವೇ ಅಂಗಡಿಯಿಂದ ಬಣ್ಣದ ಕಾಗದಗಳನ್ನು ತಂದು ಅಚ್ಚುಕಟ್ಟಾಗಿ ಗಾಳಿಪಟ ನಿರ್ಮಿಸಿಕೊಂಡಿದ್ದಾರೆ. ಅವುಗಳಿಗೆ ಬಣ್ಣ ಬಣ್ಣದ ಉದ್ದದ ಬಾಲಗಳನ್ನು ಹಚ್ಚಿ ವೈವಿಧ್ಯಮಯವಾಗಿ ಗಾಳಿಪಟಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ದಾರದ ಉಂಡೆಗಳಿಗೆ ಗಾಳಿಪಟವನ್ನು ಕಟ್ಟಿ ಬಾನೆತ್ತರಕ್ಕೆ ಹಾರಿಸಲು ಪೈಪೋಟಿ ನಡೆಸುತ್ತಿದ್ದಾರೆ.ಬೆಳಿಗ್ಗೆಯ ಉಪಹಾರ ಮುಗಿಸಿದ್ದೇ ತಡ, ತಮ್ಮ ನೆಚ್ಚಿನ ಗಾಳಿಪಟದೊಂದಿಗೆ ಮನೆಯಿಂದ ಮಕ್ಕಳು ಹೊರ ನಡೆಯುತ್ತಿದ್ದಾರೆ. ಸಮೀಪದ ಮೈದಾನಗಳಿಗೆ ತಮ್ಮ ಸ್ನೇಹಿತರೊಂದಿಗೆ ತೆರಳಿ `ಇದು ಹಕ್ಕಿ ಅಲ್ಲ, ಆದರೆ, ಹಾರತೈತಲ್ಲ. ಪಟ.. ಪಟ.. ಗಾಳಿಪಟ....~ ಎಂದು ಹಾಡುತ್ತ ಗಾಳಿಪಟವನ್ನು ತೇಲಿ ಬಿಡುತ್ತಾರೆ. ಗಾಳಿಯಲ್ಲಿ ತೇಲುತ್ತ, ವಾಲುತ್ತ ಪಟವು ಆಕಾಶದಲ್ಲಿ ಹಾರಾಡುತ್ತವೆ. ಆಗಲೇ ಸ್ನೇಹಿತರ ನಡುವೆ ಪೈಪೋಟಿ ಶುರುವಾಗುತ್ತದೆ.`ನಾ ಮೇಲೆ, ತಾ ಮೇಲೆ~ ಹಾರಿಸಬೇಕು ಎಂದು ಗಾಳಿಪಟದ ದಾರವನ್ನು ಸಡಿಲ ಬಿಡುತ್ತ ಹೋಗುತ್ತಾರೆ. ಬೇನೆತ್ತರಕ್ಕೆ ಏರುತ್ತಿರುವುದನ್ನು ಕಂಡು ಹಿಗ್ಗುತ್ತಾರೆ. ತಮ್ಮ ಕಾಗದದ ಹಕ್ಕಿಯ ಪಕ್ಕದಲ್ಲೇ ಜೀವಂತ ಹಕ್ಕಿ ಸುತ್ತು ಹಾಕುವುದನ್ನು ಕಂಡು ಪುಳಕಿತಗೊಳ್ಳುತ್ತಾರೆ.ಸರದಾರ ಮೈದಾನ, ರೈಲ್ವೆ ಟ್ರ್ಯಾಕ್, ಸಂಭಾಜಿ ಉದ್ಯಾನ, ಬೆನ್ನನ್‌ಸ್ಮಿತ್ ಮೈದಾನ, ಟಿಳಕವಾಡಿಯ ಲೇಲೆ ಮೈದಾನ ಸೇರಿದಂತೆ ನಗರದ ಹಲವು ಸಣ್ಣ-ಪುಟ್ಟ ಮೈದಾನಗಳಿಗೆ ಬೆಳಿಗ್ಗೆ ಹಾಗೂ ಸಂಜೆ ಮಕ್ಕಳು ತಮ್ಮ ಗೆಳೆಯರ ದಂಡಿನೊಂದಿಗೆ ಲಗ್ಗೆ ಇಡುತ್ತಿದ್ದಾರೆ. ಇನ್ನು ಕೆಲವರು ತಮ್ಮ ಮನೆಯ ಮೇಲಿನ ಮಹಡಿಯ ಮೇಲೆ ಹೋಗಿ ಗಾಳಿಪಟವನ್ನು ಹಾರಿಸುತ್ತಿದ್ದಾರೆ.`ಸೂಟಿ ಬಿದ್ದ ದಿನದಿಂದಲೇ ಬೇಸರ ಕಳೆಯಲು ಗಾಳಿಪಟ ಹಾರಿಸುತ್ತಿದ್ದೇವೆ. ಈಗ ನಾವು ಗೆಳೆಯರು ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಇಲ್ಲಿಗೆ ಬರುತ್ತಿದ್ದೇವೆ” ಎಂದು ಸರದಾರ ಮೈದಾನದಲ್ಲಿ ಬಾನೆತ್ತರಕ್ಕೆ ಗಾಳಿಪಟ ಹಾರಿಸುತ್ತಿದ್ದ ಕಂಗ್ರಾಳ ಗಲ್ಲಿಯ ಬಾಲಕರಾದ ಪಾಂಡುರಂಗ ಹಾಗೂ ಪ್ರವೀಣ ನಗೆ ಬೀರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry