ಬುಧವಾರ, ಅಕ್ಟೋಬರ್ 16, 2019
21 °C

ಮಕ್ಕಳ ಚಲನಚಿತ್ರೋತ್ಸವಕ್ಕೆ ತೆರೆ

Published:
Updated:

ಬೆಂಗಳೂರು: ನಗರದ ವಿವಿಧ ಚಿತ್ರಮಂದಿರಗಳಲ್ಲಿ ಜ.9ರಿಂದ ಆಯೋಜಿಸಿದ್ದ ಏಳನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ಕಬ್ಬನ್ ಉದ್ಯಾನದಲ್ಲಿರುವ ಬಾಲಭವನದಲ್ಲಿ ಶುಕ್ರವಾರ ತೆರೆ ಬಿತ್ತು.ಬಿಡದಿಯ ಜ್ಞಾನ ವಿಕಾಸ ಟ್ರಸ್ಟ್‌ನ ಮಕ್ಕಳು ಜಾನಪದ ನೃತ್ಯ ವೈಭವವನ್ನು ಪ್ರದರ್ಶಿಸುವ ಮೂಲಕ ಆರಂಭಗೊಂಡ ಸಮಾರೋಪ ಸಮಾರಂಭದಲ್ಲಿ ಚಿತ್ರೋತ್ಸವದ ಆಯೋಜಕ ಸಂಸ್ಥೆ `ಚಿಲ್ಡ್ರನ್ಸ್ ಇಂಡಿಯಾ~ವು ಏಳು ವರ್ಷಗಳಿಂದ ನಡೆಸುತ್ತಾ ಬಂದಿರುವ ಉತ್ಸವದ ಸಮಗ್ರ ಮಾಹಿತಿಯನ್ನೊಳಗೊಂಡ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿತು.ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಡಾ.ಚಂದ್ರಶೇಖರ ಕಂಬಾರ, `ನಮ್ಮ  ಜೋಡಿ ಕುಂತ ಏನ್ ನೋಡ್ತಾವೋ ಅದ್ನ ಮಕ್ಕಳು ಕಲಿತಾವು. ಹಂಗಾಗದ ಮಕ್ಕಳ ಸಂಬಂಧನ ಬ್ಯಾರೆ ಸಿನಿಮಾ ಮಾಡ್ಬೇಕ. ಇದರ ಸಲುವಾಗಿ ಕನ್ನಡ ಚಿತ್ರೋದ್ಯಮ ನಿರ್ದಿಷ್ಟ ಗುರಿ ಇಟ್ಕೋಬೇಕಾಗೈತಿ~ ಎಂದು ಹೇಳಿದರು.ಉಪಮೇಯರ್ ಎಸ್.ಹರೀಶ್,`ಮುಂದಿನ ದಿನಗಳಲ್ಲಿ ನಗರದಲ್ಲಿ ಆಯೋಜಿಸಲಿರುವ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ಪಾಲಿಕೆ ವತಿಯಿಂದ ಧನಸಹಾಯ ಮಾಡಲಾಗುವುದು~ ಎಂದು ಭರವಸೆ ನೀಡಿದರು.ಇದೇ ವೇಳೆ ಕನ್ನಡದ  `ಹೆಜ್ಜೆಗಳು~, `ಬರ್ಡ್ಸ್ ಸಾಂಗ್ಸ್~ ( ಉತ್ತಮ ಚಿತ್ರ ), ` ಇನ್ ಹಾರ್ಟ್ ಬೀಟ್~ ಮತ್ತು `ಮಿಸ್ ಅಲೈಸ್ ಗೋಮ್~ (ಉತ್ತಮ ಕಿರುಚಿತ್ರ), `ದಿ ಸೌಂಡ್ ಆಫ್ ಮೈ ಫೂಟ್~ (ಉತ್ತಮ ನಿರ್ದೇಶನ)ಚಿತ್ರಗಳಿಗೆ ಪ್ರಶಸ್ತಿ ನೀಡಲಾಯಿತು. `ದಿ ಸೌಂಡ್ ಆಫ್ ಮೈ ಫೂಟ್~ ಚಿತ್ರದಲ್ಲಿ ನಟಿಸಿದ ಡೇನಿಯಲ್ ಅವರಿಗೆ `ಉತ್ತಮ ಬಾಲನಟ~ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರರಂಗದ ತಾರಾ, ಎಸ್.ಕೆ.ಭಗವಾನ್, ರಘು ಮುಖರ್ಜಿ, ಮರಿನಾ ಮಾಂಗೋ ಇತರರು ಉಪಸ್ಥಿತರಿದ್ದರು.  `ನೀರಸ ಪ್ರತಿಕ್ರಿಯೆ ಆರೋಪಕ್ಕೆ ಹುರುಳಿಲ್ಲ~

ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಎನ್.ಆರ್.ನಂಜುಡೇಗೌಡ ಮಾತನಾಡಿ, `ಚಿತ್ರೋತ್ಸವಕ್ಕೆ ಮಕ್ಕಳಿಂದ ನೀರಸ ಪ್ರತಿಕ್ರಿಯೆ ದೊರೆತಿದೆ ಎಂಬುದು ಸುಳ್ಳು. ವಿವಿಧ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿರುವ ಮಕ್ಕಳ ಸಂಖ್ಯೆಯ ಬಗ್ಗೆ ನನ್ನಲ್ಲಿ ಸಂಪೂರ್ಣ ದಾಖಲೆಗಳಿವೆ. ಈ ಬಗ್ಗೆ ಅನುಮಾನವಿದ್ದವರೂ ಪರಿಶೀಲಿಸಬಹುದು~ ಎಂದು ಹೇಳಿದರು.ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿಯು ಸ್ಥಾಪನೆಯಾದ ನಂತರ ಚಿತ್ರೋತ್ಸವ ಹಮ್ಮಿಕೊಳ್ಳುವುದು ಸೇರಿದಂತೆ  ಹಲವು ವಿಚಾರದಲ್ಲಿ ಗೊಂದಲ ಉಂಟಾಗಿದೆ. ಚಿತ್ರೋತ್ಸವವನ್ನು ಜಂಟಿಯಾಗಿ ಆಯೋಜಿಸಿರುವುದರ ಕುರಿತು ಚಲನಚಿತ್ರ ಅಕಾಡೆಮಿಯೊಂದಿಗೆ ಪತ್ರ ವ್ಯವಹಾರ ನಡೆಸಲಾಯಿತು. ಆದರೆ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ~ ಎಂದು ಹೇಳಿದ ಅವರು, `ಮುಂದಿನ ದಿನಗಳಲ್ಲೂ ಉತ್ಸವ ಹಮ್ಮಿಕೊಳ್ಳುವುದನ್ನು ಮುಂದುವರಿಸಲಾಗುವುದು~ ಎಂದರು.

Post Comments (+)