ಶನಿವಾರ, ಅಕ್ಟೋಬರ್ 19, 2019
27 °C

ಮಕ್ಕಳ ಚಲನಚಿತ್ರೋತ್ಸವ: ಗೊಂದಲದ ಗೂಡಾದ ಸಮಾರಂಭ

Published:
Updated:

ಬೆಂಗಳೂರು: ಸಮಾರಂಭ ಉದ್ಘಾಟನೆಗೂ ಮೊದಲೇ ಅತಿಥಿಯೊಬ್ಬರಿಗೆ ಭಾಷಣ ಮಾಡಲು ಅವಕಾಶ! ಮಾತನಾಡಲು ನಟಿಯನ್ನು ವೇದಿಕೆ ಮೇಲೆ ಆಹ್ವಾನಿಸಿ ಅವರು ಮಾತು ಆರಂಭಿಸುತ್ತಿದ್ದಂತೆ ಅರ್ಧಕ್ಕೆ ನಿಲ್ಲಿಸುವಂತೆ ಹೇಳಿ ವೇದಿಕೆಯಿಂದ ಕಾಲ್ಕಿತ್ತ ಸಂಘಟಕರು, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರನ್ನು ಉದ್ಘಾಟಕರಾಗಿ ಆಹ್ವಾನಿಸಿ ಅವರು ಬರುವ ಮೊದಲೇ ಸಮಾರಂಭವನ್ನು ಬೇರೊಬ್ಬರಿಂದ ಉದ್ಘಾಟಿಸಲು ತಯಾರಿ, ಯಾರದ್ದೋ ಹೆಸರು ಹೇಳಿ ಇನ್ಯಾರಿಗೋ ಹೂಗುಚ್ಛ ನೀಡಲು ಮುಂದಾಗಿ ನಗೆಪಾಟಲಿಗೀಡದ ಸಂಘಟಕರು.ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆ ಬೆಂಗಳೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ಏಳನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ ಅಕ್ಷರಶಃ ಅವ್ಯವಸ್ಥೆಯ ಆಗರವಾಗಿತ್ತು. ಯಾವುದೇ ಯೋಜನೆ, ಯೋಚನೆ ಇಲ್ಲದೆ ಕಾರ್ಯಕ್ರಮ ಆಯೋಜಿಸಿದ್ದ ಸಂಘಟಕರು ನೆರೆದಿದ್ದವರಿಗೆ ಪುಕ್ಕಟೆ ಮನರಂಜನೆ ನೀಡಿದರು.ಸಂಘಟಕರ ಪಾಡು ನೋಡಿ ಸಭಿಕರೆಲ್ಲ ನಗದೆ ವಿಧಿ ಇರಲಿಲ್ಲ. ಮಧ್ಯಾಹ್ನ ಎರಡು ಗಂಟೆಗೆ ಸಮಾರಂಭ ನಿಗದಿಯಾಗಿತ್ತು. ಆದರೆ ಮುಖ್ಯಮಂತ್ರಿ ಅವರು ತಡವಾಗಿ ಬಂದಿದ್ದರಿಂದ 3.30ಕ್ಕೆ ಆರಂಭವಾಯಿತು. ಅದಾಗಲೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದ ನಟ ಸುದೀಪ್ ಅವರನ್ನು ಉದ್ಘಾಟನೆಗೂ ಮೊದಲೇ ವೇದಿಕೆ ಮೇಲೆ ಕರೆದು ಭಾಷಣ ಮಾಡಲು ಅವಕಾಶ ನೀಡಿದರು.ಸುದೀಪ್ ಮಾತನಾಡಿದ ನಂತರ ದೀಪ ಬೆಳಗಿ ಸಮಾರಂಭ ಉದ್ಘಾಟಿಸುವಂತೆ ಅವರನ್ನೇ ಕೋರಲಾಯಿತು. ಅಲ್ಲಿದ್ದ ಚಿತ್ರರಂಗದ ಗಣ್ಯರನ್ನು ವೇದಿಕೆ ಮೇಲೆ ಕರೆದ ಸುದೀಪ್ ಉದ್ಘಾಟನೆ ಮಾಡಿ ಎಂದು ಹೇಳಿ ವೇದಿಕೆಯಿಂದ ಕೆಳಗಿಳಿದರು. ಅಲ್ಲಿಯೇ ಇದ್ದ ನಟಿ ರಾಗಿಣಿ ದ್ವಿವೇದಿ ಅವರಿಗೆ ಮೈಕ್ ನೀಡಿ ಮಾತನಾಡುವಂತೆ ಹೇಳಿದರು.ಉತ್ಸಾಹದಿಂದ ಅವರು ಮಾತು ಆರಂಭಿಸುತ್ತಿದ್ದಂತೆ, ಮುಖ್ಯಮಂತ್ರಿ ಅವರು ಬರುತ್ತಿರುವುದನ್ನು ತಿಳಿದುಕೊಂಡ ಸಂಘಟಕರು ಮಾತು ನಿಲ್ಲಿಸುವಂತೆ ರಾಗಿಣಿ ಅವರಿಗೆ ಹೇಳಿದರು. ಇದರಿಂದ ಗೊಂದಲ್ಲಕ್ಕೀಡಾದ ರಾಗಿಣಿ ಅವರು `ಮಾತು ನಿಲ್ಲಿಸಬೇಕೆ~ ಎಂದು ಮುಗ್ಧವಾಗಿ ಪ್ರಶ್ನಿಸಿದರು. ಹಿಂದೆ- ಮುಂದೆ ನೋಡದ ಸಂಘಟಕರು ಹೌದು ಎಂದಾಗ ಮುಜುಗರಕ್ಕೀಡಾಗಿ ಕೋಪಗೊಂಡ ಅವರು `ನಾನ್‌ಸೆನ್ಸ್. ದೆ ಇನ್‌ಸಲ್ಟೆಡ್ ಮಿ~ ಎಂದು ನಿಂದಿಸುತ್ತಲೇ ಸಭಾಂಗಣದಿಂದ ಹೊರ ನಡೆದರು.ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದವರನ್ನೂ ವೇದಿಕೆ ಮೇಲೆ ಕೂರಿಸಿದ ಸಂಘಟಕರು ಸ್ವಾಗತ ಕೋರಿ ಹೂಗುಚ್ಛ ನೀಡುವಾಗ ಗೊಂದಲಕ್ಕೀಡಾದರು. ನಿರೂಪಣೆ ಮಾಡುತ್ತಿದ್ದವರು ಯಾರದ್ದೋ ಹೆಸರು ಹೇಳಿದರೆ ಇನ್ಯಾರಿಗೋ ಹೂಗುಚ್ಛ ನೀಡಲು ಮುಂದಾದಾಗ ಎಲ್ಲರೂ ಗೊಳ್ಳೆಂದು ನಕ್ಕರು.ಯಾವುದೇ ಚಲನಚಿತ್ರೋತ್ಸವ ಇರಲಿ. ಆರಂಭಕ್ಕೂ ಕೆಲ ದಿನಗಳ ಮೊದಲೇ ಪತ್ರಿಕಾಗೋಷ್ಠಿ ನಡೆಸಿ ಪ್ರದರ್ಶನಗೊಳ್ಳುವ ಚಿತ್ರ, ಚಿತ್ರಮಂದಿರ, ಸಮಯ ಮುಂತಾದ ವಿವರಗಳನ್ನು ಪ್ರಕಟಿಸುವುದು ವಾಡಿಕೆ. ಇದರಿಂದ ಸಿನಿಮಾ ಪ್ರಿಯರು ತಮ್ಮ ಆಯ್ಕೆಯ ಚಿತ್ರ ವೀಕ್ಷಣೆಗೆ ಅನುಕೂಲವಾಗುತ್ತದೆ.  ಆದರೆ ಸಂಘಟಕರು ವೇಳಾಪಟ್ಟಿ ಪ್ರಕಟಿಸಿಲ್ಲ. ಯಾವ ಚಿತ್ರ ಪ್ರದರ್ಶಿಸಬೇಕು ಎಂಬ ಗೊಂದಲ ಇದ್ದ ಕಾರಣ ವೇಳಾಪಟ್ಟಿ ಪ್ರಕಟಿಸಿರಲಿಲ್ಲ ಎಂದು ಸಮಾರಂಭಕ್ಕೆ ಬಂದಿದ್ದವರೊಬ್ಬರು ತಿಳಿಸಿದರು.ಮಾಧ್ಯಮ ಪ್ರತಿನಿಧಿಗಳಿಗೆ ಚಿತ್ರಗಳ ವೇಳಾಪಟ್ಟಿಯನ್ನು ನೀಡಲಾಯಿತು. ಆದರೆ ಆ ಪಟ್ಟಿಯ ಕೆಳಗಿದ್ದ `ಯಾವುದೇ ಸೂಚನೆ ಇಲ್ಲದೆ ಚಲನಚಿತ್ರಗಳನ್ನು ಕ್ರಮಾನುಸಾರವಾಗಿ ಬದಲಾಯಿಸಬಹುದು~ ಎಂಬ ಸೂಚನೆ ಇನ್ನಷ್ಟು ಗೊಂದಲ ಉಂಟು ಮಾಡುವಂತಿತ್ತು.ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ್ ತೆಂಗಿನ ಕಾಯಿ, ಟೊಕಿಯೊ ಚಿತ್ರೋತ್ಸವದ ನಿರ್ದೇಶಕ ಮಿತ್ಸೊವೊ ತಹಿರ, ಸಿರಿಯಾದ ನಟಿ ಸುಲಫ ಹಿಝಾಜಿ, ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಎನ್.ಆರ್.ನಂಜುಂಡೇಗೌಡ ಹಾಗೂ ಚಿತ್ರರಂಗದ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.`ಮುಂದಿನ ವರ್ಷದಿಂದ ನಾಲ್ಕು ಮಕ್ಕಳ ಚಿತ್ರಗಳಿಗೆ ಸಹಾಯಧನ~

`ಮುಂದಿನ ವರ್ಷದಿಂದ ನಾಲ್ಕು ಮಕ್ಕಳ ಚಿತ್ರಕ್ಕೆ ರಾಜ್ಯ ಸರ್ಕಾರ ತಲಾ 25 ಲಕ್ಷ ರೂಪಾಯಿ ಸಹಾಯ ಧನ ನೀಡಲಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಏಳನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸದ್ಯ ಪ್ರತಿ ವರ್ಷ ಎರಡು ಮಕ್ಕಳ ಚಿತ್ರಕ್ಕೆ ಸಹಾಯ ಧನ ನೀಡಲಾಗುತ್ತಿದೆ. ಮಕ್ಕಳ ಚಿತ್ರಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಇನ್ನು ಮುಂದೆ ನಾಲ್ಕು ಚಿತ್ರಗಳಿಗೆ ಸಹಾಯ ಧನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.ಕನ್ನಡ ಚಿತ್ರಗಳು ಜನ ಮನ್ನಣೆ ಪಡೆಯುತ್ತಿವೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡುತ್ತಿವೆ. ಆದ್ದರಿಂದಲೇ ಸರ್ಕಾರ ಕನ್ನಡ ಚಿತ್ರರಂಗಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದೆ ಎಂದರು.

Post Comments (+)