ಮಕ್ಕಳ ಜೊತೆ ಮಗುವಾಗಿ

7

ಮಕ್ಕಳ ಜೊತೆ ಮಗುವಾಗಿ

Published:
Updated:

‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ’, ‘ಕುಚ್‌ ಕುಚ್‌ ಹೋತಾ ಹೈ’ನಂಥ ಸೂಪರ್ ಹಿಟ್‌ ಚಿತ್ರಗಳನ್ನು ಕೊಟ್ಟಂಥ ನಟಿ ಕಾಜೋಲ್. ಮದುವೆ ನಂತರ ಕೆಲದಿನ ಬಣ್ಣದ ಲೋಕದಿಂದ ಹಿಂದೆ ಸರಿದಿದ್ದ ಕಾಜೋಲ್‌ ‘ಫನಾ’ ಚಿತ್ರದ ಮೂಲಕ ಬಾಲಿವುಡ್‌ ಮರುಪ್ರವೇಶಿಸಿದರು. ಆನಂತರ, ಅಜಯ್‌ ದೇವಗನ್‌ ಹೋಂ ಪ್ರೊಡಕ್ಷನ್‌ನಲ್ಲಿ ಮೂಡಿಬಂದ ‘ಯು, ಮಿ ಔರ್‌ ಹಮ್’ ಚಿತ್ರದಲ್ಲಿ ನಟಿಸಿದ್ದರು. ಅಜಯ್‌ ದೇವಗನ್‌ ಈ ಚಿತ್ರದ ನಿರ್ದೇಶಕರು. ಗಂಡ–ಹೆಂಡತಿ ಜೋಡಿ ಇದ್ದ ಈ ಸಿನಿಮಾ ಸಿನಿರಸಿಕರನ್ನು ಮೋಡಿ ಮಾಡಿತ್ತು.ಅಂದಹಾಗೆ, ಕಾಡುವ ಕಂಗಳ ಈ ಕೃಷ್ಣ ಸುಂದರಿಗೆ ಮಕ್ಕಳೆಂದರೆ ಪಂಚಪ್ರಾಣವಂತೆ. ಮನೆ, ಮಕ್ಕಳು, ಕೆಲಸ ಮೂರನ್ನೂ ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುತ್ತಿರುವ ಕಾಜೋಲ್. ನಟಿಯಾಗಿ, ಪತ್ನಿಯಾಗಿ ಮತ್ತು ಅಮ್ಮನಾಗಿ ಯಶಸ್ವಿಯಾಗಿದ್ದಾರೆ. ಈಕೆ ಈಗ ಬಾಲಿವುಡ್‌ನ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಅಮ್ಮ. ಎರಡು ಮಕ್ಕಳ ತಾಯಿಯಾಗಿದ್ದರೂ ಚೆಲುವು ಮಾಸಿಲ್ಲ. ಹಾಗೆಯೇ, ಆಕೆಯ ಮನಸ್ಸಲ್ಲಿನ್ನೂ ತಾಯ್ತನ ಹಸಿರಾಗಿದೆ. ಕಳೆದ ಮೂರು ವರ್ಷಗಳಿಂದ ಮಕ್ಕಳ ಉಡುಪು ಹಗ್ಗಿಸ್‌ ರಾಯಭಾರಿಯಾಗಿರುವ ಕಾಜೋಲ್‌ ಜಾಹೀರಾತಿನಲ್ಲಿ ನಟಿಸಿರುವ ಪುಟ್ಟ ಕಂದಮ್ಮಗಳ ಸಖ್ಯವನ್ನು ನೆನೆದು ಈಗಲೂ ಪುಳಕಗೊಳ್ಳುತ್ತಾರೆ.‘ಮೊದಲಿನಿಂದಲೂ ನನಗೆ ಮಕ್ಕಳೆಂದರೆ ಪಂಚಪ್ರಾಣ. ಪುಟ್ಟ ಕಂದಮ್ಮಗಳ ಸ್ಪರ್ಶ ಸುಖ, ಅವುಗಳ ಮೈಯಿಂದ ಹೊಮ್ಮುವ ಹಸಿವಾಸನೆ, ಬೊಚ್ಚುಬಾಯಿಂದ ಹೊರಬರುವ ನಿಷ್ಕಲ್ಮಶ ನಗುವನ್ನು ತುಂಬಾ ಫೀಲ್‌ ಮಾಡುತ್ತೇನೆ. ಮುದ್ದು ಮುದ್ದಾದ ಪುಟಾಣಿಗಳ ಜತೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವಾಗ ನನಗೆ ಆಗುವ ಸಂತಸ ಅಷ್ಟಿಷ್ಟಲ್ಲ. ಅದು ಪದಗಳಿಗೆ ನಿಲುಕದ ಅವರ್ಣನೀಯ ಅನುಭವ. ನಾನಿಷ್ಟು ಇಷ್ಟು ವರ್ಷ ಈ ಉತ್ಪನ್ನದೊಂದಿಗೆ ನಂಟು ಉಳಿಸಿಕೊಂಡಿರುವುದಕ್ಕೆ ಇದೂ ಒಂದು ಕಾರಣ’ ಎಂದು ತಮಗಿರುವ ಮಕ್ಕಳ ಬಗೆಗಿನ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ ಕಾಜೋಲ್‌.‘ಮದುವೆಯಾದ ಹೊಸತರಲ್ಲಿ ಮನೆ, ಗಂಡ, ಶೂಟಿಂಗ್ ಮೂರನ್ನೂ ನಿಭಾಯಿಸುವುದು ಕಷ್ಟವಾಗುತ್ತಿತ್ತು. ಹಾಗಾಗಿ ಮದುವೆಯಾದ ನಂತರ ಕೆಲದಿನ ಸಿನಿಮಾಗಳಿಂದ ದೂರವಾದೆ. ನನ್ನನ್ನು ನಾನು ಸಂಪೂರ್ಣವಾಗಿ ಮನೆಗೆ ತೊಡಗಿಸಿಕೊಂಡ ನಂತರ ಅದರ ನಿರ್ವಹಣೆ ದಿನದಿಂದ ದಿನಕ್ಕೆ ಸರಾಗವಾಗುತ್ತಾ ಬಂತು. ಆ ದಿನಗಳಲ್ಲಿ ನನಗೆ ಪ್ರತಿದಿನವೂ ಭಿನ್ನ ಎನಿಸುತ್ತಿತ್ತು. ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಾ ಬಂದೆ. ಮೊದಲಿಗೆ, ನನ್ನಮ್ಮನಿಗೆ ನಾನು ಒಳ್ಳೆಯ ಮಗಳಾಗಿದ್ದೆ.  ಮದುವೆಯಾದ ನಂತರ ಅಜಯ್‌ಗೆ ಒಳ್ಳೆ ಪತ್ನಿಯಾದೆ, ಈಗ ನನ್ನ ಮಕ್ಕಳಿಗೆ ನಾನು ಒಳ್ಳೆ ತಾಯಿಯಾಗಿದ್ದೇನೆ’ ಎಂದು ತಾವು ಏಕಕಾಲದಲ್ಲಿ ಮೂರು ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಕಾಜೋಲ್‌. ಶಾರುಖ್‌–ಕಾಜೋಲ್‌ ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿ. ಇವರಿಬ್ಬರೂ ಜತೆಯಾಗಿ ನಟಿಸಿರುವ  ಅನೇಕ ಚಿತ್ರಗಳು ಬಾಲಿವುಡ್‌ನಲ್ಲಿ ದಾಖಲೆ ಸೃಷ್ಟಿಸಿವೆ. ಆದರೆ, ಕಾಜೋಲ್‌ ಮದುವೆಯಾದ ನಂತರ ಅವರ ಇಷ್ಟಗಳಲ್ಲಿ, ಅಭಿರುಚಿಗಳಲ್ಲಿ ತುಂಬ ಬದಲಾವಣೆಗಳಾಗಿವೆ ಎಂಬುದು ಅವರ ಮಾತಿನಿಂದ ತಿಳಿಯುತ್ತದೆ. ‘ಬಾಲಿವುಡ್‌ನಲ್ಲಿ ನನ್ನಿಷ್ಟದ ನಟ–ನಿರ್ದೇಶಕ ಅಜಯ್‌ ದೇವಗನ್‌. ನಿರ್ದೇಶಕನಾಗಿ ಅವರ ಕ್ರಿಯಾಶೀಲತೆಯನ್ನು ತುಂಬಾ ಮೆಚ್ಚಿಕೊಳ್ಳುತ್ತೇನೆ. ನನ್ನ ಮಟ್ಟಿಗೆ ಅವರು ಅತ್ಯಂತ ಸೃಜನಶೀಲ ನಿರ್ದೇಶಕ. ಅಜಯ್‌ ಅವರನ್ನು ನಾನು ಮದುವೆಯಾಗಿರುವುದರಿಂದ ಸಹಜವಾಗಿಯೇ ಅವರು ನನ್ನ ಮೆಚ್ಚಿನ ನಟ’ ಎಂದು ತಮ್ಮಿಷ್ಟದ ನಟ–ನಿರ್ದೇಶನದ ಬಗ್ಗೆ ಹೇಳಿಕೊಳ್ಳುತ್ತಾರೆ ಕಾಜೋಲ್‌.ಬಾಲಿವುಡ್‌ನ ಜನಪ್ರಿಯ ಜೋಡಿಯೂ ಆಗಿರುವ ಅಜಯ್‌–ಕಾಜೋಲ್‌ ತಮ್ಮ ಸುಖ ಸಂಸಾರದ ಗುಟ್ಟನ್ನು ಹಂಚಿಕೊಳ್ಳುವುದು ಹೀಗೆ: ‘ಅಜಯ್‌ ನನ್ನನ್ನು ತುಂಬ ಪ್ರೀತಿಸುತ್ತಾರೆ. ನಾನು ಸಹ ಅವರನ್ನು ತುಂಬ ಪ್ರೀತಿಸುತ್ತೇನೆ. ಪ್ರೀತಿ ಇದ್ದಲ್ಲಿ ಸಂತೋಷ, ನೆಮ್ಮದಿಯ ಫಸಲು ಭರ್ಜರಿಯಾಗಿರುತ್ತದೆ ಎಂಬುದು ನನ್ನ ನಂಬಿಕೆ. ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಂಡಿರುವುದು ಮತ್ತು ಪರಸ್ಪರವಾಗಿ ವೃತ್ತಿಯನ್ನು ಗೌರವಿಸಿ ನಡೆಯುವುದೇ ನಮ್ಮ ಸುಖೀ ಸಂಸಾರದ ಗುಟ್ಟು’.ಸದ್ಯಕ್ಕೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲದ ಕಾಜೋಲ್‌ ಫ್ಯಾಷನ್‌ ಶೋ, ಖಾಸಗಿ ಸಮಾರಂಭ, ಉತ್ಪನ್ನಗಳ ರಾಯಭಾರಿಯಾಗಿ ತುಂಬ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಸಾಮಾಜಿಕ ಕಾಳಜಿಯುಳ್ಳ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಮೊದಲೇ ಹೇಳಿದಂತೆ ಮಕ್ಕಳೆಂದರೆ ನನಗೆ ತುಂಬ ಇಷ್ಟ. ನವಜಾತ ಶಿಶುಗಳನ್ನು ಕಾಡುವ ಡಯೇರಿಯಾ ಮತ್ತು ನ್ಯುಮೋನಿಯಾದಿಂದ ಮಕ್ಕಳನ್ನು ಕಾಪಾಡುವ ಜವಾಬ್ದಾರಿ ತಾಯಂದಿರದ್ದು. ಈ ನಿಟ್ಟಿನಲ್ಲಿ ನಾನು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ಪುಟ್ಟ ಮಕ್ಕಳನ್ನು ಎತ್ತಿಕೊಳ್ಳುವಾಗ ದೊಡ್ಡವರು ಶುಚಿತ್ವಕ್ಕೆ ಗಮನ ಹರಿಸಬೇಕು. ಬೇರೆಯವರು ಗೊತ್ತಿಲ್ಲದೇ ಮಾಡುವ  ಸಣ್ಣ ತಪ್ಪು ಮಗುವಿನ ಜೀವಕ್ಕೆ ಸಂಚಕಾರ ತರಬಲ್ಲದು. ಹಾಗಾಗಿ ಮಕ್ಕಳು ಮತ್ತು ದೊಡ್ಡವರೆಲ್ಲರೂ ಆರೋಗ್ಯಕರ ಹಾಗೂ ಸ್ವಚ್ಛ ಜೀವನ ನಡೆಸುವತ್ತ ಗಮನ ಹರಿಸಬೇಕು. ಈ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ’ ಎಂದು ತಮ್ಮ ಸಾಮಾಜಿಕ ಕಳಕಳಿ ಬಗ್ಗೆ ಹೇಳಿಕೊಳ್ಳುತ್ತಾರೆ ಅವರು.ಈಗಲೂ ಮೊದಲಿನ ಸ್ನಿಗ್ಧ ಚೆಲುವು ಉಳಿಸಿಕೊಂಡಿರುವ ಕಾಜೋಲ್‌ಗೆ ‘ನಿಮ್ಮ ಚೆಲುವಿನ ಗುಟ್ಟು ಏನು’ ಎಂದು ಕೇಳಿದರೆ, ಉತ್ತರಿಸುವುದು ಹೀಗೆ: ‘ಮನಸ್ಸನ್ನು ಒತ್ತಡದ ಕೈಗೆ ಕೊಡದೆ ನೆಮ್ಮದಿ ಮತ್ತು ಸಂತೋಷದಿಂದಿರುವುದೇ ನನ್ನ ಚೆಲುವಿನ ಗುಟ್ಟು. ತಿನ್ನುವ ಆಹಾರದಲ್ಲೂ ಎಚ್ಚರಿಕೆ ವಹಿಸುತ್ತೇನೆ. ಆರೋಗ್ಯಕರ ಆಹಾರಕ್ಕಷ್ಟೇ ನನ್ನ ಮೆನುವಿನಲ್ಲಿ ಸ್ಥಾನ. ಪ್ರತಿದಿನ ಜಿಮ್‌ಗೆ ಹೋಗುತ್ತೇನೆ. ಕೆಲವು ದಿನ ಭಾರ ಎತ್ತುತ್ತೇನೆ’ ಎಂದು ತಮ್ಮ ಸೌಂದರ್ಯ ವ್ಯಾಖ್ಯಾನ ಮಾಡುತ್ತಾರೆ ಕಾಜೋಲ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry