ಸೋಮವಾರ, ಡಿಸೆಂಬರ್ 16, 2019
25 °C

ಮಕ್ಕಳ ತಾಯಿಗೂ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ತಾಯಿಗೂ!

ನಮಗೆ ಇಬ್ಬರು ಹೆಣ್ಣುಮಕ್ಕಳು. 25 ವರ್ಷದ ಹಿಂದೆ  6 ಮತ್ತು 4 ವರ್ಷದ ಮಕ್ಕಳಿಗೆ ಸ್ಕೂಲು ಹತ್ತಿರವಿದೆಯೆಂದು ಮುಖ್ಯ ರಸ್ತೆಯಲ್ಲಿಯೇ ಬಾಡಿಗೆ ಮನೆ ಮಾಡಿದೆವು.ಮನೆಯ ಎದುರಾಗಿ ನಾಲ್ಕಾರು ಅಂಗಡಿಗಳಿದ್ದವು. ನಮ್ಮ ಮನೆಯವರು ಮುಂಜಾನೆ ಹೊರಟರೆ 2 ಗಂಟೆಗೆ ಊಟಕ್ಕೆ ಬಂದು 4 ಗಂಟೆಗೆ ಹೊರಟರೆ ಮತ್ತೆ ರಾತ್ರಿ ಬರುವುದು 9 ಗಂಟೆಯ ಮೇಲಾಗುತ್ತಿತ್ತು.ಮಕ್ಕಳನ್ನು ಸ್ಕೂಲಿಗೆ ಕರೆದೊಯ್ಯುವುದೂ, ಕರೆತರುವುದೂ ಸಂಜೆ ಪಾರ್ಕಿಗೆ ಆಡಲು ಹಾಗೂ ತರಕಾರಿ ತರುವುದು, ಮನೆಗೆ ಅಗತ್ಯವಾದ ಸಣ್ಣ ಪುಟ್ಟ ಸಾಮಾನು ಅಲ್ಲದೆ ಮಕ್ಕಳಿಗೆ ಮೈ ಸರಿ ಇಲ್ಲದಿದ್ದರೆ ಡಾಕ್ಟರಲ್ಲಿಗೆ ಕರೆದೊಯ್ಯುವುದೂ, ಮನೆಗೆಲಸ, ಅಡಿಗೆ ಹೀಗೆ ಬಿಡುವಿಲ್ಲದಂತೆ ಹತ್ತಾರು ಕೆಲಸಗಳಲ್ಲಿ ಮಗ್ನಳಾಗಿರುತ್ತಿದ್ದೆ.ಎದುರಿನ ಅಂಗಡಿಗೆ ಜನ ಬರುತ್ತಿದ್ದರು ಹೋಗುತ್ತಿದ್ದರು. ಆದರೆ ಮೂಲೆ ಅಂಗಡಿಯ ಮನುಷ್ಯ ನಾನು ಹೊರಗೆ ಬಂದರೆ ಸಾಕು ನನ್ನ ಕಡೆಯೆ ನೋಡುತ್ತಿದ್ದುದು ಮೊದ ಮೊದಲು ನನ್ನ ಗಮನಕ್ಕೆ ಬಂದೇ ಇರಲಿಲ್ಲ. ನಂತರ ನೋಡಿದಾಗೆಲ್ಲ ಹಲ್ಲು ಕಿರಿಯಲು ಪ್ರಾರಂಭಿಸಿದ.ನನಗೆ ಯೋಚನೆಗಿಟ್ಟುಕೊಂಡಿತು. ಏನು ಮಾಡುವುದು. ನಮ್ಮವರಿಗೆ ಕೋಪ ಹೆಚ್ಚು. ಅವರಲ್ಲಿ ಹೇಳಿದರೆ ಬೀದಿಯಲ್ಲಿ ರಂಪವಾಗುತ್ತದೆ. ಮನುಷ್ಯನ ದ್ವೇಷ ಏನನ್ನಾದರೂ ಮಾಡಿಸುತ್ತದೆ. ಮತ್ತೆ ಎದುರಾಗಿ ನಾನು ಒಬ್ಬಳೆ ಹಗಲೆಲ್ಲಾ ಇರಬೇಕಲ್ಲ ಎಂದು ಯೋಚಿಸಿ, ಯೋಚಿಸಿ ಮನಸ್ಸಿನ ನೆಮ್ಮದಿಯೇ ಹಾಳಾಗಿಹೋಯಿತು.ನನ್ನ ಚಿಂತೆಯ ಕಾರಣ ನಮ್ಮವರಿಗೆ ತಿಳಿಸಿ ಅವರ ಕೆಲಸದ ಭಂಗ ತರುವುದು ತರವಲ್ಲ ಎನಿಸಿ `ನೋಡಿಕೊಂಡು ಸಾಯಲಿ ಅವನು~ ಎಂದು ಉದಾಸೀನಳಾದೆ.ಮತ್ತೆ ಅವನ ಕಾಟ ಇನ್ನೊಂದು ರೀತಿಯಲ್ಲಿ ಶುರು ಆಯಿತು. ಮಕ್ಕಳ ಜೊತೆಗೋ ಅಥವಾ ಒಬ್ಬಳೇ ಹೊರಗೆ ಹೊರಟರೆ ಹಿಂದೆಯೇ ಬರುವುದು,  ಹಲ್ಲು ಕಿರಿಯುವುದು ಹೆಚ್ಚಾಯಿತು. `ಏನು ಮಾಡಲಿ ದೇವರೆ~ ಎಂದು ತಲೆ ಹಿಡಿದು ಕುಳಿತೆ. ಸುಮ್ಮನೆ ಕುಳಿತರೆ ಕೆಲಸಗಳು ಆಗುವುದಾದರೂ ಹೇಗೆ? ಒಳಗಿದ್ದರೆ ಚಿಂತೆ, ಹೊರ ಹೊರಟರೆ ಭೂತದರ್ಶನ. ಈ ಮಾನಸಿಕ ಕಿರುಕುಳದಿಂದ ಜರ್ಝರಿತಳಾದೆ.ಒಂದು ಸಂಜೆ ಮಕ್ಕಳನ್ನು ಕರೆದುಕೊಂಡು ಹೊರಗೆ ಹೊರಟೆ. ಹಿಂದೆಯೇ ಹೊರಟಿತು ಅವನ ಸವಾರಿ. 2 ಫರ್ಲಾಂಗ್ ಹೋಗುವಷ್ಟರಲ್ಲಿ ತುಂಬಾ ಹತ್ತಿರವೇ ತಗಲುವಂತೆ ಬರುತ್ತಿದ್ದ. ಹಿಂದಿರುಗಿ ಚಪ್ಪಲಿ ತೆಗೆದುಕೊಂಡು ಹೊಡೆಯುವುದಕ್ಕೆ ನನಗೆ ಧೈರ್ಯ ಸಾಲದು. ಕೈಕಾಲು ನಡುಗತೊಡಗಿತು.ಅಷ್ಟರಲ್ಲಿ ನಮಗೆ ಬಹಳ ಪರಿಚಯವಿದ್ದ ಅಂಕಲ್ ಆಂಟಿ ಮತ್ತು ಅವರ ಮಗ ಎದುರಾಗಿ ಬರುತ್ತಿದ್ದರು. ಆಗ ನನಗೆ ಎಲ್ಲಿಲ್ಲದ ಧೈರ್ಯ ಬಂದು `ಅಂಕಲ್, ಆಂಟಿ.. ನೋಡಿ ಇಲ್ಲಿ~ ಎನ್ನುವಷ್ಟರಲ್ಲಿ ರಸ್ತೆಯ ಮೂಲೆಯಲ್ಲಿ ನಿಂತಿದ್ದ.ಅವನ ಕಡೆ ತೋರಿಸುತ್ತಾ ಹೇಳುತ್ತಾ ಇದ್ದಂತೆಯೆ, `ಇಂತಹವರಿಗೆಲ್ಲಾ ಒದ್ದು ಬುದ್ದಿ ಕಲಿಸಬೇಕು ತಾಳಮ್ಮಾ~ ಎಂದು ತಂದೆ, ಮಗ ಇಬ್ಬರೂ ತೋಳೇರಿಸಿ ಹೊರಟರು.ಆಂಟಿಯೂ ಚಪ್ಪಲಿ ಹಿಡಿದು ಹೊರಟದ್ದನ್ನು ಕಂಡು ಅವನು ಕಾಲಿಗೆ ಬುದ್ಧಿ ಹೇಳಿದ್ದ, ಮತ್ತೆಂದೂ ನಮ್ಮ ಮನೆ ಎದುರು ಸುಳಿಯಲಿಲ್ಲ. ನನ್ನ ಜೀವಕ್ಕೆ ನೆಮ್ಮದಿಯಾಯಿತು.ಈ ರೀತಿಯ ಮಾನಸಿಕ ಕಿರುಕುಳಗಳಿಗೆ ಎಷ್ಟೋ ಹೆಣ್ಣು ಮಕ್ಕಳು ತುತ್ತಾದರೂ ಹೊರಗೆ ಹೇಳಲಾರದೆ ಬಳಲಿಹೋಗಿ ಚಿತ್ತಸ್ವಾಸ್ಥ್ಯ ಕೆಟ್ಟು ನರಳುತ್ತಾರೆ. ಪರಿಹಾರ?

 

ಪ್ರತಿಕ್ರಿಯಿಸಿ (+)