ಶುಕ್ರವಾರ, ಮೇ 14, 2021
31 °C

ಮಕ್ಕಳ ದೃಷ್ಟಿದೋಷ: ನಿರ್ಲಕ್ಷ್ಯ!

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಮಕ್ಕಳ ದೃಷ್ಟಿದೋಷ: ನಿರ್ಲಕ್ಷ್ಯ!

ರೋಹನ್ ಶಾಲೆಯಲ್ಲಿ ನಾಲ್ಕನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ. ಅವನಿಗೆ ಬೋರ್ಡ್ ಮೇಲೆ ಬರೆದ ಅಕ್ಷರಗಳು ಸರಿಯಾಗಿ ಕಾಣಲಿಲ್ಲ. ಆತ ಎರಡನೇ ಬೆಂಚಿಗೆ ಬಂದು ಕುಳಿತ... ಆದರೂ ಅದೇ ಸ್ಥಿತಿ. ಶಾಲೆಗೆ ಇನ್ನೂ ಬೇಗ ಬಂದು ಮೊದಲ ಬೆಂಚಿಗೆ ಕುಳಿತರೂ ಅಕ್ಷರ ಮಸುಕು-ಮಸುಕು...ತನ್ನ ಬಲಗಣ್ಣಿನಲ್ಲಿ ಮಾತ್ರ ಈ ತೊಂದರೆ ಇದೆ ಎಂಬುದನ್ನು ತಾನೇ ಕಂಡುಕೊಂಡ ರೋಹನ್ ಕ್ರಮೇಣ ಅದರ ಬಳಕೆಯನ್ನೇ ನಿಲ್ಲಿಸಿದ. ಎಡಗಣ್ಣಿನಿಂದ ಮಾತ್ರ ವಸ್ತು-ವಿಷಯಗಳನ್ನು ಗ್ರಹಿಸಲು ಆರಂಭಿಸಿದ. ನಂತರ ಆ ಕಣ್ಣು ಮತ್ತಷ್ಟು ದುರ್ಬಲಗೊಳ್ಳುತ್ತ ಹೋಯಿತು.ವಿಚಿತ್ರ ಎಂದರೆ ರೋಹನ್‌ನ ತಾಯಿ ನೇತ್ರ ತಜ್ಞೆ ಅವರಿಗೇ ಈ ವಿಷಯ ತಿಳಿದಿದ್ದು ಬಹಳ ತಡವಾಗಿ. ಇನ್ನು ಸಾಮಾನ್ಯ ಕುಟುಂಬಗಳ ಮಕ್ಕಳ ಗತಿ ಏನು?ಹೌದು, ಸಾಮಾನ್ಯವಾಗಿ ಮಕ್ಕಳು ತಮ್ಮ ದೃಷ್ಟಿಯಲ್ಲಿ ದೋಷವಿದೆ ಎಂಬ ಸಂಗತಿಯನ್ನು ಗಮನಿಸುವುದೇ ಇಲ್ಲ. ಬೋರ್ಡ್‌ಗೆ ಹತ್ತಿರ ಹೋಗಿ ಕುಳಿತುಕೊಳ್ಳುವುದು, ಪುಸ್ತಕವನ್ನು ಸಮೀಪ ಹಿಡಿದುಕೊಂಡು ಓದುವುದು ಮಾಡುವ ಮೂಲಕ ಕಣ್ಣಿನ ದೋಷದೊಂದಿಗೆ ಹೊಂದಿಕೊಂಡು ಬಿಡಲು ಪ್ರಯತ್ನಿಸುತ್ತಾರೆ. ಪರಿಣಾಮವಾಗಿ ನೇತ್ರ ದುರ್ಬಲ (್ಝಚ್ಢ ಛಿಛಿ) ವಾಗುತ್ತ ಹೋಗುತ್ತದೆ. ಅನೇಕ ಪ್ರಕರಣಗಳಲ್ಲಿ ಪಾಲಕರೂ, ಶಿಕ್ಷಕರೂ ಈ ವಿಷಯವನ್ನು ಕಡೆಗಣಿಸಿ ಬಿಡುತ್ತಾರೆ.`ನಮ್ಮ ದೇಹದ ಯಾವುದೇ ಅಂಗದ ಬಳಕೆಯನ್ನು ಕಡಿಮೆ ಮಾಡಿದರೆ ಅಥವಾ ನಿಲ್ಲಿಸಿದರೆ ಅದು ನಿಷ್ಕ್ರಿಯವಾಗುತ್ತ ಹೋಗುತ್ತದೆ. ಹಾಗೆಯೇ ಕಣ್ಣು ಕೂಡ. ಅದರ ಉಪಯೋಗ ಕಡಿಮೆ ಆದಂತೆ ಅದು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಅದುವೇ  ದುರ್ಬಲ ಕಣ್ಣು (್ಝಚ್ಢ ಛಿಛಿ). ಯಾವುದೇ ಒಂದು ಕಣ್ಣಿನಿಂದ ನೋಡುವುದು ಕಷ್ಟ ಎನಿಸಿದ ಕೂಡಲೇ ಮಕ್ಕಳು ಆ ಕಣ್ಣಿನ ಉಪಯೋಗವನ್ನು ಕಡಿಮೆ ಮಾಡುತ್ತಾರೆ. ಕೂಡಲೇ ಇದನ್ನು ಗುರುತಿಸಿ ಚಿಕಿತ್ಸೆ ಕೊಡಿಸಿದಲ್ಲಿ ಮಕ್ಕಳ ಬೌದ್ಧಿಕ ಬೆಳವಣಿಗೆ ಸುಗಮವಾಗುತ್ತದೆ~ ಎನ್ನುತ್ತಾರೆ ಮಕ್ಕಳ ನೇತ್ರ ವೈದ್ಯ ಡಾ. ಕೌಶಿಕ್ ಮುರುಳಿ.ಶೇ 6ರಷ್ಟು ಶಾಲಾ ಮಕ್ಕಳು ಮೆಳ್ಳಗಣ್ಣು ಅಥವಾ ದೃಷ್ಟಿ ವಕ್ರೀಭವನದಂತಹ ಯಾವುದಾದರೂ ದೃಷ್ಟಿ ದೋಷವನ್ನು ಹೊಂದಿರುತ್ತಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.ಅಂತೆಯೇ ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಮೇಲೂ ಇದು ತನ್ನದೇ ಆದ ಪ್ರಭಾವ ಹೊಂದಿದೆ. ಬೆಳವಣಿಗೆ ಹಂತದಲ್ಲಿ ಮಕ್ಕಳು ಯಾವುದೇ ರೀತಿಯ ದೃಷ್ಟಿದೋಷಕ್ಕೆ ಗುರಿಯಾದರೆ ಅದು ಅವರ ಮಾನಸಿಕ, ಬೌದ್ಧಿಕ ಹಾಗೂ ದೈಹಿಕ ಬೆಳವಣಿಗೆಗಳ ಮೇಲೆ ಪ್ರಭಾವ ಬೀರುತ್ತದೆ.ಆದ್ದರಿಂದ ನಿಮ್ಮ ಮಗುವಿನ ದೃಷ್ಟಿಯನ್ನು ಆಗಾಗ್ಗೆ ಪರೀಕ್ಷಿಸುತ್ತಿರಿ. ಗಮನಿಸುತ್ತಿರಿ. ಯಾವುದೇ ಸಣ್ಣ ಸಂಶಯ ಬಂದರೂ ಕೂಡಲೇ ನೇತ್ರ ತಜ್ಞರನ್ನು ಸಂಪರ್ಕಿಸಿ. ಅವರ ಬೆಳವಣಿಗೆಗೆ ಇದೊಂದು ಅಡ್ಡಿಯಾಗಬಾರದು.ಸಾಮಾನ್ಯ ದೃಷ್ಟಿ ದೋಷಗಳು

ಕೆಲವು ದೃಷ್ಟಿ ದೋಷಗಳು ಹುಟ್ಟಿನಿಂದಲೇ ಬರಬಹುದು, ಇನ್ನೂ ಕೆಲವು ಬಾಲ್ಯಾವಸ್ಥೆಯಲ್ಲಿ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುವ ದೋಷಗಳು ಹೀಗಿವೆ:* ಕಣ್ಣೀರಿನ ನಾಳ ಮುಚ್ಚಿಕೊಂಡಿರುವುದು: ಸುಮಾರು  ಶೇ 2ರಿಂದ 4 ರಷ್ಟು ನವಜಾತ ಶಿಶುಗಳಲ್ಲಿ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಆದರೆ ಇದು ತಾನಾಗಿಯೇ ಗುಣಮುಖವಾಗುವ ಸಾಧ್ಯತೆ ಶೇ 90ರಷ್ಟು ಇರುತ್ತದೆ.ಅಂಬ್ಲೊಪಿಯಾ(ಮಂದ ಕಣ್ಣು): ಪ್ರತಿ 40 ಮಕ್ಕಳಲ್ಲಿ ಒಬ್ಬರಿಗೆ ಈ ತೊಂದರೆ ಕಾಣಿಸಿಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.ಕಣ್ಣಿನ ಪೊರೆಯ ತೊಂದರೆ: ಇದು ಸಾಮಾನ್ಯವಾಗಿ ವಯಸ್ಕರಲ್ಲಿ ಹಾಗೂ ವೃದ್ಧರಲ್ಲಿ ಹೆಚ್ಚಿಗೆ ಕಂಡು ಬರುತ್ತದೆ. ಆದರೂ ಮಕ್ಕಳು ಈ ತೊಂದರೆಯಿಂದ ಹುಟ್ಟುವ ಅಥವಾ ಬಾಲ್ಯಾವಸ್ಥೆಯಲ್ಲಿ ಈ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆದರೆ ಯಾವುದೇ ವಯೋಮಾನದವರಾದರೂ ಈ ತೊಂದರೆಯನ್ನು ಬೇಗನೇ ಗುಣಪಡಿಸಬಹುದು.ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ಇನ್ನೊಂದು ಸಮಸ್ಯೆ ಎಂದರೆ `ಸ್ಟ್ರಾಬಿಸ್ಮಸ್~ ಅಥವಾ ಓರೆಗಣ್ಣು. ಆದರೆ ಇದಕ್ಕೆ ನೀಡುವ ಚಿಕಿತ್ಸೆ ಅತ್ಯಂತ ಸರಳವಾಗಿದ್ದು, ಒಂದೆರಡು ದಿನಗಳಲ್ಲಿಯೇ ಮಗು ತನ್ನ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಸಶಕ್ತನಾಗುತ್ತಾನೆ.ಪಿಂಕ್ ಐ: ಇದೊಂದು ಸಾಂಕ್ರಾಮಿಕ ರೋಗ. ಅದು ಯಾವ ಪ್ರಕಾರದ ಪಿಂಕ್ ಐ ಎಂಬುದನ್ನು ಗಮನಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಬ್ಯಾಕ್ಟೀರಿಯಾದಿಂದ ಬಂದಿದೆಯೇ ಅಥವಾ ವೈರಲ್‌ನಿಂದ ಹರಡಿದೆಯೆ ಎಂಬುದನ್ನು ಪರೀಕ್ಷಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.ಸಮೀಪದೃಷಿ ದೋಷ ಅಥವಾ ದೂರದೃಷ್ಟಿದೋಷಗಳನ್ನು ಅತ್ಯಂತ ಸಾಮಾನ್ಯ ದೋಷಗಳೆಂದು ಪರಿಗಣಿಸಲಾಗಿದ್ದು ಎಷ್ಟು ಬೇಗ ಚಿಕಿತ್ಸೆ ನೀಡಲಾಗುತ್ತದೆಯೊ ಅಷ್ಟು ಬೇಗ ಗುಣ ಹೊಂದುವ ಸಾಧ್ಯತೆ ಹೆಚ್ಚುತ್ತದೆ.ಮಕ್ಕಳ ದೃಷ್ಟಿ ದೋಷವನ್ನು ಪ್ರಾರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸುವುದು ಪಾಲಕರ ಕರ್ತವ್ಯ. ಈ ಕೆಳಗಿನ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ನಿಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯುವುದು ಉತ್ತಮ.ದೃಷ್ಟಿದೋಷದ ಲಕ್ಷಣಗಳು

* ಕಪ್ಪು ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗುವುದು.

* ಕಣ್ಣಿನ ರೆಪ್ಪೆಯ ಊತ.

* ಕಣ್ಣು ವಕ್ರವಾದಂತೆ ಕಾಣುವುದು.

* ಕಣ್ಣು ಉರಿ ಅಥವಾ ತುರಿಕೆ.

* ಕಣ್ಣುಗಳು ಆಗಿಂದಾಗ್ಗೆ ಪಕ್ಕದಿಂದ ಪಕ್ಕಕ್ಕೆ ಪಲ್ಲಟಗೊಳ್ಳುವುದು.

* ಬೋರ್ಡ್ ಮೇಲೆ ಬರೆಯಲಾದ ಅಕ್ಷರಗಳು ಹಾಗೂ ಪುಸ್ತಕದ ಅಕ್ಷರಗಳು ಮಂಜು ಮಂಜಾಗಿ ಕಾಣುವುದು.

* ಪದೇ ಪದೇ ಕಣ್ಣಿನ ಆಯಾಸ ಅನುಭವಕ್ಕೆ ಬರುವುದು.

* ಓದುವಾಗ, ಬರೆಯುವಾಗ ಅಥವಾ ಟಿವಿ ನೋಡಿದಾಗ ತಲೆನೋವು ಕಾಣಿಸಿಕೊಳ್ಳುವುದು.

* ಕೆಲವು ಬಣ್ಣಗಳ ನಡುವಿನ ವ್ಯತ್ಯಾಸ ತಿಳಿಯಲು ಕಷ್ಟ ಎನಿಸುವುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.