ಮಂಗಳವಾರ, ಸೆಪ್ಟೆಂಬರ್ 17, 2019
21 °C

ಮಕ್ಕಳ ನೆಮ್ಮದಿಯನ್ನೂ ಕೆಡಿಸಿದ ನೆಮ್ಮದಿ ಕೇಂದ್ರ

Published:
Updated:

ಚನ್ನಮ್ಮನ ಕಿತ್ತೂರು: ಅವರೆಲ್ಲ ಎಳೆಯ ಮಕ್ಕಳು,  ಮುಂಜಾನೆ ಸಮಯದಲ್ಲಿ ಅರಳಿದ ಮಲ್ಲಿಗೆ ಹೂವಿನಂತೆ ಕಂಡಿದ್ದ ಅವರ ಮುಖಗಳು ಸಂಜೆಯಾಯಿತೆಂದರೆ ಬಾಡಿ ಹೋಗುತ್ತವೆ. ನೀರೂ ಕುಡಿಯದೆ ನಿಂತರೂ ಕೆಲವರ ಸರದಿ ನೆಮ್ಮದಿ ಕೇಂದ್ರ ಮುಚ್ಚುವ ವೇಳೆಯಲ್ಲೂ ಬರುವುದಿಲ್ಲ. ಅದೇ ಬಾಡಿದ ಮುಖಹೊತ್ತು ಅವರು ಮನೆಗೆ ತೆರಳಬೇಕು...ಇದು, ವಿವಿಧ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ನೂತನವಾಗಿ ಜಾರಿಗೆ ತಂದಿರುವ ಸ್ಕಾಲರ್ ಶಿಪ್‌ಗಾಗಿ ಅರ್ಜಿ ಸಲ್ಲಿಸುವ ಮೊದಲು ಪಡೆಯಲೇಬೇಕಾದ ಪ್ರಮಾಣಪತ್ರದ ಫಜೀತಿಯಿದು.ಕಿತ್ತೂರು ಹೋಬಳಿಯ ಸುಮಾರು 45 ಹಳ್ಳಿಗಳಲ್ಲಿರುವ ಪರಿಶಿಷ್ಟ ಪಂಗಡ, ಜಾತಿ ಹಾಗೂ ಅಲ್ಪಸಂಖ್ಯಾತರ ಮಕ್ಕಳು ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯಲು ಸ್ವತ: ಶಾಲೆಯ ಮಕ್ಕಳು ಇಲ್ಲಿಗೆ ಅವುಗಳನ್ನು ತೆಗೆದುಕೊಂಡು ಬರಬೇಕು. ಹೀಗಾಗಿ ನೆಮ್ಮದಿ ಕೇಂದ್ರದ ಎದುರು ಈಗ ಮಕ್ಕಳ ಜಾತ್ರೆಯೇ ನೆರೆಯುತ್ತಿದೆ.ಕೈಯಲ್ಲಿ ತುಂಬಿದ ಅರ್ಜಿ ಫಾರ್ಮ್ ಹಿಡಿದು, ಬಾಡಿದ ಮುಖ ಹೊತ್ತು ನಿಂತಿರುವ ಮಕ್ಕಳನ್ನು ನೋಡಿದರೆ ಮನಸ್ಸು ಕರಗುತ್ತದೆ. ಆದರೆ ಸಮಾಜ ಕಲ್ಯಾಣ ಇಲಾಖೆಗೆ ಈ ನಿಯಮ ಸಡಿಲಿಸಿ ಮೊದಲಿನ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂಬ ಧಾರಾಳ ಮನೋಭಾವ ರೂಢಿಸಿಕೊಳ್ಳಬೇಕೆಂದು ಮಾತ್ರ ಹೊಳೆಯುತ್ತಿಲ್ಲ  ಎಂಬುದು ಪಾಲಕರ ದೂರಾಗಿದೆ.ಕರವೇ ಖಂಡನೆ: ಮಕ್ಕಳ ಮೈಲುದ್ದದ ಸಾಲನ್ನು ಕಳೆದ ಮೂರ‌್ನಾಲ್ಕು ದಿನಗಳಿಂದ ನೋಡುತ್ತಲೇ ಬಂದ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರ ಸಹನೆಯ ಕಟ್ಟೆಯೂ ಶುಕ್ರವಾರ ಒಡೆಯಿತು. `ತುರ್ತಾಗಿ ಮಕ್ಕಳಿಗೆ ಈ ಪ್ರಮಾಣ ಪತ್ರ ದೊರೆಯುವಂತೆ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಬೇಕು~ ಎಂದು ಅವರು ಆಗ್ರಹಿಸಿದರು.`ಕೆಲವು ಮಕ್ಕಳಿಗೆ  ಎರಡು ದಿನಗಳಿಂದ ನೆಮ್ಮದಿ ಕೇಂದ್ರದ ಸುತ್ತಲೂ ನಿಂತು ತಲೆಸುತ್ತು ಬರುತ್ತಿದೆ. ಆದರೂ ಅವರಿಗೆ ಪ್ರಮಾಣ ಪತ್ರ  ದೊರೆತಿಲ್ಲ. ಕೇಂದ್ರದಲ್ಲಿ ಒಂದು ಗಣಕಯಂತ್ರವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಕೆಲಸವೂ ವೇಗದಿಂದ ಸಾಗುತ್ತಿಲ್ಲ. ಓದುವ ಮಕ್ಕಳಿಗೆ ಯಾಕೆ ಇಂತಹ ಶಿಕ್ಷೆ~ ಎಂದು ಅವರು ಪ್ರಶ್ನಿಸಿದರು.`ನಾಲ್ಕು ದಿನಗಳೊಳಗಾಗಿ ಈ ದುರವಸ್ಥೆ ಸರಿಪಡಿಸಬೇಕು. ಹೆಚ್ಚು ಗಣಕಯಂತ್ರಗಳ ವ್ಯವಸ್ಥೆ ಮಾಡಿ ಅವರಿಗೆಲ್ಲ ಬೇಗ ಪ್ರಮಾಣ ಪತ್ರಗಳು ದೊರೆಯುವಂತೆ ಮಾಡಬೇಕು. ಅಥವಾ ಮೊದಲಿದ್ದ ಹಾಗೆ ಮಕ್ಕಳ ಓದುತ್ತಿರುವ ಆಯಾ ಶಾಲೆಗಳಲ್ಲಿ ಪರಿಶಿಷ್ಟ ಪಂಗಡ, ಜಾತಿ ಹಾಗೂ ಅಲ್ಪಸಂಖ್ಯಾತರ ಪಟ್ಟಿ ಸಿದ್ಧಗೊಳಿಸಿ ಅವುಗಳನ್ನು ಆಯಾ ಶಾಲೆಯ ಮುಖ್ಯೋಪಾಧ್ಯಾಯರಿಂದ ದೃಢೀಕರಿಸಿ ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸಿಕೊಡಬೇಕು~ ಎಂದು ಸಲಹೆ ಮಾಡಿರುವ ಸದಸ್ಯರು, `ಬೇಗ ಪರಿಹಾರ ದೊರೆಯದಿದ್ದರೆ ನೆಮ್ಮದಿ ಕೇಂದ್ರದ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು~ ಎಂದು  ಕರವೇ ಮುಖಂಡರಾದ ಮಂಜುನಾಥ ಪೂಜೇರ, ರಾಚಯ್ಯ ಹಿರೇಮಠ, ಮಡಿವಾಳಯ್ಯ ಹಿರೇಮಠ, ವಿಠ್ಠಲ ಅಡಿಬಟ್ಟಿ, ಬಸವರಾಜ ಕೆಳಗಡೆ, ರಮೇಶ ಮಾದರ,  ಸಿದ್ಧಾರೂಢ ಕುರಬರ, ಜಂಗಿನಮಠ, ಸರದಾರ ಮತ್ತಿತರರು ಎಚ್ಚರಿಸಿದ್ದಾರೆ.

Post Comments (+)