ಮಕ್ಕಳ ನೆರವಿಗಾಗಿ ಸಹಾಯವಾಣಿಗೆ ಕರೆ ಮಾಡಿ
ಬೀದರ್: ಸಂಕಷ್ಟದಲ್ಲಿರುವ, ದೌರ್ಜನ್ಯಕ್ಕೆ ಒಳಗಾಗುವ ಮಕ್ಕಳ ನೆರವಿಗೆ ಜಿಲ್ಲೆಯಲ್ಲಿ ದೂರವಾಣಿ ಸಂಖ್ಯೆ 1098 ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಮನವಿ ಮಾಡಿದ್ದಾರೆ.
ಬೀದರ್ ಜಿಲ್ಲಾ ಮಕ್ಕಳ ಸಹಾಯವಾಣಿ ಸಲಹಾ ಮಂಡಳಿ ಸಭೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮತ್ತು ಸಂಕಷ್ಟದಲ್ಲಿರುವ ಮಕ್ಕಳ ತ್ವರಿತ ರಕ್ಷಣೆಗಾಗಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಮಕ್ಕಳು ಸಂಕಷ್ಟದಲ್ಲಿರುವ ಅಥವಾ ಹಿಂಸೆ ಅನುಭಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದರೆ ತಕ್ಷಣ 1098 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು. ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಸಹ ಸಹಾಯವಾಣಿ ಮೂಲಕ ನೆರವು ಒದಗಿಸಲಾಗುವುದು. ಈ ದೂರವಾಣಿ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆಗೆ ಎಲ್ಲರೂ ನೆರವಾಗಬಹುದಾಗಿದೆ ಎಂದು ಹೇಳಿದರು.
ಕಾಣೆಯಾದ ಮಕ್ಕಳ ವಿವರಗಳನ್ನೊಳಗೊಂಡ ವೆಬ್ಸೈಟ್ ರಚಿಸಬೇಕು. ಕಾಣೆಯಾದ ಮಕ್ಕಳ ಸಂಪೂರ್ಣ ವಿವರಗಳು ಇದರಲ್ಲಿ ಇರಬೇಕು. ಇದಕ್ಕಾಗಿ ಬೇಕಾಗುವ ಎಲ್ಲ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.
ಮಕ್ಕಳ ಸಹಾಯವಾಣಿ 1098 ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ. ಮಕ್ಕಳ ಹಕ್ಕುಗಳ ಕುರಿತು ಆಕಾಶವಾಣಿಯಲ್ಲಿ ಪ್ರಸಾರ ಹಾಗೂ 1098 ಬಗ್ಗೆ ಚಿತ್ರಮಂದಿರಗಳಲ್ಲಿ ಸ್ಲೈಡ್ ತೋರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಪೋಲೀಸ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಮಿಕ ಇಲಾಖೆ ಮತ್ತು ರೆವೆನ್ಯೂ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಈ ಬಗ್ಗೆ ಅಧಿಕಾರಿಗಳು ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಸೂಚಿಸಿದರು.
ಇದುವರೆಗೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ 500 ಕರೆಗಳು ಬಂದಿದ್ದು, ಅದರಲ್ಲಿ 4 ಕರೆಗಳು ಕಾಣೆಯಾದ ಮಕ್ಕಳ ಬಗ್ಗೆ ಬಂದಿದ್ದವು. ಇದುವರೆಗೆ ಇಬ್ಬರು ಮಕ್ಕಳನ್ನು ಹುಡುಕಿಸಲಾಗಿದೆ. ಉಳಿದ ಕರೆಗಳು ವಿವಿಧ ರೀತಿಯ ಮಾಹಿತಿಗಳಿಗೆ ಸಂಬಂಧಿಸಿದ್ದವಾಗಿದ್ದು, ಅವುಗಳನ್ನು ನೋಂದಣಿ ಮಾಡಿ ಅವಕ್ಕೆ ಸೂಕ್ತವಾಗಿ ಉತ್ತರಿಸಲಾಗಿದೆ ಎಂದರು.
ಈಗಾಗಲೇ ಶಾರದಾ ರುಡ್ಸೆಟ್ನ್ನು ಜಿಲ್ಲೆಯ ನೋಡೆಲ್ ಕೇಂದ್ರವನ್ನಾಗಿ ಗುರುತಿಸಲಾಗಿದೆ. ಸರ್ಕಾರೇತರ ಸಂಸ್ಥೆಗಳಾದ ಸಹಯೋಗ ಸಂಸ್ಥೆ ಭಾಲ್ಕಿ, ಆರ್ಬಿಟ್ ಸಂಸ್ಥೆ ಹುಮನಾಬಾದ್ ಮತ್ತು ಬಸವಕಲ್ಯಾಣ, ಡಾ. ಅಂಬೇಡ್ಕರ್ ಸಂಸ್ಥೆ ಔರಾದ್ ಹಾಗೂ ಡಾನ್ ಬೋಸ್ಕೋ ಸಂಸ್ಥೆಯು ಬೀದರ್ ತಾಲ್ಲೂಕಿನಲ್ಲಿ ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್ ಜೊತೆಗೆ ಮಕ್ಕಳ ರಕ್ಷಣೆ ಕಾರ್ಯದಲ್ಲಿ ತೊಡಗಿವೆ. ಈ ಸಂಸ್ಥೆಗಳಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಮಕ್ಕಳು ಸಂಕಷ್ಟದಲ್ಲಿರುವ ಬಗ್ಗೆ ಮಾಹಿತಿ ಬಂದಲ್ಲಿ ಅಲ್ಲಿಗೆ ತೆರಳಿ ನೆರವು ನೀಡಲಿವೆ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.