ಸೋಮವಾರ, ಆಗಸ್ಟ್ 19, 2019
21 °C
ಜಿಲ್ಲೆಯ ವಿವಿಧೆಡೆ ಹಾಲು ವಿತರಣೆ

ಮಕ್ಕಳ ಪೌಷ್ಟಿಕತೆಗೆ `ಕ್ಷೀರಭಾಗ್ಯ'

Published:
Updated:

ಹಾಸನ: `ತಾಯಿಯ ಎದೆಹಾಲು ಕುಡಿದ ಮಕ್ಕಳು ಹೆಚ್ಚು ಕಾಲದವರೆಗೆ ಆರೋಗ್ಯವಂತರಾಗಿರುತ್ತಾರೆ. ತಮ್ಮ ಮಕ್ಕಳು ಎದೆಹಾಲಿನಿಂದ ವಂಚಿತರಾಗದಂತೆ ಮಹಿಳೆಯರು ಎಚ್ಚರ ವಹಿಸಬೇಕು' ಎಂದು ಶಾಸಕ ಎಚ್.ಎಸ್. ಪ್ರಕಾಶ್ ನುಡಿದರು.ಹಾಸನ ಹೊರ ವಲಯದ ದೇವೇಗೌಡ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಹಾಲು ವಿತರಣೆ ಕಾರ್ಯಕ್ರಮದ  ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ವಿವಿಧ ಕಾರಣಗಳಿಂದ ಅಪೌಷ್ಠಿಕತೆಗೆ ಒಳಗಾದ ಮಕ್ಕಳ ಏಳಿಗೆಗೆ ಹಾಲು ಉಪಯೋಗವಾಗುತ್ತದೆ. ಆದರೆ ಶಾಲೆಗಳಿಗೆ ಪೂರೈಕೆಯಾಗುವ ಹಾಲು ಮಾರಾಟವಾಗದಂತೆ ಶಿಕ್ಷಕರು ಎಚ್ಚರ ವಹಿಸಬೇಕು. ಮಕ್ಕಳಿಗೆ ಕೊಡಬೇಕಾದ ಹಾಲು ಮಾರಾಟ ಮಾಡಿದರೆ ಅದು ಪಾಪದ ಕೆಲಸವಾಗುತ್ತದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಮ್, ವಾರದಲ್ಲಿ ಮೂರು ದಿನಗಳ ಬದಲು ಎಲ್ಲ ದಿನಗಳಲ್ಲೂ ಹಾಲು ನೀಡುವಂತಾಗಬೇಕು ಮತ್ತು ಈ ಯೋಜನೆ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.ಅಡುಗೆಯವರ ನಿರ್ಲಕ್ಷ್ಯದಿಂದಾಗಿ ದೇಶದ ವಿವಿಧೆಡೆ ಬಿಸಿಯೂಟ ಹಾಗೂ ಹಾಲು ವಿತರಣೆಯಲ್ಲಿ ಅನಾಹುತಗಳು ಸಂಭವಿಸಿರುವುದು ಆತಂಕಕಾರಿ ವಿಚಾರ. ಸಿಬ್ಬಂದಿ ಅತಿ ಹೆಚ್ಚಿನ ಎಚ್ಚರ ವಹಿಸಿ ಆಹಾರ ಸಿದ್ಧಪಡಿಸಬೇಕು. ಸ್ವಚ್ಛತೆ ಕಾಪಾಡಿ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಬೇಕು' ಮನವಿ ಮಾಡಿಕೊಂಡರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿಳಿ ಚೌಡಯ್ಯ, ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ ಸಿಂಗ್ ಮಾತನಾಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಸಿ. ಚಿದಾನಂದ್ ಸ್ವಾಗತಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಆರ್. ಬಸವರಾಜ ವಂದಿಸಿದರು.ಅರಸೀಕೆರೆ ವರದಿ:  ಪಟ್ಟಣದ ಪೆಟ್ಟಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕ್ಷೀರಭಾಗ್ಯ ಯೋಜನೆಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ ಗುರುವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಮಕ್ಕಳಲ್ಲಿನ ರಕ್ತ ಹೀನತೆ ಹಾಗೂ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಟರಾಜ್ ಮಾತನಾಡಿ, ತಾಲ್ಲೂಕಿನಲ್ಲಿರುವ 500 ಶಾಲೆಗಳ 33 ಸಾವಿರ ವಿದ್ಯಾರ್ಥಿಗಳು ಮತ್ತು 2 ಸಾವಿರ ಅಂಗನವಾಡಿ ಮಕ್ಕಳು ಸೇರಿ 35 ಸಾವಿರ ಮಕ್ಕಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ತಿಳಿಸಿದರು.18 ಗ್ರಾಂ ಕೆನೆಭರಿತ ಹಾಲಿನ ಪುಡಿಗೆ 150 ಮಿಲಿ ಲೀಟರ್ ನೀರು ಸೇರ್ಪಡೆ ಮಾಡಿದ ಹಾಲನ್ನು ವಿತರಿಸುವ ಬಗ್ಗೆ ಈಗಾಗಲೇ ಬಿಸಿಯೂಟದ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.ತಹಶೀಲ್ದಾರ್ ಕೇಶವಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ  ಜಿಲ್ಲಾ ಘಟಕದ ಅಧ್ಯಕ್ಷ ಶಿವೇಗೌಡ, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಮೋತಿಲಾಲ್,  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗಿರಿಗೌಡ, ಉಪಾಧ್ಯಕ್ಷ ಸಿ.ಬಿ. ಕುಮಾರ್, ಕಾರ್ಯದರ್ಶಿ ಅಡವಿಸ್ವಾಮಿ ಇದ್ದರು.ಹಳೇಬೀಡು ವರದಿ: ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಸರ್ಕಾರ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಮುಖ್ಯ ಶಿಕ್ಷಕಿ ನೇತ್ರಾವತಿ ಹೇಳಿದರು.ಬಸ್ತಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಕ್ಷೀರ ಭಾಗ್ಯ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರೇಣುಕಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರವಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಮಂಜುನಾಥ, ಈಶ್ವರಪ್ಪ, ದಾಕ್ಷಾಯಿಣಿ ಇದ್ದರು.ಬಸ್ತಿಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಮಮತಾ ಹಾಲಿನ ಮಹತ್ವದ ಬಗ್ಗೆ ತಾಯಂದಿರು ಹಾಗೂ ಮಕ್ಕಳಿಗೆ ತಿಳಿವಳಿಕೆ ನೀಡುವ ಮೂಲಕ ಕ್ಷೀರ ಯೋಜನೆಗೆ ಚಾಲನೆ ನೀಡಿದರು.ಅರಕಲಗೂಡು ವರದಿ: ಮಕ್ಕಳಲ್ಲಿನ ಪೌಷ್ಠಿಕಾಂಶಗಳ ಕೊರತೆ ನೀಗಲು ಸರ್ಕಾರ ಕ್ಷೀರ ಭಾಗ್ಯ ಯೋಜನೆ ಜಾರಿಗೊಳಿಸಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಬಿ. ರೇವಣ್ಣ ತಿಳಿಸಿದರು.ಇಲ್ಲಿನ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಕ್ಷೀರ ಭಾಗ್ಯ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಾಲ್ಲೂಕಿನಲ್ಲಿ 21,140 ಮಕ್ಕಳು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಇವರಲ್ಲಿ ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ 18913 ಹಾಗೂ ಅನುದಾನಿತ ಶಾಲೆಗಳ 2270 ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಮಾಹಿತಿ ನೀಡಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಾಮಾಕ್ಷಮ್ಮ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದರು.ಪಟ್ಟಣ ಪಂಚಾಯಿತಿ ಸದಸ್ಯ ನಂದಕುಮಾರ್, ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ಮಲ್ಲೇಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಂದ್ರಶೇಖರ್, ಬಿಆರ್‌ಸಿ ರಮೇಶ್, ಇಸಿಒ ಚಲುವರಾಜ್ ಉಪಪ್ರಾಂಶುಪಾಲ ಶ್ರಿನಿವಾಸ್ ಇತರರು ಹಾಜರಿದ್ದರು.ಬಾಣಾವರ ವರದಿ: ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಸದೃಢರಾಗಿಸಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಶಿವಕುಮಾರ್ ತಿಳಿಸಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ `ಕ್ಷೀರ ಭಾಗ್ಯ' ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ಬಿ. ರವಿಶಂಕರ್ ಮಕ್ಕಳಿಗೆ ಹಾಲು ನೀಡುವ ಮೂಲಕ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಆರ್. ಸುರೇಶ್, ಪ್ರಕಾಶ್, ದೈಹಿಕ ಶಿಕ್ಷಣ ಶಿಕ್ಷಕರಾದ ವಿ. ಮಹೇಶ್ವರಪ್ಪ, ಶಿಕ್ಷಕರಾದ ಡಿ.ಬಿ. ಸುಧಾಮಣಿ, ಎಚ್.ಎಸ್. ನೀಲಕಂಠಪ್ಪ, ಎಚ್.ಜಿ.ಮಲ್ಲೇಗೌಡ ಇದ್ದರು.ಚನ್ನರಾಯಪಟ್ಟಣ ವರದಿ: ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸಬೇಕಾದರೆ ಪೌಷ್ಟಿಕ ಆಹಾರ ಅಗತ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಕ್ಷೀರ ಯೋಜನೆಗೆ ಚಾಲನೆ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಪಡಿತರ ಚೀಟಿ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.ತಾಲ್ಲೂಕಿನಲ್ಲಿ 1ರಿಂದ 10ನೇ ತರಗತಿವರೆಗಿನ 25,085 ಹಾಗೂ ಅಂಗನವಾಡಿಯ 14,500 ಮಕ್ಕಳಿಗೆ ಈ ಯೋಜನೆ ಅನ್ವಯವಾಗಲಿದೆ ಎಂದು ತಿಳಿಸಿದರು.ಒಂದೂವರೆ ತಿಂಗಳಲ್ಲಿ ತಾಲ್ಲೂಕಿನಲ್ಲಿ ಪಡಿತರ ಚೀಟಿ ವಿತರಿಸಲಾಗುವುದು. ಅರ್ಹರಿಗೆ ಕಾರ್ಡ್ ತಲುಪುವಂತಾಗಬೇಕು. ಸಮರ್ಪಕ ಪಡಿತರ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪಾಂಡು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಶಿಲ್ಪಾ ಶ್ರೀನಿವಾಸ್, ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ನಿಂಗರಾಜಪ್ಪ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಬಿ.ಎ. ಕಾಳೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ಅಧಿಕಾರಿ ಗಂಗಪ್ಪಗೌಡ, ಶಿಕ್ಷಣ ಇಲಾಖೆಯ ಕೃಷ್ಣೇಗೌಡ, ನಾಗೇಶ್, ಪುರಸಭಾ ಸದಸ್ಯರಾದ  ಕೆ.ಜೆ. ಸುರೇಶ್ ಇದ್ದರು.ಜಾವಗಲ್ ವರದಿ:  ಮಕ್ಕಳ ಆರೋಗ್ಯ ಸಂವರ್ಧನೆಗೆ ಕ್ಷೀರ ಭಾಗ್ಯ ಯೋಜನೆ ಉಪಯುಕ್ತವಾಗಿದೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಸಂತರಾಜ್ ಅರಸ್ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಗುರುವಾರ ನಡೆದ ಕ್ಷೀರ ಭಾಗ್ಯ ಯೋಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮೀರವಿಶಂಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಮಂಜುನಾಥ್ ಅವರು ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಉಪಪ್ರಾಂಶುಪಾಲ ಯೋಗೀಶ್, ಶಿಕ್ಷಣ ಸಂಪನ್ಮೂಲ ವ್ಯಕ್ತಿ ವಿಷ್ಣುವರ್ಧನ್, ಶಿಕ್ಷಕರಾದ ಪುಟ್ಟಶಂಕರಪ್ಪ, ಮರುಳಸಿದ್ದಪ್ಪ ಚಂದ್ರೇಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜೆ.ವಿ. ರುದ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಕಲ್ಲೇಶ್ ನಾಗರಾಜು, ಭಾರತಿ, ಮಂಜುನಾಥ್ ಇದ್ದರು.ಮತ್ತೊಂದೆಡೆ, ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮೀರವಿಶಂಕರ್ ಅವರು ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕ ಶಿವಣ್ಣ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸಿದ್ದರು.ಮಕ್ಕಳ ಮನೆ ಪೋಷಕರ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಎಸ್‌ಡಿಎಂಸಿ ಸದಸ್ಯ ನುರುಲ್ಲಾ, ಶಿಕ್ಷಕ ದಾನೇಗೌಡ, ಸುರೇಶ್, ಹಾಲಪ್ಪ, ನಾಗರತ್ನ, ಸರ್ವಮಂಗಳ, ಸರಸ್ವತಿ ಇದ್ದರು.ವಿವಿಧೆಡೆ ಹಾಲು ವಿತರಣೆ: ಇಲ್ಲಿನ ಡಾ.ಅಂಬೇಡ್ಕರ್ ಪ್ರೌಢಶಾಲೆ, ಬಂದೂರು ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಲು ವಿತರಿಸಲಾಯಿತು. ಮುಖ್ಯ ಶಿಕ್ಷಕರಾದ ಸೋಮಶೇಖರ್, ಸುಷ್ಮಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೂರ್ತಿ ಇದ್ದರು.ಹಿರೀಸಾವೆ ವರದಿ: ಹೋಬಳಿಯ ಎಲ್ಲ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಹಾಗೂ ಅನುದಾನಿತ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಗುರುವಾರ ಮಕ್ಕಳಿಗೆ ಹಾಲನ್ನು ವಿತರಿಸುವ ಮೂಲಕ `ಕ್ಷೀರಭಾಗ್ಯ' ಯೋಜನೆಗೆ ಚಾಲನೆ ನೀಡಲಾಯಿತು.ಪಟ್ಟಣದ ಶಾಲೆಗಳಲ್ಲಿ ನಡೆದ `ಕ್ಷೀರಭಾಗ್ಯ'ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿಶ್ರೀಧರ್, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಎಸ್.ರವಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಬೋರಣ್ಣ, ಸಿಆರ್‌ಪಿ ಪ್ರಸನ್ನ, ಎಸ್‌ಡಿಎಂಸಿ ಅಧ್ಯಕ್ಷರಾದ ನರಸಿಂಹಮೂರ್ತಿ, ಕುಮಾರ್ ಮತ್ತು ಎಸ್‌ಡಿಎಂಸಿ ಸದಸ್ಯರು ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಹೊಳೆನರಸೀಪುರ ವರದಿ: ಇಲ್ಲಿನ ಕೋಟೆ ಸರ್ಕಾರಿ ಶಾಲೆಯಲ್ಲಿ ಕ್ಷೀರಭಾಗ್ಯ ಗುರುವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚಂದ್ರಮತಿ  ಚಾಲನೆ ನೀಡಿದರು. ಸರ್ಕಾರದ ಈ ಉತ್ತಮ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತರಲು ಶಾಲೆಯ ಎಲ್ಲ ಸಿಬ್ಬಂದಿ ಗಮನ ಹರಿಸಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಯೋಗೇಶ್ ಮಾತನಾಡಿ ತಾಲ್ಲೂಕಿನ 310 ಶಾಲೆಗಳಲ್ಲಿ ಈ ಯೋಜನೆ ಇಂದಿನಿಂದ ಜಾರಿಗೆ ಬಂದಿದ್ದು 18860 ವಿದ್ಯಾರ್ಥಿಗಳಿಗೆ ಪ್ರತಿ ದಿನ ಹಾಲು ವಿತರಿಸಲಾಗುವುದು ಎಂದರು.

ಶಿಷ್ಟಾಚಾರ ಉಲ್ಲಂಘನೆ

ಮೀಸಲಾತಿಯಿಂದಾಗಿ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಮಹಿಳೆಯರ ಬದಲಿಗೆ ಅವರ ಗಂಡಂದಿರು ಅಧಿಕಾರ ನಡೆಸುವ ವಿಚಾರ ಬಹುತೇಕ ಎಲ್ಲ ಕಡೆ ನಡೆಯುತ್ತಿದೆ. ಆದರೆ ಸದಸ್ಯರಿಗೆ ಸಲ್ಲಬೇಕಾದ ಸ್ಥಾನ ಹಾಗೂ ಗೌರವವನ್ನೂ ಪತಿಮಹಾಶಯರೇ ಕಸಿದುಕೊಂಡಿರುವ ಘಟನೆ ದೇವೇಗೌಡ ನಗರದಲ್ಲಿ ನಡೆದಿದೆ.ಹಾಲು ವಿತರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುಭದ್ರಾ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಕನ್ಯಾ ಅವರು ಪಾಲ್ಗೊಳ್ಳಬೇಕಾದುದು ಸಂಪ್ರದಾಯ ಮತ್ತು ಶಿಷ್ಟಾಚಾರ. ಆದರೆ ಈ ಕಾರ್ಯಕ್ರಮದಲ್ಲಿ ಅವರಿಬ್ಬರ ಬದಲು ಅವರ ಪತಿಮಹಾಶಯರು ವೇದಿಕೆಯನ್ನು ಅಲಂಕರಿಸಿದ್ದರು.ಅತಿಥಿಗಳನ್ನು ಸ್ವಾಗತಿಸಿದ ಚಿದಾನಂದ ಅವರೂ, `ತಾ.ಪಂ. ಅದಸ್ಯೆ ಸುಕನ್ಯಾ ಅವರೆ ಪತಿ ಮೊಗಣ್ಣ ಹಾಗೂ ಜಿ.ಪಂ. ಸದಸ್ಯೆ ಸುಭದ್ರಾ ಅವರ ಪತಿ ಮೊಗಣ್ಣಗೌಡ' ಎಂದೇ ಪರಿಚಯಿಸಿ ಸ್ವಾಗತಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಸ್. ಪ್ರಕಾಶ್ ಅವರೂ ಇದೇ ರೀತಿ ಸಂಬೋಧಿಸಿ ಇಬ್ಬರಿಗೂ ಚಾಟಿ ಬೀಸಿದರು. ಆದರೆ ವೇದಿಕೆಯಲ್ಲಿದ್ದ ಈ ಸದಸ್ಯರಿಗೆ ಅದರ ಬಿಸಿ ತಾಕಿದಂತೆ ಕಾಣಲೇ ಇಲ್ಲ.

Post Comments (+)