ಮಕ್ಕಳ ಪ್ರತಿಭೆಗೆ ನೀರೆರೆದು ಪೋಷಿಸಲು ಸಲಹೆ

ಮಂಗಳವಾರ, ಜೂಲೈ 23, 2019
20 °C

ಮಕ್ಕಳ ಪ್ರತಿಭೆಗೆ ನೀರೆರೆದು ಪೋಷಿಸಲು ಸಲಹೆ

Published:
Updated:

ಹುಬ್ಬಳ್ಳಿ: ಮಕ್ಕಳ ಕ್ರಿಯಾತ್ಮಕ ಆಲೋಚನೆಗಳಿಗೆ ಪೋಷಕರು, ಸಂಘ-ಸಂಸ್ಥೆಗಳು ನೀರೆರೆದು ಪೋಷಿಸಬೇಕು. ಆಗಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮೇಯರ್ ಡಾ. ಪಾಂಡುರಂಗ ಪಾಟೀಲ ಸಲಹೆ ನೀಡಿದರು.

ರಾಯಾಪುರದಲ್ಲಿರುವ ಇಸ್ಕಾನ್ ದೇಗುಲದಲ್ಲಿ ಸೋಮವಾರ `ಸಾಂಸ್ಕೃತಿಕ ಉತ್ಸವ-12~ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿ, ಪರಂಪರೆ ಉಳಿಸಲು ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಚೈತನ್ಯಗೊಳಿಸಿ, ಅವರ ಅಭಿವ್ಯಕ್ತಿಗೆ ಅವಕಾಶ ಒದಗಿಸುವ ಅಗತ್ಯವಿದೆ ಎಂದು ಹೇಳಿದರು.

ಧಾರ್ಮಿಕ ಸಂಸ್ಥೆಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳನ್ನು ಮಾತ್ರ ನಡೆಸಿಕೊಡುತ್ತವೆ. ಆದರೆ ಇಸ್ಕಾನ್ ಇಂತಹ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ನಾಳಿನ ನಾಗರಿಕರಾದ ಮಕ್ಕಳ ಕನಸುಗಳಿಗೆ ನೀರೆರೆಯುತ್ತಿದೆ ಎಂದು ಅವರು ಶ್ಲಾಘಿಸಿದರು.

ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ರಾಜೀವ್ ಲೋಚನ್‌ದಾಸ್ ಮಾತನಾಡಿ, ನಮ್ಮಳಗಿನ ಸೃಜನಶೀಲತೆಯು ಸಮಾಜದ ಒಳಿತಿಗೆ ಬಳಕೆಯಾಗಬೇಕು.

ಆಗಷ್ಟೇ ಅದಕ್ಕೆ ಬೆಲೆ ಎಂದರು. ರಾಯಾಪುರದಲ್ಲಿ ರಾಧಾಕೃಷ್ಣ ದೇಗುಲ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಆಗಸ್ಟ್ 15ರಂದು ಚಾಲನೆ ದೊರೆಯಲಿದೆ. ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಪ್ರಾಯೋಜಕರಾದ ಹಿಮಾಲಯ ಎಂಟರ್‌ಪ್ರೈಸಸ್‌ನ ನರೇಂದ್ರ ಬರ್ವಲ್, ಪಿಎಂಸಿ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಶ್ರೀಪಾದ್ ಪಧ್ಯೆ, ಸ್ಟುಡೆಂಟ್ ಡೆವಲಪ್‌ಮೆಂಟ್ ಟ್ರಸ್ಟ್‌ನ ನಿರ್ದೇಶಕ ಮಂಜುನಾಥ ಎಲ್. ಹಗೇದಾರ, ಕೆನ್-ಅಗ್ರಿಟೆಕ್‌ನ ಎಂಡಿ ವಿವೇಕ್ ನಾಯಕ್, ಶ್ರೀಶೈಲ ಪೇಂಟ್ಸ್‌ನ ಗಿರೀಶ ನಲವಡಿ, ಮೈ ಕಂಪ್ಯೂಟರ್ ಅಕಾಡೆಮಿಯ ರಾಘವೇಂದ್ರ ಕಟ್ಟಿ ಇತರರು ಹಾಜರಿದ್ದರು.

ಮೊದಲ ದಿನ ಪೇಂಟಿಂಗ್, ವೇಷಭೂಷಣದ ಹಬ್ಬ

ಕಾರ್ಯಕ್ರಮದ ಮೊದಲ ದಿನ ಇಸ್ಕಾನ್ ಅಂಗಳದಲ್ಲಿ ಚಿತ್ರರಚನೆ, ಪೌರಾಣಿಕ ಪೋಷಾಕುಗಳ ವೇಷಭೂಷಣ ಸ್ಪರ್ಧೆಗಳು ನಡೆದವು.

ಕೈಯಲ್ಲಿ ಬಣ್ಣದ ಬ್ರಶ್ ಹಿಡಿದ ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆಯ ಸನ್ನಿವೇಶಗಳನ್ನು ಕ್ಯಾನ್ವಾಸುಗಳ ತುಂಬ ಹರಡಿದರು. 8ರಿಂದ 10 ತರಗತಿಯ ಸಾವಿರಕ್ಕೂ ಹೆಚ್ಚು ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡರು.

ವೇಷಭೂಷಣ ಸ್ಫರ್ಧೆಯಲ್ಲಂತೂ ಪೌರಾಣಿಕ ಪಾತ್ರಗಳೇ ಭೂಮಿಗೆ ಇಳಿದಿದ್ದವು. ರಾಮ, ಕೃಷ್ಣ, ರಾವಣ, ಹನುಮಂತರಿಂದ ದಾಸಶ್ರೇಷ್ಠರವರೆಗೆ ವಿವಿಧ ಪೋಷಾಕುಗಳಲ್ಲಿ ವಿದ್ಯಾರ್ಥಿಗಳು ವಿಜೃಂಭಿಸಿದರು. ಮೂರು ಮತ್ತು ನಾಲ್ಕನೇ ತರಗತಿಯ 500 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.  ಕಳೆದ ಕೆಲವು ವರ್ಷಗಳಿಂದಲೂ ಇಸ್ಕಾನ್ ಸತತವಾಗಿ ಈ ಹಬ್ಬ ಆಯೋಜಿಸುತ್ತ ಬಂದಿದೆ. ಈ ವರ್ಷ ಹುಬ್ಬಳ್ಳಿ-ಧಾರವಾಡದ ಹದಿನೈದು ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸುತ್ತಿದ್ದಾರೆ. ಇದೇ 14ರವರೆಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry