ಶುಕ್ರವಾರ, ಡಿಸೆಂಬರ್ 6, 2019
17 °C

ಮಕ್ಕಳ ಮನಸ್ಸು ಮಲ್ಲಿಗೆ...

Published:
Updated:
ಮಕ್ಕಳ ಮನಸ್ಸು ಮಲ್ಲಿಗೆ...

ರೋಹಿತ್,

ಏನ್ ಮಾಡ್ತಾ ಇದ್ದೀಯಾ? ಅದೇ ಮಾಮೂಲಿ ರಗಳೆ-ರೊಳ್ಳೆ ತೆಗೆದುಕೊಂಡು, ಶೀತದಿಂದ ಕೆಮ್ಮುತ್ತಾ ಮುದುಕರ ತರಹ ಮೂಲೆ ಸೇರಿದ್ದೀಯಾ? ಇಲ್ಲಾ ಮನೆಯ ಸಾಮಾನುಗಳನ್ನೆಲ್ಲಾ ಅತ್ತಿತ್ತ ಹರಡಿ, ಸೋಫಾ ಕವರ್ ಕಿತ್ತುಹಾಕಿ, ಅಡುಗೆ ಮನೆಯಲ್ಲಿ `ಸ್ಕೇಟಿಂಗ್~ ಮಾಡೋಕೆ ಹೋಗಿ ಅಮ್ಮನಿಂದ ಏಟು ತಿಂದು ಅಳುತ್ತಾ ಕೂತಿದ್ದೀಯಾ?ಇಲ್ಲಾ ಜಾಣ ಹುಡುಗನಂತೆ ಅಕ್ಕನ ಹತ್ತಿರ ಪಾಠ ಹೇಳಿಸಿಕೊಳ್ತಾ ಇದ್ದೀಯಾ? ನೀನೀಗ ಆರು ವರ್ಷದ ಹುಡುಗ ಅನ್ನೋದನ್ನ ಅದೆಷ್ಟು ಜಬರ್‌ದಸ್ತಿನಿಂದ ಎದೆ ಸೆಟೆಸಿಕೊಂಡು ಹೇಳ್ತೀಯಾ? ಅದೇ ಧೈರ್ಯ ನಿನಗೆ ಎಲ್ಲದರಲ್ಲಿಯೂ ಇರ‌್ಬೇಕು ಅಲ್ವಾ? ಮೊದಲು ನಿನ್ನ ಮೇಲಿನ ದೂರುಗಳ ಪಟ್ಟಿ ಹೇಳಿ ಆಮೇಲೆ ನೀನು ಕೇಳಿದ್ದಕ್ಕೆ ಉತ್ತರ ಕೊಡ್ತೀನಿ ಸರೀನಾ?

ನೀನು ಮೊದಲಿನಿಂದಾನೂ ತುಂಟಾನೇ.ಅಮ್ಮನ ಹೊಟ್ಟೆಯಲ್ಲಿರುವಾಗಲೇ ಅವಳ ಹೊಟ್ಟೆಗೆ ಕಾಲು ಕೈಗಳಿಂದ ಹೊಡೆಯುತ್ತಿದ್ದೆ, ಒದೆಯುತ್ತಿದ್ದೆ. ಆಮೇಲೆ ಹೊರ ಪ್ರಪಂಚಕ್ಕೆ ಬಂದ ಮೇಲೂ ಅವಳಿಗೆ ನೀನು ಸರಿಯಾಗಿ ನಿದ್ದೆ ಮಾಡಲು ಊಟ ಮಾಡಲು ಬಿಡುತ್ತಿರಲಿಲ್ಲ. ರಾತ್ರಿ ಎಚ್ಚರವಾಗಿದ್ದು, ಹಗಲು ಮಲಗುತ್ತಿದ್ದ ತಂಟೆಕೋರ ನೀನು. ಅಂಬೆಗಾಲಿಡಬೇಕಾದರೂ ನಿನ್ನನ್ನು ಹಿಡಿದು ಒಂದು ಕಡೆ ಹಿಡಿದು ಕೂಡಿಸೋದು ಕಷ್ಟವಾಗ್ತಿತ್ತು. ಕುರ್ಚಿಯ ಕೆಳಗೆ, ಡೈನಿಂಗ್ ಟೇಬಲ್ ಕೆಳಗೆ ಕೈಗೆ ಸಿಗದ ಹಾಗೇ ಹೋಗಿ ತಪ್ಪಿಸಿಕೊಂಡು ಕುಳಿತುಬಿಡುತ್ತಿದ್ದೆ. ಆಗೆಲ್ಲಾ ನಿನ್ನನ್ನು ಸರಪಳಿಯಿಂದ ಹಿಡಿದು ಕಟ್ಟಿಹಾಕಬೇಕೆನ್ನಿಸುತ್ತಿತ್ತು.ಹಾಲು ಕುಡಿಯುವಾಗಲೂ, ಗಂಜಿ ಕುಡಿಯುವಾಗಲೂ ನಿನ್ನ ತರಲೆ ಕಡಿಮೆಯಾಗಿರಲಿಲ್ಲ ಕಣೋ. ಅನ್ನ ತಿನ್ನಿಸಲು ಆರಂಭಿಸಿದಾಗ ಅದೆಷ್ಟು ಗಲಾಟೆ ಮಾಡ್ತಿದ್ದೇಂತಾ ಗೊತ್ತಾ? ನೀನೇ ಸ್ವತಃ ಊಟ ಮಾಡುವ ಸಾಹಸಪಡುತ್ತಿದ್ದೆ. ಆಗೆಲ್ಲಾ ಅಮ್ಮ ತಿನ್ನಿಸಲು ಪ್ರಯತ್ನಿಸಿದರೆ, ಜೋರಾಗಿ ಅತ್ತು ಅನ್ನದ ಬಟ್ಟಲನ್ನು ಒದ್ದು ಸೂರು ಕಿತ್ತು ಹೋಗುವ ಹಾಗೆ ಚೀರಾಡಿ ಅತ್ತು ಪ್ರತಿಭಟಿಸುತ್ತಿದ್ದೆ.ಇದು ಅಮ್ಮನಿಗೆ ಕೋಪ ತರಿಸುತ್ತಿತ್ತು. ಹೆದರಿಸಿ ಪೆಟ್ಟು ಕೊಡುತ್ತಿದ್ದಳು. ಪಾಪ! ನೀನು ಸ್ವಾತಂತ್ರ್ಯ ಬಯಸುತ್ತಿದ್ದೇಂತ ಅವಳಿಗೆ ತಿಳಿಯುತ್ತಲೇ ಇರಲಿಲ್ಲ. ನಿನ್ನನ್ನು ಮಲಗಿಸೋದು ಅಷ್ಟೇ ಕಷ್ಟವಾಗುತ್ತಿತ್ತು. ತೊಡೆಯ ಮೇಲೆ ಹಾಕಿಕೊಂಡು, ತೊಡೆ ಅಲ್ಲಾಡಿಸುತ್ತಾ, ಬೆನ್ನು ತಟ್ಟಿ, ಅವಳ ಕೈಕಾಲುಗಳು ಸೋತು ಹೋಗುತ್ತಿದ್ದರೂ ನೀನು ಮಲಗುತ್ತಿರಲಿಲ್ಲ. ಯಾಕೆ ಗೊತ್ತಾ? ಹಗಲಿನ ಬೆಳಕು, ಗಲಾಟೆ ನಿನ್ನ ನಿದ್ದೆಗೆ ಭಂಗ ತರುತ್ತಿತ್ತು.ರೂಮಿಗೊಯ್ದು ಕಿಟಕಿಯನ್ನು ಮುಚ್ಚಿ ಕತ್ತಲು ವಾತಾವರಣ ಮಾಡಿ ಮೃದುವಾಗಿ ತಬ್ಬಿಕೊಂಡು ಮಲಗಿಸಿದರೆ, ನೀನು ನಿದ್ದೆಗೆ ಜಾರಿ ಬಿಡುತ್ತೀಯಾ ಎಂಬುದು ಅಮ್ಮನಿಗೆ ಗೊತ್ತಿರಲಿಲ್ಲ!ನೀನು, ಸುಸ್ಸೂ, ಕಕ್ಕ, ಮಾಡೋವಾಗಲೂ ಈಗಲೂ ಅಮ್ಮನನ್ನು ಎದುರಿಗೆ ನಿಲ್ಲಿಸಿಕೊಳ್ತೀಯಂತೆ? ಛೀ! ನಾಚಿಕೆಯಾಗೋಲ್ವಾಂತ ಕೇಳೋಲ್ಲ. ಯಾಕೆಂದ್ರೆ ಅದಕ್ಕೆಲ್ಲಾ ಅಮ್ಮನೇ ಕಾರಣ. ನೀನು ಅತ್ತು ಗಲಾಟೆ ಮಾಡುವಾಗ ಅವಳು “ಗುಮ್ಮ” ಬರ‌್ತಾನೇಂತ ಹೆದರಿಸುತ್ತಿದ್ದಳು. ಕಾಣದ `ಗುಮ್ಮನ~ ಬಗ್ಗೆ ನಿನಗೆ ಭಯ ಹುಟ್ಟಿಸುತ್ತಿದ್ದಳು. ಆಗೆಲ್ಲಾ ನೀನು ಹೆದರಿ ಅಮ್ಮನನ್ನು ತಬ್ಬಿಕೊಳ್ಳುತ್ತಿದ್ದೆ.

 

ಅದು ಈಗಲೂ ಮುಂದುವರೆಯುತ್ತದೇಂತಾ ಅವಳಿಗೆ ಗೊತ್ತಿರಲಿಲ್ಲ, ನಿನ್ನ ಸ್ವಂತ ವ್ಯಕ್ತಿತ್ವದ ಉದಯವಾಗುತ್ತಿದೆ, ನಿನ್ನ ಅಸ್ತಿತ್ವವನ್ನು ತೋರಿಸಲು ನೀನು ಸ್ವಾತಂತ್ರ್ಯಕ್ಕಾಗಿ ಆಸೆಪಡುತ್ತಿದ್ದೇಂತ ಅಮ್ಮನಿಗೆ ತಿಳಿಯುತ್ತಿರಲಿಲ್ಲ. ಅವಳು ಬೆಳೆದ ರೀತಿಯಲ್ಲಿಯೇ ನಿನ್ನನ್ನು ಬೆಳೆಸುವ ಪ್ರಯತ್ನ ನಡೆಸಿದ್ದಳು. ಅದಕ್ಕೇ ಹೇಳೋದು ಪುಟ್ಟಾ, ಸಾಕುವುದು ಬೇರೆ, ಬೆಳೆಸುವುದು ಬೇರೆ ಅಂತ. ಮುದ್ದು ಮಾಡೋದು ಬೇರೆ, ಪ್ರೀತಿ ಮಾಡೋದೂ ಬೇರೆ ಕಣೋ.ಮುದ್ದು ಮಾಡುವಾಗ ನಿನ್ನ ತಪ್ಪುಗಳೆಲ್ಲಾ ಒಪ್ಪಿಕೊಂಡು ಬಿಡ್ತಾರೆ. ಆಗ ನಿನಗೆ ಅವುಗಳೆಲ್ಲಾ ಸರಿ ಅನ್ನಿಸಿಬಿಡಬಹುದು. ಪ್ರೀತಿಯಿದ್ದರೆ, ಪ್ರೀತಿಯಿಂದ ಹೇಳಿ ತಿಳಿಸುತ್ತಾರೆ. ಬರೀ ತಿಂದುಂಡು ಸದೃಢವಾಗಿ ಬೆಳೆದರೆ ಸಾಲದು, ಮಾನಸಿಕವಾಗಿಯೂ ಆರೋಗ್ಯವಂತರಾಗಿರಬೇಕು. ಅದು ಮುಖ್ಯವಾಗುತ್ತದೆ. ಸ್ವಾವಲಂಬಿಯಾಗಿ ನೀನು ಬೆಳೆದರೆ ಮುಂದೆ ಸ್ವಾಭಿಮಾನದ ಬದುಕು ನಿನ್ನದಾಗುತ್ತದೆ ರೋಹೀ.ಖಾಲಿ ಹಾಳೆಯಂತಿರುವ ನಿನ್ನ ಮನಸ್ಸು, ಬದುಕಿನ ಪುಟಗಳಲ್ಲಿ ಒಳ್ಳೆಯದನ್ನು ಬರೆಯುವವರು ಪೋಷಕರು. ನಿನ್ನಮನೆಯ ವಾತಾವರಣ, ಶಾಲೆ ಮತ್ತು ಶಿಕ್ಷಕರು ಹಾಗೂ ಪರಿಸರ ಅಂದರೆ ಸಮಾಜ. ಅವರು ಬೇಜವಾಬ್ದಾರಿಯಿಂದ ಬರೆದರೆ ನಿನ್ನ ಬದುಕು ಗೊಂದಲದ ಗೂಡಾಗುತ್ತದೆ.ಯಾಕೆ ಗೊತ್ತಾ? ಏನೇ ಹೇಳಿದರೂ, ಬರೆದರೂ ನಿನ್ನ ವಯಸ್ಸಿನ ಮೆದುಳಿನಲ್ಲಿ ಅಷ್ಟಾಗಿ ಗಟ್ಟಿಯಾಗಿ ಅಂಟಿಕೊಂಡು ಬಿಡುತ್ತದೆ. ಅದಕ್ಕೇ ಅವರಿಗೇ ಈ ಶಿಕ್ಷಣವನ್ನು ಮೊದಲು ನೀಡಬೇಕು. ಏನಂತೀಯಾ?“ಅಮ್ಮ ಬಂದವರ ಮುಂದೆ ನನ್ನನ್ನು ಪ್ರದರ್ಶನಕ್ಕಿಡುತ್ತಾರೆ. `ರ್ಹ್ಯೆಮ್ಸ~ ಹೇಳೂಂತ ಒತ್ತಾಯ ಮಾಡ್ತಾರೆ. ಹೇಳದಿದ್ದರೆ ಅವಮಾನ ಮಾಡ್ತಾರೆ” ಎಂಬುದು ನಿನ್ನ ಕೊರಗು ಅಲ್ವಾ? ನಾನೆಷ್ಟು ಸಾರಿ ಹೇಳಲಿ ಅವಳಿಗೆ? ಮಕ್ಕಳನ್ನು ಗೌರವಿಸು, ಮರ್ಯಾದೆ ಕೊಡು ಎಂದರೆ, “ಅವಕ್ಕೆಂಥಾ ಮರ್ಯಾದೆ ಕೊಡೋದು? ತಲೆ ಮೇಲೆ ಕೂತುಬಿಡ್ತಾರೆ ಅಷ್ಟೆ....” ಎಂದು ತನ್ನ ವಾದವೇ ಸರಿಯೆಂದು ಸಮರ್ಥಿಸಿಕೊಳ್ಳುತ್ತಾಳೆ.

 

ಅಪ್ಪ ಅಂದರೆ “ಬೆಲ್ಟ್‌” ಅಮ್ಮ ಎಂದರೆ “ಬರೆ” ಹಾಕೋದಾಂತ ಅಂದ್ಕೊಂಡಿದ್ದಾಳೆ. ಅದೆಲ್ಲಾ ತಪ್ಪು ಕಣೋ. ಒಂದೊಂದ್ಸಾರಿ `ಎಲ್ಲಾ ಅವರಪ್ಪನ ತರಹಾನೇ ಆಡ್ತಾನೆ~ ಎನ್ನುತ್ತಾಳೆ. ಅದು ಸುಳ್ಳು. ಮನೆಯಲ್ಲಿರುವ ಅವರನ್ನು ಮಕ್ಕಳು ನೋಡಿ ಅನುಕರಣೆ ಮಾಡುತ್ತವೆ.ಶಾಲೆಗೆ ಹೋಗುವವರೆಗೂ ಎಲ್ಲವನ್ನು ಮನೆಯಲ್ಲಿ ನೋಡಿ ಕಲಿತುಕೊಳ್ಳುತ್ತವೆ. ಹೇಳುವುದನ್ನು ಕೇಳುವುದಕ್ಕಿಂತ ನೋಡಿ ಕಲಿಯುತ್ತಾರೆಂಬ ಸತ್ಯ ಅವರಿಗೆ ಯಾರು ಹೇಳ್ತಾರೆ ಹೇಳು?

 

ಮಕ್ಕಳ ಮನಸ್ಸು ಮಲ್ಲಿಗೆಯಂತೆ. ಅವರುಗಳ ಮಾನಸ ಲೋಕದೊಳಗೆ ಪ್ರವೇಶಿಸುವುದು ಸುಲಭ ಮಾತೇನಲ್ಲ ಗೊತ್ತಾ? ಅದೊಂದು ನಿರ್ಮಲ ಆನಂದ ನೀಡುವ ನಿಷ್ಕಳಂಕ, ಸುಂದರ ಲೋಕವಾಗಿರುತ್ತದೆ.

 

ಅದೂ, ಎಲ್ಲವೂ ಸರಿಯಾಗಿ, ಕ್ರಮಬದ್ಧವಾಗಿ ನಡೆದರೆ ಮಾತ್ರ. ಇಲ್ಲದೆ ಹೋದರೆ ಅಂತರಾಳದಲ್ಲಿ ಹಾಲಾಹಲವುಂಟಾಗುತ್ತದೆ. ಆ ವಿಷಕ್ಕೆ ಕಮರಿಹೋಗುತ್ತವೆ ಎಂಬುದು ಯಾರಿಗೂ ಅಂದರೆ ಪೋಷಕರಿಗೆ ತಿಳಿದಿಲ್ಲಾಂತ ಅನ್ನಿಸುತ್ತೆ. ಇಲ್ಲದಿದ್ದರೆ, ದುಶ್ಚಟಗಳು, ದುರ್ನಡತೆಗಳು ಹೇಗೆ ಬರಲು ಸಾಧ್ಯ ಹೇಳು? ದುರ್ನಡತೆ ಅಂದ್ರೆ ಅನುವಂಶಿಕತೆಯ ಕೊಡುಗೆಯ ಬಗ್ಗೆ ನೆನಪಾಯ್ತು.ನಿನ್ನ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಅನುವಂಶಿಕತೆಯೂ ಪಾತ್ರ ವಹಿಸುತ್ತದೆ. ಹೆಚ್ಚಲ್ಲದಿದ್ದರೂ ಸ್ವಲ್ಪವಾದರೂ ಹೇಗೆ ಅಂತೀಯಾ? ನೀನಿನ್ನೂ ಭ್ರೂಣದ ಅವಸ್ಥೆಯಲ್ಲಿರುವಾಗಲೇ ಅಪ್ಪನ ಮತ್ತು ಅಮ್ಮನ ವರ್ಣತಂತುಗಳಿಂದ ಡಿ.ಎನ್.ಎ. ಮತ್ತು ಆರ್.ಎನ್.ಎ. ಅಂಶಗಳು ನಿನ್ನಲ್ಲಿ ಸೇರಿದ್ದರೂ, ನಿನ್ನದೇ ಆದ ಮತ್ತೊಂದು ಹೊಸದಾದ ಡಿ.ಎನ್.ಎ. ಸೃಷ್ಟಿಯಾಗುತ್ತದೆ.ಇದು ನಿನ್ನದೇ ಆದ ವ್ಯಕ್ತಿತ್ವದ ಸಂಕೇತ. ಆ ಡಿ.ಎನ್.ಎ. ಗಳಲ್ಲಿ ಅತ್ಯಂತ ತೆಳುವಾದ ಎಳೆಯೊಂದಿರುತ್ತದೆ. ಅದಕ್ಕೆ `ನ್ಯೂಕ್ಲಿಯೋಟೈಡ್~ ಎನ್ನುತ್ತಾರೆ.ಅದು ಇದ್ದರೆ ಮಕ್ಕಳು ದುರ್ನಡತೆಯಿಂದ ಕೂಡಿದವರಾಗುತ್ತಾರೆಂದು ಅಧ್ಯಯನ ಮಾಡಿದವರು ಹೇಳುತ್ತಾರೆ. ಅದಿಲ್ಲದೇ ಇದ್ದವರು ಸನ್ನಡತೆಯವರೇ ಆಗಿರುತ್ತಾರೆ. ನಿನ್ನ ಮನೆ, ಪೋಷಕರು, ಶಿಕ್ಷಕರು, ಸಮಾಜ ನಿನ್ನನ್ನು ಒಳ್ಳೆಯ ದಾರಿಗೆ ತರಬಹುದು.ಗಟ್ಟಿಯಾದ ಮತ್ತೊಂದು ಎಳೆಯನ್ನು ಸೃಷ್ಟಿ ಮಾಡಲು ಸಹಕರಿಸಿದರೆ ಅಂತಹ ಮಕ್ಕಳು ಸನ್ನಡತೆಯವರಾಗಬಹುದು. ಆ ತೆಳು ಎಳೆಯನ್ನು ಕಿತ್ತೊಗೆಯುವಂತೆ ಗಟ್ಟಿಯಾಗಬೇಕು. ಒಂದು ಕೆಲ್ಸ ಮಾಡು . ಯಾರೋ ಮಹಾನುಭಾವರು ಹೇಳಿದ್ದ, ಕೇಳಿದ್ದ ಹತ್ತು ಅಂಶಗಳನ್ನು ನಿನಗೆ ಗುಟ್ಟಾಗಿ ಹೇಳ್ತೀನಿ. ನೀನು ಅಮ್ಮ, ಅಪ್ಪ ದಿನಕ್ಕೊಂದ್ಸಾರಿ ನೋಡುವಂತೆ ಮಾಡು, ಅಂತಹ ಜಾಗದಲ್ಲಿಡು. ಸರೀನಾ?-ತಿರಸ್ಕಾರ ವಾತಾವರಣದಲ್ಲಿ ಬೆಳೆದ `ಮಗು~ ಪರನಿಂದಕನಾಗುತ್ತದೆ.

-ದ್ವೇಷ-ವೇದನೆಗಳ ಪರಿಸರದಲ್ಲಿ ಬೆಳೆದ ಮಗು `ಜಗಳಗಂಟ~ನಾಗುತ್ತದೆ.

-ಅವಹೇಳನವನ್ನು ಅನುಭವಿಸಿ ಬೆಳೆದ ಮಗು “ಕೂಪ ಮಂಡೂಕ”ವಾಗುತ್ತದೆ.

-ಅಪಮಾನದ ನೆರಳಿನಲ್ಲಿ ಬೆಳೆದ ಮಗು “ಅಪರಾಧ, ಕೀಳರಿಮೆ”ಯಿಂದ ಬಳಲುತ್ತದೆ.-ಸಹನೆಯ, ಪ್ರಶಾಂತ ವಾತಾವರಣದಲ್ಲಿ ಬೆಳೆದ ಮಗು “ಶಾಂತಮೂರ್ತಿ”ಯಂತಿರುತ್ತದೆ.

-ಪ್ರೋತ್ಸಾಹದ ವಾತಾವರಣದಲ್ಲಿ ಬೆಳೆದ ಮಗು “ಆತ್ಮವಿಶ್ವಾಸ”ದಿಂದಿರುತ್ತದೆ.

-ಪ್ರಾಮಾಣಿಕತೆಯ ವಾತಾವರಣ “ನ್ಯಾಯದ ಪ್ರತಿರೂಪದ” ಮಗುವನ್ನು ನೀಡುತ್ತದೆ.-ಸದ್ಭಾವನೆಯ ವಾತಾವರಣದಲ್ಲಿ ಬೆಳೆದ ಮಗು “ನಂಬಿಕೆ”ಯನ್ನು ತುಂಬುತ್ತದೆ.

-ಅನುರಾಗಮಯ ವರ್ತನೆಯಲ್ಲಿ ಬೆಳೆದ ಮಗು “ಸಂತೃಪ್ತಿ”ಯನ್ನು ಹರಸುತ್ತದೆ.

-ಸ್ನೇಹದ ಮಡಿಲು ಮಗುವಿಗೆ ಪ್ರಪಂಚದ ಮೇಲೆ “ಪ್ರೇಮ”ದ ಬೆಳಕನ್ನು ಹರಸುತ್ತದೆ.ಅರ್ಥವಾಯಿತಾ? ಇಲ್ಲದಿದ್ದರೆ “ಚಿನ್ನು” ಅಕ್ಕನ ಹತ್ತಿರ ಓದಿಸಿ. ತಿಳಿದುಕೋ. ಮತ್ತೇನಿದ್ರೂ ಹೇಳು. ಈಗ ಇಷ್ಟು ಸಾಕು. ಜೈ ರೋಹಿತ್.

ಇಂತೀ ನಿನ್ನ ..... 

 

ಪ್ರತಿಕ್ರಿಯಿಸಿ (+)