ಬುಧವಾರ, ಸೆಪ್ಟೆಂಬರ್ 30, 2020
20 °C

ಮಕ್ಕಳ ಮನೆಗೆ ಉತ್ತಮ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ಮನೆಗೆ ಉತ್ತಮ ಪ್ರತಿಕ್ರಿಯೆ

ಹಾಸನ:  ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿದ್ದರೂ, ಶಿಕ್ಷಣ ಇಲಾಖೆ ಸಮುದಾಯದ ಪಾಲ್ಗೊಳ್ಳುವಿಕೆ ಮೂಲಕ ಆರಂಭಿಸಿದ `ಮಕ್ಕಳ ಮನೆ~ಗೆ ನಿರೀಕ್ಷೆಗಿಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಖಾಸಗಿ ಎಲ್.ಕೆ.ಜಿ ಮತ್ತು ಯು.ಕೆ.ಜಿ.ಗಳಿಗೆ ಪರ್ಯಾಯವಾಗಿ ಜಿಲ್ಲೆಯಲ್ಲಿ ಆರಂಭಿಸಿರುವ ಈ ಯೋಜನೆಯಲ್ಲಿ ಈಗ 2860 ಮಕ್ಕಳು ಕಲಿಯುತ್ತಿದ್ದಾರೆ. ಐದಕ್ಕೂ ಕಡಿಮೆ ಹಾಜರಾತಿ ಇರುವ 60 ಶಾಲೆಗಳನ್ನು ಮುಚ್ಚಿರುವುದು ಒಂದೆಡೆಯಾದರೆ, ಇನ್ನೊಂದೆಡೆ 86 `ಮಕ್ಕಳ ಮನೆ~ಗಳನ್ನು ತೆರೆಯುವ ಮೂಲಕ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರುವ ಪ್ರಯತ್ನವನ್ನು ಇಲಾಖೆ ಮಾಡಿದೆ.ಮಕ್ಕಳ ಮನೆಯಲ್ಲಿ ಎಲ್.ಕೆ.ಜಿಯನ್ನು ಅಂಗನವಾಡಿಯ ಜತೆಗೆ ವಿಲೀನ ಮಾಡಿರುವುದರಿಂದ ಆ ಮಕ್ಕಳಿಗೆ ಸಹಜವಾಗಿಯೇ ಅಂಗನವಾಡಿಯ ಪೌಷ್ಟಿಕ ಆಹಾರ ಲಭ್ಯವಾಗುತ್ತದೆ. ಯು.ಕೆ.ಜಿ. ಮಕ್ಕಳಿಗೂ ಅದೇ ಆಹಾರ ಅಥವಾ ಬಿಸಿಯೂಟ ನೀಡಲಾಗುತ್ತಿದೆ.ಅನೇಕ ಗ್ರಾಮಗಳಲ್ಲಿ ಮಕ್ಕಳಿಲ್ಲದೆ ಮುಚ್ಚಿರುವ ಶಾಲಾ ಕೊಠಡಿಗಳನ್ನು ಶಿಕ್ಷಣ ಇಲಾಖೆ ನೀಡಿದ್ದಾರೆ. ಪ್ರತಿ ಮಕ್ಕಳ ಮನೆಗೆ ಪಾಲಕರದ್ದೇ ಒಂದು ಸಮಿತಿ ನಿರ್ಮಿಸಲಾಗಿದೆ. ಮಕ್ಕಳಮನೆಯ ಉಸ್ತುವಾರಿ ಅವರದ್ದೇ. ಸಮಿತಿಯೇ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸುತ್ತದೆ.

 

ಕೆಲವರು ಶಾಲೆಗೆ ಕುರ್ಚಿಗಳನ್ನು ನೀಡಿದ್ದರೆ, ಇನ್ನೂ ಕೆಲವರು ಸಮವಸ್ತ್ರ, ಕೆಲವರು ಬೂಟು, ಸ್ಲೇಟ್, ಪುಸ್ತಕ  ಹೀಗೆ ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ನೀಡಿದ್ದಾರೆ. ಪ್ರತಿ ಮಗುವಿನ ಪಾಲಕರಿಂದ ಮಾಸಿಕ ನೂರು ರೂಪಾಯಿ ಶುಲ್ಕ ಪಡೆಯಲಾಗುತ್ತಿದೆ. ಈ ಹಣವನ್ನು ಸ್ವಯಂ ಸೇವಕಿ (ಶಿಕ್ಷಕಿ)ಗೆ ವೇತನದ ರೂಪದಲ್ಲಿ ನೀಡಲಾಗುತ್ತಿದೆ.ಹಾಸನದ ಪಕ್ಕದಲ್ಲೇ ಇರುವ ಸಾಲಗಾಮೆಯ ಶಾಲೆಯಲ್ಲಿ ಈಗಾಗಲೇ 22 ಮಕ್ಕಳು ಕಲಿಯುತ್ತಿದ್ದಾರೆ. ನಿಟ್ಟೂರಿನ ಶಾಲೆಯಲ್ಲಿ 30 ಮಕ್ಕಳಿದ್ದಾರೆ. `ಮಕ್ಕಳ ಮನೆ~ಯಿಂದಾಗಿ ಇಲ್ಲಿ ಖಾಸಗಿಯವರು ನಡೆಸುತ್ತಿದ್ದ ನರ್ಸರಿಯೊಂದು ಬಾಗಿಲು ಮುಚ್ಚಿದೆ.  `ಇನ್ನೂ 15 ಮಕ್ಕಳು ಬಂದಿದ್ದರು. ಆದರೆ ಶಾಲೆಯಲ್ಲಿ ಸೌಲಭ್ಯಗಳಿಲ್ಲ ಎಂಬ ಕಾರಣಕ್ಕೆ ದಾಖಲಾತಿ ನೀಡಿಲ್ಲ~ ಎಂದು ಶಿಕ್ಷಕರು ತಿಳಿಸಿದ್ದಾರೆ.ಮಕ್ಕಳ ಮನೆಯನ್ನು ಎಲ್ಲ ರೀತಿಯಲ್ಲೂ ಖಾಸಗಿ ಸಂಸ್ಥೆಗಳಿಗೆ ಸ್ಪರ್ಧೆ ನೀಡುವ ರೂಪದಲ್ಲಿ ವಿನ್ಯಾಸ ಮಾಡಲಾಗಿದೆ. ಮಕ್ಕಳಿಗೆ ಇಂಗ್ಲಿಷ್, ಗಣಿತ ಹಾಗೂ ಕನ್ನಡ ಕಲಿಸಲಾಗುತ್ತಿದೆ. ಇಲ್ಲಿ ಇಂಗ್ಲಿಷ್ ಒಂದು ಭಾಷೆಯೇ ವಿನಾ ಮಾಧ್ಯಮವಲ್ಲ. ಕೆಲವು ಶಾಲೆಗಳಲ್ಲಿ ಯೋಗಾಭ್ಯಾಸವನ್ನೂ ಮಾಡಿಸಲಾಗುತ್ತಿದೆ. ಕನ್ನಡ ಹಾಡುಗಳ ಜತೆ ಇಂಗ್ಲಿಷ್ ರೈಮ್‌ಗಳನ್ನೂ ಕಲಿಸುತ್ತಾರೆ.

ಎರಡೂ ಕೊಠಡಿಗಳ ಗೋಡೆಗಳಲ್ಲಿ ಮಿಕ್ಕಿ ಮೌಸ್, ಡೊನಾಲ್ಡ್ ಡಕ್, ಕಾಡು ಪ್ರಾಣಿಗಳ ಚಿತ್ರಗಳು ಮಕ್ಕಳನ್ನು ಆಕರ್ಷಿಸುತ್ತವೆ. ಸರ್ಕಾರದಿಂದ ಒಂದಿಷ್ಟು ಆರ್ಥಿಕ ನೆರವು ಬಂದರೆ ಖಂಡಿತವಾಗಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಬಹುದು ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.7.5 ಲಕ್ಷ ಮಂಜೂರು: `ಹಾಸನದ ಶಿಕ್ಷಣ ಇಲಾಖೆಯವರು ರೂಪಿಸಿರುವ ಈ ಯೋಜನೆಯನ್ನು ಶಿಕ್ಷಣ ಇಲಾಖೆ ಅಂಗೀಕರಿಸಿದ್ದು, ಈ ವರ್ಷ 7.5 ಲಕ್ಷ ರೂಪಾಯಿ ಮಂಜೂರು ಮಾಡಿದೆ. ಶೀಘ್ರದಲ್ಲೇ ಆ ಹಣ ನಮ್ಮ ಕೈಸೇರಲಿದ್ದು, ಮಕ್ಕಳ ಆಟದ ಸಾಮಗ್ರಿ ಖರೀದಿ ಮತ್ತಿತರ ಕೆಲಸಗಳಿಗೆ ಅದನ್ನು ಬಳಸಲಾಗುವುದು~ಎಂದು ಹಾಸನ ಕ್ಷೇತ್ರ ಶಿಕ್ಷಣಾಧಿಕಾರಿ ಪುಟ್ಟರಾಜು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಯೋಜನೆ ಯಶಸ್ವಿಯಾಗಿದೆ. ಭವಿಷ್ಯದಲ್ಲಿ ಸರ್ಕಾರ ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಸಾಧ್ಯತೆ ನಿಚ್ಚಳವಾಗುತ್ತಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.ಪ್ರಾಯೋಗಿಕ ಯೋಜನೆ

`ಮಕ್ಕಳ ಮನೆ~ ರಾಜ್ಯದಲ್ಲೇ ಮೊದಲ ಯೋಜನೆಯಾಗಿದ್ದು, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಜಾರಿ ಮಾಡಲಾಗಿದೆ. ನಮ್ಮ ಶೈಕ್ಷಣಿಕ ವ್ಯವಸ್ಥೆಯಡಿ ಇಂಥ ಯೋಜನೆಗೆ ಅವಕಾಶವಿಲ್ಲದ ಕಾರಣ ಸಾರ್ವಜನಿಕರ ದೇಣಿಗೆ ಮೂಲಕವೇ ಇದನ್ನು ಜಾರಿ ಮಾಡಬೇಕಾಗಿದೆ. ವಿಶೇಷವೆಂದರೆ ಸಾರ್ವಜನಿಕರಿಂದ ಇದಕ್ಕೆ ನಿರೀಕ್ಷೆಗಿಂತಲೂ ಉತ್ತಮ ಪ್ರತಿಕ್ರಿಯೆ ಬಂದಿದೆ.

 

`ಒಟ್ಟು 86 ಮಕ್ಕಳ ಮನೆಗಳಿಗೆ ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಸುಮಾರು 21 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಬಂದಿವೆ~ ಎಂದು ಡಿಡಿಪಿಐ ಎ.ಟಿ. ಚಾಮರಾಜ್ ಹೇಳಿದ್ದಾರೆ. ಹಾಸನದ `ಮಕ್ಕಳ ಮನೆ~ಯ ಯಶಸ್ಸನ್ನು ಗಮನಿಸಿದ ಬಳಿಕ ಬೆಂಗಳೂರು ಗ್ರಾಮಾಂತರದ ಕೆಲವು ಕಡೆಗಳಲ್ಲೂ ಇದೇ ಮಾದರಿಯ ಶಾಲೆಗಳನ್ನು ಆರಂಭಿಸಲಾಗಿದೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.