ಮಕ್ಕಳ ಮಾಂತ್ರಿಕ ಜಗತ್ತೂ...ದೊಡ್ಡವರ ಹಸ್ತಕ್ಷೇಪವೂ...

7

ಮಕ್ಕಳ ಮಾಂತ್ರಿಕ ಜಗತ್ತೂ...ದೊಡ್ಡವರ ಹಸ್ತಕ್ಷೇಪವೂ...

Published:
Updated:

ಸಣ್ಣ ಪರೀಕ್ಷೆ ಮುಗಿಸಿಕೊಂಡು ದಸರೆ ರಜೆಗೆ ಮಕ್ಕಳು ಸಿದ್ಧವಾಗುತ್ತಿದ್ದಾರೆ. ರಜೆ ಎನ್ನುವುದು ಕಥೆಗಳ ಕಾಲವೂ, ಮಜೆಯ ಕಾಲವೂ ಹೌದಲ್ಲವೇ? ಆದರೆ, ನಮ್ಮ ಚಿಣ್ಣರ ಜಗತ್ತಿನಲ್ಲಿಂದು ಎಲ್ಲವೂ ಸರಿಯಾಗಿಲ್ಲ.

ಮಕ್ಕಳ ಜಗತ್ತಿನಲ್ಲಿ ಏನೇನು ಇರಬೇಕು? ಮಕ್ಕಳ ಕಥೆಯೊಂದರ ಸ್ವರೂಪ ಎಂಥದು? ಎನ್ನುವುದನ್ನು ಹದಿನೇಳನೇ ಶತಮಾನದಲ್ಲೇ ಉಳಿದ ದೊಡ್ಡವರು ನಿರ್ಧರಿಸುತ್ತಿದ್ದಾರೆ. ದೊಡ್ಡವರ ಈ `ಸಣ್ಣ~ ಹಸ್ತಕ್ಷೇಪದ ಕುರಿತು ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ನ ಈ ಬರಹ ಆಕ್ಷೇಪ ಎತ್ತುತ್ತದೆ.ಮಾರ್ಕ್ವೆಜ್‌ನ ಅನನ್ಯ ಒಳನೋಟಗಳ ಈ ಬರಹ, ಪುಟಾಣಿಗಳ ಪ್ರಪಂಚದ ಕುರಿತ ನಮ್ಮ ನಿಲುವುಗಳ ಮರು ವಿಮರ್ಶೆಗೆ ಒತ್ತಾಯಿಸುತ್ತದೆ.

..................................................................

ಬಹುಶಃ 1956ರಲ್ಲಿ ಪ್ಯಾರೀಸ್‌ನ `ಜೂಲಿಯಾರ್ಡ್~ ಎಂಬ ಪ್ರಕಾಶನ ಸಂಸ್ಥೆ, ಮಿನು ದ್ರೌ (Minou Drouet)) ಎಂಬ ಏಳೇ ವರ್ಷ ವಯಸ್ಸಿನ ಕವಯತ್ರಿಯೊಬ್ಬಳ ಕವನಸಂಕಲನವೊಂದನ್ನು ಮಾರಾಟ ಮಾಡಲು ಮಾಧ್ಯಮಗಳಲ್ಲಿ ಭಾರೀ ಪ್ರಚಾರಾಂದೋಲನವನ್ನೇ ಆರಂಭಿಸಿಬಿಟ್ಟಿತು.

ಸಾಹಿತ್ಯ ಲೋಕದ ಪ್ರತಿಭಾಶಾಲಿಗಳ ನಡುವೆ ಈ ಬಾಲಕಿಗೊಂದು ಶಾಶ್ವತ ಸ್ಥಾನ ಕಲ್ಪಿಸುವ ಉದ್ದೇಶ ಪ್ರಕಾಶನ ಸಂಸ್ಥೆಗಿತ್ತು. ಈ ಪ್ರಚಾರ ಕೋಲಾಹಲದ ಅಂಗವಾಗಿ ಮಿನು ದ್ರೌ ಕವಿತೆಗಳ ಕುರಿತು ದೊಡ್ಡ ದೊಡ್ಡ ಸಾಹಿತಿಗಳು ಮತ್ತು ಚಿಂತಕರ ಅಭಿಪ್ರಾಯಗಳನ್ನು ಸಂಗ್ರಹಿಸುವ ಸಮೀಕ್ಷೆಯೂ ನಡೆಯಿತು.

ಬಹುಪಾಲು ಪ್ರಸಿದ್ಧರು ಪ್ರಕಾಶಕರ ನಿರೀಕ್ಷೆಯಂತೆಯೇ ಮಾಮೂಲು ಹೊಗಳಿಕೆಗಳನ್ನೇ ಹಂಚಿಕೊಂಡರು. ಆದರೆ ಝಾಂ ಕೋಕ್ತ್ (ಒಛಿಚ್ಞ ಇಟ್ಚಠಿಛಿಚ್ಠ) ಮಾತ್ರ ಒಂದೇ ಒಂದು ಮಾತಿನಲ್ಲಿ ಈ ಪ್ರಚಾರದ ಬೆಲೂನಿಗೆ ಸೂಜಿ ಚುಚ್ಚಿದರು- `ಎಲ್ಲಾ ಮಕ್ಕಳೂ ಪ್ರತಿಭಾಶಾಲಿಗಳೇ- ಮಿನು ದ್ರೌ ಹೊರತುಪಡಿಸಿ~.ಮಕ್ಕಳ ಸಾಹಿತ್ಯ ಸ್ಪರ್ಧೆಯೊಂದಕ್ಕೆ ತೀರ್ಪುಗಾರನಾಗಿದ್ದಾಗ ನನಗೆ ಈ ಘಟನೆ ನೆನಪಾಯಿತು. ಕೊಲಂಬಿಯಾದ ಮಕ್ಕಳು ಬರೆದಿದ್ದ ಸಾವಿರದಷ್ಟು ಕಥೆಗಳಿಂದ ಆಯ್ದ ಇನ್ನೂರು ಕಥೆಗಳನ್ನು ನಾನು ಓದಿದೆ. ಈ ಕಥೆಗಳಲ್ಲಿ ಹಲವದರ ಹಿಂದೆ ಯಾವುದೇ ಕಾವ್ಯಾತ್ಮಕ ಪ್ರೇರಣೆಗಳಿರಲಿಲ್ಲ ಎಂಬುದು ನಿಜ.

ಆದರೆ ಮಕ್ಕಳು ಹೀಗಾಗಲು ಕಾರಣ ಅವರಲ್ಲ, ಅವರ ಮಾರ್ಗದರ್ಶಿಗಳಾಗಿರಬಹುದಾದ ಹಿರಿಯರು. ಅಂದರೆ ನಾವೆಲ್ಲರೂ ಅಪರಾಧಿಗಳೇ; ತಂದೆ-ತಾಯಿ, ಶಿಕ್ಷಕರು, ಬರೆಹಗಾರರು. ನಾವು ನಮಗೆ ಸೂಕ್ತವೆಂದು ಭಾವಿಸಿದ ಮತ್ತು ನಾವೇ ಸೃಷ್ಟಿಸಿದ ಸಾಹಿತ್ಯದ ಪರಿಕಲ್ಪನೆಯೊಂನ್ನು ನಾವು ಮಕ್ಕಳ ಮೇಲೆ ಹೇರಿದ್ದೇವೆ.

ಮಕ್ಕಳ ಕಲ್ಪನೆಯ ಮಾಂತ್ರಿಕ ಜಗತ್ತಿನ ಜೊತೆಗೆ ಈ `ಮಕ್ಕಳ ಸಾಹಿತ್ಯ~ದ ಪರಿಕಲ್ಪನೆಗೆ ಯಾವ ಸಂಬಂಧವೂ ಇರಲಿಲ್ಲ.  ಕೆಲ ವರ್ಷಗಳ ಹಿಂದೆ ಮಕ್ಕಳಿಗಾಗಿ ಒಂದು ಕಥೆ ಬರೆಯಲು ಹೊರಟಾಗ ನನಗೆ ಈ ವಿಷಯ ಹೆಚ್ಚು ಸ್ಪಷ್ಟವಾಯಿತು. ಅದು ಮಕ್ಕಳಿಗಾಗಿ ಕಥೆ ಬರೆಯುವ ನನ್ನ ಮೊದಲ ಮತ್ತು ಕೊನೆಯ ಪ್ರಯತ್ನವೂ ಆಗಿಬಿಟ್ಟಿತು.

ಬಹಳ ದಿನಗಳಿಂದ ಕಥೆಯೊಂದಕ್ಕೆ ಸೂಕ್ತವಾಗಿದ್ದ ಎಳೆಯೊಂದು ಮನಸ್ಸಿನಲ್ಲಿತ್ತು. ಭಾರೀ ಮಳೆಯ ದಿನದಂದು ಆಕಾಶದಿಂದ ಧರೆಗುರುಳಿದ ಬಡಪಾಯಿ ಏಂಜೆಲ್ ಒಂದು ಕೋಳಿಗೂಡಿನೊಳಕ್ಕೆ ಬಂದು ಬೀಳುತ್ತದೆ.ತಾಯಿ ಕೋಳಿ ಅದನ್ನಲ್ಲಿಂದ ಕುಕ್ಕಿ ಓಡಿಸಲು ಪ್ರಯತ್ನಿಸುತ್ತದೆ. ಆದರೆ ರೆಕ್ಕೆ ಮುರಿದಿದ್ದ ಆ ಏಂಜೆಲ್ ಏನೂ ಮಾಡಲಾಗದೆ ಅಲ್ಲೇ ಉಳಿದುಕೊಂಡು ಕೋಳಿಮರಿಗಳಿಗೆ ಒಂದು ಆಟಿಕೆಯಾಗಿ ಬಿಡುವ ದಯನೀಯ ಅವಸ್ಥೆಗೆ ತಲುಪುತ್ತದೆ ಎಂಬುದು ನನ್ನ ಮನಸ್ಸಿನಲ್ಲಿದ್ದ ಕಥೆಯ ಹಂದರ.

ದೊಡ್ಡವರೆಲ್ಲಾ ಬಹಳ ಹಿಂದೆಯೇ ಏಂಜೆಲ್‌ಗಳಲ್ಲಿ ನಂಬಿಕೆ ಕಳೆದುಕೊಂಡದ್ದರಿಂದ ಈ ಕಥೆಯನ್ನು ಅವರು ನಂಬುವುದಿಲ್ಲ ಎಂದು ನನಗೆ ಗೊತ್ತಿತ್ತು. ಮಕ್ಕಳನ್ನು ಬಲೆಗೆ ಕೆಡವಲು ಇದು ಒಳ್ಳೆಯ ಎಳೆ ಎಂದುಕೊಂಡು ಕಥೆ ಬರೆಯಲು ತೊಡಗಿದೆ.

ಮಕ್ಕಳು ತಮ್ಮ ಸುತ್ತಮುತ್ತಲಿನ ಜಗತ್ತನ್ನು ಗ್ರಹಿಸುವ ಹೊತ್ತಿನಲ್ಲಿ ಜಗತ್ತನ್ನು ಅವರಿಗೆ ಅರ್ಥ ಮಾಡಿಸಲು ನಾವು ಹಿರಿಯರು ಬಳಸುವ ಮೂರ್ಖ ಭಾಷೆ ಇದೆಯಲ್ಲಾ, ಅದೇ ಭಾಷೆಯಲ್ಲಿತ್ತು ನನ್ನ ಈ ಕಥೆ.

ಬರೆದು ಮುಗಿದ ಅದನ್ನು ನನ್ನ ಮಕ್ಕಳಿಗೇ ಓದಲು ಕೊಟ್ಟೆ. ಅಂದು ಅವರಿಗೆ ಕ್ರಮವಾಗಿ ಆರು ಮತ್ತು ಎಂಟು ವರ್ಷ. ಬಹಳ ಶ್ರದ್ಧೆಯಿಂದ ಒಮ್ಮೆ ಈ ಕಥೆಯನ್ನು ಓದಿದ ಅವರು ನನಗೆ ವಾಪಸ್ ಕೊಟ್ಟು, `ಮಕ್ಕಳನ್ನೇನು ಮೂರ್ಖರು ಎಂದುಕೊಂಡಿದ್ದೀರಾ?~ ಎಂದರು.ವಾಸ್ತವದಲ್ಲಿ ನಾನು ಹಾಗಂದುಕೊಂಡಿರಲಿಲ್ಲ. ಆದರೂ ಅವರು ಹೇಳುತ್ತಿರುವುದೇನೆಂದು ನನಗೆ ಅರ್ಥವಾಯಿತು. ಮತ್ತೆ ದೊಡ್ಡವರಿಗೆ ಬೇಕಾದ ಎಲ್ಲಾ ಪರಂಪರಾಗತ ಅಂಶಗಳನ್ನೂ ಸೇರಿಸಿ ಅದನ್ನು ಮತ್ತೆ ಬರೆದು ಹಳೆಯ ಶೀರ್ಷಿಕೆಯನ್ನೇ ಉಳಿಸಿಕೊಂಡು ಪ್ರಕಟಿಸಿದೆ. ಅದೇ `ಓಲ್ಡ್ ಮ್ಯಾನ್ ವಿತ್ ಎನಾರ‌್ಮಸ್ ವಿಂಗ್ಸ್~.ತಮ್ಮ ಟೀಕೆ ಅಪ್ಪನಿಗೆ ನೋವುಂಟು ಮಾಡಿರಬಹುದೆಂಬ ಸಂಶಯ ನನ್ನ ಮಕ್ಕಳಿಗೂ ಇತ್ತೇನೋ. ಅವರು ನನ್ನ ಜನ್ಮದಿನದಂದು ಹೇಳಿದ ಆ ಮಾತುಗಳು ಅಂದು ನನಗೇನಾದ್ದರೂ ನೋವಾಗಿದ್ದಿದ್ದರೆ ಅದನ್ನು ಕ್ಷಣಾರ್ಧದಲ್ಲಿ ಇಲ್ಲವಾಗಿಸಿದವು.

`ಅಪ್ಪಾ... ನೀವು ಮಗುವಾದಾಗ ನೀವೂ ನಮ್ಮಂತಾಗಿ... ಈಗ ನಮಗಿರುವ ನಿಮ್ಮಂಥ ಅಪ್ಪನೇ ನಿಮಗೂ ಅಂದು ಇರಲಿ~. ಈ ಮಾತುಗಳನ್ನು ನಾನು, ಈಗಲೂ ಮಕ್ಕಳಿಗಿರುವ ನಿಗೂಢ ಕಾವ್ಯಸಿದ್ಧಿಯ ಉದಾಹರಣೆಯೆಂದು ಪರಿಗಣಿಸುತ್ತೇನೆ.ಸಾಹಿತ್ಯ ಸ್ಪರ್ಧೆಗೆ ಬಹಳಷ್ಟು ಒಳ್ಳೆಯ ಕಥೆಗಳು ಬಂದಿದ್ದವು. ಕೆಟ್ಟ ಕಥೆಗಳಲ್ಲಿ ದೊಡ್ಡವರ ಕೈವಾಡ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಜಗತ್ತಿನ ಎಲ್ಲೆಡೆ ದೊಡ್ಡವರು ಮಕ್ಕಳಿಗಾಗಿ ಹೇಳುವ ಮಕ್ಕಳ ಕಥೆಗಳನ್ನೇ ಅನುಕರಿಸಲು ಪ್ರಯತ್ನಿಸಿದ ಕಥೆಗಳೇ ಹೆಚ್ಚು ಕೆಟ್ಟ ಕಥೆಗಳಾಗಿದ್ದವು.ಸುಂದರ ರಾಜಕುಮಾರರು, ಸುಂದರಿಯರಾದ ರಾಜಕುಮಾರಿಯರು, ಯಾಲೋಕದಿಂದ ಇಳಿದು ಬಂದ ಯಕ್ಷಿಯರು, ಕ್ರೂರಿಗಳಾದ ಮಲತಾಯಂದಿರು ತುಂಬಿದ ಕಥೆಗಳವು. ಮಕ್ಕಳು ಇಂಥ ಕಥೆಗಳನ್ನು ಅನುಕರಿಸುವುದಕ್ಕೆ ಎರಡು ಕಾರಣಗಳಿವೆ.

ಮೊದಲನೆಯದ್ದು ಇದೇ ಸಾಹಿತ್ಯವೆಂದು ದೊಡ್ಡವರು ಹೇಳುವುದನ್ನು ಅವರೂ ನಂಬಿಬಿಟ್ಟಿರುವುದು. ಎರಡನೆಯದ್ದು ಮಕ್ಕಳು ಇದನ್ನು ಸಾಹಿತ್ಯವೆಂದು ಭಾವಿಸುತ್ತಾರೆಂಬ ದೊಡ್ಡವರಿಗೆ ಮೋಸ ಮಾಡಲು ಇದೇ ಸರಿಯಾದ ದಾರಿ ಎಂದು ಮಕ್ಕಳು ಅಂದುಕೊಂಡಿರುವುದು.

ತಮಗೆ ಯಾವುದೇ ಸಂಬಂಧವಿಲ್ಲದ ಮಿಥ್ಯಾಲೋಕದ ಬಗ್ಗೆ ಬರೆಯುತ್ತಿದ್ದೇವೆಂಬ ಅರಿವಿನಲ್ಲೇ ಅವರು ದೊಡ್ಡವರನ್ನು ಮೋಸ ಮಾಡಲೆಂದೇ ಬರೆಯುತ್ತಿರಬಹುದು.ಅರ್ಕಾಟಕಾದ ನನ್ನ ಬಾಲ್ಯ ಕಾಲದಲ್ಲಿ ನಾನೂ ನನ್ನ ಗೆಳೆಯರೂ ನಮಗಿಂತ ದೊಡ್ಡವರಾಗಿದ್ದ ಬಾಲಕರು ಹೇಳುತ್ತಿದ್ದ ತಮ್ಮ ಲೈಂಗಿಕ ಸಾಹಸಗಳ ಕಥೆಗಳನ್ನು- ಇವುಗಳಲ್ಲಿ ಬಹಳಷ್ಟು ಕಟ್ಟು ಕಥೆಗಳು- ಸ್ವರ್ಗೀಯ ಆನಂದದ ಸ್ಥಿತಿಯಲ್ಲಿ ಕೇಳುತ್ತಿದ್ದೆವು.ಇವನ್ನೆಲ್ಲಾ ಕೇಳಿ ಮನೆಗೆ ಹಿಂದಿರುಗುತ್ತಿದ್ದ ನಮಗೆ ಹಿರಿಯರು ಹೇಳುತ್ತಿದ್ದ ಮಕ್ಕಳ ಕಥೆಗಳನ್ನು ಕೇಳುವುದು ಹೊಟ್ಟೆ ತುಂಬಾ ಉಂಡ ಮೇಲೆ ಮತ್ತಷ್ಟನ್ನು ಬಾಯಿಗೆ ತುರುಕಿಸಿದಂತಾಗುತ್ತಿತ್ತು. ಹಿರಿಯರು ಹೇಳುತ್ತಿದ್ದುದು ಹುಡುಗಿ ಚಿಟ್ಟೆ ಮತ್ತು ಹುಡುಗ ಇಲಿಯ ನಡುವಣ ಪ್ರೀತಿಯಂಥಾ ಕಥೆಗಳು. ಇವನ್ನು ಕಪಟ ತಂತ್ರಗಳ ಮೂಲಕ ತುಂಬಿಸಿದ ನೈತಿಕ ಮೌಲ್ಯಗಳೊಂದಿಗೆ ವಿವರಿಸುತ್ತಿದ್ದರು.ಗೋಧೂಳಿಯ ಹೊತ್ತಿನಲ್ಲಿ ಮುಖಕ್ಕೆ ಪೌಡರ್ ಹಚ್ಚಿ, ತುಟಿಗೆ ಲಿಪ್‌ಸ್ಟಿಕ್ ಬಳಿದುಕೊಂಡು, ಸುಂದರ ಉಡುಗೆಯುಟ್ಟು, ಕೂದಲಿಗೆ ರೇಷ್ಮೆಯ ರಿಬ್ಬನ್ ಕಟ್ಟಿ. ತನ್ನ ಪೆರಿಸ್ ಎಂಬ ಸುಂಡಿಲಿಯನ್ನು ಕಾಯುತ್ತಿದ್ದ ಮಾರ್ಟಿನೆಸ್ ಎಂಬ ಚಿಟ್ಟೆಯ ಕಥೆಯಲ್ಲಿ, ಪೆರಿಸ್ ಬಂದಾಗ ಮಾರ್ಟಿನೆಸ್ ಕೇಳಿದಳಂತೆ- `ಪೆರಿಸ್ ಸುಂಡಿಲಿಯೇ... ನೀನು ನನ್ನನ್ನು ಮದುವೆಯಾಗುತ್ತೀಯಾ?~.

ಈ ಹೊತ್ತಿಗಾಗಲೇ ಸೇತುವೆಯಾಚೆಗಿನ ಮನೆಗಳ ವೆರಾಂಡದಲ್ಲಿ ನಿಂತಿರುತ್ತಿದ್ದ ತುಟಿಗೆ ಬಣ್ಣ ಬಳಿದುಕೊಂಡ ಅನೇಕ ಮಾರ್ಟಿನೆಸ್‌ಗಳನ್ನು ಕಂಡಿದ್ದ ನಮಗೆ ಆಗನಿಸುತ್ತಿದ್ದದ್ದು `ಆಹಾ...ಇವಳೆಂಥಾ ಸೂಳೆ...~. ಕಥೆ ಕೇಳುತ್ತಿರುವಾಗಲೇ ನಮ್ಮ ಮನಸ್ಸಿನೊಳಗೆ ಹೀಗೆಮತ್ತೊಂದು ಸಮಾನಂತರ ಕಥೆ ಜನ್ಮ ತಳೆಯುತ್ತಿದೆ ಎಂಬ ಅರಿವೇ ಇಲ್ಲದ ದೊಡ್ಡವರು ಮಾರ್ಟಿನೆಸ್ ಎಂಬ ಆ ಚಿಟ್ಟೆ ಪೆರಿಸ್ ಎಂಬ ಸುಂಡಿಲಿಯನ್ನು ಮದುವೆಯಾಗು ಎಂದು ಕೇಳುತ್ತಿರುವುದು, ಅವಳ ಅಡುಗೆ ಮನೆಯಲ್ಲಿ ಕುದಿಯುತ್ತಿದ್ದ ಸೂಪ್‌ನಲ್ಲಿ ಸೌಟು ತಿರುಗಿಸುವುದಕ್ಕೆ ನೆರವು ನೀಡಲು ಎಂದು ನಂಬಿಸುವುದಕ್ಕೆ ಪ್ರಯತ್ನಿಸುತ್ತಿದ್ದರು.ಇವತ್ತೂ ಮಕ್ಕಳು ಹೀಗೆಯೇ ಇರುವುದು. ದೊಡ್ಡವರೂ ಅಷ್ಟೇ ಹಿಂದಿನಂತೆಯೇ `ಒಳ್ಳೆಯ ಮಾತು~ಗಳಲ್ಲಿ ಮುಳುಗಿಹೋಗಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಕಥೆ ಬರೆಯಲು ಹೇಳಿದಾಗ ಅದರ ದುಷ್ಪರಿಣಾಮ ಕಾಣಿಸಿಕೊಳ್ಳುತ್ತದೆ.

ಶಾಲೆಯಲ್ಲಿ ಶಿಕ್ಷಕರಿಗೆ ಇಷ್ಟವಾಗುವಂತೆ, ಸ್ಪರ್ಧೆಗಳಿಗೆ ಕಥೆ ಬರೆಯುವಾಗ ತೀರ್ಪುಗಾರರಿಗೆ ಇಷ್ಟವಾಗುವಂತೆ ದೊಡ್ಡವರ ಅದೇ ಕಪಟತೆಯೊಂದಿಗೆ ಮಕ್ಕಳು ಕಥೆ ಬರೆಯುತ್ತಾರೆ. ನಾನು ಹೇಳುತ್ತಿರುವ ಸ್ಪರ್ಧೆಯಲ್ಲಿದ್ದ ಒಂದೇ ಒಂದು ಅಸಹಜತೆಯೆಂದರೆ ತೀರ್ಪುಗಾರರಲ್ಲೊಬ್ಬನಿಗೆ ತಾನು ಮಗುವಾಗಿದ್ದದ್ದು ನೆನಪಿತ್ತು.

ಆದ್ದರಿಂದ ತೀರ್ಪುಗಾರರಿಗೆ ಇಷ್ಟವಾಗಬಹುದೆಂದು ಬರೆದಿದ್ದ ಒಂದು ಕಥೆಯೂ ಆತನಿಗೆ ಇಷ್ಟವಾಗಲಿಲ್ಲ. ಕೊನೆಯಲ್ಲಿ ಕಥೆಗಳೊಳಗೆ ಕೈಯಾಡಿಸಿದ್ದು ಅವುಗಳನ್ನು ಹಾಳು ಮಾಡಿದ್ದು ಶಿಕ್ಷಕರೋ ತಂದೆ ತಾಯಿಗಳೋ ಅಥವಾ ಇವೆರಲ್ಲರೂ ಒಟ್ಟಾಗಿಯೇ ಈ ಕೆಲಸ ಮಾಡಿದರೋ ಎಂಬುದು ನನಗೆ ಗೊತ್ತಾಗಲಿಲ್ಲ.

ಅದೇನೇ ಇದ್ದರೂ ಎಂಟು ವರ್ಷ ವಯಸ್ಸಿನ ಹುಡುಗನೊಬ್ಬ ಬಾಹ್ಯಾಕಾಶ ಯುದ್ಧದ ಬಗ್ಗೆ ಟೈಪ್ ಮಾಡಿದ ಐದು ಪುಟಗಳಷ್ಟು ದೊಡ್ಡ ಕಥೆಯನ್ನಂತೂ ಬರೆಯಲು ಸಾಧ್ಯವಿಲ್ಲ ಎಂಬುದಂತೂ ನಿಜ. ಇದರಲ್ಲಿ ಒಂದೇ ಒಂದು ಅಕ್ಷರ ತಪ್ಪೂ ಇಲ್ಲ. ವಾಕ್ಯ ರಚನೆಯಲ್ಲೂ ಅಷ್ಟೇ. ಸಣ್ಣ ಪುಟ್ಟ ದೋಷಗಳನ್ನು ಹೊರತುಪಡಿಸಿದರೆ ಯಾವ ತೊಂದರೆಯೂ ಇಲ್ಲ.ಅತೀವ ಕಾಳಜಿ ಇರುವ ತಂದೆ-ತಾಯಿಗಳ ಸಹಕಾರದೊಂದಿಗೆ ಮಗು ಹೋಮ್‌ವರ್ಕ್ ಮಾಡಿದರೆ ಹೇಗಿರಬಹುದೋ ಹಾಗಿತ್ತು ಈ ಕಥೆ. ಅದರಲ್ಲಿ ಇಲ್ಲದೇ ಇದ್ದದ್ದು ಮಕ್ಕಳ ಬುದ್ಧಿವಂತಿಕೆ ಮತ್ತು ಶಕ್ತಿ ಮಾತ್ರ. ಮಕ್ಕಳನ್ನು ದೊಡ್ಡವರೆನಿಸಿಕೊಂಡವರು ಎಂಥ ಸೃಜನಾತ್ಮಕ ಬಂಜೆತನದತ್ತ ದೂಡುತ್ತಿದ್ದಾರೆಂಬುದಕ್ಕೆ ಇದು ಸಾಕ್ಷಿ.ಸೃಜನಶೀಲತೆ ಮತ್ತು ಸುಂದರವಾದ ಅವಾಸ್ತವಗಳಿಂದ ತುಂಬಿದ್ದ ಅನೇಕ ಕಥೆಗಳಲ್ಲೂ ಕೊನೆಯಲ್ಲಿ ನಿಗೂಢತೆಯ ಒಗಟನ್ನು ಬಿಡಿಸುವುದಕ್ಕೆ ಕನಸನ್ನು ಬಳಸಲಾಗಿತ್ತು. ಅಲ್ಲಿಯ ತನಕದ ಮಾಂತ್ರಿಕ ವಾಸ್ತವಗಳೆಲ್ಲವಕ್ಕೂ ಕನಸೇ ಕಾರಣವೆಂದು ಹೇಳಿದಾಕ್ಷಣ ಕಥೆಯ ಆತ್ಮವೇ ಸೋರಿ ಹೋಗಿಬಿಡುತ್ತದೆ.

ನಾವು ಹೇಳಿದ `ಅವಾಸ್ತವವೇ~ ವಾಸ್ತವ ಎಂದು ಹೇಳಿಬಿಟ್ಟರೆ ದೊಡ್ಡವರು ತಿರಸ್ಕರಿಸಿಬಿಟ್ಟಾರೆಂಬ ಭಯ ಮಕ್ಕಳನ್ನು ಕಾಡಿರಬೇಕು. ಅದರಿಂದಾಗಿ ಸ್ಪರ್ಧೆಗೆ ಬಂದ ಅನೇಕ ಕಥೆಗಳು ಕನಸಿನ ಬಗ್ಗೆಯೇ ಇದ್ದವು.

ಅದೃಷ್ಟವಶಾತ್ ಕೆಲವು ಮಕ್ಕಳಾದರೂ ತಮಗೆ ಅನಿಸಿದ್ದನ್ನು ಅನಿಸಿದ ಹಾಗೆಯೇ ಬರೆದಿದ್ದರು. ಬಹುಶಃ ಇವರು ದೊಡ್ಡವರ ಸಹಾಯ ಕೇಳಲು ಹೋಗಿಲ್ಲ. ಅಥವಾ ದೊಡ್ಡವರು ಈ ಕಥಾ ಕ್ರಿಯೆಯಿಂದ ದೂರವೇ ಉಳಿದಿದ್ದರೇನೋ. ಬಹುಮಾನ ದೊರೆತದ್ದು ಇಂಥಾ ಕಥೆಗಳಿಗೇ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ ಎಂದುಕೊಳ್ಳುತ್ತೇನೆ.ಬಾಲ್ಯ ಎಂಬುದು 17ನೇ ಶತಮಾನದಲ್ಲಿ ಕಂಡು ಹಿಡಿಯಲಾದ ಪರಿಕಲ್ಪನೆ ಎಂದು ಹೇಳಿದ್ದು ಮಾರ್ಷಲ್ ಮ್ಯಾಕ್ಲೂಹಾನ್ ಇರಬೇಕು. `ಮೀಡಿಯಂ ಈಸ್ ದ ಮೆಸೇಜ್~ ಎಂಬ ಕೃತಿಯಲ್ಲಿ ಆತ ಬರೆದಿದ್ದಾನೆಂಬುದು ನನ್ನ ನೆನಪು. 17ನೇ ಶತಮಾನಕ್ಕೂ ಮೊದಲು ಬದುಕಿನ ಘಟ್ಟಗಳನ್ನು ಶೈಶವ, ವಯಸ್ಕ ಮತ್ತು ವೃದ್ಧಾಪ್ಯ ಎಂಬ ಮೂರೇ ಹಂತಗಳಲ್ಲಿ ಗುರುತಿಸಲಾಗುತ್ತಿತ್ತಂತೆ.

ಮಕ್ಕಳೆಂದರೆ ಸ್ವಂತ ವ್ಯಕ್ತಿತ್ವವಿಲ್ಲದ ಪುಟಾಣಿ ಮನುಷ್ಯರು ಎಂಬ ಕಲ್ಪನೆ ಅಂದು ವ್ಯಾಪಕವಾಗಿತ್ತು. ಇಂದು ಮಕ್ಕಳ ಹಕ್ಕುಗಳನ್ನು ವಿಶ್ವಸಂಸ್ಥೆಯೇ ಮಾನ್ಯ ಮಾಡಿದೆ. ಆದರೂ 17ನೇ ಶತಮಾನಕ್ಕೂ ಹಿಂದಿನವರಂತೆಯೇ ಯೋಚಿಸುವ ದೊಡ್ಡವರು ಈಗಲೂ ಇದ್ದಾರೆ. ಮಕ್ಕಳ ಕಥೆಗಳನ್ನು ತಿದ್ದುವವರು ಇವರೇ. ಮಕ್ಕಳ ರೆಕ್ಕೆಗಳನ್ನು ಕತ್ತರಿಸುವಷ್ಟೇ ದೊಡ್ಡ ಕ್ರೌರ್ಯವಿದು.ಸ್ಪರ್ಧೆಗೆ ಬಂದಿದ್ದ ಬಹಳಷ್ಟು ಕಥೆಗಳು ಪ್ರಾಣಿಗಳನ್ನೇ ಮುಖ್ಯ ಪಾತ್ರಗಳನ್ನಾಗಿಟ್ಟುಕೊಂಡಿದ್ದವೆಂಬುದು ಯಾರೂ ಊಹಿಸಬಹುದಾದ ವಿಚಾರ. ಕಥೆಗಳ ಶೇಕಡಾ 80ರಷ್ಟು ಪಾತ್ರಗಳು ಪ್ರಾಣಿಗಳೇ.

ಈ ಕಥೆಗಳನ್ನು ಓದಿದಾಗ ದೊಡ್ಡವರೊಂದಿಗೆ ಸಾಧ್ಯವಾಗದ ಸಂವಹನವನ್ನು ಮಕ್ಕಳು ಪ್ರಾಣಿಗಳೊಂದಿಗೆ ಸಾಧಿಸಿಬಿಟ್ಟಿರುತ್ತಾರೆ ಎಂಬುದು ನಮಗೆ ಅರ್ಥವಾಗುತ್ತದೆ. `ಅಮ್ಮ~ನನ್ನು ಅರ್ಥ ಮಾಡಿಕೊಳ್ಳುವುದು ಮಕ್ಕಳ ಮಟ್ಟಿಗೆ ಬಹಳ ಕಷ್ಟದ ಸಂಗತಿಯಾದರೂ ಗುಳ್ಳೇನರಿಯ ಮನಸ್ಸು ಅವರಿಗೆ ಕರತಲಾಮಲಕ.

ಈ ಗುಳ್ಳೇನರಿ ತಮ್ಮ ಆಶಯಗಳ ಸಂವಹನದ ಮಾಧ್ಯಮವಾದಾಗಲಂತೂ ಇದವರಿಗೆ ಲೀಲಾಜಾಲ. ಆದರೆ ಇಲ್ಲಿಯೂ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ದೊರೆತಿಲ್ಲ. ಪರಿಣಾಮವಾಗಿ ಒಳ್ಳೆಯ ಮೊಲದ ಬಗ್ಗೆ ಬರೆಯುವಾಗ ಅವರು ಆ ಮೊಲಕ್ಕೆ ಶಾಲೆಗೆ ಹೋಗುವುದು ಇಷ್ಟ ಎಂಬಂಥ ಸಾಲುಗಳನ್ನು ಬರೆದುಬಿಡುತ್ತಾರೆ.

ವಾಸ್ತವ ಇದಕ್ಕಿಂತ ಭಿನ್ನ. ಯಾವ ಮಗುವಿಗೂ ಶಾಲೆಗೆ ಹೋಗುವುದು ಇಷ್ಟವಿರುವ ಕೆಲಸವೇನಲ್ಲ. ಶಾಲೆ ಇಷ್ಟವಾಗದೇ ಇರುವುದಕ್ಕೆ ಸಾಕಷ್ಟು ನ್ಯಾಯಬದ್ಧ ಕಾರಣಗಳೇ ಇವೆ. ಸಾಮಾನ್ಯ ನಂಬಿಕೆಯಂತೆ ಮಕ್ಕಳು ಸುಳ್ಳು ಹೇಳುವುದು ಹೆಚ್ಚು. ಇದಕ್ಕೆ ಕಾರಣ ನಾವು ಅಂದುಕೊಂಡಿರುವಂಥದ್ದಲ್ಲ.

ನಾವು ಅವರನ್ನು ಬೆಳೆಸುವ ಕ್ರಿಯೆಯಲ್ಲೇ ಅವರಿಗೆ ಸುಳ್ಳು ಹೇಳುವುದನ್ನು ಕಲಿಸಿಬಿಟ್ಟಿರುತ್ತೇವೆ. ನಾವು ಅವರನ್ನು ಅವರಷ್ಟಕ್ಕೆ ಬಿಟ್ಟಾಗಲಷ್ಟೇ ಅವರು ನಿಜವಾದ ಕವಿಗಳಾಗಿ ಬೆಳೆಯಲು ಸಾಧ್ಯ. ಅದರಿಂದಾಗಿಯೇ ಪ್ಯಾರೀಸ್‌ನ ಮಿನು ದ್ರೌ ಕವಯತ್ರಿಯಾಗದೇ ಉಳಿದದ್ದೂ ಹಾಗೆಯೇ ಕವಯತ್ರಿಯಾದ ಕೊಲಂಬಿಯಾದ ಏಳು ವರ್ಷದ ಬಾಲಕಿ ಈ ಸಾಲುಗಳನ್ನು ಬರೆದದ್ದು.`ದೊಡ್ಡವಳಾದಾಗ ನಾನು ನ್ಯೂಯಾರ್ಕ್‌ನ ದೊಡ್ಡ ಆಸ್ಪತ್ರೆಯಲ್ಲಿ ದೊಡ್ಡ ಡಾಕ್ಟರಾಗುತ್ತೇನೆ. ನನ್ನ ರೋಗಿಗಳು ಸಾಯುವಾಗ ನಾನು ಅವರೊಂದಿಗೆ ಸಾಯುತ್ತೇನೆ~.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry