ಮಕ್ಕಳ ಮುಂದೆ ಬಯಲಾದ ಪವಾಡ ರಹಸ್ಯ

7

ಮಕ್ಕಳ ಮುಂದೆ ಬಯಲಾದ ಪವಾಡ ರಹಸ್ಯ

Published:
Updated:
ಮಕ್ಕಳ ಮುಂದೆ ಬಯಲಾದ ಪವಾಡ ರಹಸ್ಯ

ಕುಶಾಲನಗರ: ಇಲ್ಲಿನ ರೈತ ಭವನದಲ್ಲಿ ಸೋಮವಾರ ನಡೆದ ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮದಲ್ಲಿ ವಿಜ್ಞಾನ ಕೇಂದ್ರದ ಎನ್.ಮಹಾದೇವಪ್ಪ ಹಾಗೂ ವೈಜಯಂತಿ ಅವರು `ಪವಾಡ ರಹಸ್ಯ ಬಯಲು' ಕಾರ್ಯಕ್ರಮ ನಡೆಸಿಕೊಟ್ಟರು.ವಿದ್ಯಾರ್ಥಿಗಳು ಸಾಕಷ್ಟು ಕುತೂಹಲದಿಂದ ವೀಕ್ಷಿಸಿ, ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.ನೀರಿನಲ್ಲಿ ದೀಪ ಉರಿಸುವುದು, ಮೈಗೆ ಬೆಂಕಿ ತಗುಲಿಸಿಕೊಳ್ಳುವುದು, ತೆಂಗಿನಕಾಯಿ ಮೇಲೆ ನೀರು ಸುರಿಯುವ ಮೂಲಕ ಬೆಂಕಿ ಹಚ್ಚುವುದು, ಹೀಗೆ ವಿವಿಧ `ಆಟ'ಗಳನ್ನು ತೋರಿಸಿ ಹಳ್ಳಿಗಾಡಿನಲ್ಲಿ ಜನರಿಗೆ ಮೋಸ ಮಾಡಲಾಗುತ್ತದೆ. ಆದರೆ, ಇಂತಹ ಹುಚ್ಚಾಟಗಳ ಹಿಂದೆ ವಿಜ್ಞಾನ ಅಡಗಿದೆ ಎನ್ನುವುದನ್ನು ಪಾಂಡವಪುರದ ವಿಜ್ಞಾನ ಕೇಂದ್ರದ ತಂಡವು ಬಯಲು ಮಾಡಿತು.ಇಲ್ಲಿನ ರೈತ ಭವನದಲ್ಲಿ ಸೋಮವಾರ ನಡೆದ ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮದಲ್ಲಿ ವಿಜ್ಞಾನ ಕೇಂದ್ರದ ಎನ್. ಮಹಾದೇವಪ್ಪ, ಕೃಷ್ಣೇಗೌಡ ಹಾಗೂ ವೈಜಯಂತಿ ಅವರು ಇಂತಹ ಹಲವು ಪ್ರಯೋಗಗಳನ್ನು ತೋರಿಸಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಮಹತ್ವವನ್ನು ಸಾರಿದರು.

ಪ್ರಯೋಗ 1: ನೀರಿನಲ್ಲಿ ಬೆಳಗಿದ ದೀಪ !

ಇದರ ಹಿಂದಿರುವ ವಿಜ್ಞಾನದ ಅಂಶ ಮೇಣದ ಬತ್ತಿಯನ್ನು ದ್ರವರೂಪಕ್ಕೆ ತಂದು ಅದರೊಳಗೆ ದಾರಹಾಕಿ ಒಣಗಿಸಿ ಇಟ್ಟುಕೊಳ್ಳುವುದು. ನಂತರ ನೀರಿನಲ್ಲಿ ಹಾಕಿ ಈ ದಾರಕ್ಕೆ ಬೆಂಕಿ ಹಚ್ಚುವುದು. ದಾರದಲ್ಲಿರುವ ಮೇಣದ ಸಹಾಯದಿಂದ ಬೆಂಕಿ ಉರಿಯುತ್ತದೆ. ಆದರೆ, ನೋಡುಗರಿಗೆ ನೀರಿನಿಂದಲೇ ಬೆಂಕಿ ಉರಿದಂತೆ ಭಾಸವಾಗುತ್ತದೆ.

ಪ್ರಯೋಗ 2: ಬೆಂಕಿ ಹಚ್ಚಿದರೂ ಸುಡದ ಮೈ !

ಇದರ ಹಿಂದಿರುವ ವಿಜ್ಞಾನ- ಕನಿಷ್ಠ 3 ಸೆಕೆಂಡ್‌ವರೆಗೆ ಸತತವಾಗಿ ಚರ್ಮದೊಂದಿಗೆ ಬೆಂಕಿ ಸಂಪರ್ಕವಿದ್ದರೆ ಮಾತ್ರ ಚರ್ಮ ಸುಡುತ್ತದೆ. ಇದನ್ನೇ ಬಂಡವಾಳವಾಗಿಸಿಕೊಂಡು `ಪವಾಡ ಪುರುಷರು' ಬೆಂಕಿಯನ್ನು ಆಚೀಚೆ ಸತತವಾಗಿ ಚಲಿಸುವಂತೆ ನೋಡಿಕೊಳ್ಳುತ್ತಾರೆ. ಇದರಿಂದ ಚರ್ಮ ಸುಡುವುದಿಲ್ಲ. ಆದರೆ, ನೋಡುಗರು ಇವರು ಪವಾಡ ಪುರುಷ ಇರುವುದರಿಂದಲೇ ಬೆಂಕಿ ಸುಡುತ್ತಿಲ್ಲ ಎಂದು ನಂಬಿ ಬಿಡುತ್ತಾರೆ.ಪ್ರಯೋಗ 3: ನೀರಿನಿಂದ ಸುಟ್ಟ ತೆಂಗಿನಕಾಯಿ !

ವೈಜ್ಞಾನಿಕ ಸತ್ಯ- ತೆಂಗಿನಕಾಯಿ ಚಿಪ್ಪಿನೊಳಗೆ ಸೋಡಿಯಂ ಅನ್ನು ಹುದುಗಿಸಿಟ್ಟು ಅದರ ಮೇಲೆ ನೀರು ಹಾಕಿದರೆ ಅದು ರಾಸಾಯನಿಕ ಬದಲಾವಣೆಗೊಳಗಾಗಿ ಬೆಂಕಿಗೆ ಆಹುತಿಯಾಗುತ್ತದೆ.

ಪ್ರಯೋಗ 4: ನೀರಿನಿಂದಲೇ ಹೊತ್ತಿದ ಬೆಂಕಿ !

ವಿಜ್ಞಾನ ಹೇಳುವುದು- ಕಾಗದದಲ್ಲಿ ಪೊಟ್ಯಾಷಿಯಂ ಪರ್ಮಾಂಗನೆಟ್ ಎನ್ನುವ ರಾಸಾಯನಿಕವನ್ನು ಇರಿಸಲಾಗುತ್ತದೆ. ನಂತರ ಅದರ ಮೇಲೆ ಗ್ಲಿಸರಿನ್ (ನೀರಿನ ಆಕಾರದಲ್ಲಿರುತ್ತದೆ) ಸುರಿದಾಗ, ಇವೆರಡೂ ರಾಸಾಯನಿಕ ಪ್ರಕ್ರಿಯೆಗೆ ಒಳಗಾಗಿ ಬೆಂಕಿ ಹತ್ತಿಕೊಳ್ಳುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry