ಮಕ್ಕಳ ಮೇಲೆ ಒತ್ತಡ ಸಾಕು

7

ಮಕ್ಕಳ ಮೇಲೆ ಒತ್ತಡ ಸಾಕು

Published:
Updated:

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳು ಎಷ್ಟು ಬುದ್ಧಿವಂತರಾದರೂ ಕಡಿಮೆ ಎನ್ನುವ ಭಾವನೆ ಹೆತ್ತವರಲ್ಲಿ ಇರುವುದು ಸಹಜ.ಇದೇ ವೇಳೆ ಎಲ್ಲಾ ಮಕ್ಕಳು ಅಸಾಧಾರಣ ಬುದ್ಧಿವಂತರಾಗಲು ಸಾಧ್ಯವಿಲ್ಲ. ಮಕ್ಕಳ ಮಧ್ಯೆ ಹೋಲಿಕೆ ಮಾಡಿದಾಗ ಕೆಲವೊಂದು ಏರುಪೇರು ಇದ್ದೇ ಇರುತ್ತದೆ. ಈ ವಿಶಾಲ ಪ್ರಪಂಚದಲ್ಲಿ ಒಬ್ಬರಂತೆ ಇನ್ನೊಬ್ಬರು ಇರಲು ಎಂದಿಗೂ ಸಾಧ್ಯವಿಲ್ಲ.

 

ಕೈಯಲ್ಲಿರುವ ಐದೂ ಬೆರಳುಗಳು ಒಂದೇ ರೀತಿಯಲ್ಲಿ ಇರದಿದ್ದರೂ, ಪ್ರತಿಯೊಂದೂ ಬೆರಳೂ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ದಿನ ನಿತ್ಯದ ಕೆಲಸದಲ್ಲಿ ಬಳಕೆ ಯಾಗುತ್ತದೆ. ತಂದೆ ತಾಯಿಗಳು ಈ ತತ್ವವನ್ನು ಅರಿತುಕೊಂಡರೆ ಅವರ ಮಕ್ಕಳ ಭವಿಷ್ಯ ಬೆಳಗಲು ಸಹಾಯವಾಗುತ್ತದೆ.ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಂದಿರ ಪಾತ್ರ ದೊಡ್ಡದು. ಏಕೆಂದರೆ ಮಕ್ಕಳು ಬಾಲ್ಯದಲ್ಲಿ ಹೆಚ್ಚಿನ ಸಮಯ ತಾಯಿ ಜತೆ ಕಳೆಯುತ್ತಾರೆ. ಅವರ ಮನಸ್ಸು, ಅಭಿರುಚಿ ಹಾಗೂ ಅಭಿಲಾಷೆ ತಾಯಿಗೆ ತಿಳಿದಷ್ಟು ಬೇರಾರಿಗೂ ತಿಳಿದಿರಲು ಸಾಧ್ಯವಿಲ್ಲ. ಅದನ್ನು ಪ್ರಾರಂಭದಿಂದಲೇ ಗುರುತಿಸಿ, ಸರಿಯಾದ ಮಾರ್ಗದರ್ಶನ ಮಾಡಿದಲ್ಲಿ ಮಗು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ.ಇಂದಿನ ವಿದ್ಯಾಭ್ಯಾಸ ಪದ್ಧತಿಯಲ್ಲಿ ಮಕ್ಕಳು ಮೂರು ವರ್ಷಕ್ಕೆ ಕಾಲಿಡುತ್ತಿರುವಂತೆ ಬೇಬಿ ಸಿಟ್ಟಿಂಗ್, ಎಲ್‌ಕೆಜಿ, ಯುಕೆಜಿ ಎಂದು ಶಾಲಾ ವಾತಾವರಣಕ್ಕೆ ಒಳಪಡುತ್ತಾರೆ. ಆದರೆ ಈ ವಯಸ್ಸಿನಲ್ಲಿ ಅವರಿಗೆ ತಂದೆ ತಾಯಿಗಳ ಅದರಲ್ಲಿಯೂ ಮುಖ್ಯವಾಗಿ ತಾಯಿಯ ಪ್ರೀತಿ ವಾತ್ಸಲ್ಯ ಹಾಗೂ ಮಾರ್ಗದರ್ಶನ ಅತೀ ಅಗತ್ಯ.ಇದನ್ನು ಮರೆತು, ತಮ್ಮ ಮಗುವನ್ನು `ಅತೀ ಬುದ್ಧಿವಂತ~ ಮಾಡುವ ಭರದಲ್ಲಿ ಶಾಲಾ ಸಮಯ ಮುಗಿದ ನಂತರವೂ ಬಿಡದೆ ಮನೆಪಾಠಕ್ಕೆ ಸೇರಿಸುತ್ತಾರೆ. ಇನ್ನು ಕೆಲವರು ಬೇರೆ ಊರಿನಲ್ಲಿರುವ ವಸತಿ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ ಇದರಿಂದ ಮಗು ಪ್ರಾಕೃತಿಕ ಬೆಳವಣಿಗೆಯಿಂದ ವಂಚಿತವಾಗುತ್ತದೆ.ಪ್ರತಿಯೊಂದೂ ಮಗುವಿಗೂ ಅದರದ್ದೇ ಆದ ಯೋಗ್ಯತೆ, ಸಾಮರ್ಥ್ಯ ಹಾಗೂ ಮಿತಿ ಹುಟ್ಟಿನಿಂದಲೇ ಬಂದಿರುತ್ತದೆ. ಇದನ್ನು ತಂದೆ ತಾಯಿಗೆ ಮಾತ್ರ ಸರಿಯಾಗಿ ಗುರುತಿಸಬಲ್ಲರು. ಮಕ್ಕಳ ಅಭಿರುಚಿ ಹೆತ್ತವರಿಗಿಂತ ಬೇರೆಯವರಿಗೆ ತಿಳಿದಿರುವುದು ಕಷ್ಟ. ಅಲ್ಲದೆ ಅನ್ಯರಿಗೆ ಪ್ರತಿಯೊಂದು ಮಗುವಿನ ಅಭಿರುಚಿ ಗುರುತಿಸುವ ಅಗತ್ಯ ಅಥವಾ ಸಮಯವಾದರೂ ಎಲ್ಲಿದೆ?ಪರಿಶ್ರಮ ಇಲ್ಲದೆ ಏನನ್ನೂ ಸಾಧಿಸಲು ಸಾಧ್ಯವೇ ಇಲ್ಲ ಎನ್ನುವ ಕಟು ಸತ್ಯವನ್ನು ಎಲ್ಲರೂ ಒಪ್ಪಲೇಬೇಕು. ನಮ್ಮ ಮಕ್ಕಳು ಎಂಜಿನಿಯರ್, ವೈದ್ಯರೇ ಆಗಬೇಕು ಎಂದು ಹಠ ಹಿಡಿಯುವುದರಲ್ಲಿ ಅರ್ಥವಿಲ್ಲ. ಮಕ್ಕಳ ಜೀವನದ ಭವಿಷ್ಯವನ್ನು ರೂಪಿಸುವಲ್ಲಿ ಸಕಾಲಿಕ ತೀರ್ಮಾನ ಬಹು ಮುಖ್ಯ.ಕೆಲವೊಮ್ಮೆ ವ್ಯವಹಾರ ಜ್ಞಾನದ ಕೊರತೆಯಿಂದಾಗಿ ಮಕ್ಕಳು ದ್ವಂದ್ವ ಪರಿಸ್ಥಿತಿಯಲ್ಲಿದ್ದಾಗ ಮಾರ್ಗದರ್ಶನ ಕೊಡುವುದು ಅಥವಾ ಕೊಡಿಸುವುದು ಹೆತ್ತವರ ಕರ್ತವ್ಯ.ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮಕ್ಕಳ ಜೀವನದ ಬದಲಾವಣೆಯ ಮಹತ್ವದ ಹಂತ. ಆಗ ಸರಿ ದಾರಿ ತೋರಿದರೆ ಮಗು ಏಳಿಗೆ ಹೊಂದುವುದರಲ್ಲಿ ಅನುಮಾನವೇ ಇಲ್ಲ.ಈ ವಿಶಾಲ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಅವರವರ ಅಭಿರುಚಿಗೆ ಅನುಗುಣವಾದ ವೃತ್ತಿ ಮಾಡಲು, ಜೀವನ ಸಾಗಿಸಲು ಯಥೇಚ್ಛ ಅವಕಾಶಗಳಿವೆ. ಪ್ರತಿಯೊಬ್ಬರಲ್ಲಿಯೂ ವಿಶೇಷವಾದ ಶಕ್ತಿ ಅಡಕವಾಗಿದೆ.ಅಂತಹ ಶಕ್ತಿ ಹೊರತರಲು ಪ್ರಯತ್ನಿಸಬೇಕು. ಅದೇ ರೀತಿ `ಆಪತ್ತಿನಿಂದ ಸಂಪತ್ತು, ಶೂನ್ಯದಿಂದ ಶತಕ ಬಾರಿಸುವ ಸಾಮರ್ಥ್ಯ~ ಕೂಡಾ ಎಲ್ಲರಲ್ಲಿದೆ. ಆದ್ದರಿಂದ ಎಳೆ ವಯಸ್ಸಿನ ಮಕ್ಕಳ ಮೇಲೆ ಕಲಿಕೆಯ ವಿಚಾರದಲ್ಲಿ ಒತ್ತಡ ಹೇರುವುದು ಸರಿಯಲ್ಲ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry