ಮಂಗಳವಾರ, ಏಪ್ರಿಲ್ 13, 2021
32 °C

ಮಕ್ಕಳ ರಕ್ಷಣಾ ಘಟಕ ಅಸ್ತಿತ್ವಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಬೀದಿಪಾಲಾಗುವ ಮಕ್ಕಳ ರಕ್ಷಣೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಸ್ತಿತ್ವಕ್ಕೆ ಬಂದಿದ್ದು, ನಗರದ ಬಿಜೆಎಂ (ಬಸವಜಯ ಮೃತ್ಯುಂಜಯ ಶಾಲೆ) ಶಾಲೆಯ ಸಹಯೋಗದಲ್ಲಿ ಈ ಘಟಕದ ಕೇಂದ್ರವೊಂದನ್ನು ಶುಕ್ರವಾರ ಉದ್ಘಾಟಿಸಲಾಯಿತು.ಮಕ್ಕಳ ಹಕ್ಕು ಕಾಯಿದೆಗೆ ಪೂರಕವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ ಈ ಘಟಕವನ್ನು ಸ್ಥಾಪಿಸಲಾಗಿದೆ. ಈ ಹಿಂದೆ ಮಕ್ಕಳ ಹಕ್ಕು ರಕ್ಷಣೆಗೆ ಇರುವ ಕಾನೂನುಗಳನ್ನು ಪುನಶ್ಚೇತನಗೊಳಿಸಲು ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ನಿಲಯದಲ್ಲಿ ದತ್ತು ಸ್ವೀಕಾರ ಕೇಂದ್ರವನ್ನೂ ತೆರೆಯಲಾಗಿದೆ.ಎಲ್ಲ ಜಿಲ್ಲೆಗಳಲ್ಲಿಯೂ ಈ ಘಟಕ ಅಸ್ತಿತ್ವಕ್ಕೆ ಬಂದಿದ್ದು, ಬಾಲ್ಯ, ಶಿಕ್ಷಣ ವಂಚಿತವಾಗುವ ಬೀದಿಮಕ್ಕಳನ್ನು ರಕ್ಷಿಸಿ ಮುಖ್ಯವಾಹಿನಿಗೆ ತರುವುದು. ಮಕ್ಕಳ ಸಂಕಷ್ಟವನ್ನು ಅರಿತು  ಸ್ಪಂದಿಸುವುದು, ದೌರ್ಜನ್ಯ ಶೋಷಣೆ, ಬಾಲ್ಯವಿವಾಹ ತಡೆಗಟ್ಟುವುದು. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಮಕ್ಕಳಿಗೆ ಕಾನೂನು ನೆರವು (ಬಾಲನ್ಯಾಯ ಮಂಡಳಿ ಮೂಲಕ), ಮನಪರಿವರ್ತನೆಗೆ ಅವಕಾಶ, ಆಪ್ತ ಸಮಾಲೋಚನೆ -ಎಲ್ಲವೂ ಈ ಘಟಕದ ಕಾರ್ಯಚಟುವಟಿಕೆಯಲ್ಲಿ ಸೇರಿದೆ. 18 ವರ್ಷ ವಯೋಮಾನದ ಒಳಗಿನ ಮಕ್ಕಳು ಘಟಕದ ವ್ಯಾಪ್ತಿಯಲ್ಲಿ ಬರುತ್ತಾರೆ.ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಈ ಘಟಕ ಕಾರ್ಯ ನಿರ್ವಹಿಸಲಿದೆ. ಸರ್ಕಾರದಿಂದ ನೇಮಕವಾದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜತೆ 11 ಜನರ ತಂಡ ಕಾರ್ಯ ನಿರ್ವಹಿಸಲಿದೆ. ಅವರನ್ನು ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ. ಈ ತಂಡದಲ್ಲಿ ಸಾಮಾಜಿಕ ಕಾರ್ಯಕರ್ತರು, ಆಪ್ತ ಸಮಾಲೋಚಕರು, ಕ್ಷೇತ್ರ ಕಾರ್ಯಕರ್ತರು (ಔಟ್‌ರೀಚ್ ವರ್ಕರ್ಸ್) ಇದ್ದಾರೆ. ಜತೆಗೆ, ಕಾರ್ಮಿಕ, ಪೊಲೀಸ್, ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಕೈಜೋಡಿಸಲಿವೆ.ದಾವಣಗೆರೆಯ ಕೊಂಡಜ್ಜಿ ರಸ್ತೆಯಲ್ಲಿರುವ ಬಿಜೆಎಂ  ಶಾಲೆಯಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸ್ಥಾಪಿಸಲಾಗಿದೆ. ಅವಕಾಶ ವಂಚಿತ ಮಕ್ಕಳ ಬಗ್ಗೆ ಈ ಘಟಕದ ಗಮನಕ್ಕೆ ತರುವ ಮೂಲಕ ಎಲ್ಲ ಮಕ್ಕಳು ಶಿಕ್ಷಣ ಪಡೆಯಲು ನೆರವಾಗಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಸಿ. ಬಸವರಾಜಯ್ಯ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.