ಶನಿವಾರ, ಮೇ 28, 2022
27 °C

ಮಕ್ಕಳ ರಕ್ಷಣೆ ಮಸೂದೆಗೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮಕ್ಕಳ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯಕ್ಕೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಗಳವರೆಗೆ ದಂಡ ವಿಧಿಸಲು ಅವಕಾಶವಿರುವ ಹೊಸ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ ಮಸೂದೆ 2011ಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದ್ದು, 16ರಿಂದ 18 ವರ್ಷದೊಳಗಿನ ವ್ಯಕ್ತಿಗಳು ಪರಸ್ಪರ ಒಪ್ಪಿಗೆಯ ಮೇಲೆ ಲೈಂಗಿಕ ಚಟುವಟಿಕೆ ನಡೆಸಲು ಈ ಮಸೂದೆಯಲ್ಲಿ ಅವಕಾಶವಿದೆ.ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಕಿರುಕುಳ, ನಗ್ನ ಚಿತ್ರಗಳ ಪ್ರದರ್ಶನ  ಮೊದಲಾದ ಅಂಶಗಳನ್ನು ಮಸೂದೆ ಒಳಗೊಂಡಿದ್ದು, ಇಂತಹ ದೌರ್ಜನ್ಯ ಪ್ರಕರಣಗಳ ವಿಚಾಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವುದರ ಪ್ರಸ್ತಾವವನ್ನೂ ಹೊಂದಿದೆ.12 ವರ್ಷದೊಳಗಿನ ಮಕ್ಕಳ ಮೇಲೆ ಅಥವಾ ಮಾನಸಿಕ ಮತ್ತು ದೈಹಿಕ ಅಸ್ವಸ್ಥ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ದೈಹಿಕ ಮತ್ತು ಮಾನಸಿಕವಾಗಿ ದೀರ್ಘಾವಧಿ ಪರಿಣಾಮ ಉಂಟು ಮಾಡಿದರೆ ಅದನ್ನು  ಗಂಭೀರವಾದ ಅಪರಾಧವೆಂದು ಪರಿಗಣಿಸಲು ಮಸೂದೆಯಲ್ಲಿ ಅವಕಾಶವಿದೆ.ಇಂತಹ ಅಪರಾಧಗಳಿಗೆ ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಮಕ್ಕಳ ಜತೆ ಲೈಂಗಿಕ ಕ್ರಿಯೆ ನಡೆಸಿದರೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿಗಳ ದಂಡ, ಅಸಭ್ಯವಾಗಿ ವರ್ತಿಸಿದರೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಮಸೂದೆ ಅವಕಾಶ ಮಾಡಿಕೊಡುತ್ತದೆ.ಮಕ್ಕಳನ್ನು ನೀಲಿಚಿತ್ರದ ಚಿತ್ರೀಕರಣಕ್ಕೆ ಬಳಸುವುದು, ಅವರ ನಗ್ನ ಚಿತ್ರಗಳನ್ನು ತೆಗೆದು ಲೈಂಗಿಕ ಚಟುವಟಿಕೆಗಳಿಗೆ ಬಳಸುವುದು ಅಪರಾಧವೆಂದು ಪರಿಗಣಿಸಲಾಗಿದೆ.  ಅದೇ ರೀತಿ ಮಾಧ್ಯಮಗಳು, ಸ್ಟೂಡಿಯೋಗಳು ಮತ್ತು ಇತರ ಛಾಯಾಚಿತ್ರ ಮಾಧ್ಯಮಗಳು ಇಂತಹ ಚಿತ್ರಗಳನ್ನು ಪ್ರಕಟಿಸುವುದನ್ನು ನಿಷೇಧಿಸುವ ಅವಕಾಶವಿದ್ದು, ಉಲ್ಲಂಘಿಸಿದರೆ ಶಿಕ್ಷೆ ವಿಧಿಸಲು ಮಸೂದೆ ಅವಕಾಶ ಮಾಡಿಕೊಟ್ಟಿದೆ.ದೌರ್ಜನಕ್ಕೆ  ಒಳಗಾದ ಮಕ್ಕಳ ಮತ್ತು ಪೋಷಕರ ವಿವರಗಳನ್ನು ಮಾಧ್ಯಮಗಳು ಪ್ರಕಟಿಸಬಾರದು ಎಂಬ ನಿಷೇಧ ಹೇರಲಾಗಿದ್ದು, ಒಂದು ವೇಳೆ ಪ್ರಕಟಿಸಿದರೆ ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.