ಶನಿವಾರ, ಮಾರ್ಚ್ 6, 2021
32 °C

ಮಕ್ಕಳ ಶಾಲೆ ಮನೆಯೂ ಆಗಲಿ!

ಆರ್.ಬಿ.ಗುರುಬಸವರಾಜ Updated:

ಅಕ್ಷರ ಗಾತ್ರ : | |

ಮಕ್ಕಳ ಶಾಲೆ ಮನೆಯೂ ಆಗಲಿ!

‘ಕಲಿಕೆ’ ಒಂದು ವಿಶಿಷ್ಟ ಹಾಗೂ ವೈವಿಧ್ಯಮಯ ಪ್ರಕ್ರಿಯೆ.  ಮಕ್ಕಳು ಕಲಿಕೆಯ ಬಗ್ಗೆ ಅಧೀರರಾಗುತ್ತಿದ್ದಾರೆ. ಕಲಿಕೆ ಎನ್ನುವುದು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗುತ್ತಿರುವ ಪರಿಣಾಮ ಇದು. ಮಕ್ಕಳ ಕಲಿಕೆಯಲ್ಲಿನ ನಿರುತ್ಸಾಹ ದೂರ ಮಾಡುವ ಬಗ್ಗೆ ಅಥವಾ ಕಲಿಕೆಯಲ್ಲಿ ಪ್ರಯಾಸ ಪಡುವುದನ್ನು ತಪ್ಪಿಸಲು ಹೆಚ್ಚು ಕಷ್ಟ ಪಡಬೇಕಾಗಿಲ್ಲ. ಮಕ್ಕಳ ಕಲಿಕೆಗೆ–ಗ್ರಹಿಕೆಗೆ ಅನುಕೂಲವಾಗಲಿ ಎಂದೇ ಅಷ್ಟಪಾದಗಳ ರಚನೆ ಮಾಡಲಾಗಿದೆ. ಈ ಪಾದಗಳು ತಮ್ಮ ಹಿಡಿತವನ್ನು ಬಲಪಡಿಸಿದಷ್ಟೂ ವಿಷಯದ ಮೇಲೆ ಮಕ್ಕಳು ಹಿಡಿತ ಸಾಧಿಸಬಹುದು.ಓದುವ ಪ್ರೀತಿಯನ್ನು ಪ್ರೋತ್ಸಾಹಿಸಿ: ಪ್ರತಿದಿನ ಸಂಜೆ ಅಥವಾ ರಾತ್ರಿ ನಿಮ್ಮ ಮಗುವಿನ ಜೊತೆ ನೀವೂ ಓದಲು ಕುಳಿತುಕೊಳ್ಳಿ. ನೀವು ಓದುವುದನ್ನು ನೋಡಿ ಮಗುವಿನಲ್ಲಿ ಓದುವ ಹಂಬಲ ಸಹಜವಾಗಿ ಮೂಡುತ್ತದೆ. ನಿಯಮಿತವಾಗಿ ಸಮೀಪದ ಗ್ರಂಥಾಲಯಕ್ಕೆ ಮಗುವನ್ನು ಕರೆದೊಯ್ಯಿರಿ. ಅಲ್ಲಿ ಮಗುವಿಗೆ ಸೂಕ್ತವಾದ ಪುಸ್ತಕಗಳನ್ನು ಹುಡುಕಿಕೊಡಿ. ಹೀಗೆ ಮಾಡುವುದರಿಂದ ಮಗುವಿನಲ್ಲಿ ಓದುವ ಆಸಕ್ತಿ ಹೆಚ್ಚುತ್ತದೆ ಹಾಗೂ ಖಂಡಿತವಾಗಿಯೂ ಮಗು ನಿಮ್ಮ ಬಳಿ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತದೆ. ನಿಮ್ಮ ಮತ್ತು ಮಗುವಿನ ಅನುಬಂಧ ಹೆಚ್ಚುವುದಲ್ಲದೇ ಮಗುವಿನಲ್ಲಿ ಓದುವ ಬಗ್ಗೆ ಧನಾತ್ಮಕ ಮನೋಭಾವನೆ ಬೆಳೆಯುತ್ತದೆ.ಓದಿದ್ದನ್ನು ಖಾತ್ರಿಪಡಿಸಿ: ಸಾಮಾನ್ಯವಾಗಿ ಮಕ್ಕಳು ಪೋಷಕರ ಚಟುವಟಿಕೆಗಳನ್ನು ಅನುಕರಿಸುತ್ತಾರೆ. ಆದ್ದರಿಂದ ನಾವು ಏನು ಓದುತ್ತಿದ್ದೇವೆ ಎಂಬುದು ಮಕ್ಕಳಿಗೂ ತಿಳಿಯಲಿ. ರಾತ್ರಿ ಊಟದ ವೇಳೆ ಅಥವಾ ಊಟದ ನಂತರ ನೀವು ಆ ದಿನ ಓದಿದ ವಿಷಯಗಳ ಬಗ್ಗೆ ಮಗುವಿಗೆ ತಿಳಿಸಿ ಹಾಗೂ ಮಗು ಓದಿದ ವಿಷಯಗಳನ್ನು ತಿಳಿಸಲು ಹೇಳಿ. ಪರಸ್ಪರ ವಿಷಯ ಹಂಚಿಕೊಳ್ಳಿ. ಮಗು ತಾನು ಕಲಿತ ವಿಷಯಗಳ ಬಗ್ಗೆ ಮಾತನಾಡಲು ಅವಕಾಶ ನೀಡಿ. ಮಗು ಖಂಡಿತವಾಗಿಯೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ. ಇದಕ್ಕಿಂತ ಹೆಚ್ಚಿನ ಕಲಿಕೆ ಇನ್ನೇನಿದೆ? ಶಾಲೆಯ ಹೊರಗಿನ ಕಲಿಕೆಯನ್ನೂ ಸಹ ಉತ್ತೇಜಿಸಬೇಕೆಂದು ಎನ್.ಸಿ.ಎಫ್-೨೦೦೫ ಒತ್ತಿ ಹೇಳಿದೆ.ಅನುಭವಗಳನ್ನು ಪ್ರೊತ್ಸಾಹಿಸಿ: ಅನುಭವಗಳ ಸಾರವೇ ಗುಣಾತ್ಮಕ ಕಲಿಕೆ. ಕಲಿಕೆಯ ವಿಭಿನ್ನ ಅನುಭವಗಳನ್ನು ಮಕ್ಕಳಿಗೆ ನೀಡಬೇಕು. ಅನುಭವ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಬಾರದು. ನೃತ್ಯ/ ವ್ಯಾಯಾಮ ತರಗತಿಗೆ ಸೇರಲು, ಹೊಸ ಕ್ರೀಡೆ ಕಲಿಯಲು, ವಿವಿಧ ಲೇಖಕರ ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸಿ. ಮಗು ಇಷ್ಟ ಪಡುವ ಇನ್ನಿತರೇ ಅಂಶಗಳನ್ನು ಸಂಗ್ರಹಿಸಿ. ಅದರಲ್ಲಿನ ಹೊಸತನವನ್ನು ಅನುಭವಿಸಲು ಪ್ರೋತ್ಸಾಹಿಸಿ. ಕಲಿಕೆ ಒತ್ತಾಯಪೂರಕವಾಗಿ ಹೇರುವಂತದ್ದಲ್ಲ. ಬದಲಾಗಿ ಅದು ಸಂತಸದಾಯಕ ಮತ್ತು ಸಕ್ರಿಯಾತ್ಮಕ ಪ್ರಕ್ರಿಯೆಗಳಿಂದ ಕೂಡಿದಾಗ ಮಾತ್ರ ಅದು ಶಾಶ್ವತವಾಗುತ್ತದೆ.ಮಕ್ಕಳೊಂದಿಗೆ ಟ್ರಿಪ್ ಕೈಗೊಳ್ಳಿ: ಸಾಧ್ಯವಾದಾಗಲೆಲ್ಲಾ ಮಕ್ಕಳೊಂದಿಗೆ ಶೈಕ್ಷಣಿಕ ಟ್ರಿಪ್ ಕೈಗೊಳ್ಳಿ. ಪ್ರಾಣಿ ಸಂಗ್ರಹಾಲಯ, ವಸ್ತು ಸಂಗ್ರಹಾಲಯ, ಐತಿಹಾಸಿಕ ಸ್ಥಳಗಳು, ವಿಶ್ವ ಪಾರಂಪರಿಕ ತಾಣಗಳು, ರಕ್ಷಿತ ಅರಣ್ಯಗಳು, ಗುಡ್ಡ, ಬೆಟ್ಟ, ನದಿ, ಸರೋವರ, ಸಾಗರ, ಜಲಪಾತಗಳಂತಹ ನೈಸರ್ಗಿಕ ತಾಣಗಳು, ಸಂವಾದ, ಚರ್ಚೆ, ಗೋಷ್ಟಿ, ವಿಚಾರ ಸಂಕಿರಣ, ಉಪನ್ಯಾಸಗಳಂತಹ ವೈಚಾರಿಕ ಕಾರ್ಯಕ್ರಮಗಳು, ನಾಟಕ, ಸಿನೇಮಾ, ಸರ್ಕಸ್‌ಗಳಂತಹ ಮನೋರಂಜನಾ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದೊಯ್ಯಿರಿ. ಅಲ್ಲಿ ಅವರು ನೋಡಿದ ಅನುಭವಿಸಿದ ವಿಷಯಗಳ ಕುರಿತು ಮಾತನಾಡಲು ಅವಕಾಶ ನೀಡಿ. ಆಗ ಅವರಲ್ಲಿ ಸಾಮಾಜಿಕ ಕಳಕಳಿ, ವೈಚಾರಿಕ ಮತ್ತು ಪರಿಸರ ಪ್ರಜ್ಞೆ ಮೂಡುತ್ತದೆ.ಸಮಸ್ಯೆ ನಿಖರವಾಗಿ ಗೊತ್ತಿರಲಿ: ನಿಮ್ಮ ಮಗು ಯಾವ ವಿಷಯದ ಕಲಿಕೆಯಲ್ಲಿ ತೊಂದರೆ ಅನುಭವಿಸುತ್ತದೆ ಎಂಬುದರ ಬಗ್ಗೆ ಖಚಿತವಾಗಿ ಗೊತ್ತಿರಲಿ. ನಿಮ್ಮ ಮಗು ಕಠಿಣ ವಿಷಯಗಳಲ್ಲೂ ಸಹ ಉತ್ತಮ ಯಶಸ್ಸು ಗಳಿಸುವಂತೆ ಮಾಡಲು ಹಲವಾರು ವಿಧಾನಗಳಿವೆ. ಆ ವಿಷಯದ ಕುರಿತು ಇರುವ ಭಯ ಹೋಗಲಾಡಿಸಿ, ಸಮಸ್ಯೆ ತೀವ್ರವಾಗಿದ್ದರೆ ಶಾಲಾ ಶಿಕ್ಷಕರು ಅಥವಾ ಆಪ್ತ ಸಮಾಲೋಚಕರೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಿ.ಸವಾಲಿಗೆ ಜವಾಬು ನೀಡಿ: ಕೆಲವು ಮಕ್ಕಳು ಹೆಚ್ಚು ತಿಳಿಯಲು ಸಾಮರ್ಥ್ಯ ಇದ್ದರೂ ಸಹ ಬೇರೆ ಬೇರೆ ಕಾರಣಗಳಿಗಾಗಿ ಕಲಿಕೆಯಿಂದ ವಿಮುಖರಾಗುತ್ತಾರೆ. ಈ ಬಗ್ಗೆ ತರಗತಿ ಶಿಕ್ಷಕರೊಂದಿಗೆ ಚರ್ಚಿಸಿ. ಮಗುವಿನ ಕಲಿಕಾ ಬೇಸರ ಕಾರಣ ಕಂಡುಕೊಳ್ಳಿ. ಮಗುವಿನ ಮುಂದುವರೆದ ಕಲಿಕೆಯ ಅವಶ್ಯಕತೆಗಳನ್ನು ಅರಿತು ಅದಕ್ಕನುಗುಣವಾದ ಸಾಮಗ್ರಿ/ ಸೌಲಭ್ಯಗಳನ್ನು ಪೂರೈಕೆ ಮಾಡಿ. ಜೊತೆಗೆ ಪಠ್ಯ ಪೂರಕ ಚಟುವಟಿಕೆಗಳನ್ನೂ ನೀಡಿ.ಧನಾತ್ಮಕ ಪ್ರಶಂಸೆ ಇರಲಿ: ಕೆಲವು ವೇಳೆ ಮಕ್ಕಳು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ ಅಥವಾ ಕಲಿತದ್ದನ್ನು ಉತ್ತಮವಾಗಿ ಅಭಿವ್ಯಕ್ತಿಸುತ್ತಾರೆ. ಅಂತಹ ವೇಳೆ ಅವರಿಗೆ ಅಪ್ಪುಗೆಯ ಅಭಿನಂದನೆ ನೀಡಿ. ಸಾಂದರ್ಭಿಕ ಸತ್ಕಾರಗಳಿಂದ ಅವರ ಶ್ರಮವನ್ನು ಪ್ರೋತ್ಸಾಹಿಸಿ. ಧನಾತ್ಮಕ ಬಲವರ್ಧನೆಯಿಂದ ಕಲಿಕೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ನಿಮ್ಮ ಮಗುವಿನ ಉತ್ತಮ ಅಂಶಗಳನ್ನು ಮೆಚ್ಚದೇ ಕೇವಲ ತೆಗಳಿಕೆ ಅಥವಾ ದೂರುವುದರಿಂದ ಮಕ್ಕಳಲ್ಲಿ ಅನಪೇಕ್ಷಿತ ನಡವಳಿಕೆಗಳು ಉಂಟಾಗಬಹುದು.ಕಲಿಕೆ ಅಜೀವ ಪರ್ಯಂತ ಎಂಬುದನ್ನು ಮನದಟ್ಟು ಮಾಡಿ: ಕಲಿಕೆಗೆ ಕೊನೆಯಿಲ್ಲ, ವಯಸ್ಸಿನ ಮಿತಿಯಿಲ್ಲ, ವಿಷಯದ ಹಂಗಿಲ್ಲ ಎಂಬುದನ್ನು ಮನದಟ್ಟು ಮಾಡಿ. ಅವರವರ ಜೀವನದಲ್ಲಿ ಕಂಡುಕೊಂಡ ಸಫಲತೆಯು ಅವರ ಕಲಿಕೆಯನ್ನು ಅವಲಂಬಿಸಿರುತ್ತದೆ ಎಂಬುದನ್ನು ಉದಾಹರಣೆ ಸಹಿತ ತಿಳಿಸಿ. ವಿವಿಧ ಕ್ಷೇತ್ರಗಳ ಸಾಧಕರ ಶ್ರಮವನ್ನು ತಿಳಿಸಿ. ಇದರಿಂದ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡುತ್ತದೆ. ನೀವೇ ನಿಮ್ಮ ಮಗುವಿನ ಮೊದಲ ಗುರುಗಳಾಗಿ. ಖಂಡಿತವಾಗಿಯೂ ಮನೆಯೇ ಮೊದಲ ಪಾಠಶಾಲೆಯಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.