ಸೋಮವಾರ, ಮಾರ್ಚ್ 1, 2021
23 °C

ಮಕ್ಕಳ ಶುಚಿತ್ವಕ್ಕಾಗಿ ಸಚಿನ್ ಬ್ಯಾಟಿಂಗ್

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಮಕ್ಕಳ ಶುಚಿತ್ವಕ್ಕಾಗಿ ಸಚಿನ್ ಬ್ಯಾಟಿಂಗ್

‘ಒಳ್ಳೆಯದಕ್ಕಾಗಿ ಕ್ರಿಕೆಟ್’ ಹೀಗೊಂದು ವಾಕ್ಯ ಈಗ ವಿಶ್ವದ ಹಲವು ದೇಶಗಳಲ್ಲಿ  ಪರಿಚಿತವಾಗುತ್ತಿದೆ. ಕ್ರಿಕೆಟ್‌ನ ಚಾಂಪಿಯನ್ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮೂಲಕ ಬಳಕೆಗೆ ಬಂದ ಘೋಷವಾಕ್ಯ ಇದು.ಕಳೆದ 12 ವರ್ಷಗಳಿಂದ ಸಚಿನ್ ಯುನಿಸೆಫ್‌ ಪ್ರಚಾರ ರಾಯಭಾರಿಯಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಕೊಂಡಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಹೆಚ್ಚು ಸಮಯವನ್ನು ಯುನಿಸೆಫ್ ಕಾರ್ಯಕ್ರಮಗಳಿಗೆ ನೀಡುತ್ತಿದ್ದಾರೆ. ಬರೀ ಪ್ರಚಾರ ನೀಡಲಷ್ಟೇ ಅವರು ಸೀಮಿತರಾಗಿಲ್ಲ.ವಿವಿಧ ಕಾರ್ಯಕ್ರಮಗಳ ಮೂಲಕ ಮಕ್ಕಳು ಇದ್ದ ಕಡೆಗೆ ಅವರು ಹೋಗಿ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಹೋದ ವಾರ ಅವರು ತಮ್ಮೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರತಿನಿಧಿಗಳನ್ನು ಜೊತೆಗೂಡಿಸಿಕೊಂಡು ನವದೆಹಲಿಗೆ ಬಂದಿದ್ದರು. ಮಕ್ಕಳಲ್ಲಿ ಶುಚಿತ್ವದ ಕುರಿತ ದೊಡ್ಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಕೊಳೆಗೇರಿ, ಸರ್ಕಾರಿ ಶಾಲೆಗಳ ಮಕ್ಕಳು, ಗ್ರಾಮೀಣ ಪ್ರದೇಶದ ಮಕ್ಕಳೂ ಸೇರಿದಂತೆ ಎಲ್ಲರಲ್ಲಿಯೂ ವೈಯಕ್ತಿಕ ನೈರ್ಮಲ್ಯದ ಮಹತ್ವವನ್ನು ತಿಳಿಸಿಕೊಟ್ಟರು. 2013ರಿಂದ ಅವರು ಯುನಿಸೆಫ್‌ನ ದಕ್ಷಿಣ ಏಷ್ಯಾದ ರಾಯಭಾರಿಯಾಗಿದ್ದಾರೆ. ಮೂರು ತಿಂಗಳ ಹಿಂದೆ ಶ್ರೀಲಂಕಾದಲ್ಲಿ ಅವರು ನಡೆಸಿದ ‘ಕೈ ತೊಳೆಯುವ’ ಅಭಿಯಾನಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿತ್ತು. ನೂರಾರು ಶಾಲಾ ಮಕ್ಕಳು ಅಭಿಯಾನದಲ್ಲಿ ಭಾಗಿಯಾಗಿದ್ದರು.‘ಭಾರತದಲ್ಲಿ ಪ್ರತಿದಿನವೂ ಅತಿಸಾರದಿಂದ ಮಕ್ಕಳು ಅಸುನೀಗುತ್ತಿದ್ದಾರೆ. ವೈಯಕ್ತಿಕ ಹಾಗೂ ನಮ್ಮ ಸುತ್ತಲಿನ ವಾತಾವರಣವನ್ನು ಶುಚಿಯಾಗಿಡದ ಕಾರಣ ಈ ಪಿಡುಗು ಇವತ್ತಿಗೂ ನಮ್ಮನ್ನು ಕಾಡುತ್ತಿದೆ. ಮನೆಯಿಂದಲೇ ಸ್ವಚ್ಛತೆಯ ಪಾಠ ಆರಂಭವಾಗಬೇಕು. ಇದರಲ್ಲಿ ತಾಯಂದಿರ ಪಾತ್ರ ಪ್ರಮುಖವಾದದ್ದು.ಊಟ, ತಿಂಡಿ ಸೇವಿಸುವ ಮುನ್ನ ಕೈಕಾಲುಗಳನ್ನು ಶುಚಿಯಾಗಿ ತೊಳೆದುಕೊಂಡು ಬರುವ ರೂಢಿಯನ್ನು ಮಕ್ಕಳಿಗೆ ಮಾಡಿಸಬೇಕು. ಇದು  ಅವರ ಜೀವನವನ್ನು ಆರೋಗ್ಯವಂತ ಮತ್ತು ಆತ್ಮವಿಶ್ವಾಸಭರಿತವಾಗಿಸುತ್ತದೆ’ ಎಂದು ಸಚಿನ್ ಹೇಳುತ್ತಾರೆ.ಇಡೀ ದಿನ ಮೈದಾನದಲ್ಲಿ ಆಡಿ ಬೆವರು ಹರಿಸಿ, ದೂಳು ಮೆತ್ತಿದ ಬಟ್ಟೆಗಳೊಂದಿಗೆ ಪೆವಿಲಿಯನ್‌ಗೆ ನಡೆದಾಗ ಮೊದಲು ಸ್ನಾನ ಮಾಡಿಯೇ ನಂತರ ಊಟಕ್ಕೆ ಹೋಗುತ್ತಿದ್ದ ತಮ್ಮ ಬಾಲ್ಯದ ರೂಢಿಯನ್ನು ಸಚಿನ್ ನೆನಪಿಸಿಕೊಂಡಿದ್ದಾರೆ.ಶುಚಿತ್ವ ಮತ್ತು ಅದರಿಂದ ಬಳುವಳಿಯಾಗಿ ಬಂದ ಆರೋಗ್ಯವೇ ಅತ್ಯುನ್ನತ ಸಾಧನೆಗೆ ಮಾರ್ಗ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಯುನಿಸೆಫ್‌ ಕಾರ್ಯಕ್ರಮಗಳನ್ನು ಕ್ರಿಕೆಟ್‌ನೊಂದಿಗೆ ಬೆರೆಸಿ ಮಕ್ಕಳ ಮನಸ್ಸಿಗೆ ನಾಟುವಂತೆ ಶುಚಿತ್ವದ ಪಾಠ ಹೇಳುತ್ತಿದ್ದಾರೆ. ಮುಂದಿನ ಪೀಳಿಗೆಯ ಆರೋಗ್ಯಕ್ಕಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ!***

ಬಯಲು ಶೌಚ ತಪ್ಪಿಸಬೇಕು


ಭಾರತದಲ್ಲಿ ಬಯಲು ಶೌಚ ಹೆಚ್ಚು. ಈ ರೂಢಿಯನ್ನು ತಪ್ಪಿಸಬೇಕು. ಪ್ರತಿ ಮನೆಯಲ್ಲಿಯೂ ಶೌಚಾಲಯ ನಿರ್ಮಾಣವಾಗಬೇಕು. ಅವುಗಳನ್ನು ಸ್ವಚ್ಛತೆಯಿಂದ ನಿರ್ವಹಿಸಬೇಕು.

–ಸಚಿನ್ ತೆಂಡೂಲ್ಕರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.