ಮಕ್ಕಳ ಸಾವು, ಮಾರಾಟ ಹಾಗೂ ದತ್ತು ಪ್ರಕರಣ: ವರದಿ ಇಲ್ಲ

7

ಮಕ್ಕಳ ಸಾವು, ಮಾರಾಟ ಹಾಗೂ ದತ್ತು ಪ್ರಕರಣ: ವರದಿ ಇಲ್ಲ

Published:
Updated:

`ಸಿಎಂ ಜತೆ ಚರ್ಚಿಸಿ ತೀರ್ಮಾನ~

ಚಿಂಚೋಳಿ: ತಾಲ್ಲೂಕಿನ ಕೊಂಚಾವರಂ ಸುತ್ತಮುತ್ತಲಿನ ತಾಂಡಾಗಳಿಂದ ವರದಿಯಾದ ಮಕ್ಕಳ ಸಾವು, ಮಾರಾಟ ಹಾಗೂ ದತ್ತು ನೀಡಿಕೆ ಪ್ರಕರಣದ ಬಗ್ಗೆ ಈವರೆಗೆ ಸರ್ಕಾರಕ್ಕೆ ಯಾವುದೇ ಇಲಾಖಾ ಅಧಿಕಾರಿಗಳಿಂದ ವರದಿ ಬಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಕಳಕಪ್ಪ ಬಂಡಿ ತಿಳಿಸಿದರು.ಹೆಣ್ಣು ಹುಟ್ಟಿದ್ದರಿಂದ ನಮಗೆ ಈ ಮಕ್ಕಳೇ ಬೇಡವೆಂದು ಹೇಳಿ ಚರ್ಚೆಗೆ ಗ್ರಾಸವಾದ ಒಂಟಿಚಿಂತಾ ಹಾಗೂ ಒಂಟಿಗುಡ್ಸಿ ತಾಂಡಾಗಳ ಕವಿತಾ ವಿಠಲ್ ಮತ್ತು ಕವಿತಾ ತಾರಾಸಿಂಗ್ ಮನೆಗೆ ಮೂಲಸೌಕರ್ಯ ಸಚಿವ ಸುನೀಲ ವಲ್ಯ್‌ಪುರ ಅವರೊಂದಿಗೆ ಶುಕ್ರವಾರ ಭೇಟಿ ನೀಡಿದ ಅವರು ಪ್ರಕರಣದ ಬಗ್ಗೆ ಕುಟುಂಬ ವರ್ಗ ಜನತೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಆರೋಗ್ಯ ಇಲಾಖೆಯಿಂದ ಮಾಹಿತಿ ಪಡೆದುಕೊಂಡರು.ವರದಿ ನೀಡುವಂತೆ ಕೋರಿ ತಿಂಗಳ ಹಿಂದೆ ತಾವು ಗುಲ್ಬರ್ಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಅವರು ವರದಿ ನೀಡಿದ ನಂತರ ತಾವಿಬ್ಬರೂ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಭೇಟಿಯಾಗಿ ಪ್ರಕರಣದ ಮಾಹಿತಿ ನೀಡಿ ಚರ್ಚೆ ಮಾಡುತ್ತೇವೆ ಎಂದರು.ಪ್ರಕರಣ ವರದಿಯಾದ ನಂತರ ಒಮ್ಮೆಯೂ ಗುಲ್ಬರ್ಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಇಲ್ಲಿನ ತಾಂಡಾಗಳಿಗೆ ಭೇಟಿ ನೀಡಿಲ್ಲ ಹೀಗಾದರೆ ಹೇಗೆ ಎಂದರೆ ನೀವು ಜಿಲ್ಲಾಧಿಕಾರಿಗಳನ್ನೇ ಕೇಳಿ ಎಂದು ಸಚಿವ ಕಳಕಪ್ಪ ಬಂಡಿ ತಿಳಿಸಿದರು.ಮಕ್ಕಳ ಮಾರಾಟ ಮತ್ತು ದತ್ತು ನೀಡಿಕೆಗೆ ಸಂಬಂಧಿಸಿದಂತೆ ಇಲ್ಲಿನ ಕುಟುಂಬಗಳಿಗೆ ಪರಿಹಾರ ನೀಡಲು ಯಾವುದೇ ಅವಕಾಶವಿಲ್ಲ. ಅವರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ದುಡಿಯಲು ಕೆಲಸ ನೀಡುವುದರ ಜತೆಗೆ ಭಾಗ್ಯಲಕ್ಷ್ಮೀ ಯೋಜನೆ ಯೋಜನೆ ಅಡಿಯಲ್ಲಿ ಬಾಂಡ್ ನೀಡುತ್ತೇವೆ ಎಂದರು.ಭಾಗ್ಯಲಕ್ಷ್ಮೀ ಬಾಂಡ್ ನೀಡಿಕೆಗೆ ಬಿಪಿಎಲ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಬಿಪಿಎಲ್ ಕಾರ್ಡ್ ಸಕಾಲದಲ್ಲಿ ಜನತೆಗೆ ದೊರೆಯುತ್ತಿಲ್ಲ ಎಂದು ಪ್ರಶ್ನಿಸಿದಾಗ ಇದು ನನಗೆ ಬರುವುದಿಲ್ಲ ಎಂದರು.ಜಾಗೃತಿಯ ಕೊರತೆಯಿಂದ ಹೀಗಾಗುತ್ತಿದೆ ಇದಕ್ಕಾಗಿ ಸ್ವಯಂ ಸೇವಾ ಸಂಸ್ಥೆ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಜಗಜೀವನರೆಡ್ಡಿ ಮಿರಿಯಾಣ, ತಾ.ಪಂ. ಅಧ್ಯಕ್ಷ ರಾಮರಾವ್ ಪಾಟೀಲ, ಬಿಜೆಪಿ ಅಧ್ಯಕ್ಷ ರೇವಣಸಿದ್ದಪ್ಪ ಮಜ್ಜಗಿ, ಮುಖಂಡ ಚಿತ್ರಶೇಖರ ಪಾಟೀಲ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ ರಂಗಸ್ವಾಮಿ, ಜಂಟಿ ನಿರ್ದೇಶಕ ಮುನಿರೆಡ್ಡಿ, ಉಪ ನಿರ್ದೇಶಕಿ ರತ್ನಾ ಕಲಂದಾನಿ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಮದ್ ರಫಿ ಶಕಾಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ, ತಾಲ್ಲೂಕು ಅಧಿಕಾರಿ ರಾಜಕುಮಾರ ಎ.ಕೆ, ಕಾರ್ಯನಿರ್ವಾಹಕ ಅಧಿಕಾರಿ ಜಗದೇವ ಬೈಗೊಂಡ, ತಹಶೀಲ್ದಾರ ಡಾ. ರಮೇಶಬಾಬು ಹಾಲು  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry