ಮಕ್ಕಳ ಸ್ಥಾನಮಾನದ ಪುನರ್‌ವಿಮರ್ಶೆ ಅಗತ್ಯ

7

ಮಕ್ಕಳ ಸ್ಥಾನಮಾನದ ಪುನರ್‌ವಿಮರ್ಶೆ ಅಗತ್ಯ

Published:
Updated:

ಆಧುನಿಕ ಕಾಲಘಟ್ಟದಲ್ಲಿದ್ದೂ ಭಾರತೀಯ ಕುಟುಂಬ ವ್ಯವಸ್ಥೆ ಇನ್ನೂ ಹಳೆಯ ನಂಬಿಕೆಯ ಪೊರೆ ಕಳಚಿಕೊಂಡಿಲ್ಲ. ಕುಟುಂಬದ ಯಜಮಾನ ತೆಗೆದುಕೊಳ್ಳುವ ನಿರ್ಧಾರಕ್ಕೆ ಉಳಿದವರು ಬದ್ಧರಾಗಿರಬೇಕು. `ನಾವು ಬುದ್ಧಿವಂತರು, ಹೆಚ್ಚು ತಿಳಿವಳಿಕೆ ಉಳ್ಳವರು. ಹಾಗಾಗಿ ಕಿರಿಯರು ನಮ್ಮ ಮಾತನ್ನು ಕೇಳಬೇಕು' ಎನ್ನುವ ಭಾವನೆ ಕೆಲವರಲ್ಲಿ. ಇದು ಶ್ರೇಣೀಕೃತ ವ್ಯವಸ್ಥೆಯ ಪ್ರಭಾವ. ಮಕ್ಕಳು ನಮ್ಮ ನಿರೀಕ್ಷೆಯಂತೆಯೇ ಬೆಳೆಯಬೇಕು ಎನ್ನುವ ಮನೋಭಾವ ಎಷ್ಟರ ಮಟ್ಟಿಗೆ ಸರಿ?ಇತ್ತೀಚೆಗೆ ನಾರ್ವೆಯಲ್ಲಿ ನಡೆದ ಪ್ರಕರಣ ನೆನಪಿರಬೇಕಲ್ಲವೇ? ಮಗನಿಗೆ ಶಿಸ್ತು ಪಾಠ ಕಲಿಸುವ ಭರದಲ್ಲಿ ಆತನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ ಭಾರತೀಯ ಮೂಲದ ದಂಪತಿ ಕೊನೆಗೆ ಜೈಲು ಸೇರಬೇಕಾಗಿ ಬಂತು. ಈ ಪ್ರಕರಣವು ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು ಹಾಗೂ ಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸುವವರ ನಡುವೆ ದೊಡ್ಡ ವಾಗ್ವಾದವನ್ನೇ ಸೃಷ್ಟಿಸಿತು. ಒಂದಂತೂ ಸತ್ಯ. ಭಾರತೀಯ ಕುಟುಂಬದಲ್ಲಿ ಮಗುವಿನ ಸ್ಥಾನಮಾನ ಏನು ಎನ್ನುವುದನ್ನು ಪುನರ್‌ವಿಮರ್ಶಿಸಿಕೊಳ್ಳಬೇಕಾದ ಹೊತ್ತು ಇದು.ಕುಟುಂಬದಲ್ಲಿ ಮಕ್ಕಳ ಪಾತ್ರವೇನು? ದೊಡ್ಡವರು ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರಾ? ಕೆಲವೊಮ್ಮೆ ಮಕ್ಕಳು ಯಾಕೆ ಪೋಷಕರ ವಿರುದ್ಧವಾಗಿ ನಿಲ್ಲುತ್ತಾರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಪೋಷಕರು-ಮಕ್ಕಳ ನಡುವಿನ ಸಂಘರ್ಷವನ್ನು ಕೊನೆಗಾಣಿಸಬಹುದೇನೋ.ಪ್ರೀತಿ, ಕರ್ತವ್ಯ, ಶಿಸ್ತಿನ ಹೆಸರಿನಲ್ಲಿ ಚಿಣ್ಣರನ್ನು ಉಸಿರುಕಟ್ಟುವ ವಾತಾವರಣದಲ್ಲಿ ಬೆಳೆಸಬಾರದು. ಕೆಲವು ತಂದೆ-ತಾಯಿ ಮಕ್ಕಳನ್ನು ಅತಿಯಾದ ಶಿಸ್ತಿನಲ್ಲಿ ಬೆಳೆಸುತ್ತಾರೆ. ಛಡಿ ಏಟು ಬೀಳುವ ಸಂದರ್ಭಗಳೂ ಇರುತ್ತವೆ. ಇದರ ಫಲವಾಗಿ ಮಗು ಮಾನಸಿಕ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಎಳೆಯರಿಗೂ ಮನಸ್ಸಿದೆ, ಆತ್ಮ ಗೌರವ ಇದೆ ಎನ್ನುವುದನ್ನು ಮರೆಯಬಾರದು. ಇಲ್ಲದಿದ್ದರೆ ಅವರ ಸೃಜನಶೀಲತೆ ಹಾಗೂ ಪ್ರತಿಭೆ ಹೊರಹೊಮ್ಮುವುದಾದೂ ಹೇಗೆ?

ತಮ್ಮ ಆಶೋತ್ತರಗಳಿಗೆ ಅನುಗುಣವಾಗಿ ಮಕ್ಕಳು ಬೆಳೆಯಬೇಕು ಎನ್ನುವುದು ಹೆಚ್ಚಿನ ತಂದೆ-ತಾಯಿ ಆಸೆ. ಬಡವರು, ಮಧ್ಯಮ ವರ್ಗದವರು, ಶ್ರೀಮಂತರು...ಹೀಗೆ ಎಲ್ಲ ವರ್ಗದ ಕುಟುಂಬಗಳಲ್ಲಿ ಕಂಡು ಬರುವ ಚಿತ್ರಣವಿದು.ಒಮ್ಮೆ ನಾನು ಮಗಳನ್ನು ಮನೆಗೆ ಕರೆದುಕೊಂಡು ಬರುವುದಕ್ಕಾಗಿ ಅವಳ ಶಾಲೆಯ ಬಳಿ ಹೋಗಿದ್ದೆ. ಅಲ್ಲಿ ಒಬ್ಬ ಹುಡುಗ (ನಾಲ್ಕನೇ ತರಗತಿ ವಿದ್ಯಾರ್ಥಿ ಎಂದು ನೆನಪು) ಅಳುತ್ತಾ ನಿಂತಿದ್ದ.  `ಮಗು ಯಾಕಪ್ಪ ಅಳುತ್ತೀಯ?' ಎಂದು ಕೇಳಿದೆ. ಅದಕ್ಕೆ ಆ ಪುಟ್ಟ ಪೋರ ಬಿಕ್ಕಳಿಸುತ್ತಲೇ ನೀಡಿದ ಉತ್ತರಕ್ಕೆ ಬೆಚ್ಚಿ ಬಿದ್ದೆ. `ಈ ಬಾರಿ ಪರೀಕ್ಷೆಯಲ್ಲಿ ಗಣಿತಕ್ಕೆ ಕಳೆದ ಸಲಕ್ಕಿಂತ ಕಡಿಮೆ ಅಂಕ ಬಂದಿದೆ. ಅದಕ್ಕೆ ನನ್ನ ಅಮ್ಮ ಸಿಟ್ಟು ಮಾಡಿಕೊಂಡು ನನ್ನೊಬ್ಬನನ್ನೇ ಇಲ್ಲಿ ಬಿಟ್ಟು ಹೋದರು' ಎಂದು ಆ ಬಾಲಕ ಹೇಳಿದಾಗ ಮನಸ್ಸು ಕಲಕಿ ಹೋಯಿತು. ಕಡಿಮೆ ಅಂಕ ಪಡೆದ ಮಗನಿಗೆ ಬುದ್ಧಿ ಕಲಿಸಲು ಆ ತಾಯಿ ಈ ರೀತಿ ಮಾಡಿದ್ದು ಸರಿಯೇ? ಪಾಪ ಆ ಬಾಲಕ ಅದೆಷ್ಟು ನೊಂದುಕೊಂಡಿರಬಹುದು?ಮಧ್ಯದಲ್ಲಿಯೇ ಎಂಜಿನಿಯರಿಂಗ್ ಕೋರ್ಸ್ ಬಿಟ್ಟು ಸಮೂಹ ಸಂವಹನ ಕೋರ್ಸ್ ಸೇರಿದ ಹುಡುಗನ ಕಥೆ ಕೇಳಿ. ಆ ಹುಡುಗ ನಾನು ಕಲಿಸುತ್ತಿದ್ದ ಕಾಲೇಜಿನಲ್ಲಿಯೇ ಓದುತ್ತಿದ್ದ. ಅವನ ಹೆತ್ತವರು ಕಾಲೇಜು ಶುಲ್ಕವನ್ನೇನೋ ಕಟ್ಟಿದ್ದರು. ಆದರೆ ಒಮ್ಮೆಯೂ ಕಾಲೇಜಿನ ಕಡೆ ಸುಳಿಯಲಿಲ್ಲ. ಆತ ಹೇಗೆ ಅಭ್ಯಾಸ ಮಾಡುತ್ತಿದ್ದಾನೆ ಎನ್ನುವುದನ್ನು ತಿಳಿಯುವ ಗೋಜಿಗೂ ಹೋಗಲಿಲ್ಲ. ಯಾಕೆ ಗೊತ್ತಾ? ಮಗ ತಮ್ಮ ಇಷ್ಟಕ್ಕೆ ವಿರುದ್ಧವಾಗಿ ಸಮೂಹ ಸಂವಹನ ಕೋರ್ಸ್ ಸೇರಿದ ಎಂಬ ಕೋಪ ಅವರಲ್ಲಿ. ನಮ್ಮಲ್ಲಿ ಇಂಥ ಅನೇಕ ಉದಾಹರಣೆಗಳು ಸಿಗುತ್ತವೆ. ನನ್ನ ಸಹಪಾಠಿಯೊಬ್ಬ ತನಗೆ ಇಷ್ಟ ಇಲ್ಲದಿದ್ದರೂ ಅಪ್ಪನ ಒತ್ತಾಯಕ್ಕೆ ಮಣಿದು ಇಂಗ್ಲಿಷ್ ಸಾಹಿತ್ಯ ಓದಬೇಕಾಯಿತು. ಹಲವರಿಗೆ ತಮ್ಮ ಮಕ್ಕಳ ಅಭಿರುಚಿ ಏನು ಎನ್ನುವುದೇ ಗೊತ್ತಿರುವುದಿಲ್ಲ. ಇಲ್ಲಿ ಇನ್ನೊಂದು ಪ್ರಕರಣವನ್ನು ಹೇಳುತ್ತೇನೆ. ಆ ಹುಡುಗ ಪದ್ಯ ಬರೆಯುತ್ತಿದ್ದ; ಕಾವ್ಯ ವಾಚನ ಮಾಡುತ್ತಿದ್ದ. ಸಂಗೀತದ ಗೀಳು ಹತ್ತಿಸಿಕೊಂಡಿದ್ದ. ಆದರೆ ಈ ವಿಷಯ ಅವನ ಹೆತ್ತವರಿಗೆ ಗೊತ್ತೇ ಆಗಲಿಲ್ಲ. ಹಾಗಾಗಿ ಆತನ ಪ್ರತಿಭೆ ಗುಪ್ತವಾಗಿಯೇ ಉಳಿಯುವಂತಾಯಿತು.`ನಮ್ಮ ಮಗ ಇದುವರೆಗೆ ನಾವು ಹಾಕಿದ ಗೆರೆ ದಾಟಿಲ್ಲ. ಮುಂದೆಯೂ ಅಷ್ಟೆ. ನಾವು ನೋಡಿದ ಹುಡುಗಿಯನ್ನೇ ಮದುವೆಯಾಗುತ್ತಾನೆ'ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರೂ ಇದ್ದಾರೆ.  ಮಕ್ಕಳು ತಮಗೆ ಇಷ್ಟ ಇಲ್ಲದಿದ್ದರೂ ಹೆತ್ತವರ ಒತ್ತಾಯಕ್ಕೆ ಮಣಿದು ಹಿರಿಯರ ಕಾಲಿಗೆ ಬೀಳುವ ಸಂದರ್ಭಗಳು ಕೂಡ ಇರುತ್ತವೆ. ಶಿಕ್ಷಣವೇ ಇರಲಿ, ಬಾಳ ಸಂಗಾತಿಯ ಆಯ್ಕೆಯೇ ಇರಲಿ, ಅದು ಮಕ್ಕಳ ಹಕ್ಕು ಎನ್ನುವುದನ್ನು ಮರೆಯುವಂತಿಲ್ಲ.  ಕೆಲವು ಪೋಷಕರು ತಾವು ಬೆಳೆದು ಬಂದ ಪರಿಸರವನ್ನು ಗಮನದಲ್ಲಿಟ್ಟುಕೊಂಡು ಮಕ್ಕಳನ್ನು ಬೆಳೆಸಲು ಪ್ರಯತ್ನಿಸುತ್ತಾರೆ. ಅವರು ಅದಕ್ಕೆ ಪ್ರತಿರೋಧ ಒಡ್ಡಿದಾಗ ಹತಾಶರಾಗುತ್ತಾರೆ. ಬಡತನ ಹಾಗೂ ಅಸಮಾನತೆಯಿಂದ ಕೂಡಿದ ಈ ಸಮಾಜದಲ್ಲಿ ಎಲ್ಲ ವರ್ಗದ ಮಕ್ಕಳು ಹಾಗೂ ಮಹಿಳೆಯರು ಸುಲಭವಾಗಿ ನಾನಾ ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾರೆ.`ಮಕ್ಕಳ ಒಳ್ಳೆಯದಕ್ಕಾಗಿಯೇ ಅವರಿಗೆ ಅತಿಯಾದ ಶಿಸ್ತು ಕಲಿಸುತ್ತೇವೆ, ಮಾತು ಕೇಳದಿದ್ದರೆ ಹೊಡೆಯುತ್ತೇವೆ. ನಮಗೂ ಅವರ ಮೇಲೆ ಪ್ರೀತಿ ಇರುವುದಿಲ್ಲವೇ' ಎಂಬ ವಾದವನ್ನು ಯಾವ ಕಾರಣಕ್ಕೂ ಸಮರ್ಥಿಸಿಕೊಳ್ಳಲಾಗದು. ಯಾವುದೂ ಅತಿಯಾಗಬಾರದಲ್ಲವೇ?ಹಾಗೆ ನೋಡಿದರೆ ಇಂದು ಪರಿಸ್ಥಿತಿ ಸುಧಾರಿಸಿದೆ. ನಾವು ಚಿಕ್ಕವರಾಗಿದ್ದಾಗ ದೊಡ್ಡವರ ಎದುರಿಗೆ ಮಾತನಾಡುವುದಕ್ಕೆ ಭಯ ಬೀಳುತ್ತಿದ್ದೆವು. ಮುಕ್ತವಾಗಿ ನಗುವುದಕ್ಕೆ ಹಾಗೂ ಹಾಡುವುದಕ್ಕೂ ಹಿಂಜರಿಯುತ್ತಿದ್ದೆವು. ಹಿರಿಯರ ಬಳಿ ವಿನೀತರಾಗಿ ಮಾತನಾಡುತ್ತಿದ್ದೆವು. ವಯಸ್ಸಾದ ವ್ಯಕ್ತಿ ಬಂದ ಕೂಡಲೇ ನಾವು ತಕ್ಷಣವೇ ಅಲ್ಲಿಂದ ಜಾಗ ಖಾಲಿ ಮಾಡಿ ರೂಮು ಸೇರಿಬಿಡುತ್ತಿದ್ದೆವು. ಆದರೆ ಈಗ ಅಂಥ ಕಠಿಣ ಪರಿಸ್ಥಿತಿ ಇಲ್ಲ. ಇಷ್ಟಾದರೂ ಮಕ್ಕಳ ವಿಷಯದಲ್ಲಿ ಇನ್ನೂ ಹಳೆಯ ಜಿಗುಟುತನ ಸಂಪೂರ್ಣವಾಗಿ ಹೋಗಿಲ್ಲ. ಹಾಗಾಗಿಯೇ ಸರ್ಕಾರವು ಶೋಷಣೆಗೊಳಪಟ್ಟ ಮಕ್ಕಳ ರಕ್ಷಣೆಗೆ ಮುಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ. ದುರ್ಬಲರ ರಕ್ಷಣೆಗೆ ಕಾನೂನುಗಳು ಇವೆ ಎನ್ನುವುದು ನಿಜ. ಆದರೆ ಕುಟುಂಬದಲ್ಲಿ ಸಂಬಂಧಗಳ ಸ್ವರೂಪ ಬದಲಾಗಬೇಕು. ಆಗ ಮಾತ್ರ  ಪರಿಸ್ಥಿತಿ ಸುಧಾರಿಸುತ್ತದೆ. ಮಕ್ಕಳನ್ನು ಮನೆಯಲ್ಲಿ ಹಾಗೂ ಶಾಲೆಯಲ್ಲಿ ಗೌರವದಿಂದ ಕಾಣಬೇಕು. ಇಲ್ಲದಿದ್ದರೆ ಈ ಎರಡೂ ಕಡೆ ಹಿಂಸೆ ತಪ್ಪಿದ್ದಲ್ಲ. ಶಾಲೆ ಹಾಗೂ ಕಾಲೇಜುಗಳಲ್ಲಿ ಆಪ್ತ ಸಮಾಲೋಚನಾ ಕೇಂದ್ರಗಳನ್ನು ತೆರೆಯಬೇಕು. ಆಗ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತವೆ.ಇಂದಿನ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಕರ್ತವ್ಯ, ಶಿಸ್ತು, ಹೊಣೆಗಾರಿಕೆಯ ಪರಿಧಿಯಿಂದ ಈಚೆ ಬಂದು ಪ್ರೀತಿಯಿಂದ, ವಿಶ್ವಾಸದಿಂದ ಅವರಿಗೆ ತಿಳಿವಳಿಕೆ ನೀಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪೋಷಕರು ಅವರೊಂದಿಗೆ ಸ್ನೇಹಿತರಂತೆ ವರ್ತಿಸಬೇಕು. ಆಗ ಮನೆ ಸ್ವರ್ಗವಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry