ಮಕ್ಕಳ ಹಕ್ಕುಗಳಿಗಾಗಿ ಹಣ ಮೀಸಲಿಡಿ

7

ಮಕ್ಕಳ ಹಕ್ಕುಗಳಿಗಾಗಿ ಹಣ ಮೀಸಲಿಡಿ

Published:
Updated:

ಬೆಂಗಳೂರು: `ಬಜೆಟ್‌ನಲ್ಲಿ ಮಕ್ಕಳಿಗಾಗಿ ಮತ್ತು ಮಕ್ಕಳ ಹಕ್ಕುಗಳಿಗಾಗಿ ಹಣವನ್ನು ಮೀಸಲಿಡಬೇಕು~ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ನಿರ್ವಾಹಕ ವಾಸುದೇವ ಶರ್ಮಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.`ಮುಖ್ಯವಾಗಿ ಮಕ್ಕಳ ಹಕ್ಕುಗಳಿಗಾಗಿ ಮೀಸಲಿಡುವ ಹಣವು ಸದ್ಬಳಕೆಯಾಗಿ ಮಕ್ಕಳಿಗೆ ಅನುಕೂಲವಾಗಬೇಕು~ ಎಂದು ಒತ್ತಾಯಿಸಿದರು.`ಅಪೌಷ್ಟಿಕತೆಯಿರುವ ಮಕ್ಕಳ ವೈದ್ಯಕೀಯ ವೆಚ್ಚವನ್ನು ಭರಿಸುವುದಕ್ಕಾಗಿ 2010-11 ರಲ್ಲಿ 5.50 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿತ್ತು. ಆದರೆ, ಅದರಲ್ಲಿ ಖರ್ಚಾಗಿರುವುದು ಬರೀ 1.30 ಕೋಟಿ ರೂಪಾಯಿಗಳು ಮಾತ್ರ. ಕುಟುಂಬ ಕಲ್ಯಾಣಕ್ಕಾಗಿ 314 ಕೋಟಿ  ರೂಪಾಯಿಗಳನ್ನು ಮೀಸಲಾಗಿಡಲಾಗಿತ್ತು ಅದರಲ್ಲಿ ಖರ್ಚಾಗಿದ್ದು 302 ಕೋಟಿ ರೂಪಾಯಿಗಳು ಮಾತ್ರ. ಇವು ಕೇವಲ ಕೆಲವು ಉದಾಹರಣೆಗಳು ಮಾತ್ರ.

 

ಇದಲ್ಲದೇ ಇನ್ನು ಹಲವು ಯೋಜನೆಗಳಲ್ಲಿ ಬಿಡುಗಡೆಯಾದ ಹಣ ಸದ್ಬಳಕೆಯಾಗಿಲ್ಲ~ ಎಂದು ಮಾಹಿತಿ ನೀಡಿದರು.

`2010-11 ರ ಆಯವ್ಯಯದಲ್ಲಿ ಅಪೌಷ್ಟಿಕತೆಯನ್ನು ತಡೆಯಲು ಸಮಗ್ರ ಪೌಷ್ಟಿಕತಾ ಅಭಿಯಾನ ಆರಂಭಿಸುವ ಬಗ್ಗೆ ಹೇಳಲಾಗಿತ್ತು. ಆದರೆ, ಇನ್ನೂ ಇದು ಜಾರಿಯಾಗಿಲ್ಲ. ಅಂಗನವಾಡಿಗಳಲ್ಲಿ ನೀಡುತ್ತಿರುವ ಪೌಷ್ಟಿಕ ಆಹಾರಕ್ಕಾಗಿ ಪ್ರತಿ ಮಗುವಿಗೆ ಮೀಸಲಿಟ್ಟಿರುವ ಹಣವನ್ನು ಹೆಚ್ಚಿಸಬೇಕು~ ಎಂದು ಹೇಳಿದರು.`ಎಚ್‌ಐವಿ ಬಾಧಿತ ಮಕ್ಕಳು ಮತ್ತು ಎಚ್‌ಐವಿ ಯಿಂದಾಗಿ ಅನಾಥರಾಗುವ ಹಾಗೂ ನಿರ್ಗತಿಕರಾಗುವ ಮಕ್ಕಳನ್ನು ಕುರಿತು ರಾಜ್ಯ ಸರ್ಕಾರ ಕೆಲವು ವರ್ಷಗಳ ಹಿಂದೆ ಯೋಜನೆಯೊಂದರಲ್ಲಿ ಹಣವನ್ನು ಮೀಸಲಿಟ್ಟಿತ್ತು. ಆದರೆ, ಈಗಲೂ ಆ ಮಕ್ಕಳ ಬವಣೆಯನ್ನು ತಡೆಯುವ ಮತ್ತು ಅವರಿಗೆ ಬೇಕಾದ ವಸತಿ, ರಕ್ಷಣೆ, ಚಿಕಿತ್ಸೆ ಸಮರ್ಪಕವಾಗಿಲ್ಲ. ಹೀಗಾಗಿ ಈ ಮಕ್ಕಳ ಹಕ್ಕುಗಳ ರಕ್ಷಣೆಗೆ ಸೂಕ್ತ ಕ್ರಮಕ್ಕಾಗಿ ಈ ಬಾರಿಯ ಆಯವ್ಯಯದಲ್ಲಿ ಹಣವನ್ನು ಮೀಸಲಿಡಬೇಕು~ ಎಂದು ಒತ್ತಾಯಿಸಿದರು.`ಮಕ್ಕಳ ರಕ್ಷಣೆಗಾಗಿ ಇರುವ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಸಾಕಷ್ಟು ಹಣ ಮೀಸಲಿಲ್ಲ. ಇರುವ ಹಣದ ಬಳಕೆಯೂ ಸಂಪೂರ್ಣವಾಗಿ ಆಗಿಲ್ಲ. ಇಂದಿನ ದಿನಗಳಲ್ಲಿ ಮಕ್ಕಳ ಮೇಲೆ ಆಗುತ್ತಿರುವ ಶೋಷಣೆ, ಅನ್ಯಾಯ ಇತ್ಯಾದಿಗಳನ್ನು ಗಮನಿಸಿದರೆ ಮಕ್ಕಳ ರಕ್ಷಣೆಗಾಗಿ ಇನ್ನೂ ಹೆಚ್ಚಿನ ಹಣದ ಮೀಸಲು ಮತ್ತು ಉಪಯೋಗಿಸಬೇಕಾದ ಅಗತ್ಯತೆ ಎದ್ದು ಕಾಣುತ್ತಿದೆ~ ಎಂದರು.`ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯಿದೆ ಜಾರಿಯಾಗಬೇಕು. 6 ರಿಂದ 14 ವರ್ಷದೊಳಗಿನ ಮಕ್ಕಳ ಸಂಖ್ಯೆಯೇ ಸುಮಾರು ಒಂದು ಕೋಟಿ ಐವತ್ತು ಲಕ್ಷ ಆಗಬಹುದೆಂಬ ಅಂದಾಜಿದೆ. ಈ ಎಲ್ಲ ಮಕ್ಕಳಿಗೆ ಸಮರ್ಪಕವಾದ ಶೈಕ್ಷಣಿಕ ವ್ಯವಸ್ಥೆ ಮಾಡಲು ಕನಿಷ್ಠ 16,000 ಕೋಟಿ ಹಣ ಬೇಕಾಗಬಹುದು. ಈ ಕುರಿತು ಸರ್ಕಾರ ಗಂಭೀರವಾದ ನಿಲುವು ತೆಗೆದುಕೊಳ್ಳಬೇಕಾಗಿದೆ.

 

ಹಿಂದಿನ ಆಯವ್ಯಯ ಭಾಷಣದಲ್ಲಿ ಹತ್ತನೇ ತರಗತಿಯವರೆಗೆ ಉಚಿತ ಶಿಕ್ಷಣವನ್ನು ಮೂರು ವರ್ಷಗಳಲ್ಲಿ ಜಾರಿಗೆ ತರುವ ಸಂಕಲ್ಪವನ್ನು ಹಣಕಾಸು ಸಚಿವರು ಮಾಡಿದ್ದರು. ಮುಂದಿನ ವರ್ಷದಲ್ಲಿ ಅದು ಈಡೇರಬೇಕಾಗಿದೆ~ ಎಂದು ಒತ್ತಾಯಿಸಿದರು.ಗೋಷ್ಠಿಯಲ್ಲಿ ಕೇಂದ್ರದ ನಿರ್ವಾಹಕ ಜಿ.ಸಿ.ಸತೀಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry